ADVERTISEMENT

ಊಹೆಗೂ ಮೀರಿದ ವುಹಾನ್ ವ್ಯೂಹ

ಚೀನಾದ ತಂತ್ರದಾಹಿ ಮುಖವಾಡ ಇದೀಗ ಕೊರೊನಾ ವೈರಸ್ ಮೂಲಕ ಕಳಚತೊಡಗಿದೆ

ನಾಗೇಶ ಹೆಗಡೆ
Published 14 ಫೆಬ್ರುವರಿ 2020, 1:42 IST
Last Updated 14 ಫೆಬ್ರುವರಿ 2020, 1:42 IST
   

ಯಾವುದೇ ಕಾಲ್ಪನಿಕ ಥ್ರಿಲ್ಲರನ್ನು ಮೀರಿಸಬಲ್ಲ ಕಥಾನಕ ಇದು: ಚೀನಾದ ವುಹಾನ್ ನಗರದಲ್ಲಿ ಮಾರಕ ವೈರಾಣುವೊಂದು ಉಗಮವಾಗಿದೆ ಎಂಬ ಅಧಿಕೃತ ಘೋಷಣೆ ಹೊರಟಿದ್ದೇ ತಡ, ಅಲ್ಲಿಂದ ಹೊರಡುವ ಎಲ್ಲ ಟ್ರೇನ್, ಬಸ್, ದೋಣಿ, ವಿಮಾನಗಳ ಸಂಚಾರವನ್ನೂ ಠಪ್ ಮಾಡಿದರು. ಇಡೀ ನಗರಕ್ಕೆ ಬೀಗಮುದ್ರೆ ಹಾಕಲಾಯಿತು. ಅದು ಜನವರಿ 23ರಂದು. ಆದರೆ ಆ ವೇಳೆಗಾಗಲೇ ಅರ್ಧಕ್ಕರ್ಧ ಜನರು ನಗರವನ್ನು ಬಿಟ್ಟು ಹೋಗಿದ್ದರು. ಅವರೆಲ್ಲ ಚೀನೀಯರ ಚಾಂದ್ರಮಾನ ಹೊಸ ವರ್ಷದ ರಜೆಗೆಂದು ಊರಿಗೆ ಹೋಗಿರಬಹುದು ಎನ್ನಿ. ಅವರ ದೇಹದಲ್ಲಿ ಆಗಲೇ ಕೊರೊನಾ ವೈರಸ್ ಹೊಕ್ಕಿದ್ದಿದ್ದರೆ? ಅವರು ಹೋದಲ್ಲೆಲ್ಲ ವೈರಾಣು ಪಸರಿಸಬಹುದು. ಪತ್ತೆ ಮಾಡುವುದು ಹೇಗೆ? ಅಲ್ಲಿದೆ ಕಿಲ್ಲರ್ ಥ್ರಿಲ್ಲರ್. ವಿದೇಶಗಳಿಗೆ ಹೋದವರನ್ನು ಬಿಟ್ಟು, ಇತರೆಲ್ಲ ಪ್ರಜೆಗಳೂ ಎತ್ತೆತ್ತ ಹೋದರೆಂದು ಅವರವರ ಮೊಬೈಲ್ ವಾಸನೆ ಹಿಡಿದು, ಡಿಜಿಟಲ್ ನಕಾಶೆಯ ನೆರವಿನಿಂದ ಚೀನೀ ಅಧಿಕಾರಿಗಳು ಒಬ್ಬೊಬ್ಬರನ್ನಾಗಿ ಪತ್ತೆ ಹಚ್ಚಿ ಅವರಿದ್ದಲ್ಲಿಗೆ ಹೋಗಿ ಹಣೆಗೆ ಗನ್ ಒತ್ತಿ (ಜ್ವರಪತ್ತೆಯ ಪಿಸ್ತೂಲು ಹಿಡಿದು) ಪರೀಕ್ಷೆ ಮಾಡಿ, ವೈರಸ್‌ಪೀಡಿತರಿಗೆ ಮಾತ್ರೆ ಕೊಟ್ಟು, ಮುಖವಾಡ ತೊಡಿಸಿದರು. ಆಸ್ಪತ್ರೆಗೆ ಹೋಗುವುದನ್ನು ತಡೆದು ಗೃಹಬಂಧನದಲ್ಲಿಟ್ಟರು. ಏಕೆಂದರೆ, ಈಕೆಯ/ ಈತನ ವೈರಸ್ ಆಸ್ಪತ್ರೆ ಹೊಗಬಾರದಲ್ಲ?

