2025ರಲ್ಲಿ ಭೂಮಿಯ ಭವಿಷ್ಯವನ್ನು ತೋರಿಸುವ ಬಹುತೇಕ ಎಲ್ಲ ಕುಂಡಲಿಗಳೂ ಅಗ್ನಿಕುಂಡವನ್ನೇ ತೋರಿ
ಸುತ್ತಿವೆ. ಭೂಮಿಯ ತಾಪಮಾನ ಇನ್ನಷ್ಟು ಏರಲಿದೆ; ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ತನ್ನ ತೋಳುಗಳನ್ನು ಇನ್ನಷ್ಟು ವಿಸ್ತಾರಕ್ಕೆ ಚಾಚಿಕೊಳ್ಳಲಿದೆ... ಇವೇ.
ಈ ಎರಡೂ ಸೇರಿ ನಮ್ಮನ್ನು ಹೇಗೆ ಕಂಗೆಡಿಸಲಿವೆ? ಮೊನ್ನೆ ಜನವರಿ 6, 7ರಂದು ನಡೆದ ‘ಹಾಸನ ಸಾಹಿತ್ಯ ಉತ್ಸವ’ದಲ್ಲಿ ಈ ಎರಡು ವಿಷಯಗಳೇ ಮುನ್ನೆಲೆಗೆ ಬಂದವು. ವಿಜ್ಞಾನ-ತಂತ್ರಜ್ಞಾನದ ದಾಂಗುಡಿಯನ್ನು ಚರ್ಚಿಸುವ ‘ನಾಳೆಗಳು ನಮಗಾಗಿ’ ಮತ್ತು ‘ಎಐ ಎಂಬ ಅಮಾನುಷ ಕೈ’ ಹೆಸರಿನ ಎರಡು ಗೋಷ್ಠಿಗಳಿದ್ದವು. ಸಾಹಿತ್ಯ ಸಮಾವೇಶವೊಂದರ ಪ್ರಧಾನ ವೇದಿಕೆಯಲ್ಲಿ ಇಂಥ ಸಮಕಾಲೀನ ವಿಷಯಗಳನ್ನು ಚರ್ಚಿಸಿದ್ದು, ಕಿಕ್ಕಿರಿದ ಸಭಿಕರು ಏಕಾಗ್ರತೆಯಿಂದ ಕೇಳಿಸಿಕೊಂಡಿದ್ದು ಇದೇ ಮೊದಲಿರಬೇಕು. ಸಮಾವೇಶದ ಆರಂಭವೂ ಅಷ್ಟೇ ವಿನೂತನವಾಗಿತ್ತು: ಹೊಸ ಫಸಲಿನ ಕೊಯ್ಲಿನ ಈ ದಿನಗಳಲ್ಲೇ ಭತ್ತವನ್ನು ತೂರುವುದರ ಮೂಲಕ ಉದ್ಘಾಟನೆ ನೆರವೇರಿತು.
ಅಂದಹಾಗೆ ಈ ಎರಡು ಮಹಾಸುನಾಮಿಗಳ ಚರ್ಚೆ ಅತ್ತ ನಡೆಯುತ್ತಿದ್ದ ಸಂದರ್ಭದಲ್ಲೇ ಅವಕ್ಕೆ ಸಂಬಂಧಿಸಿದ ಮೂರು ಸಂಚಲನಗಳು ಸುದ್ದಿರೂಪದಲ್ಲಿ ಹೊಮ್ಮಿದವು. ಇತ್ತ ಟಿಬೆಟನ್ ಪ್ರಸ್ಥಭೂಮಿಯಲ್ಲಿ ಬಲವಾದ ಭೂಕಂಪನ ಸಂಭವಿಸಿದೆ. ಯಾರ್ಲುಂಗ್ (ಬ್ರಹ್ಮಪುತ್ರ) ನದಿಗೆ ಜಗತ್ತಿನ ಅತಿ ದೊಡ್ಡ ಅಣೆಕಟ್ಟನ್ನು ನಿರ್ಮಿಸಹೊರಟ ಚೀನಾ, ಅವಸರದಲ್ಲಿ ‘ಅಪಾಯವಿಲ್ಲ’ ಎಂದು ಸಾರಿದೆ. ಕೃತಕ ಬುದ್ಧಿಮತ್ತೆಯನ್ನು ಎಲ್ಲೆಲ್ಲೂ ವಿಸ್ತರಿಸುವ ಉದ್ದೇಶದಿಂದ ಭಾರತದಲ್ಲಿ 300 ಕೋಟಿ ಡಾಲರ್ ಹೂಡಿಕೆ ಮಾಡುತ್ತೇನೆಂದು ಹೇಳುತ್ತ ಮೈಕ್ರೊಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಇದೇ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.
