ನಾಗೇಶ ಹೆಗಡೆ ಅವರ ವಿಜ್ಞಾನ ವಿಶೇಷ ಅಂಕಣ: ಸೋಮಯಾಗದಲ್ಲಿ ಅಗ್ನಿ ಮತ್ತು ಮಳೆ
ವೇದಕಾಲದ ವಿಜ್ಞಾನವನ್ನು ಒರೆಗಲ್ಲಿಗೆ ಹಚ್ಚಲು ಮತ್ತೊಮ್ಮೆ ವಿಜ್ಞಾನಿಗಳು ಹೊರಟಿದ್ದಾರೆ. ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಏಪ್ರಿಲ್ 24ರಿಂದ ಐದು ದಿನಗಳ ಕಾಲ ಸೋಮಯಾಗ ನಡೆಯಿತು. ಮಧ್ಯಪ್ರದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ 15 ವಿಜ್ಞಾನಿಗಳು ನಾನಾ ಬಗೆಯ ಶೋಧ ಸಲಕರಣೆಗಳ ಜೊತೆ ಅಲ್ಲಿಗೆ ಹೋಗಿದ್ದರು. ಯಜ್ಞದಿಂದ ನಿಜಕ್ಕೂ ಮಳೆ ಬರಿಸಲು ಸಾಧ್ಯವೆ ಎಂಬುದನ್ನು ಪರೀಕ್ಷೆ ಮಾಡುವುದು ಅವರ ಉದ್ದೇಶವಾಗಿತ್ತು.
ಸೋಮಯಾಗ ಅಂದರೆ ಸೋಮವಲ್ಲಿ ಎಂಬ ಸಸ್ಯವನ್ನು ವೇದಘೋಷಗಳೊಂದಿಗೆ ಯಜ್ಞಕುಂಡಕ್ಕೆ ಅರ್ಪಿಸುವುದು. ಕಳ್ಳಿಯಂತೆ ಪೊದೆಯೆತ್ತರ ಬೆಳೆಯುವ, ಎಲೆಗಳಿಲ್ಲದ ಈ Sarcostemma brevistigma ಸಸ್ಯವನ್ನು ಚಿವುಟಿದರೆ ಬಿಳೀದ್ರವ ಒಸರುತ್ತದೆ. ಕಾಲಕಾಲಕ್ಕೆ ಬಿಳಿಹೂಗಳನ್ನೂ ಅರಳಿಸುವ ಈ ಕಳ್ಳಿಯನ್ನು ಹಿಂಡಿ ಅಥವಾ ಒಣಪುಡಿಯಾಗಿಸಿ ನಾನಾ ಬಗೆಯ ಕಾಯಿಲೆಗಳಿಗೆ ಬಳಸುವ ಪದ್ಧತಿ ಇದೆ. ಹಾವಿನ ಕಡಿತಕ್ಕೆ ಪ್ರತಿವಿಷವಾಗಿ, ಗಾಯ-ವ್ರಣಗಳಿಂದ ಹಿಡಿದು ಸಂಧಿವಾತ, ಅಜೀರ್ಣ, ಮೂಳೆಮುರಿತ, ಅಸ್ತಮಾವರೆಗೆ ಇದನ್ನು ಆದಿವಾಸಿಗಳಿಂದ ಹಿಡಿದು ನಾಟಿವೈದ್ಯರೂ ಆಯುರ್ವೇದ ಪಂಡಿತರೂ ಬಳಸುತ್ತ ಬಂದಿದ್ದಾರೆ. ಇದರ ರಸದ ಸೇವನೆ ದೇವತೆಗಳಿಗೆ ಪುಷ್ಟಿದಾಯಕ (ಮತ್ತೇರಿಸುವುದಲ್ಲ) ಆಗುತ್ತದೆಂದು ಋಗ್ವೇದದಲ್ಲಿ ಹೇಳಲಾಗಿದೆ. ಈ ಸಸ್ಯದ ರಸದ ಕೆಮಿಕಲ್ ಗುಣಗಳನ್ನು ವಿಜ್ಞಾನಿಗಳು ಈಗಾಗಲೇ ಪಟ್ಟಿ ಮಾಡಿ ಇಟ್ಟಿದ್ದಾರೆ. ಇದೀಗ ಸೋಮವಲ್ಲಿಯನ್ನು ಹೋಮದ ಅಗ್ನಿಯಲ್ಲಿ ಉರಿಸಿದಾಗ ಮಳೆ ಬರುತ್ತದೆ ಎಂಬ ನಂಬಿಕೆಯ ವೈಜ್ಞಾನಿಕ ಪರೀಕ್ಷೆ ನಡೆದಿದೆ. ಹೋಮದ ಹೊಗೆಯಲ್ಲಿರುವ ಕೆಮಿಕಲ್ ಕಣಗಳ ವಿಶ್ಲೇಷಣೆಗೆಂದೇ 13 ಸಾಧನಗಳಿದ್ದವು. ಬಲೂನಿಗೆ ‘ಟೆದರ್‌ಸೋಂಡ್’ ಎಂಬ ಸಾಧನವನ್ನು ಕಟ್ಟಿ ಆಕಾಶಕ್ಕೇರಿಸಿ ಹೊಗೆಕಣಗಳ ಉಷ್ಣತೆ, ತೇವಾಂಶವನ್ನು ದಾಖಲಿಸಲಾಗಿತ್ತು.