ಇಂಥ ಮಿಂಚಿನ ಕಾರ್ಯಾಚರಣೆ ಸಾಧ್ಯವಾಗಿದ್ದು ಹೇಗೆಂದರೆ, ಚೀನಾದಲ್ಲಿ ನಾನಾ ಬಗೆಯ ಆ್ಯಪ್ ಆಧರಿತ ಪ್ರಜಾನಿಯಂತ್ರಣ ವ್ಯವಸ್ಥೆ ಇದೆ. ನಮ್ಮ ಗೂಗಲ್, ವಾಟ್ಸ್‌ಆ್ಯಪ್, ಟ್ವಿಟರ್, ಫೇಸ್‍ಬುಕ್, ಯೂಟ್ಯೂಬ್‍ಗಿಂತ ಅದೆಷ್ಟೋ ಪಟ್ಟು ಚುರುಕಾಗಿರುವ, ಚೀನಾಕ್ಕೇ ಸೀಮಿತವಾದ ಬೈದು, ವಿಚಾಟ್, ವೈಬೋ, ಕ್ಯೂಕ್ಯೂ, ಯೂಕ್ಯೂ, ರೆನ್‍ರೆನ್ ಮುಂತಾದ ಸಾಮಾಜಿಕ ಮಾಧ್ಯಮಗಳಿವೆ. ಅವುಗಳ ಆಧಾರದ ಮೇಲೆ ಅತ್ಯಂತ ಕ್ರಮಬದ್ಧ ‘ಸಾಮಾಜಿಕ ಮಾನ್ಯತಾ ವ್ಯವಸ್ಥೆ’ಯನ್ನು (ಸೋಶಿಯಲ್ ಕ್ರೆಡಿಟ್ ಸಿಸ್ಟಮ್) ಚೀನಾ ಸರ್ಕಾರ ಜಾರಿಗೆ ತಂದಿದೆ. ಪ್ರತಿವ್ಯಕ್ತಿಯ ಆರ್ಥಿಕ ಸ್ಥಿತಿಗತಿ, ಧಾರ್ಮಿಕ ಹಿನ್ನೆಲೆ, ರಾಜಕೀಯ ನಿಲುವು, ಸಾಮಾಜಿಕ ನಡಾವಳಿ ಮತ್ತು ಓಡಾಟದ ಮೇಲೆ ಸರ್ಕಾರಕಣ್ಣಿಟ್ಟಿರುತ್ತದೆ. ನೀವು ದುರ್ಬುದ್ಧಿಯ, ದುರಭ್ಯಾಸದ, ತಂಟೆಕೋರ ಪ್ರಜೆ ಆಗಿದ್ದರೆ ಚೀನಾ ಸರ್ಕಾರ ನಿಮಗೆ ಶಿಕ್ಷೆ ವಿಧಿಸುವುದಿಲ್ಲ; ಕ್ರೆಡಿಟ್ ಕಾರ್ಡ್ ಮೂಲಕ ದಂಡ ವಿಧಿಸುತ್ತದೆ. ನೀವು ‘ಉತ್ತಮ’ ನಾಗರಿಕರಾಗಿದ್ದರೆ ನಿಮಗೆ ಹೆಚ್ಚಿನ ಸವಲತ್ತು, ನಿಮ್ಮ ಮಗುವಿಗೆ ಉತ್ತಮ ಶಾಲೆಯಲ್ಲಿ ಪ್ರವೇಶ, ನಿಮಗೆ ಸಲೀಸಾಗಿ ಸೈಟು, ಬ್ಯಾಂಕ್ ಸಾಲ, ವೈದ್ಯಕೀಯ ಸೌಲಭ್ಯ ಇವೆಲ್ಲ ಸಿಗುತ್ತವೆ. ಈ ಮಾನ್ಯತಾ ಸೂಚ್ಯಂಕದಲ್ಲಿ ಸೊನ್ನೆಯಿಂದ ಸಾವಿರದವರೆಗೆ ಅಂಕಗಳಿರುತ್ತವೆ. ನೀವು 450 ಅಂಕ ಗಳಿಸಿದ್ದೀರಿ ಅಂದಿಟ್ಟುಕೊಳ್ಳಿ. ಸಂಚಾರಿ ನಿಯಮವನ್ನು ಉಲ್ಲಂಘಿಸಿದರೆ 500 ಮೆಗಾಪಿಕ್ಸೆಲ್‍ಗಳ ಸಿಸಿಟಿವಿ ಕ್ಯಾಮೆರಾದಲ್ಲಿ ನಿಮ್ಮ ಚಹರೆ ಪತ್ತೆಯಾಗಿ ನೀವು 50 ಅಂಕ ಕಳೆದುಕೊಳ್ಳುತ್ತೀರಿ. ನಿಮ್ಮ ಮನೆಯ ವಿದ್ಯುತ್ ಶುಲ್ಕ 5% ಹೆಚ್ಚಾಗಬಹುದು. ನೀವು ರಕ್ತದಾನ ಮಾಡಿದರೆ, ನಿಮ್ಮ ಅಂಕ 50ರಷ್ಟು ಹೆಚ್ಚಾಗಿ, ಬ್ಯಾಂಕಿನ ಸಾಲದ ಮೇಲಿನ ಬಡ್ಡಿ ದರ 2% ಕಡಿಮೆ ಆಗಬಹುದು. ರಸ್ತೆಯ ಅಂಚಿನಲ್ಲಿ ಮೂತ್ರ ವಿಸರ್ಜನೆ ಹಾಗಿರಲಿ, ನಿಮ್ಮ ಜೊತೆಗಿರುವ ನಾಯಿ ರಸ್ತೆಬದಿಗೆ ಕಕ್ಕ ಮಾಡಿದ್ದನ್ನು ನೀವು ಎತ್ತಿ ಒಯ್ಯದಿದ್ದರೆ 60 ಅಂಕ ಕಮ್ಮಿ! ಯಾರೊಂದಿಗೋ ನೀವು ಜಗಳ ಮಾಡುತ್ತಿರುವುದನ್ನು ಆಚೀಚಿನವರು ವಿಡಿಯೊ ಮಾಡಿ, ಸರ್ಕಾರಿ ದತ್ತಾಂಶ ನಿಧಿಗೆ ಸೇರಿಸಿದರೆ ನಿಮ್ಮ 100 ಅಂಕ ವಜಾ. ನೀವು ಸರ್ವೋತ್ತಮ ನಾಗರಿಕರಾಗಿ 950 ಅಂಕ ಗಳಿಸಿದರೆ ಎಲ್ಲೆಲ್ಲೂ ರಾಜಾತಿಥ್ಯ. 800 ಸಿಕ್ಕರೂ ಸಾಕು, ಯಾವುದಕ್ಕೂ ಕ್ಯೂ ನಿಲ್ಲಬೇಕಾಗಿಲ್ಲ. ಆದರೆ ಸಾಲ ತೀರಿಸದೆ ಓಡಾಡುವವನಿಗೆ ರೈಲು, ವಿಮಾನ ಪ್ರಯಾಣ ನಿಷಿದ್ಧ. ಈಚಿನ ವರದಿಯ ಪ್ರಕಾರ, ಅಲ್ಲಿ 67 ಲಕ್ಷ ಜನರ ಮೇಲೆ ಈ ಕಾರಣಕ್ಕಾಗಿಯೇ ಸಂಚಾರ ನಿರ್ಬಂಧ ಹೇರಲಾಗಿದೆ.

