ADVERTISEMENT

ಪಾಂಡು–ಮಾದ್ರಿ

ಲಕ್ಷ್ಮೀಶ ತೋಳ್ಪಾಡಿ
Published 25 ಫೆಬ್ರುವರಿ 2017, 13:24 IST
Last Updated 25 ಫೆಬ್ರುವರಿ 2017, 13:24 IST
ವ್ಯಾಸರು ದುರಂತ ಘಟನೆಗಳಿಂದ ನಿಬಿಡವಾಗಿರುವ ತಮ್ಮ ಮಹಾಭಾರತದದಲ್ಲಿ ಯಾವುದಾದರೊಂದು ಘಟನೆಯನ್ನು ‘ಕೇಂದ್ರ’ವೆಂಬ ರೀತಿಯಲ್ಲಿ ಗುರುತಿಸಿದ್ದಾರೆಯೆ? ಕೇಂದ್ರವೆಂದಾಗ ಅದೊಂದು ಮಾರ್ಮಿಕವಾದ ಘಟನೆ ಎಂದು, ಮನುಷ್ಯನ ಪಾಡನ್ನು ದುರ್ನಿವಾರ್ಯವೆಂದು ಸೂಚಿಸುವಂಥದು ಎಂದು, ಈ ಘಟನೆಗೆ ಹೇಗೆ ಸ್ಪಂದಿಸಬೇಕೆಂದೇ ತಿಳಿಯದಷ್ಟು ಆಘಾತಕಾರಿಯಾದುದು ಎಂದು, ಮುಂದಿನ ಇತಿಹಾಸದ ದಿಕ್ಕನ್ನು ಸೂಚಿಸುವಷ್ಟು ಉತ್ಕಟವಾದುದು ಎಂದು, ತಾವೇ ಒಂದು ಪಾತ್ರವೂ ಆಗಿರುವ ತಮ್ಮ ಈ ಕೃತಿಯಲ್ಲಿ ಈ ಘಟನೆಯ ಬಗೆಗೆ ವ್ಯಾಸರೇ ಆಳವಾಗಿ ಸ್ಪಂದಿಸಿರುವುದು ಎಂದು ಅರ್ಥ. ಹೌದು; ಅಂಥದೊಂದು ಕೇಂದ್ರ ಘಟನೆಯನ್ನು ಗುರುತಿಸಬಹುದು. ಅದು ಪಾಂಡುಮಾದ್ರಿಯರ ದುರಂತ ಘಟನೆ!
 
ಮೃಗಗಳಾಗಿ ಕ್ರೀಡಿಸುತ್ತಿದ್ದ ಮುನಿದಂಪತಿಗಳನ್ನು ಗುರಿತಪ್ಪದ ಬೇಟೆಗಾರ ಪಾಂಡು ಒಂದೇ ಬಾಣದಲ್ಲಿ ಕೆಡವಿದ್ದ. ಬಿಟ್ಟ ಬಾಣ ಹಿಂದೆ ಬರುವುದಿಲ್ಲವೇನೋ ನಿಜ. ಆದರೆ ಕೊಟ್ಟ ನೋವು ಇಮ್ಮಡಿಯಾಗಿ ಮರಳಿ ಬರಬಾರದೆಂದೇನೂ ಇಲ್ಲ. ಬಾಣಕ್ಕೆ ತುತ್ತಾದವನ ಅನುಭವವು ಬಾಣ ಎಸೆದವನಿಗೂ ಆಗುವಲ್ಲಿ, ಇತಿಹಾಸಕ್ಕೆ ತನ್ನ ಅರಿವು ತನಗೇ ಉಂಟಾದ ತೃಪ್ತಿಯುಂಟಾಗಬಹುದು! ಕೆಡೆದು ಬಿದ್ದ ಮುನಿ ಮಾತಿನ ಬಾಣವನ್ನು ಪಾಂಡುವಿನ ಮೇಲೆ ಎಸೆದಿದ್ದ.
 
‘ನೀನು ನಿನ್ನ ನಲ್ಲೆಯನ್ನು ಬಯಸಿ ಮುಟ್ಟದ ಹೊತ್ತಿನಲ್ಲಿಯೇ ನಿನ್ನ ಸಾವು ನಿನ್ನನ್ನು ಮುಟ್ಟಲು ಕಾದುಕೊಂಡಿರುತ್ತದೆ’ ಎಂಬ ಎದೆಯಾಳವನ್ನು ಮುಟ್ಟುವ ಮಾತಿನ ಅಲಗು. ಜೀವಿಗೆ ಆಪ್ಯಾಯಮಾನವಾದ ಸ್ಪರ್ಶಾನುಭವವು ಜೀವನ್ಮರಣ ಹೋರಾಟವೊಂದರ ಮುನ್ನಡಿಯಾಗಲಿ ಎಂಬ ಮಾತಿನ ಈಟಿ. ನೋವೆಂಬ ಸತ್ಯವು ತಾನಿರುವುದಕ್ಕಾಗಿ ಬದುಕಿನಲ್ಲಿ ಯಾವುದಾದರೊಂದು ಜೀವಿಯ ಆಶ್ರಯವನ್ನು ಹುಡುಕುತ್ತಿರುತ್ತದೇನೋ! ನೋವು, ಮುನಿ ದಂಪತಿಯನ್ನು ಸಾವಿನಲ್ಲಿ ಬಿಟ್ಟುಕೊಟ್ಟು ಪಾಂಡುವನ್ನು ಆಶ್ರಯಿಸಿತು. ವಿಚಲಿತನಾದ ಪಾಂಡು. ಬದುಕಿನಲ್ಲಿ ವಿರಕ್ತನಾದ.
 
