ADVERTISEMENT

ದಸರಾ 2018: ಆಗಸದಲ್ಲಿ ಕನ್ನಡಿಗ ಯೋಧರ ಸಾಹಸ

ವಾಯುಪಡೆಯ ‘ಆಕಾಶ ಗಂಗಾ’ ತಂಡದಲ್ಲಿ ಗೌರಿಬೀದನೂರಿನ ನರೇಶ್‌, ಹಾಸನ ಜಿಲ್ಲೆ ವಣಗೂರಿನ ಅವಿನಾಶ್‌

ಕೆ.ಓಂಕಾರ ಮೂರ್ತಿ
Published 14 ಅಕ್ಟೋಬರ್ 2018, 19:50 IST
Last Updated 14 ಅಕ್ಟೋಬರ್ 2018, 19:50 IST
ಅವಿನಾಶ್‌ ಹಾಗೂ ನರೇಶ್‌
ಅವಿನಾಶ್‌ ಹಾಗೂ ನರೇಶ್‌   

ಮೈಸೂರು: ಆಗಸದಲ್ಲಿ ಸಾಹಸ ಕಸರತ್ತಿಗೆ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ವಾಯುಪಡೆಯ ‘ಆಕಾಶ ಗಂಗಾ’ ತಂಡದಲ್ಲಿ ಕನ್ನಡಿಗ ಯೋಧರಿಬ್ಬರ ಪ್ರದರ್ಶನ ಎಲ್ಲರ ಮನಸೂರೆಗೊಳ್ಳುತ್ತಿದೆ.

ಆಗ್ರಾದಲ್ಲಿ ವಾಯುನೆಲೆ ಹೊಂದಿರುವ ‘ಆಕಾಶ ಗಂಗಾ’ ತಂಡದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನರೇಶ್‌ ಹಾಗೂ ಹಾಸನ ಜಿಲ್ಲೆಯ ವಣಗೂರಿನ ಎಸ್‌.ಅವಿನಾಶ್‌ 12 ವರ್ಷಗಳಿಂದ ಕೌಶಲ ಮೆರೆಯುತ್ತಿದ್ದಾರೆ.

ಇವರಿಬ್ಬರು ಲಡಾಖ್, ಲೇಹ್‌, ಶ್ರೀನಗರ, ನವದೆಹಲಿ, ಬೆಂಗಳೂರು ಸೇರಿದಂತೆ ನೂರಾರು ಸ್ಥಳಗಳಲ್ಲಿ 400ಕ್ಕೂ ಹೆಚ್ಚು ಬಾರಿ ಯುದ್ಧ ಹೆಲಿಕಾಪ್ಟರ್‌ಗಳಿಂದ ಜಿಗಿಯುವ ಸಾಹಸ ಕಸರತ್ತುಗಳಲ್ಲಿ ಭಾಗವಹಿಸಿದ್ದಾರೆ. ಸುಮಾರು 26 ಸಾವಿರ ಅಡಿ ಎತ್ತರದಿಂದ ಜಿಗಿದಿದ್ದಾರೆ.

ADVERTISEMENT

ದಸರಾ ಮಹೋತ್ಸವ ಪ್ರಯುಕ್ತ ಭಾನುವಾರ ಬನ್ನಿಮಂಟಪ ಮೈದಾನದಲ್ಲಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನದಲ್ಲಿ ಇವರಿಬ್ಬರೂ ಎಲ್ಲರ ಕಣ್ಮಣಿಯಾಗಿದ್ದರು.‌ ಮೈನವಿರೇಳಿಸುವ ವೈವಿಧ್ಯಮಯ ಸಾಹಸ ಪ್ರದರ್ಶನ ನೀಡಿದರು. ಆಕಾಶ ಗಂಗಾ ಹೆಲಿಕಾಪ್ಟರ್‌ನಿಂದ ಪ್ಯಾರಾಚೂಟ್‌ ಧರಿಸಿ 7 ಸಾವಿರ ಅಡಿ ಎತ್ತರದಿಂದ ಭುವಿಗೆ ಜಿಗಿದರು.

‘ಹಾಸನದಲ್ಲಿ ವಾಯುಪಡೆಯಿಂದ ಸ್ಕೈಡೈವಿಂಗ್‌ ಏರ್ಪಡಿಸಿದ್ದರು. ತಂದೆ ಶಂಕರೇಗೌಡ ಜೊತೆ ವೀಕ್ಷಿಸಲು ಹೋಗಿದ್ದೆ. ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಯೋಧರು ಅಂದು ಪ್ರದರ್ಶನ ನೀಡಿದ ರೀತಿ ನನ್ನಲ್ಲಿ ಸ್ಫೂರ್ತಿ ತುಂಬಿತು. ನಾನು ಕೂಡ ಇದೇ ರೀತಿ ಪ್ರದರ್ಶನ ನೀಡಬೇಕೆಂಬ ಕನಸು ಕಾಣಲಾರಂಭಿಸಿದೆ. ಅದೀಗ ನನಸಾಗಿದೆ’ ಎಂದು ಅವಿನಾಶ್‌ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅವಿನಾಶ್‌ 2006ರಲ್ಲಿ ವಾಯುಪಡೆ ಸೇರಿದರು. ಅವರು ಇದುವರೆಗೆ 600 ಜಂಪ್‌ ಮಾಡಿದ್ದಾರೆ. ನರೇಶ್‌ ಕೂಡ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ ಸುಮಾರು 450ಕ್ಕೂ ಅಧಿಕ ಜಂಪ್‌ ಮಾಡಿದ್ದಾರೆ.