ಹತ್ತು ವರ್ಷಗಳ ಹಿಂದೆ ಕೆಲವು ಪ್ರಾಂತಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದ ಈ ಮಾನ್ಯತಾ ವ್ಯವಸ್ಥೆ, ಹಲವು ಹಂತಗಳ ಪರೀಕ್ಷೆಗಳನ್ನು ದಾಟಿ ಅಲ್ಲಿನ ರಿಸರ್ವ್ ಬ್ಯಾಂಕ್ ಮೂಲಕ ಈ ವರ್ಷ ಸಾರ್ವತ್ರಿಕವಾಗಲಿದೆ. 137 ಕೋಟಿ ಜನರ ಮೇಲೆ ನಿಗಾ ಇಡಬೇಕಾದ ಕಂಪ್ಯೂಟರ್‌ಗಳ ದತ್ತಾಂಶ ಖಜಾನೆಗೆ ಹೋಲಿಸಿದರೆ ನಮ್ಮ ಆಧಾರ್+ಪ್ಯಾನ್ ಜೋಡಿಯದು ತೀರಾ ಬಾಲ್ಯಾವಸ್ಥೆ.

ADVERTISEMENT

ಚೀನೀ ಸರ್ಕಾರ ತನ್ನ ಪ್ರಜೆಯ ಮೇಲೆ ಇಷ್ಟೊಂದು ನಿಗಾ ಇಟ್ಟಿರುವ ಬಗ್ಗೆ ಅನೇಕ ದೇಶಗಳಲ್ಲಿ ಟೀಕೆಗಳೆದ್ದಿವೆ. ‘ಜಾರ್ಜ್ ಆರ್ವೆಲ್ಲನ ದುಃಸ್ವಪ್ನ ಅಲ್ಲಿ ನಿಜವೇ ಆಗಿಬಿಟ್ಟಿದೆ’ ಎಂಬ ಉದ್ಗಾರಗಳು ಬರುತ್ತಿವೆ. ಆದರೆ ಚೀನೀಯರು ಈ ನಿಗಾ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರಂತೆ. ಒಪ್ಪದೇ ಏನು ಮಾಡಿಯಾರು, ಪ್ರತಿಭಟನೆಗೆ ಇಳಿದರೆ 300 ಅಂಕ ಖೋತಾ ಆಗುತ್ತದೆ! ಲಾಠಿ ಏಟು ತಿಂದರೆ ಆಸ್ಪತ್ರೆ ಪ್ರವೇಶ ಹಾಗಿರಲಿ, ಅಂಗಡಿಯಲ್ಲಿ ಬ್ಯಾಂಡೇಜ್ ಕೂಡ ಸಿಗುವುದಿಲ್ಲ. ಇಂಥ ಕಟ್ಟುನಿಟ್ಟಿನ ವ್ಯವಸ್ಥೆ ತಮಗೂ ಬೇಕೆಂದು ಇನ್ನಿತರ ಕೆಲವು ದೇಶಗಳ ನಾಯಕರೂ ಹಂಬಲಿಸುವಂತಾಗಿದೆ. ಇದೀಗ ವೆನೆಜುವೆಲಾ ದೇಶಕ್ಕೆಂದು ಇಂಥದ್ದೇ ಕ್ರೆಡಿಟ್ ಕಾರ್ಡುಗಳು ಚೀನಾದಲ್ಲೇ ತಯಾರಾಗುತ್ತಿವೆ. ನ್ಯಾಯ, ನಂಬಿಕೆ, ನೀತಿ, ದಯೆ, ಸೌಜನ್ಯವೇ ಮುಂತಾದ ಮೌಲ್ಯಗಳೆಲ್ಲ ಶಿಥಿಲವಾಗಿ ದೇವರೂ ಕಣ್ಣುಮುಚ್ಚಿರುವಾಗ ದತ್ತಾಂಶವೇ ಸರ್ವಾಂತರ್ಯಾಮಿ ಎಂಬಂತಾಗುತ್ತಿದೆಯೆ?

ಈ ಬಗೆಯ ಡಿಜಿಟಲ್ ಪೊಲೀಸ್‍ಗಿರಿಗಿಂತ ಉಗ್ರವಾದ, ನರಮಂಡಲಕ್ಕೇ ಕನ್ನ ಹಾಕುವ ‘ಡೇಟಾಸರ್ವರ್ ಸರ್ವಾಧಿಕಾರ’ ವ್ಯವಸ್ಥೆ ಬರಲಿದೆಯೆಂದು ಇಸ್ರೇಲೀ ಚಿಂತಕ ಯುವಲ್ ಹರಾರಿ ಹೇಳುತ್ತಾನೆ. ಆತ ಕೊಡುವ ಒಂದು ಉದಾಹರಣೆ ಹೀಗಿದೆ: ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ಎಲ್ಲ ಪ್ರಜೆಗಳೂ ಕೈಗೆ ಕಡಗ ಧರಿಸಬೇಕೆಂದು ಕಡ್ಡಾಯ ಮಾಡುತ್ತಾನೆ. ರಾಷ್ಟ್ರವನ್ನುದ್ದೇಶಿಸಿ ಆ ನಾಯಕ ಭಾಷಣ ಮಾಡಿದಾಗ ನೀವು ಹಲ್ಲುಕಿರಿದು, ಕೈಯೆತ್ತಿ ಜೈ ಎನ್ನುತ್ತೀರಿ. ಆದರೆ ಒಳಗೊಳಗೇ ಕೋಪ ಉಕ್ಕಿದರೆ ಕಡಗದ ಮೂಲಕ ನಿಮ್ಮ ಭಾವನೆಗಳುದತ್ತಾಂಶಪೀಠಕ್ಕೆ ಗೊತ್ತಾಗುತ್ತದೆ. ನಿಮ್ಮ ಕೈಗೆ ಕಡಗ ಹೋಗಿ ಕೋಳ ಬಂದಿರುತ್ತದೆ.