ಈ ಘಟನೆಯಾದ ಮೇಲೆ ಹಸ್ತಿನೆಯ ಅರಮನೆಗೇನೋ ಮರಳಿ ಬಂದಿದ್ದ. ಆದರೆ ನಿರ್ವಿಣ್ಣನಾಗಿದ್ದ. ಅರಮನೆಯಲ್ಲಿ ವಿರಕ್ತಿಯ ಬದುಕು ನಡೆಸುವುದು ಕಷ್ಟ ಸಾಧ್ಯವಾಗಿ ತಾನು ಹಿಮಾಲಯದ ತಪೋವನಗಳತ್ತ ನಡೆಯುವೆನೆಂದುಕೊಂಡ. ಕುಂತಿ, ಮಾದ್ರಿಯರೂ ಅವನ ಸೇವೆಗೆಂದು ವಿಷಣ್ಣರಾಗಿ ಪಾಂಡುವನ್ನು ಹಿಂಬಾಲಿಸಿದರು.
 
ಅರಮನೆಯಲ್ಲಿ ದೂರದ ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿ ಸೌಬಲೆ (ಸುಬಲನ ಮಗಳು) ಧೃತರಾಷ್ಟ್ರನಿಗೆ ಮಡದಿಯಾಗಿ, ಸತ್ಯವತಿಗೆ; ಭೀಷ್ಮನಿಗೆ ಸೊಸೆಯಾಗಿ ಬಂದಿದ್ದಳು. ಗಂಡ ಧೃತರಾಷ್ಟ್ರ–ಕುರುಡ. ತಾನೂ ಕುರುಡಿಯಂತಿರುವುದು ಲೇಸೆಂದುಕೊಂಡಳು. ಕಣ್ಣಿಗೆ ಬಟ್ಟೆ ಬಿಗಿದುಕೊಂಡಳು. ಯಾರೂ ಯಾಕೋ ಬೇಡವೆನ್ನಲಿಲ್ಲ. ಇದು ಅಸಹಜವೆಂದು ಯಾರೂ ತಡೆಯಲಿಲ್ಲ. ಎಲ್ಲರೂ ಕುರುಡರಂತಾದರೇನೋ. ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳದೆ ಇರುತ್ತಿದ್ದರೆ ಕುರುಡ ಗಂಡನನ್ನು ನೋಡುತ್ತ ನೋಡುತ್ತ ಮೊದಲು ಕರುಣೆಯಿಂದ ಆ ಮೇಲೆ ಕರುಣೆಯಿಂದಲೇ ಹುಟ್ಟಿಕೊಂಡ ಪ್ರೀತಿಯಿಂದ ಅವನನ್ನು ಆದರಿಸುವುದು ಸಾಧ್ಯವಿತ್ತು. ಅಥವಾ ಕುರುಡ ಗಂಡನಂತೆಯೇ ಬಾಳುತ್ತೇನೆ ಎನ್ನುವುದೂ ಉತ್ಕಟವಾದ ಪ್ರೀತಿಯ ಕುರುಹಲ್ಲ ಎನ್ನುವಂತೆಯೂ ಇಲ್ಲ.
 
ನೀನು ಗಂಡನಿಗೆ ಕಣ್ಣಾಗಿ ಬಾಳೆಂದು ಗಾಂಧಾರಿಗೆ ಯಾರೂ ಹೇಳಿದಂತಿಲ್ಲ. ಗಾಂಧಾರಿಯ ಅತ್ತೆ ಅಂಬಿಕೆ ವ್ಯಾಸರನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡು ವ್ಯಾಸರ ಮಟ್ಟಿಗೆ ಕುರುಡಾಗಿದ್ದಳು. ಅಂಬಿಕೆಯ ಪರಂಪರೆ, ಗಾಂಧಾರಿಯ ಮೂಲಕ ಅರಮನೆಯಲ್ಲಿ ಮುಂದುವರೆಯಿತು. ಅರಮನೆಯ ನಡವಳಿಕೆಗಳೇ ವಿಲಕ್ಷಣವೆನ್ನಿಸುತ್ತವೆ ಮತ್ತು ಇತಿಹಾಸದ ನಡೆ ಮನುಷ್ಯರ ಕುರುಡಿನಲ್ಲಿಯೂ ತನ್ನ ಕುರುಹನ್ನು ಇಟ್ಟಿರುತ್ತದೆ. ಗಾಂಧಾರಿ ಹೀಗೆ ಸ್ವೇಚ್ಛೆಯಿಂದ ಕುರುಡಳಂತಾದ ಮೇಲೆ ಧೃತರಾಷ್ಟ್ರನಿಗೆ ಇನ್ನೊಂದು ಹೆಣ್ಣನ್ನು ತಂದು ಮದುವೆ ಮಾಡುವ ಯೋಚನೆಯನ್ನು ಭೀಷ್ಮಾದಿಗಳು ಮಾಡಲಿಲ್ಲವೆನಿಸುತ್ತದೆ.
 