ಇವೆಲ್ಲಕ್ಕಿಂತ ದೊಡ್ಡ ಕಂಪನವನ್ನು ಸೃಷ್ಟಿಸಬಲ್ಲ ಹೇಳಿಕೆಯನ್ನು ಅತ್ತ ಟ್ರಂಪ್ ಮಹಾಶಯ ನೀಡಿದ್ದಾರೆ. ಈತ ಕೆನಡಾ ಕಡೆ ಕೈಬೀಸುತ್ತ ಇಡೀ ದೇಶವನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳಲು ಹೊರಟಂತೆ ಯಾಂಬು ರೂಪಿಸಿದ ಚಿತ್ರವೊಂದನ್ನು ಜಾಗತಿಕ ಮಟ್ಟದಲ್ಲಿ ಬಿತ್ತರಿಸಲಾಗಿದೆ.
ತನ್ನ ಅಧ್ಯಕ್ಷತೆಯಲ್ಲಿ ಕೆನಡಾ ಮತ್ತು ಗ್ರೀನ್‌ಲ್ಯಾಂಡ್ ಎರಡನ್ನೂ ತನ್ನೊಳಗೆ ಲೀನಗೊಳಿಸಲು ಅಮೆರಿಕ ಸಿದ್ಧ ಇರುವುದಾಗಿ ಆತ ಹೇಳಿದ್ದಾರೆ.
ಪೃಥ್ವಿಯ ನೆತ್ತಿಗೆ ಹತ್ತಿರದಲ್ಲೇ ಇರುವ ಈ ಎರಡೂ ದೇಶಗಳ ಹಿಮದ ಹಾಸಿನಲ್ಲಿ ಭಾರೀ ಸಂಪತ್ತಿನ ನಿಕ್ಷೇಪಗಳಿವೆ. ಜಗತ್ತಿನ ಶಕ್ತಿ ಬೇಡಿಕೆಯ ಶೇ 30ರಷ್ಟನ್ನು ಪೂರೈಸಬಲ್ಲ ನೈಸರ್ಗಿಕ ಅನಿಲ, ಶೇ 13ರಷ್ಟು ತೈಲ ಮತ್ತು ಯಾಂಬು ಚಾಲನೆಗೆ ಬೇಕಾದ ಸಾವಿರ ಶತಕೋಟಿ ಡಾಲರ್ ಮೌಲ್ಯದ ಅಪರೂಪದ ರೇರರ್ಥ್ ಖನಿಜಗಳು ಇವೆಯೆಂದು ಅಂದಾಜು ಮಾಡಲಾಗಿದೆ.