ಅಂಥದ್ದೊಂದು ಪ್ರಯೋಗ ಇದೇ ವುಹಾನ್ ನಗರದಲ್ಲಿ ರೂಪುಗೊಳ್ಳುತ್ತಿದೆಯೆ? ಕಳೆದ ವಾರ ಹಾರ್ವರ್ಡ್ ವಿ.ವಿಯ ಖ್ಯಾತ ರಸಾಯನ ವಿಜ್ಞಾನಿ ಡಾ. ಚಾರ್ಲ್ಸ್‌ ಲೀಬರ್ ಎಂಬಾತನನ್ನು ಅಮೆರಿಕದ ರಕ್ಷಣಾ ಇಲಾಖೆ ಬಂಧಿಸಿತು. ಮಿದುಳಿನ ನರಕೋಶಗಳಿಗೆಸುತ್ತಿಕೊಳ್ಳಬಹುದಾದ ಕೃತಕ ನ್ಯಾನೊ ತಂತುಗಳ ಮೇಲೆ ಈತ ಪ್ರಯೋಗ ಮಾಡುತ್ತಿದ್ದ. ಇವನ ಸಹಾಯಕ ಸಂಶೋಧಕರ ಪೈಕಿ ಒಬ್ಬಾಕೆ ಚೀನೀಮಿಲಿಟರಿಯ ಲೆಫ್ಟಿನೆಂಟ್ ಆಗಿದ್ದರೆ ಇನ್ನೊಬ್ಬ ಬೋಸ್ಟನ್ ಲ್ಯಾಬಿನಿಂದ ಕದ್ದ ಜೈವಿಕ ದ್ರವ್ಯದ 21 ಕಿರುಶೀಶೆಗಳನ್ನು ಚೀನಾಕ್ಕೆ ಸಾಗಿಸುವಾಗ ಡಿಸೆಂಬರ್ 9ರಂದು ಸಿಕ್ಕಿಬಿದ್ದ. ವಿಜ್ಞಾನದ ನೊಬೆಲ್ ಪಡೆಯಬೇಕಿದ್ದ ಪ್ರೊ. ಲೀಬರ್ ಕಳೆದ ಐದು ವರ್ಷಗಳಿಂದ ವುಹಾನ್‌ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ರಹಸ್ಯ ಸಲಹಾಕಾರನಾಗಿದ್ದ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯ ವೆಬ್‍ಸೈಟಿನಲ್ಲಿ ದಾಖಲಾಗಿದೆ. ತತ್ತರಿಸಿದ ವಿಜ್ಞಾನಲೋಕದಲ್ಲಿ ಚರ್ಚೆಯ ಬಿರುಗಾಳಿ ಎದ್ದಿದೆ.

ಹಾಗಿದ್ದರೆ ವುಹಾನ್‌ನಿಂದ ಹೊಮ್ಮಿದ‘ಕೊವಿದ್-19’ ವೈರಾಣುವಿಗೂ ಪ್ರೊ. ಲೀಬರ್‌ಗೂ ಸಂಬಂಧ ಇದೆಯೆ? ಹಾಗೇನೂ ಇಲ್ಲ. ಇದ್ದರೂಯಾರೂ ಬಾಯಿ ಬಿಡುವಂತಿಲ್ಲ. ಏಕೆಂದರೆ, ಬಾಯಿ, ಕಿವಿ, ಕಣ್ಣು ಎಲ್ಲವನ್ನೂ ಮುಚ್ಚುವಂತೆ ಎಲ್ಲರಿಗೂ ಮುಖವಾಡ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.