ಪಾಂಡುವಿಗೆ ಇಬ್ಬರು ಮಡದಿಯರು. ಕುಂತಿ ಮತ್ತು ಮಾದ್ರಿ. ಕುಂತಿ ಅಕ್ಕ ಮತ್ತು ಮಾದ್ರಿ ತಂಗಿ. ತುಂಬ ಸುಂದರಿಯಾದ ಮದ್ರದೇಶದ ಹುಡುಗಿ, ಶಲ್ಯನ ತಂಗಿ ಮಾದ್ರಿಯನ್ನು ಅವಳುದ್ದಕ್ಕೆ ವಧೂದಕ್ಷಿಣೆಯನ್ನು ಸುರಿದು ಭೀಷ್ಮ; ಪಾಂಡುವಿಗೆ ಕರೆತಂದಿದ್ದನು. ಕುರುಕುಲವನ್ನು ಬೆಳೆಸುವುದೊಂದೇ ಭೀಷ್ಮನ ಮನಸ್ಸಿನಲ್ಲಿದ್ದುದು. ಕುಂತಿ, ಯಾದವರ ಹುಡುಗಿ. ಅವಳ ಹೆಸರು ಪೃಥೆ. ಕುಂತೀ ಭೋಜನ ಅರಮನೆಯಲ್ಲಿ ಬೆಳೆಯುತ್ತಿದ್ದಳಾಗಿ ‘ಕುಂತಿ’ ಎಂದೇ ಹೆಸರಾಗಿದ್ದಳು. ಅರಮನೆಗೆ ಅತಿಥಿಯಾಗಿ ಬಂದ ದೂರ್ವಾಸಮುನಿ, ಕುಂತಿಯು ತಮಗೆ ಮಾಡಿದ ಸೇವೆಯನ್ನು ಮೆಚ್ಚಿ, ಇನ್ನೂ ಮದುವೆಯಾಗದ ಹುಡುಗಿಯಾದುದರಿಂದ, ದೇವತೆಗಳಿಂದಲೇ ಮಕ್ಕಳನ್ನು ಪಡೆಯುವದಕ್ಕೆ ಪೋಷಕವಾದ ಮಂತ್ರಗಳನ್ನು ಆಕೆಗೆ ಸಿದ್ಧ ಮಾಡಿಸಿದ್ದರು. ಇದು ಆಪದ್ಧರ್ಮ.
 
ಅಂದರೆ ಬೇರೆ ದಾರಿಕಾಣದೆ ಇದ್ದ ಸಂದರ್ಭದಲ್ಲಿ ಮಾತ್ರ ಬಳಸಬಹುದಾದ ಮಂತ್ರೋಪಾಯವಿದು. ಆದರೆ ಇನ್ನೂ ಕಿರಿಯವಳಾಗಿ, ಅಪ್ರಬುದ್ಧಳಾಗಿ, ಕಿರಿತನಕ್ಕೆ ಸಹಜವಾದ ಕುತೂಹಲದಿಂದ ಕೂಡಿದ ಕುಂತಿ ಒಂದು ಬೆಳಗ್ಗೆ ಅರಮನೆಯ ಪಕ್ಕದಲ್ಲಿ ಹರಿವ ಹೊಳೆಯತ್ತ ಬಂದು ಮೂಡುವ ನೇಸರನ್ನು ನೋಡಿದಳು. ಪ್ರೀತಿಯುಕ್ಕಿತು. ಯಾರನ್ನು ನೆನೆಯಲಿ ಎಂಬ ದ್ವಂದ್ವವೇ ಇಲ್ಲದೆ ಸೂರ್ಯನನ್ನು ನೆನೆದಳು. ಹೇಗೆ ನೆನೆಯಬೇಕೆಂದು ಮುನಿ ಹೇಳಿದ್ದನೋ ಹಾಗೆ ಮನನಪೂರ್ವಕವಾಗಿ ನೆನೆದಳು. ಆದರೆ ಹೊಳೆವ ಎಳೆ ನೇಸರು ಮೂರ್ತಿಮತ್ತಾಗಿ ತನ್ನ ಮುಂದೆ ನಿಂತಾಗ ಹುಡುಗಿ ಬೆಚ್ಚಿದಳು.
 
‘ಆತನ ಕಿರಣ ಲಹರಿಯ ಹೊಯ್ಲಿನಲಿ ಸರಸಿರುಹಮುಖಿ ಬೆಚ್ಚಿದಳು’ ಎನ್ನುತ್ತಾನೆ ಕುಮಾರವ್ಯಾಸ ಸಾಕೂತವಾಗಿ. ‘ಸರಸಿರುಹಮುಖಿ’ ಎಂದರೆ ತಾವರೆಯಂತೆ ಮೊಗದಾಕೆ. ಕಿರಣಲಹರಿಗೆ ತಾವರೆ ಅರಳಬೇಕಲ್ಲವೆ? ನಿಜ. ಅರಳಬೇಕು. ಅರಳುತ್ತದೆ ಕೂಡ. ಆದರೆ ಕಿರಣಲಹರಿಯ ಒಡೆಯ ಸೂರ್ಯನೇ ಹತ್ತಿರ ಬಂದು ನಿಂತರೆ ತಾವರೆ ಬೆಚ್ಚಿ ಬೀಳದೆ? ಅಲ್ಲದೆ ಹುಡುಗಿ ಬೆಚ್ಚುವುದು ಗಂಡು ಅವಳನ್ನು ಅನುನಯಿಸಬೇಕೆನ್ನುವುದಕ್ಕೆ ಮುನ್ನುಡಿ. ಅನುನಯವು ಸಹಜವಾಗಿ ಪ್ರಣಯಕ್ಕೆ ಮುನ್ನುಡಿ. ಹಾಗೆ ರವಿ; ‘ಕನ್ನಿಕೆಯ ಮುಟ್ಟಿದನು, ಮುನ್ನಿನ ಕನ್ನೆತನ ಕೆಡದಿರಲಿ ಎನುತವೆ.’ ಹೀಗೆ ಹುಟ್ಟಿದ ಮಗು ಕರ್ಣ. ಬೆಳಕಿನೊಂದು ಶಲಾಕೆಯಂತಿತ್ತು ಮಗು ಅಳುತ್ತಿತ್ತು. ಹುಡುಗಿ ಈಗ ಇನ್ನಷ್ಟು ಬೆಚ್ಚಿದಳು. ‘ಅಳುವ ಶಿಶುವನು ತೆಗೆದು ತೆಕ್ಕೆಯ ಪುಳಕ ಜಲದಲಿ ನಾದಿ ಹರುಷದ ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ’– ನೂರು ಭಾವಗಳು ಕುಂತಿಯನ್ನು ಮುತ್ತಿಕೊಳ್ಳುತ್ತಿದ್ದುವು. ಮುಖ್ಯವಾದುದೆಂದರೆ– ‘ಮುನ್ನಿನ ಕನ್ನೆತನ ಕೆಡದಿರಲಿ’ ಎಂಬ ಮಾತು! ಹೌದು.
 