‘ಅವಿನಾಶ್‌ ಹಾಗೂ ನಾನು ಜೊತೆಯಾಗಿ ವಾಯುಪಡೆ ಸೇರಿದೆವು. ಈಗ ಜೊತೆಯಲ್ಲಿಯೇ ಸಾಹಸ ಪ್ರದರ್ಶನ ನೀಡುತ್ತಿದ್ದೇವೆ. ಇಲ್ಲಿ ಮೊದಲ ಜಂಪ್‌ ಮಾಡಲು ನಮಗೆ ಅವಕಾಶ ಲಭಿಸಿತು’ ಎಂದು 32 ವರ್ಷ ವಯಸ್ಸಿನ ನರೇಶ್‌ ನುಡಿದರು.

ಭಾನುವಾರ ಮೈಸೂರಿನಲ್ಲಿ ಹೆಲಿಕಾಪ್ಟರ್‌ನಿಂದ ಪ್ಯಾರಾಚೂಟ್‌ ಧರಿಸಿ ಜಿಗಿದ ಯೋಧರು ಆಗಸದಲ್ಲಿ ತ್ರಿವರ್ಣಧ್ವಜ ಪ್ರದರ್ಶಿಸುತ್ತಿದ್ದಂತೆ ಮೈದಾನದಲ್ಲಿ ಭಾವುಕ ವಾತಾವರಣ. ‘ಇಂಡಿಯಾ, ಇಂಡಿಯಾ’ ಎಂಬ ಕೂಗು ಮಾರ್ದನಿಸಿತು. ಯೋಧರು ‘ಜೈಹಿಂದ್‌‍’ ಎಂದು ಜೈಕಾರ ಹಾಕಿದರು. 10 ಯೋಧರು ಸ್ಕೈಡೈವಿಂಗ್‌ನಲ್ಲಿ ಭಾಗಿಯಾಗಿದ್ದರು.

ಬಾನಂಗಳದಲ್ಲಿ ಹೆಲಿಕಾಪ್ಟರ್‌ಗಳು ಚಿತ್ತಾರ ಮೂಡಿಸುತ್ತ ಸಾವಿರಾರು ಅಡಿ ಎತ್ತರದಿಂದ ಹಾರಿ ಬಂದು ಪ್ರೇಕ್ಷಕರ ಮನದಂಗಳಕ್ಕೆ ಇಳಿದವು.

ಎಎಸ್‌ಟಿಇ (ಆಸ್ಟೆ) ಹೆಲಿಕಾಪ್ಟರ್‌ನಲ್ಲಿ ಬಂದ ಯೋಧರು 115 ಅಡಿ ಎತ್ತರದಿಂದ ಭುವಿಗೆ ಪುಷ್ಪಾರ್ಚನೆ ಮಾಡಿದರು. ಎರಡು ಚೀಲಗಳಲ್ಲಿ ತುಂಬಿದ್ದ ಹೂವುಗಳನ್ನು ಆಗಸದಿಂದ ಮೈದಾನಕ್ಕೆ ಚೆಲ್ಲಿದರು. ಆಗ ಪ್ರೇಕ್ಷಕರ ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಹೆಲಿಕಾಪ್ಟರ್‌ನಲ್ಲಿ ಬಂದ 12 ಸಮರ ಯೋಧರು 50 ಅಡಿ ಎತ್ತರದಿಂದ ಹಗ್ಗದ ನೆರವಿನಿಂದ ಸರಸರನೆ ಕೆಳಗಿಳಿದರು. ಮೈದಾನದಲ್ಲಿ ಓಡಾಡುತ್ತಾ ಅಣಕು ಯುದ್ಧಪ್ರದರ್ಶನ ನೀಡಿದರು. ಯೋಧ ಅವಿನಾಶ್‌ ಅವರ ಪೋಷಕರು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದರು. ಸಾವಿರಾರು ಪ್ರೇಕ್ಷಕರು ಈ ಸಾಹಸಮಯ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಸಾವಿರಾರು ಅಡಿ ಎತ್ತರಿಂದ ಜಿಗಿಯುವುದು ಹುಡುಗಾಟವಲ್ಲ. ಎಷ್ಟೇ ತರಬೇತಿ ಪಡೆದಿದ್ದರೂ ಭಯ ಇದ್ದೇ ಇರುತ್ತದೆ. ಸಕಾರಾತ್ಮಕವಾಗಿ ಯೋಚಿಸಬೇಕು ನರೇಶ್‌.
-ಯೋಧ, ಗೌರಿಬಿದನೂರು

*

ಒಂದು ಸೆಕೆಂಡ್‌ಗೆ 200 ಅಡಿ ಕೆಳಗೆ ಬಂದಿರುತ್ತೇವೆ. ಗಾಳಿ ಹೆಚ್ಚು ಇದ್ದರೂ ಕಷ್ಟ, ಕಡಿಮೆ ಇದ್ದರೂ ಕಷ್ಟ. ಆರು ವರ್ಷ ತರಬೇತಿ ಪಡೆದಿದ್ದೇವೆ
-ಎಸ್‌.ಅವಿನಾಶ್‌, ಯೋಧ, ವಣಗೂರು, ಹಾಸನ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.