ಮೋಡಗಳಿಗೆ ಘನಕಣಗಳು ತಾಗಿದರೆ ಹೊಗೆಯಂತಿರುವ ಮಂಜು ತಕ್ಷಣ ಹನಿಗಟ್ಟುತ್ತದೆ. ಅದು ನಮಗೆಲ್ಲ ಗೊತ್ತು. ಮುಂಜಾವಿನ ಮಂಜಿನಲ್ಲಿ ಹುಲ್ಲೆಸಳುಗಳ ತುದಿಗೆ ಮುತ್ತಿನಂಥ ಹನಿಗಳನ್ನೂ ಜೇಡರ ಬಲೆಯ ಮೇಲೆ ಮುತ್ತಿನ ಮಾಲೆಗಳನ್ನೂ ನಾವು ನೋಡಿದ್ದೇವೆ. ಮಳೆಗರೆಯಲು ಮೋಡ ಸಿದ್ಧವಾಗಿದ್ದರೆ ವಿಮಾನದಿಂದ ಮರಳು ಅಥವಾ ಉಪ್ಪಿನ ಕಣಗಳನ್ನು ಎರಚಿ ಮೋಡಬಿತ್ತನೆ ಮಾಡುವುದೂ ಗೊತ್ತು. ಬರಿನೆಲದ ದೂಳು ಕಣಗಳೂ ಬಿರುಗಾಳಿಯಲ್ಲಿ ಆಕಾಶಕ್ಕೇರಿ ಮಳೆ ಬರಿಸುತ್ತವೆ. ಆಫ್ರಿಕಾದ ಸಹರಾ ಮರುಭೂಮಿಯಿಂದ ಮೇಲೆದ್ದು ಸಾಗುವ ದೂಳು ಕಣಗಳು ಅಮೆಝಾನ್ ಕಾಡಿನ ಮೇಲೆ ಪೋಷಕಾಂಶಗಳ ಮಳೆ ಸುರಿಸುತ್ತವೆ; ನಮೀಬಿಯಾದಿಂದ ಹೊರಟ ಮರಳುಕಣಗಳು ಏಷ್ಯಾದ ಮಾನ್ಸೂನ್‌ಗೂ ಪುಷ್ಟಿ ಕೊಡುತ್ತವೆ.
ಭಾರೀ ಪ್ರಮಾಣದಲ್ಲಿ ಹೊಗೆ ಮೇಲೆದ್ದಾಗ (ಆಕಾಶದಲ್ಲಿ ಮೋಡಗಳಿದ್ದರೆ) ಮಳೆ ಸುರಿಯುತ್ತದೆ. ಏಕೆಂದರೆ ಹೊಗೆಯಲ್ಲಿ ಸೂಕ್ಷ್ಮ ಘನಕಣಗಳಿರುತ್ತವೆ. 2021ರ ಆಗಸ್ಟ್‌ನಲ್ಲಿ ಗ್ರೀಸ್ ದೇಶದ ಈವಿಯಾ ದ್ವೀಪಕ್ಕೆ ಕಾಳ್ಗಿಚ್ಚು ಹಬ್ಬಿ 50 ಸಾವಿರ ಹೆಕ್ಟೇರ್ ಕಾಡು ಬೂದಿಯಾದ ನಂತರ ಭಾರೀ ಮಳೆ ಬಂತು. ಬೂದಿಯ ಮಹಾಪೂರವೇ ಸುತ್ತಲಿನ ಸಮುದ್ರಕ್ಕೆ ಸೇರಿ ಮತ್ಸ್ಯಗಳಿಗೂ ಮಾರಕವಾಯಿತು. ಫ್ಯಾಕ್ಟರಿಗಳ ಮಲಿನ ಹೊಗೆಯೂ ಆ್ಯಸಿಡ್ ಮಳೆ ತರಿಸುತ್ತದೆ. ಚೆರ್ನೊಬಿಲ್ ಪರಮಾಣು ಸ್ಥಾವರ ಸ್ಫೋಟಿಸಿದ (26.4.1986) ತರುವಾಯ ಭಾರೀ ಮಳೆ ಬಂತು. ಸಾವಿರಾರು ಚದರ ಕಿ.