ಕನ್ನೆತನ ಕಳೆದಿರಲಿಲ್ಲ. ಆದುದರಿಂದಲೇ ಕುಂತಿಯಲ್ಲಿ ತಾಯ್ತನ ಉಂಟಾಗಿರಲಿಲ್ಲ. ದೇವತೆಗಳಿಂದ ಮಕ್ಕಳನ್ನು ಪಡೆಯಬಹುದೇನೋ. ಆದರೆ ತಾಯ್ತನ ಉಂಟಾಗುವುದು ಮಾತ್ರ ಮರ್ತ್ಯದ ಭಾಗ್ಯವಾಗಿದೆ! ಆದರೆ ಕುಂತಿಯಲ್ಲಿ ಲೋಕಾಪವಾದದ ಭೀತಿ ಬೆಂಕಿಯ ಕೆನ್ನಾಲಿಗೆಯಂತೆ ಮೇಲೆದ್ದಿತು. ಒಂದು ಬುಟ್ಟಿಯಲ್ಲಿ ಮೆತ್ತೆಯಲ್ಲಿ ಹಸಿ ಹಸುಳೆಯನ್ನಿಟ್ಟು, ತನ್ನ ಚಿನ್ನಾಭರಣಗಳನ್ನೆಲ್ಲ ಅದರಲ್ಲಿರಿಸಿ, ಯಾರಿಗಾದರೂ ಈ ಬುಟ್ಟಿ ಸಿಗುವಂತಾಗಿ ಮಗು ಎಲ್ಲಿಯಾದರೂ ಬದುಕಿಕೊಳ್ಳಲಿ ಎಂದು ನಿಡುಸುಯ್ಯುತ್ತ ಹೊಳೆಯಲ್ಲಿ ಬುಟ್ಟಿಯನ್ನು ತೇಲಬಿಟ್ಟಳು! ಒಂದೆಡೆ ಮನಸ್ಸು ನಿರಾಳವಾದರೆ ಇನ್ನೊಂದೆಡೆ ತನ್ನನ್ನೇ ಮನಸ್ಸು ಹಳಿದುಕೊಳ್ಳುತ್ತಿತ್ತು.
 
ಬುಟ್ಟಿಯಲ್ಲಿ ತೇಲಿ ಬಂದ ಮಗು ಯಾರ ಕೈಗಳಲ್ಲಾದರೂ ಸಿಗಬಹುದಂತೆ, ಹೀಗೊಂದು ಮಗು ಸಿಕ್ಕಿತು ಎಂದು ಯಾರೋ ಹೇಳಬಹುದಂತೆ– ಈ ಮಾತನ್ನು ಕುಂತಿಯೇ ಹೇಳಬಾರದಿತ್ತೆ? ಇಂಥ ನಿರೀಕ್ಷೆಯಲ್ಲಿ ಮಗುವನ್ನು ತೇಲಬಿಟ್ಟ ಕುಂತಿ ಆ ಮಾತನ್ನು ತಾನೇ ಹೇಳಬಾರದಿತ್ತೆ? ಯಾರೋ ತೇಲಿಬಿಟ್ಟ ಮಗುವೊಂದು ತನಗೆ ಹೊಳೆಯಲ್ಲಿ ಸಿಕ್ಕಿತೆಂದು ಕುಂತಿಯೇ ತನ್ನ ಕರ್ಣನನ್ನು ಬೆಳೆಸಬಾರದಿತ್ತೆ? ಇದೇಕೆ ಅವಳಿಗೆ ಹೊಳೆಯಲ್ಲಿಲ್ಲವೋ? ಅವಳಲ್ಲಿ ತಾಯ್ತನ ಉಂಟಾಗಿರಲಿಲ್ಲ ಎನ್ನುವುದೊಂದು. ತಾಯ್ತನಕ್ಕೆ ಲೋಕಾಪವಾದವನ್ನು ಮೀರಿ ನಿಲ್ಲುವ ಭಾವ ಬಲವಿರುತ್ತದೆ. ಜೊತೆಗೆ ಜನ, ಅರಮನೆಯ ಮಂದಿಯನ್ನು, ಕ್ಷತ್ರಿಯರನ್ನು, ಆಳುವವರನ್ನು, ಪ್ರತಿಷ್ಠಿತರನ್ನು– ಅವರ ಮಾತನ್ನು ನಂಬಲಾರರು ಎನ್ನುವುದೊಂದು. ಸಾಮಾನ್ಯ ಜನ ಸಾಮಾನ್ಯರನ್ನು ಮಾತ್ರ ನಂಬುವರು. 
 
