ADVERTISEMENT

ಕಾಫಿ ದಸರೆಯಿಂದ ಪ್ರಯೋಜನ ದೊರೆಯಲಿ: ಶಾಸಕ ಡಾ.ಮಂತರ್‌ಗೌಡ

ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:45 IST
Last Updated 26 ಸೆಪ್ಟೆಂಬರ್ 2024, 4:45 IST
<div class="paragraphs"><p>ಕಾಫಿ</p></div>

ಕಾಫಿ

   

(ಪ್ರಾತಿನಿಧಿಕ ಚಿತ್ರ)

ಮಡಿಕೇರಿ: ಇದೇ ಮೊದಲ ಬಾರಿಗೆ ಮಡಿಕೇರಿ ದಸರೆಯಲ್ಲಿ ಆಯೋಜಿಸಲಾಗುತ್ತಿರುವ ಕಾಫಿ ದಸರೆಯಿಂದ ಕೃಷಿಕರಿಗೆ, ಬೆಳೆಗಾರರಿಗೆ ಪ್ರಯೋಜನ ದೊರಕುವಂತಾಗಬೇಕು ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.

ADVERTISEMENT

ಮಡಿಕೇರಿ ದಸರಾ ಉತ್ಸವದಲ್ಲಿ ಅ.6 ಮತ್ತು 7 ರಂದು ನಡೆಯುವ ಕಾಫಿ ದಸರೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು ಮಾತನಾಡಿದರು.

ಮಕ್ಕಳ ದಸರೆ, ಮಹಿಳಾ ದಸರೆ, ಯುವದಸರೆ, ಜಾನಪದ ದಸರೆದಂತೆಯೇ ಕಾಫಿ ದಸರೆ ಕೂಡ ಜನರನ್ನು ಸೆಳೆಯಬೇಕು. ಜಿಲ್ಲೆಯಾದ್ಯಂತ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕಬೇಕು. ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳು, ಕೃಷಿ ಪದ್ದತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ, ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಇದರಲ್ಲಿ ಸಿಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನೂ ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿಯನ್ನು ಬೆಳೆಗಾರರಿಗೆ ನೀಡುವಂತೆಯೂ ಅವರು ಸೂಚಿಸಿದರು.

ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಯೇಷನ್, ಕಾಫಿ ಮಂಡಳಿ, ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳೂ ಕಾಫಿ ದಸರೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲೂ ಸಲಹೆ ನೀಡಿದರು.

ಉತ್ತಮ ಗುಣಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯ ಒದಗಿಸಬೇಕು, ಮಳಿಗೆಗಳಲ್ಲಿ ಕಾಫಿ ಕೆಫೆಯನ್ನೂ ತೆರೆಯುವ ಮೂಲಕ ಕಾಫಿ ಕ್ಷೇತ್ರದ ನಾವೀನ್ಯತೆಯ ಪರಿಚಯ ಮಾಡಿಕೊಡಬೇಕೆಂದು ಅವರು ಹೇಳಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಕೊಡಗಿನ ಕಾಫಿ ಕೃಷಿಕರಿಗೆ ವಿವಿಧ ಕೃಷಿ ವಿಚಾರದಲ್ಲಿ ಸೂಕ್ತ ಮಾಹಿತಿ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕಾಫಿ ದಸರೆ ಒಂದು ಉತ್ತಮ ಪ್ರಯತ್ನವಾಗಿದ್ದು, ಸಂಘದ ಸದಸ್ಯರೆಲ್ಲರೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ರಾಜೀವ್ ಮಾತನಾಡಿ, ‘ನಮ್ಮ ಸಂಘದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಕಾಫಿ ಜಿಲ್ಲೆಯಾದ ಕೊಡಗಿನ ದಸರಾ ಉತ್ಸವದಲ್ಲಿ ಕಾಫಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಂಘದ ನಿರ್ದೇಶಕ ಕೆ.ಕೆ.ವಿಶ್ವನಾಥ್ ಮಾತನಾಡಿ, ‘ಕಾಫಿ ದಸರೆಯಲ್ಲಿ ಪಾಲ್ಗೊಂಡ ಕೃಷಿಕ ಸಮುದಾಯದವರು ವಿಷಯ ತಜ್ಞರೊಂದಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ, ಖಜಾಂಜಿ ಅರುಣ್ ಶೆಟ್ಟಿ ಕಾಫಿ ದಸರಾಕ್ಕೆ ಸಮಿತಿಯಿಂದ ಸರ್ವ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಕಾಫಿ ಮಂಡಳಿ, ತೋಟಗಾರಿಕೆ, ಸೆಸ್ಕ್, ನಗರಸಭೆ, ಕೃಷಿ ಇಲಾಖೆ, ಕೈಗಾರಿಕಾ ಅಭಿವೃದ್ದಿ ಇಲಾಖೆ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.