ಮೀ.ವರೆಗೆ ವಿಕಿರಣದ ಮಳೆ ಸುರಿಸಿತು. ಆದರೆ ಭೋಪಾಲ ದುರಂತದಲ್ಲಿ (3.12.1984) ಎಮ್‌ಐಸಿ ವಿಷಾನಿಲ ಸುತ್ತೆಲ್ಲ ಹಬ್ಬಿ ಬೆಳಗಾಗುವುದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ, ಜಾನುವಾರು ಗತಿಸಿದರೂ ಮಳೆ ಬರಲಿಲ್ಲ. ಏಕೆಂದರೆ, ಗಾಳಿಗಿಂತ ವಿಷಾನಿಲದ ಸಾಂದ್ರತೆ ಜಾಸ್ತಿ ಇದ್ದುದರಿಂದ ಹೊಗೆ ಮೇಲಕ್ಕೇರುವ ಬದಲು ನೆಲಮಟ್ಟದಲ್ಲೇ ಮೃತ್ಯುಮಾರಿ ಫೂತ್ಕರಿಸಿತು (ಇದರ ಕುರಿತು 2014ರಲ್ಲಿ ನಿರ್ಮಿತವಾದ, ಯೂಟ್ಯೂಬ್‌ನಲ್ಲಿ ಉಚಿತ ನೋಡಬಹುದಾದ ಸಿನಿಮಾದ ಹೆಸರೇ ‘ಭೋಪಾಲ್: ಮಳೆಗಾಗಿ ಪ್ರಾರ್ಥನೆ’ ಎಂದಿತ್ತು).
ಹೊಗೆಗೂ ಮೋಡಕ್ಕೂ ಮಳೆಗೂ ಇರುವ ಸಂಬಂಧವೇ ಯಜ್ಞಕ್ಕೂ ಮಳೆಗೂ ಇದ್ದೇ ಇರುತ್ತದೆ. ಆದರೆ ಯಜ್ಞವೆಂದರೆ ಹೊಗೆ ತಾನೆ? ಮೋಡವೇನಲ್ಲ. ಮೇಲಾಗಿ ಆ ಹೊಗೆ ಮೇಲಕ್ಕೇರಿ ನೂರಾರು ಚದರ ಕಿಲೊಮೀಟರ್‌ಗಟ್ಟಲೆ ವ್ಯಾಪಿಸಬೇಕೆಂದರೆ ಆ ಯಜ್ಞಕುಂಡದ ಅಗ್ನಿ ಅನೇಕ ಹೆಕ್ಟೇರುಗಟ್ಟಲೆ ವಿಶಾಲವಾಗಿ ಉರಿಯುತ್ತಿರಬೇಕು. ಸಾಮಾನ್ಯ ಅಗ್ನಿಕುಂಡದ ಹೊಗೆ ಮೇಲೆದ್ದರೆ, ಸಾಮಾನ್ಯ ತರ್ಕದ ಪ್ರಕಾರ ಅಲ್ಲೊಂದು ಇಲ್ಲೊಂದು ಹನಿಯನ್ನು ಉದುರಿಸೀತು ಅಷ್ಟೆ. ಅದೂ ಆ ಹೊಗೆ ಅತ್ತಿತ್ತ ಚದುರದೇ ನೇರ ಮೇಲಕ್ಕೆ ಏರಬೇಕು. ಮೇಲಾಗಿ ಆಗ ಆಕಾಶದಲ್ಲಿ ಮೋಡ ಇರಬೇಕು. ಅದೂ ಬಂಜೆಯಲ್ಲ, ಗರ್ಭಿಣಿ ಮೋಡವೇ ಆಗಿರಬೇಕು.