ಕುಂತಿ ತೇಲಿಬಿಟ್ಟ ಹೊಳೆ, ಯಮುನೆಯನ್ನು ಸೇರಿ ಗಂಗೆಯನ್ನು ಕೂಡುವ ಹೊಳೆ. ಹಸ್ತಿನೆಯಲ್ಲಿ ಹರಿವ ಯಮುನೆಯಲ್ಲಿ ತೇಲುತ್ತಿದ್ದ ಬುಟ್ಟಿ ಅಲ್ಲಿನ ಸೂತರಕೇರಿಯ ಅಧಿರಥನಿಗೆ ಸಿಕ್ಕಿ, ಅವನಿಗೆ ಹಿಗ್ಗಾಗಿ ತನ್ನ ಮಡದಿ ರಾಧೆಗೆ ಮಗುವನ್ನು ಒಪ್ಪಿಸಿದ. ಅಧಿರಥ–ರಾಧೆಯರಿಗೆ ಮಕ್ಕಳಿರಲಿಲ್ಲ. ಇದು ದೇವತೆಗಳೇ ತಮಗೆ ಒದಗಿಸಿದ ಮಗು! ಮಗುವಿನ ಜೊತೆಗೆ ಹುಡುಗಿಯರು ತೊಡುವ ಚಿನ್ನಾಭರಣಗಳಿದ್ದುವು! ಆದುದರಿಂದ ಮಗುವಿಗೆ ‘ವಸುಷೇಣ’ (=ಸಂಪತ್ತಿನ ಜೊತೆಗೇ ಬಂದವನು) ಎಂದೇ ಹೆಸರಾಯಿತು. ಅಂದರೆ ಇದು ಯಾರೋ ತೇಲಿ ಬಿಟ್ಟ ಮಗು ಎಂದು ಜನಜನಿತವೂ ಆಯಿತು! ಕುಂತಿಯ ಮಗನು ರಾಧೇಯನಾಗಿ ಸೂತರ ಮನೆಯಲ್ಲಿ ಬೆಳೆದ.
 
ಕರ್ಣನ ತಬ್ಬಲಿ ತನವೇನೋ ಸೂರ್ಯಸಾಕ್ಷಿಯಾಗಿ ನೀಗಿತು. ಆದರೆ ನಿಜಕ್ಕೂ ತಾನಾರೆಂಬ ಪ್ರಶ್ನೆ ಮೊನಚನ್ನು ಎಂದೂ ಕಳೆದುಕೊಳ್ಳದೆ– ಕೃಷ್ಣನು ತನ್ನ ಹುಟ್ಟಿದ ರಹಸ್ಯವನ್ನು ತಿಳಿಸುವ ತನಕ– ಉಳಿದುಕೊಂಡಿತು. ಅಂದರೆ ಇನ್ನೊಂದು ರೂಪದಲ್ಲಿ ತಬ್ಬಲಿತನವೂ ಉಳಿದುಕೊಂಡಂತೆಯೇ. ತಾನಾರೆಂದು ತಿಳಿದ ಮೇಲೆ ಪ್ರಶ್ನೆಯು ಬೇರೆಯೇ ಒಂದು ಆಯಾಮವನ್ನು ಪ್ರವೇಶಿಸಿತು!
 
ಕುಂತಿಯು ಯುಧಿಷ್ಠಿರನನ್ನು ತನಗಿಂತ ಮೊದಲು ಪಡೆದಳೆಂದು ಕೇಳಿ ಗಾಂಧಾರಿ ತನ್ನ ಬಸಿರನ್ನು ಹೊಸೆದುಕೊಂಡಳು. ಇದರಿಂದ ನೊಂದ ವ್ಯಾಸರು– ಆ ಶಕಲಗಳನ್ನು ತುಪ್ಪದ ಕೊಡದಲ್ಲಿ ಬೆಳೆಯಿಸಿದರು. ಹಾಗೆ ಒಬ್ಬಳು ಮಗಳೂ ಸೇರಿ ನೂರೊಂದು ಮಕ್ಕಳು ಹುಟ್ಟಿಕೊಂಡರು. ತಾಯಿ ಗಾಂಧಾರಿ ತನ್ನ ಬಸಿರನ್ನು ಹೊಸೆದುಕೊಂಡಾಗಲೇ ದುರ್ಯೋಧನನಿಗೆ ಮೊದಲ ಊರು ಭಂಗವಾಗಿತ್ತು! ತಾಯ ಒಡಲಿಗಿಂತ ತುಪ್ಪದಕೊಡ ಹೆಚ್ಚು ಶ್ರೇಷ್ಠವಾಗಿಬಿಟ್ಟಿತು!
 
ಹೆಚ್ಚು ಸೃಷ್ಟಿಶೀಲವಾಗಿಬಿಟ್ಟಿತು! ಇದು ದ್ವಾಪರದ ಪಾಡು! ದ್ವಾಪರದ ವಿಜ್ಞಾನದ ಪಾಡು! ಹಾಗೆ ತಾಯಿಯೇ ಬಸಿರಿಂದ ಹೊರನೂಕಿದ ದುರ್ಯೋಧನ, ತಾಯಿಯೇ ಹೊಳೆಯಲ್ಲಿ ತೇಲಿಬಿಟ್ಟ ಕರ್ಣ– ಇಂದು ರೀತಿಯಲ್ಲಿ ಇಬ್ಬರೂ ತಬ್ಬಲಿಗಳು– ಒಬ್ಬರಿಗೊಬ್ಬರು ಜೀವದ ಗೆಳೆಯರಾದದ್ದು ಸಹಜವಾದ ಬೆಳವಣಿಗೆಯಂತೇ ತೋರುತ್ತದೆ. ಕುಂತಿಯ ಮಕ್ಕಳ ಮೇಲಿನ ಆಗರ್ಭ ದ್ವೇಷವೇ ತನ್ನ ಬದುಕಿನ ಪುರುಷಾರ್ಥವಾಗಿದ್ದ ದುರ್ಯೋಧನನಲ್ಲಿ ಒಂದಷ್ಟು ಪ್ರೀತಿಯ ಒಸರೂ ಇದ್ದಿರಬೇಕಲ್ಲ– ಆ ಪ್ರೀತಿಯೆಲ್ಲವನ್ನೂ ಸುರಿಯಲು ಅವನಿಗೊಬ್ಬ ಕೊರಳ ಗೆಳೆಯ ಒದಗಿಬಂದ. ಅವನು ಕರ್ಣ! ಕುಂತಿಯ ಮೊದಲ ಮಗ! ಕಾನೀನ! ಮರುಕಳಿಸುವ ಇತಿಹಾಸಕ್ಕೆ ತನ್ನದೇ ನೀತಿಯೊಂದಿರುವಂತಿದೆ!
 