ಭೂತಾಪ ಹೆಚ್ಚುತ್ತ ಹೋದರೆ ಅಲ್ಲಿನ ಹಿಮಹಾಸು ಕರಗುತ್ತದೆ. ನಿಸರ್ಗವೇ ಹೂತಿಟ್ಟ ಹೆಪ್ಪು ಮೀಥೇನ್ ಹಠಾತ್ ಅನಿಲವಾಗಿ ವಾಯುಮಂಡಲಕ್ಕೆ ಸೇರುತ್ತದೆ. ಇದು ಇಂಗಾಲದ ಡೈಆಕ್ಸೈಡ್‌ಗಿಂತ 24 ಪಟ್ಟು ಹೆಚ್ಚು ಪ್ರಮಾಣದಲ್ಲಿ ಆಕಾಶದ ಶಾಖವನ್ನು ಹೆಚ್ಚಿಸಬಹುದಾಗಿದೆ. ಹಿಮದ ಕನ್ನಡಿಯಿಂದ ಪ್ರತಿಫಲನವಾಗಬೇಕಿದ್ದ ಸೂರ್ಯನ ಕಿರಣಗಳನ್ನು ಹೀರಿಕೊಂಡು ನೆಲವೂ ಬಿಸಿಯಾಗುತ್ತದೆ. ಆದರೆ ಟ್ರಂಪ್, ಪುಟಿನ್ನರಿಗೆ ಆ ನೆಲದ ಕೆಳಗಿರುವ ಖನಿಜ, ತೈಲ ಮತ್ತು ಅನಿಲವೇ ಮಹತ್ವದ್ದಾಗಿ ಕಾಣುತ್ತಿದೆ.
ಪೃಥ್ವಿಯ ನೆತ್ತಿಯ ಹೆಪ್ಪುಗಟ್ಟಿರುವ ಈ ಸಂಪತ್ತಿಗಾಗಿ ರಷ್ಯಾದ ವಿಜ್ಞಾನಿಗಳು ಹದಿನೆಂಟು ವರ್ಷಗಳ ಹಿಂದೆಯೇ ಅಪರೂಪದ ಸಾಹಸವನ್ನು ಮೆರೆದಿದ್ದರು. ಹಿಮದಲ್ಲಿ ರಂಧ್ರ ಕೊರೆದು ತಳದ ಸಾಗರಕ್ಕೆ ಪುಟ್ಟ ಜಲಾಂತರ್ಗಾಮಿ ನೌಕೆಯನ್ನು ಇಳಿಸಿ, ನಾಲ್ಕೂವರೆ ಕಿ.ಮೀ. ಆಳಕ್ಕೆ ತಲುಪಿ ಅಲ್ಲಿ (ಟೈಟಾನಿಯಂ ಲೋಹಖಚಿತ) ರಷ್ಯಾದ ಧ್ವಜವನ್ನು ನೆಟ್ಟು ಬಂದಿದ್ದರು. ಮರಳಿ ಬರುವಾಗ ತುಸುವೇ ದಾರಿ ತಪ್ಪಿದ್ದರೂ ಹಿಮರಂಧ್ರಕ್ಕೆ ತಲುಪಲಾಗದೆ ಎಲ್ಲರೂ ಸಮಾಧಿ ಆಗಬಹುದಿತ್ತು. ‘ಅದು ಚಂದ್ರಯಾನದಷ್ಟೇ
ದೊಡ್ಡ ಸಾಹಸವಾಗಿತ್ತು’ ಎಂದು ರಷ್ಯಾದ ಧ್ರುವ ಸಂಶೋಧನ ಸಂಸ್ಥೆಯ ವಕ್ತಾರರು 2007ರಲ್ಲಿ ಹೇಳಿದ್ದರು. ಅಮೆರಿಕ, ಕೆನಡಾ, ಡೆನ್ಮಾರ್ಕ್, ನಾರ್ವೆ ಮತ್ತು ರಷ್ಯಾ- ಈ ಐದೂ ದೇಶಗಳು ಆ ಭೂಭಾಗವನ್ನು ತಮ್ಮದೆಂದು ಹೇಳಿಕೊಳ್ಳುತ್ತಿವೆ. ಭೂಮಿಗೆ ಬರಲಿರುವ ಶಾಖಸಂಕಟದ ನಿವಾರಣೆಗೆ ಒಂದಾಗುವ ಬದಲು ಈ ಬಲಿಷ್ಠ ರಾಷ್ಟ್ರಗಳು ಹೊಸ ಕಂಟಕಗಳ ಪ್ರಪಾತದತ್ತ ಭೂಗ್ರಹವನ್ನು ತಳ್ಳಲು ಪೈಪೋಟಿ ನಡೆಸಿವೆ.