ವಿಜ್ಞಾನಿಗಳು ಇವೆಲ್ಲವನ್ನೂ ಪರಿಗಣಿಸುತ್ತಾರೆಯೆ? ಹೊಗೆಯ ಕಣಗಳು ಎಷ್ಟೆತ್ತರಕ್ಕೇರಿ, ಎಷ್ಟು ವಿಶಾಲ ಕ್ಷೇತ್ರಕ್ಕೆ ವ್ಯಾಪಿಸುತ್ತವೆ ಎಂಬುದನ್ನು ಅಳೆಯಲು ಸದ್ಯಕ್ಕಂತೂ ಯಾವ ಸಾಧನವೂ ಇಲ್ಲ. ಬಲೂನಿಗೆ ಕಟ್ಟಿದ ಟೆದರ್‌ಸೋಂಡ್ ಹೆಚ್ಚೆಂದರೆ ತನ್ನ ಬಳಿ ಬಂದ ಹೊಗೆಯ ಕಣಗಳನ್ನಷ್ಟೇ ವಿಶ್ಲೇಷಣೆ ಮಾಡೀತು. ಹೊಗೆ ನಿಜಕ್ಕೂ ಮೇಲಕ್ಕೇರಿ ವ್ಯಾಪಿಸುತ್ತ ಹೋದರೆ ಹತ್ತಾರೇನು, ನೂರಾರು ಬಲೂನುಗಳಿದ್ದರೂ ಸಾಲದು. ಇಷ್ಟಕ್ಕೂ ಸೋಮವಲ್ಲಿಗೂ ಹೊಗೆಕಣಕ್ಕೂ ಏನು ಸಂಬಂಧ ಇರಲು ಸಾಧ್ಯ? ಮಂಜಿನಂಥ ಮೋಡದ ಕಣಗಳು ಘನೀಭವಿಸಲು ಯಾವ ಘನಕಣವಾದರೇನು? ಯಾವುದೇ ಕಣ ಸಿಕ್ಕರೂ ಅದನ್ನು ಅಪ್ಪಿಕೊಂಡು ಹರಳುಗಟ್ಟುತ್ತದೆ. ಮೋಡ ಆಗ ತೀರಾ ತಂಪಾಗಿದ್ದರೆ ಹನಿಗಟ್ಟುತ್ತಲೇ ಹಿಮಪಕಳೆಯಾಗಿ ಆಲಿಕಲ್ಲಾಗಿ ಕೆಳಕ್ಕೆ ಬೀಳುತ್ತದೆ. ಬೀಳುವಾಗ ಇನ್ನಷ್ಟು ತಂಪಿನ ನೀರಾವಿ ಕಣಗಳು ಅಂಟಿಕೊಂಡರೆ ದೊಡ್ಡ ಆಲಿಕಲ್ಲಾಗಿ ಬೀಳುತ್ತದೆ. ಇದು ಹೈಸ್ಕೂಲ್ ವಿದ್ಯಾರ್ಥಿಗೂ ಗೊತ್ತಿರುವ ಅಂಶ.
ಆದರೂ ಸಂಶೋಧನೆಯ ಹುಕಿ ಯಾಕೆ ಗೊತ್ತೆ? ಸೋಮವಲ್ಲಿಯ ಬೂದಿ ಕಣಗಳು ಮಳೆಗರೆಯಲಿ, ಬಿಡಲಿ, ದಂಡಿಯಾಗಿ ಡೇಟಾ ಸುರಿಮಳೆಯಾಗಬೇಕು. ಈ ಸಸ್ಯದ ಔಷಧೀಯ ಗುಣಗಳನ್ನು ವಿಶ್ಲೇಷಣೆ ಮಾಡಿದ ವಿಜ್ಞಾನಿಗಳೂ ಅದನ್ನೇ ಮಾಡಿದರು. ಸಸ್ಯರಸದಲ್ಲಿ ಯಾವ ಯಾವ ಕೆಮಿಕಲ್‌ಗಳು ಇವೆ ಎಂದು ವರದಿ ಮಾಡಿ ಅದನ್ನು ಅಲ್ಲಿಗೆ ಕೈಬಿಟ್ಟರು. ಅದು ನಿಜಕ್ಕೂ ಹಾವಿನ ವಿಷವನ್ನು ಇಳಿಸುತ್ತದೆಯೆ ಎಂದು ನೋಡಲು ವೈದ್ಯವಿಜ್ಞಾನಿಗಳು ಬೇರೊಂದು ಸಂಶೋಧನೆ ಮಾಡಬೇಕು. ಮಾಡಲಿಲ್ಲ. ‘ವಿಷ ಇಳಿಸುವ ಅಂಶ ಇಲ್ಲ’ ಎಂಬುದು ಗೊತ್ತಾದರೆ ಅದನ್ನು ಘೋಷಿಸಲು ಈಗಿನ ದಿನಗಳಲ್ಲಿ ಎಂಟೆದೆ ಬೇಕು. ಗೋಮೂತ್ರದಲ್ಲಿ ಏನೇನು ವಿಶೇಷಗಳಿವೆ ಎಂದು ಐಐಟಿ ದಿಲ್ಲಿಯ ವಿಜ್ಞಾನಿಗಳು ಸಂಶೋಧನೆ ಮಾಡಿದರು. ಎಮ್ಮೆಯ ಅಥವಾ ಬೇರಾವುದೇ ಸ್ತನಿಜೀವಿಯ ಮೂತ್ರಕ್ಕೂ ಇದಕ್ಕೂ ಏನು ವ್ಯತ್ಯಾಸ ಎಂಬುದನ್ನು ಮಾತ್ರ ನೋಡಲಿಲ್ಲ. ‘ಏನೂ ವ್ಯತ್ಯಾಸವಿಲ್ಲ’ ಎಂಬುದು ಗೊತ್ತಾದರೆ ಆ ವಿಜ್ಞಾನಿಗೆ ಮುಂದೆಂದೂ ಸಂಶೋಧನೆಗೆ ಹಣ ಸಿಗಲಿಕ್ಕಿಲ್ಲ. ಸೋಮವಲ್ಲಿಯ ಹೊಗೆ ಕಣದ ಕತೆಯೂ ಇದೇ ಆಗಿಬಿಟ್ಟರೆ?