ದುರ್ಯೋಧನ ಹುಟ್ಟುವ ಮುನ್ನವೇ ಹಸ್ತಿನಾವತಿಯ ಅರಮನೆಗೆ ಸೇರಿದ ಸೂತರ ಕೇರಿಯಲ್ಲಿ ಕರ್ಣ ಬೆಳೆಯುತ್ತಿದ್ದ. ಅದೇ ಅರಮನೆಗೆ ಮತ್ತೆ ಕುಂತಿ ಸೊಸೆಯಾಗಿ ಬಂದಳು. ಅಲ್ಲಿ ಈ ತಾಯಿ–ಮಕ್ಕಳ ಭೇಟಿಯನ್ನು ಅದೃಷ್ಟ, ಮರೆಯಲ್ಲಿ ಪ್ರಚ್ಛನ್ನವಾಗಿ; ಮಗನಿಗೆ ಗೊತ್ತಿಲ್ಲದೇ ಮಾಡಿಸುತ್ತಿತ್ತು. ಸೂರ್ಯನ ಮಗನಾದರೇನಂತೆ? ಅದೃಷ್ಟಕ್ಕೆ ಮರೆಯೇ ಹಿತವಿರಬೇಕು! ಕರ್ಣನೂ ಕಾನೀನ. ಅಂದರೆ ಕನ್ಯೆಯ ಮಗ. 
 
ಅವಿವಾಹಿತೆಯ ಮಗ. ವ್ಯಾಸನೂ ಕಾನೀನ. ವ್ಯಾಸನನ್ನಾದರೋ ಪರಾಶರ ಮುನಿ–ತಂದೆ–ತನ್ನೊಡನೆ ಒಯ್ದರು. ವ್ಯಾಸನಿಗೆ ತಾಯ ನೆನಪು ಗಾಢವಾಗಿತ್ತು ನಿಜ. ಆದರೆ ತಬ್ಬಲಿತನದ ಭಾವವಿರಲಿಲ್ಲ. ಆದರೆ, ತಂದೆಯೂ ತನ್ನೊಡನೆ ಒಯ್ಯದಿದ್ದರೆ, ತಾಯಿ ಕೈಬಿಟ್ಟರೆ, ಕಾನೀನನ ಪಾಡೇನು ಎಂದು ವ್ಯಾಸನಿಗೆ ತೋರಿಸಬೇಕಿತ್ತು. ತಾನಿರುವ ಸ್ಥಿತಿಗಿಂತ ಭಿನ್ನ ಸ್ಥಿತಿಯಲ್ಲಿ ತನ್ನನ್ನೇ ಕಲ್ಪಿಸಿಕೊಳ್ಳುವುದೂ, ಇತಿಹಾಸದ ಸಂಕೀರ್ಣತೆಯನ್ನು ತನ್ನ ಅನುಭವದಲ್ಲಿ ಅರಿಯುವುದೂ ಎರಡೂ ತುಂಬ ಹತ್ತಿರ ಇವೆ!
 
ಇತ್ತ ಪಾಂಡು, ಶಾಪಗ್ರಸ್ತನಾಗಿ ಆ ಕಾರಣದಿಂದ ವಿರಕ್ತನಾಗಿ  ತಪೋವನಗಳಲ್ಲಿದ್ದನಷ್ಟೆ. ಪಾಂಡು ಕುಂತಿ– ಮಾದ್ರಿಯರಿಗೆ ಮುಂದೇನು ಎಂಬ ಚಿಂತೆ. ಮಕ್ಕಳಿಲ್ಲದ ಚಿಂತೆ ಈ ಆಶ್ರಮಗಳಲ್ಲೇ ತಮ್ಮ ಬದುಕು ಕೊನೆಯಾಗಬೇಕೆ? ಆಗ ಕುಂತಿ, ಪಾಂಡುವಿನೊಡನೆ, ತನಗಾದ ದೂರ್ವಾಸಾನುಗ್ರಹವನ್ನು ಹೇಳಿಕೊಂಡಳು. ತಾನು ದೇವತೆಗಳನ್ನು ಕರೆಯಬಲ್ಲೆನೆಂದಳು. ದೇವತೆಗಳು ತನಗೆ ಓಗೊಡುವರೆಂದಳು. ತಾನವರಿಂದ ಪುತ್ರವತಿಯಾಗಬಲ್ಲೆನೆಂದಳು.
ಇದು ಆಪದ್ಧರ್ಮವೆಂದಳು. ಇದು ಸಾಧ್ಯವೆಂದಳು. ತಾನು ಯಾವ ದೇವತೆಯನ್ನು ನೆನೆನೆನೆದು ಕರೆಯುವೆನೋ ಆ ದೇವತೆಯನ್ನೆ ನೀನು ಉಪಾಸನೆ ಮಾಡಿದರೆ ನಿನಗೆ ಆ ದೇವನೊಡನೆ ತಾದಾತ್ಮ್ಯ ಸಿದ್ಧಿಸುತ್ತದೆ ಎಂದಳು. ಎರಡು ನೀರುಗಳು ಬೆರೆತಂತೆ ಎರಡು ಮನಸ್ಸುಗಳೂ ಬೆರೆಯಬಲ್ಲವು ಎಂದು ಉಪನಿಷತ್ತು ಹೇಳಿಲ್ಲವೆ? ಹಾಗೆ ಎಂದು ಮನಸ್ಸುಗಳು ಬೆರೆತಾಗ ಆ ಮಟ್ಟಿಗೆ ಏಕ ವ್ಯಕ್ತಿತ್ತ್ವ ಸಿದ್ಧಿಸಿದಾಗ, ಪಿತೃತ್ತ್ವವೂ ಸಿದ್ಧಿಸಿದಂತಲ್ಲವೆ? ಮಾನಸ ಪುತ್ರರಿರಬಹುದಾದರೆ ಮಾನಸ ಪಿತೃತ್ತ್ವವೇಕಿರಬಾರದು? –ಪಾಂಡುವಿಗೆ ಹೌದೆನ್ನಿಸಿತು.
 