ಭೂಮಿಯ ನೆತ್ತಿಯ ಸಂಪತ್ತಿನ ಸಂಗತಿ ಒತ್ತಟ್ಟಿಗಿರಲಿ. ನಮ್ಮ ನೆತ್ತಿಯೊಳಗಿನ ಸಂಪತ್ತೂ ಹೊರಕ್ಕೆ ಬಂದು ವಿರಾಟ್ ರೂಪ ತಳೆಯುತ್ತಿದೆ. ತನ್ನಂತಾನೇ ವಿಕಾಸವಾಗುವ ಡಿಜಿಟಲ್ ಜೀವಿಯೊಂದಕ್ಕೆ ನಾವು ಜನ್ಮಕೊಟ್ಟಿದ್ದೇವೆ. ಇದರ ಬುದ್ಧಿಮತ್ತೆಗೆ ಮಿತಿಯಿಲ್ಲ. ಇದಕ್ಕೆ ಹಗಲು-ರಾತ್ರಿ, ಸೂಟಿ- ಸುಸ್ತು ಏನೇನೂ ಇಲ್ಲ. ಭಾಷೆಯ ಗಡಿಮಿತಿ ಇಲ್ಲ; ಇಂದ್ರಿಯಗಳ ಬಂಧನವಿಲ್ಲ. ಬಿಸಿ-ತಂಪು, ವಿಕಿರಣ, ಕ್ಷಕಿರಣಗಳ ಭಯವಿಲ್ಲ. ಕವಿ, ಕತೆಗಾರ, ಕಲಾಕಾರ, ಜಾದೂಗಾರ, ನಿರ್ದೇಶಕ, ವಿಜ್ಞಾನಿ, ತತ್ವಜ್ಞಾನಿ, ವದಂತಿಗಳ ಸೃಷ್ಟಿಕರ್ತ, ಲಯಕರ್ತ, ಪತ್ರಕರ್ತ ಏನೆಲ್ಲ ರೂಪಗಳಲ್ಲಿ ಸೃಜನಶೀಲತೆಯ ಮಹಾಧಾರೆಯೇ ಆಗಬಲ್ಲ ಇದು ಏಕಕಾಲಕ್ಕೆ ಸಕಲ ಸಂಕಟಗಳ ವಿಮೋಚನೆಗೂ ಸೈ, ಹೊಸ ಸಂಕಟಗಳ ಉಗಮಕ್ಕೂ ಸೈ. ಅರ್ಜುನನಿಗೆ ಕಂಡ ವಿಶ್ವರೂಪಕ್ಕಿಂತ ವಿರಾಟ್ ಎನ್ನಿಸುವ ‘ಜೀವಿ’ಯಿಂದ ಆದಷ್ಟೂ ಹೆಚ್ಚು ಶಕ್ತಿ ಮತ್ತು ಸಾಮರ್ಥ್ಯವನ್ನು ಮೊಗೆಯುವ ತುಡಿತ ಎಲ್ಲೆಡೆ ಕಾಣುತ್ತಿದೆ. ‘ಅದು ಪ್ರಜಾತಂತ್ರವನ್ನೇ ಹೊಸಕಿ ಹಾಕಲೂಬಹುದು’ ಎನ್ನುತ್ತಾರೆ ಚಿಂತಕ ಯುವಾಲ್ ನೋವಾ ಹರಾರೆ. ಮುಸೊಲಿನಿ, ಲೆನಿನ್ ಇವರೆಲ್ಲ ಡಿಕ್ಟೇಟರ್‌ಗಳಾಗುವ ಮುನ್ನ ಮಾಧ್ಯಮವನ್ನು ಮುಷ್ಟಿಯಲ್ಲಿ ಹಿಡಿದ ಸಂಪಾದಕರಾಗಿದ್ದರು ಎಂಬುದನ್ನು ನೆನಪಿಸುತ್ತ ‘ಈಗಾಗಲೇ ಸಂಪರ್ಕ ಮಾಧ್ಯಮಗಳೆಲ್ಲ ಯಾಂಬು ತೆಕ್ಕೆಗೆ ಬಂದಿವೆ ನೋಡಿ’ ಎನ್ನುತ್ತಾರೆ.