ಪುರಾತನ ಜ್ಞಾನವನ್ನು ಒರೆಗಲ್ಲಿಗೆ ಹಚ್ಚುವ ಅನೇಕ ಭಾರತೀಯ ಅರೆಬರೆ ಸಂಶೋಧನೆಗಳು ಮತ್ತೆ ಮತ್ತೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿವೆ. ಸತ್ಯ ಯಾರಿಗೆ ಬೇಕು? ಸಂಶೋಧನೆ ನಡೆದಿದೆ ಎಂಬುದು ಸುದ್ದಿಯಾಗುವುದೇ ಮುಖ್ಯ. ಪುರಾತನ ನಂಬಿಕೆ, ರೂಢಿಗತ ಸಂಪ್ರದಾಯಗಳಿಂದ ಯಾರಿಗೂ ಅಪಾಯವಿಲ್ಲ ಎಂದಾದರೆ ಅವನ್ನು ಅವುಗಳ ಪಾಡಿಗೆ ಬಿಡಬಾರದೆ? ಅದಕ್ಕೆ ವಿಜ್ಞಾನದ ಠಸ್ಸೆ ಒತ್ತುವ ಹಪಹಪಿ ಯಾಕೊ? ಇದರಿಂದ ಇದುವರೆಗಂತೂ ಠಸ್ಸೆಗೇ ಕಳಂಕ ತಗಲಿದೆ.
ಅಂದಹಾಗೆ, ಎರಡು ವರ್ಷಗಳ ಹಿಂದೆ ಇದೇ ಮಹಾಕಾಳೇಶ್ವರ ದೇಗುಲದಲ್ಲಿ ಯಾವ ಯಜ್ಞಯಾಗವೂ ಇಲ್ಲದೇ ಆಲಿಕಲ್ಲುಗಳ ಭಾರೀ ಮಳೆ ಮತ್ತು ಬಿರುಗಾಳಿ ಬಂತು. ಆವರಣದಲ್ಲಿ ಕೂರಿಸಿದ್ದ ಅಷ್ಟದಿಕ್ಪಾಲಕರ ಎಂಟು ಬೃಹತ್ ವಿಗ್ರಹಗಳಲ್ಲಿ ಏಳು ಪಲ್ಟಿ ಹೊಡೆದು ಭಗ್ನಗೊಂಡವು. ಆ ಫೈಬರ್‌ಗ್ಲಾಸ್ ವಿಗ್ರಹಗಳನ್ನು ಸ್ಥಾಪಿಸುವ ಮುಂಚೆ ಗಾಳಿ-ಮಳೆಯ ಭೀಕರ ಸಾಧ್ಯತೆಯ ಮಾಹಿತಿಯನ್ನು ವಿಜ್ಞಾನಿಗಳು ನೀಡಿರಲಿಲ್ಲ. ಅಥವಾ ಅದಕ್ಕೆ ಸಮಯವೂ ಇರಲಿಲ್ಲವೇನೊ. ಚುನಾವಣೆ ಹತ್ತಿರ ಬರುತ್ತಿತ್ತು. ದೇಗುಲ ನಿರ್ಮಾಣ ಕೆಲಸ ಪೂರ್ತಿ ಆಗಿರದಿದ್ದರೂ ತುರ್ತಾಗಿ ಉದ್ಘಾಟನೆ ಆಗಲೇಬೇಕಿತ್ತು. ಅಷ್ಟದಿಕ್ಪಾಲಕರ ಅಸ್ತಿವಾರವೇ ಅಲ್ಲಿ ಅಸ್ಥಿರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.