ವ್ಯಾಸರು, ‘ನಿಯೋಗ’ವು ಸಫಲವಾಗಬೇಕಾದರೆ, ತನ್ನ ತಾಯಂದಿರ–ಅಂಬಿಕೆ’ ಅಂಬಾಲಿಕೆಯರ ಮನಸ್ಸುಗಳು ತನ್ನಲ್ಲಿ (ವ್ಯಾಸರಲ್ಲಿ) ಬೆರೆತಿರಬೇಕು; ಅದು ಉಪವಾಸನೆಯ ಫಲ ಎಂದು ತನ್ನ ಅಜ್ಜಿ ಸತ್ಯವತಿಯಲ್ಲಿ ಹೇಳಿದ್ದರೆಂಬುದು ಪಾಂಡುವಿಗೆ ತಿಳಿದಿರಬೇಕು. ಈಗ ತಾನು ದೇವತೆಯನ್ನು ಮನಮುಟ್ಟಿ ನೆನೆಯಬೇಕಾದ ಸಂದರ್ಭಬಂದಿದೆ!
 
ಹಾಗೆ ಕುಂತಿಯಲ್ಲಿ ಯಮಧರ್ಮನಿಂದ ಯುಧಿಷ್ಠಿರ ಜನಿಸಿದನು.  ಆದುದರಿಂದಲೇ ಅವನು ‘ಧರ್ಮದೊಳ್‌ ನಿರ್ಮಳ ಚಿತ್ತಂ ಧರ್ಮಪುತ್ರಂ’. ಯುಧಿಷ್ಠಿರ ಹುಟ್ಟಿ ಎರಡು ವರ್ಷ ಕಳೆದಿತ್ತು. ದುರ್ಯೋಧನಾದಿಗಳು ವ್ಯಾಸರ ಚಿಕಿತ್ಸೆಯಿಂದಾಗಿ ಹಸ್ತಿನಾವತಿಯ ಅರಮನೆಯಲ್ಲಿ ಮೈತಳೆದರು. ಹಾಗೆ ಯುಧಿಷ್ಠಿರ ಕುಲಜ್ಯೇಷ್ಠನಾಗಿ ಸಿಂಹಾಸನಕ್ಕೆ ಅರ್ಹನಾದನು. ವಾಯುದೇವನಿಂದ, ಬಿರುಗಾಳಿಯಂಥ ಶಕ್ತಿ ಸಂಪನ್ನನಾದ ಗಂಡಿನೊಳ್‌ ಭೀಮಸೇನಂ’ ಎಂಬ ಕೀರ್ತಿಯ ಭೀಮಸೇನ ಜನಿಸಿದನು. ಇಂದ್ರನಿಂದ, ‘ಸಾಹಸದ ಮಹಿಮೆಯೊಳ್‌ ಫಲ್ಗುಣಂ’ ಎಂದು ಕೊಂಡಾಡಲ್ಪಟ್ಟ ಅರ್ಜುನ ಜನಿಸಿದನು. ಮೂವರು ಪಾಂಡು ಪುತ್ರರು. ಪಾಂಡು ಸಂತುಷ್ಟನಾದನು. ಕರ್ಣನನ್ನು ತಾನು ಪಡೆದುದನ್ನು ಕುಂತಿ ಮುಚ್ಚಿಟ್ಟಿದ್ದಳು.
 
ಪಾಂಡು ಸಂತುಷ್ಟನಾದನೇನೋ ನಿಜ. ಮಾದ್ರಿ ವಿಷಣ್ಣಳಾದಳು. ತನಗೂ ಮಕ್ಕಳಾಗುತ್ತಿದ್ದರೆ! ತನ್ನ ಬಳಿ ಯಾವ ದೂರ್ವಾಸರೂ ಬರಲಿಲ್ಲ. ತನಗೆ ಮಂತ್ರವೂ ತಿಳಿದಿಲ್ಲ. ಅಕ್ಕ ಕುಂತಿಯಲ್ಲಿ  ಇನ್ನೂ ಎರಡು ಸಲ ಪ್ರಯೋಗ ಮಾಡಬಹುದಾದ ಮಂತ್ರ ಸಿದ್ಧಿ ಇದೆಯಂತೆ. ಇಂದೇ ಒಂದು ಬಾರಿ ತಾನದನ್ನು ಪ್ರಯೋಗಿಸಿ ನೋಡಬಹುದೆ? ಆದರೆ ಸವತಿಯಲ್ಲಿ ಬಾಯಿಬಿಟ್ಟು ಕೇಳೋದು ಹೇಗೆ? ಪಾಂಡುವಿಗೆ ಈ ನೋವು ಅರ್ಥವಾಯಿತು. ಅವನು ಕುಂತಿಯನ್ನು ಮಾದ್ರಿಯೂ ಒಮ್ಮೆ ಪ್ರಯೋಗಿಸಲು ಅನುವಾಗುವಂತೆ ಒಪ್ಪಿಸಿದ. ಮಾದ್ರಿ ತುಂಬ ಚಿಂತಿಸಿ, ಮಿತ್ರಾವರುಣರಂತೆ ಸದಾ ಇಬ್ಬರು ಜೊತೆಯಾಗಿರುವ ಅಶ್ವಿನೀ ದೇವತೆಗಳನ್ನು ನೆನೆದು ಮುದ್ದಾದ ಅವಳಿ ಮಕ್ಕಳನ್ನು–ನಕುಲ, ಸಹದೇವರನ್ನು– ಪಡೆದಳು.
 