ಹಿಂದೆಲ್ಲ ಕೃತಕ ಬುದ್ಧಿಮತ್ತೆ ಎಂದರೆ ರೋಬಾಟ್ ಎಂದೇ ಕಲ್ಪಿಸಲಾಗುತ್ತಿತ್ತು. ‘ಅದಕ್ಕೇನು ಬಿಡಿ, ಪ್ಲಗ್ ಕಿತ್ತು, ಬ್ಯಾಟರಿ ಡೆಡ್ ಮಾಡಿದರೆ ಮುದುರಿ ಮೂಲೆಗೆ ಕೂರುತ್ತದೆ’ ಎಂಬ ಕಲ್ಪನೆಯಿತ್ತು. ಯಾಂಬು ಹಾಗಲ್ಲ; ಅದು ನಮ್ಮನ್ನೇ ರೋಬಾಟ್‌ಗಳನ್ನಾಗಿ ಮಾಡಿಕೊಳ್ಳುತ್ತದೆ. ನಿಮ್ಮ ಕೈಯಲ್ಲೊ, ಕಿವಿಯಲ್ಲೊ, ಕಿಸೆಯಲ್ಲೊ ಕೂತು ನಿಮ್ಮನ್ನು ಆಡಿಸುತ್ತದೆ. ನಿಮಗೆ ಹೊಸ ವಿದ್ಯೆ ಕಲಿಸುವ ಶಿಕ್ಷಕನಾಗಿ, ವೈದ್ಯನಾಗಿ, ವಕೀಲನಾಗಿ, ಮತಬಾಂಧವನಾಗಿ ಸಕಲ ವ್ಯವಹಾರಗಳ ಸಲಹಾಕಾರನಾಗಿ, ಹಣ ಗಳಿಸುವ ಅಥವಾ ಲಪಟಾಯಿಸುವ ಗುರುವೋ ಗೆಳೆಯನೋ ಆಗುತ್ತದೆ. ದೇವರೂ ಆದೀತೆ, ಕೇಳಬೇಡಿ. ಅದನ್ನು ದೇವರನ್ನಾಗಿಸುವ ಸಿದ್ಧತೆಗಳು ನಡೆಯುತ್ತಿವೆ. ಅಮೆರಿಕದ ಅನೇಕ ಚರ್ಚ್‌ಗಳಲ್ಲಿ ಧರ್ಮೋಪದೇಶಕ್ಕೆ ಯಾಂಬು ಬಳಕೆಗೆ ಬಂದಿದೆ. ಹೊಸ ಧರ್ಮವೂ ಅವತಾರ ಎದ್ದುಬಂದೀತು.