ಅಬ್ಬಾ ಎನಿಸಿತು ಕುಂತಿಗೆ! ಎಂಥ ಜಾಣೆ! ತನಗಿದು ಹೊಳೆಯದೆ ಹೋಯಿತು. ಉಪಾಸನೆಯ ಉತ್ಕಟ ಭಾವುಕತೆ ಮಾತ್ರ ಸಾಲದು. ಬದುಕಿನಲ್ಲಿ ಇಂಥ ಜಾಣ್ಮೆ ಕೂಡ ಅಗತ್ಯ. ಬರಿಯ ಭಾವುಕತೆಗೆ ಇವೆಲ್ಲ ಹೊಳೆಯುವುದೇ ಇಲ್ಲ.
 
ಇನ್ನೊಮ್ಮೆ ಮಂತ್ರವನ್ನು ಪ್ರಯೋಗಿಸಬಹುದು ಎಂದುಕೊಂಡಿದ್ದ ಪಾಂಡು. ನಿಜಕ್ಕಾದರೆ ಅದು ಸಾಧ್ಯವಿರಲಿಲ್ಲ. ಪಾಂಡುವಿಗದು ತಿಳಿದಿರಲಿಲ್ಲ. ಮತ್ತೊಮ್ಮೆ ಮಾದ್ರಿಯ ಪರವಾಗಿ ಕುಂತಿಯಲ್ಲಿ ಪಾಂಡು ಕೇಳಿದನಂತೆ. ಈ ಯಾಚನೆ ಮಾತ್ರ ಈಡೇರಲಿಲ್ಲ. ಇನ್ನೊಮ್ಮೆ ಮಾದ್ರಿಗೆ ಅವಕಾಶ ಒದಗಿ, ಇನ್ನೊಂದು ದೇವತಾ ದ್ವಂದ್ವವನ್ನು ಆಹ್ವಾನಿಸಿ ಮತ್ತೆರಡು ಮಕ್ಕಳನ್ನು ಪಡೆದು ಹಾಗೆ ಮಾದ್ರೇಯರು ನಾಲ್ಕಾಗಿ, ಕೌಂತೇಯರು ಮೂರೇ ಆಗಿಬಿಟ್ಟರೆ? ಮಾದ್ರಿ ತನ್ನನ್ನು ವಂಚಿಸಿದಳು ಎಂದಳಂತೆ ಕುಂತಿ! ಯಾವಾಗ ಮಾದ್ರಿಯ ಪರವಾಗಿ ಮಾಡಿದ ಯಾಚನೆ ಈಡೇರಲಿಲ್ಲ, ಪಾಂಡುವಿನಲ್ಲಿ ಆ ಕೊರತೆ ಉಳಿದುಬಿಟ್ಟಿತು.
 
ಮಾದ್ರಿಯ ಪರವಾಗಿ ಒಂದು ಕೋಮಲಕೊರಗು ಅವನಲ್ಲಿ ಬೆಳೆಯಹತ್ತಿತು. ಆದುದರಿಂದಲೇ ಪಾಂಡು, ಕುಂತಿಯೇ ಇನ್ನೊಮ್ಮೆ ಪ್ರಯೋಗ ಮಾಡಲಿ ಎಂದು ಕೂಡ ಹೇಳಲಿಲ್ಲ. ನಾನೊಂದು ಊಹೆ ಮಾಡುವೆ. ಮಾದ್ರಿಗೆ ಮಂತ್ರ ಸಿಗುತ್ತಿದ್ದರೆ, ಇನ್ನೊಮ್ಮೆ ಇಬ್ಬರನ್ನು ಪಡೆಯುವ  ಬದಲು ಒಂದು ಹೆಣ್ಣುಮಗು ಬೇಕು ಎಂದು ಕೇಳಿತ್ತಿದ್ದಳೇನೋ.  ನೂರು ಗಂಡುಮಕ್ಕಳಿದ್ದರೂ ಒಂದಾದರೂ ಹೆಣ್ಣು ಬೇಕು ಎಂದು ಗಾಂಧಾರಿಗೆ ಆಸೆಯಾದಂತೆ! ವ್ಯಾಸರು ಪಾತ್ರಗಳನ್ನು ಮಾನವೀಯವಾಗಿ ಮಾಡೋದು ಇಂಥ ಆಸೆಗಳನ್ನು ಗಾಂಧಾರಿಯಂಥ ಪಾತ್ರಗಳಲ್ಲಿಟ್ಟು! ಪಾಂಡವರಲ್ಲಿ ಒಬ್ಬಳು ಹುಡುಗಿ ಇರುತ್ತಿದ್ದರೆ! ದ್ರೌಪದಿಯ ಪಂಚಪತಿತ್ತ್ವದ ಸಂದರ್ಭ ನಡೆಯುತ್ತಿತ್ತೆ? ನೋಡಲಿಕ್ಕಿತ್ತು.
 
ಮಾದ್ರಿ ಮತ್ತೊಂದು ಮಗು ಪಡೆಯುತ್ತಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಇನ್ನೊಂದು ಮಗು ಬೇಕು ಎಂದು ಮಾದ್ರಿಗೆ ಆಸೆ! ಈಡೇರಿಸಲಾರದ ಕೊರಗು ಪಾಂಡುರಾಜನಿಗೆ. ಇದು ದುರಂತದ ಬೀಜ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.