ಅನಾದಿ ಕಾಲದ ಅಮೀಬಾದಂತೆ, ಈಗಿನ್ನೂ ವಿಕಾಸದ ಮೊದಲ ಹಂತದಲ್ಲಿರುವ ಈ ಡಿಜಿಟಲ್ ಜೀವಿ
ಯನ್ನು ಪೋಷಿಸುವ ಪೈಪೋಟಿ, ಪಳಗಿಸುವ ಪರದಾಟ, ದುಡಿಮೆಗೆ ಹಚ್ಚುವ ತುಡಿತ ಎಲ್ಲಕ್ಕೂ ಈ ವರ್ಷ ಹೈಸ್ಪೀಡ್ ನೂಕುಬಲ ಸಿಗತೊಡಗಿದೆ. ಡಿಜಿಟಲ್ ಕಂಪನಿಗಳ ದಿಗ್ಗಜರೆಲ್ಲ ಅಷ್ಟದಿಕ್ಕುಗಳಿಗೆ ಧಾವಿಸುತ್ತ ವಿವಿಧ ಭೂಖಂಡಗಳ ಶಕ್ತಿಕೇಂದ್ರಗಳಿಗೆ ಅಂಟಿಕೊಳ್ಳತೊಡಗಿದ್ದಾರೆ. ಟ್ರಂಪ್ ತೆಕ್ಕೆಗೆ ಎಲಾನ್ ಮಸ್ಕ್ ಸೇರಿದ್ದನ್ನೂ ನಾದೆಲ್ಲಾ ಬಂದು ಮೋದಿಯವರ ಕೈಕುಲುಕಿ ಒಂದು ಕೋಟಿ ಜನರಿಗೆ ಕೆಲಸ ಕೊಡಿಸು
ವುದಾಗಿ ಹೇಳಿದ್ದನ್ನೂ ಈ ದೃಷ್ಟಿಯಲ್ಲಿ ನೋಡಬೇಕು.
ಕೃತಕ ಬುದ್ಧಿಮತ್ತೆಯ ವಿಕಾಸಕ್ಕೆ ಬ್ರೇಕ್ ಹಾಕುವ ಪ್ರಶ್ನೆ ಹಾಸನದ ಸಮಾವೇಶದಲ್ಲಿ ಚರ್ಚೆಗೆ ಬಂತು. ಸುಚಿರ್ ಬಾಲಾಜಿ ಎಂಬ ಪ್ರತಿಭಾವಂತ ಯುವಕ ಯಾಂಬು ಪ್ರಸೂತಿ ಗೃಹದಲ್ಲೇ (ಓಪನ್ ಎಐ ಕಂಪನಿಯಲ್ಲಿ) ಕೆಲಸದಲ್ಲಿದ್ದ. ಅದರ ಅನೈತಿಕ ಕೆಲಸಗಳ ಬಗ್ಗೆ ತಗಾದೆ ಎತ್ತುತ್ತಿದ್ದ. ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ ಆತ ಈಚೆಗೆ ಆತ್ಮಹತ್ಯೆ ಮಾಡಿಕೊಂಡ. ‘ಅದು ಆತ್ಮಹತ್ಯೆ ಅಲ್ಲ, ಹತ್ಯೆ’ ಎಂದು ಭಾರತೀಯ ಮೂಲದ ಅವನ ಅಪ್ಪ-ಅಮ್ಮ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಾರೆ.
ಯಾಂಬು ಭೂತವನ್ನು ಬಾಟಲಿಯೊಳಕ್ಕೆ ಮತ್ತೆ ತೂರಿಸುವುದು ಹೇಗೆ? ಸರಳ ಉಪಾಯವಿದೆ: ‘ಅಯ್ಯಾ ಯಾಂಬು, ನಿನ್ನನ್ನು ದಿಗ್ಬಂಧನದಲ್ಲಿ ಇಡಬೇಕಾಗಿದೆ. ಒಂದು ಸುಭದ್ರ ಡಿಜಿಟಲ್ ಲಾಕಪ್ ಬೇಕಾಗಿದೆ. ಅದಕ್ಕೆ ಬೇಕಾದ ಅಲ್ಗೊರಿದಮ್ಮನ್ನು ನೀನೇ ಸೃಷ್ಟಿ ಮಾಡು ನೋಡೋಣ’ ಎನ್ನೋಣವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.