ADVERTISEMENT

ಜನರ ನಡುವೆ ಜಂಬೂಸವಾರಿ ವೈಭವ

408ನೇ ದಸರಾ ಮಹೋತ್ಸವದ ವೈಭವಕ್ಕೆ ತೆರೆ

ಕೆ.ಜೆ.ಮರಿಯಪ್ಪ
Published 19 ಅಕ್ಟೋಬರ್ 2018, 19:07 IST
Last Updated 19 ಅಕ್ಟೋಬರ್ 2018, 19:07 IST
ಮೈಸೂರು ಅರಮನೆ ಮುಂಭಾಗ ಶುಕ್ರವಾರ ಜಂಬೂಸವಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರರಾವ್ ಇದ್ದಾರೆ ಪ್ರಜಾವಾಣಿ ಚಿತ್ರ– ಬಿ.ಆರ್.ಸವಿತಾ
ಮೈಸೂರು ಅರಮನೆ ಮುಂಭಾಗ ಶುಕ್ರವಾರ ಜಂಬೂಸವಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರರಾವ್ ಇದ್ದಾರೆ ಪ್ರಜಾವಾಣಿ ಚಿತ್ರ– ಬಿ.ಆರ್.ಸವಿತಾ   

ಮೈಸೂರು: ವಿಶ್ವವಿಖ್ಯಾತ ದಸರಾ ಆಚರಣೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನಮಿಸುವ ಮೂಲಕ ಕಣ್ತುಂಬಿಕೊಂಡರು.

ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದಲ್ಲಿ ಅಂತ್ಯಗೊಳ್ಳುವ ಮೂಲಕ ಶುಕ್ರವಾರ ನವರಾತ್ರಿ ಉತ್ಸವಕ್ಕೂ ತೆರೆಬಿತ್ತು. ಅರಮನೆ ಆವರಣ, ರಾಜಪಥದ ಇಕ್ಕೆಲಗಳಲ್ಲಿ ನೆರೆದಿದ್ದವರು ಚಾಮುಂಡೇಶ್ವರಿಗೆ ನಮಿಸಿ ಧನ್ಯತಾ ಭಾವ ಮೆರೆದರು. ಸೂರ್ಯ ಸಹ ತನ್ನ ಪ್ರತಾಪ ತೋರಿದ. ಬಿಸಿಲಿನ ತಾಪಕ್ಕೆ ಜನರು ಬಳಲಿದರು. ಪುಟ್ಟ ಕಂದಮ್ಮಗಳು ಬಿಸಿ ತಾಳಲಾರದೆ ಒದ್ದಾಡಿದವು.

ಅರಮನೆ ಆವರಣದಲ್ಲಿ ಸಂಜೆ 4.13 ಗಂಟೆಗೆ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಿದರು. 3.40ರಿಂದ 4.10ರ ನಡುವೆ ಮುಹೂರ್ತ ನಿಗದಿಯಾಗಿತ್ತು. ಆದರೆ, 3 ನಿಮಿಷ ತಡವಾಗಿ ಪುಷ್ಪಾರ್ಚನೆ ಮಾಡಿದರು.

ADVERTISEMENT

ಸಂಪ್ರದಾಯದಂತೆ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜ ಪೂಜೆ ನೆರವೇರಿದ ಕೆಲ ಸಮಯದಲ್ಲಿ ದಸರಾ ಮೆರವಣಿಗೆಯೂ ಚಾಲನೆ ಪಡೆದುಕೊಂಡಿತು. ಆರಂಭದಲ್ಲಿ ಕಲಾ ತಂಡಗಳು ತಮ್ಮ ಪ್ರದರ್ಶನ, ಚಾತುರ್ಯ, ಸಾಹಸ ಮೆರೆದು ಹೆಜ್ಜೆ ಹಾಕುತ್ತಿದ್ದಂತೆ ಅವುಗಳನ್ನು ಸ್ತಬ್ಧಚಿತ್ರ ತಂಡಗಳು ಹಿಂಬಾಲಿಸಿದವು.

ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಸಾಗಿದ ನಂತರ ಕೊನೆಯದಾಗಿ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಆದರೆ, ಈ ಸಲ ಮುಹೂರ್ತ ಮೀರುವುದನ್ನು ತಪ್ಪಿಸಲು ಮೆರವಣಿಗೆ ಮಧ್ಯದಲ್ಲೇ ಪುಷ್ಪಾರ್ಚನೆ ಮಾಡಲಾಯಿತು. ನಂದಿ ಧ್ವಜ ಪೂಜೆ ಹಾಗೂ ಜಂಬೂಸವಾರಿಗೆ ಚಾಲನೆ ನೀಡಲು ಮುಹೂರ್ತ ನಿಗದಿಯಾಗಿದ್ದ ಸಮಯದಲ್ಲಿ ಹೆಚ್ಚಿನ ಅಂತರ ಇರಲಿಲ್ಲ. ಅಂಬಾರಿ ಹೊತ್ತಿದ್ದ ಆನೆ ಮುಂದಕ್ಕೆ ಸಾಗುತ್ತಿದ್ದಂತೆ ಅರಮನೆ ಅವರಣದಲ್ಲಿ ಸೇರಿದ್ದ ಜನರೂ ಹೊರ ನಡೆಯಲು ಆರಂಭಿಸಿದರು. ಕೊನೆಯದಾಗಿ ಸಾಗಿದ ಕಲಾ ತಂಡಗಳು, ಸ್ತಬ್ಧ ಚಿತ್ರಗಳ ಮೆರವಣಿಗೆ ವೀಕ್ಷಿಸುವ ತಾಳ್ಮೆ ಕಾಣಲಿಲ್ಲ.

750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆಗೆ ಬಲ ಭಾಗದಲ್ಲಿ ಕಾವೇರಿ, ಎಡ ಭಾಗದಲ್ಲಿ ವರಲಕ್ಷ್ಮಿ ಆನೆ ಬೆಂಬಲವಾಗಿ ಸಾಗಿದವು. ಕೆಲ ಸಮಯ ಅರಮನೆ ಪಕ್ಕದಲ್ಲಿ ನಿಂತ ಅಂಬಾರಿ ಹೊತ್ತ ಆನೆಯು ನಂತರ ಮೆರವಣಿಗೆ ಮಧ್ಯದಲ್ಲೇ ಸಾಗಿತು. ಸ್ವಲ್ಪ ಬಳಲಿದಂತೆ ಕಂಡುಬಂದ ಅರ್ಜುನನಿಗೆ ಆಗಾಗ ಗ್ಲೂಕೋಸ್ ನೀಡಿ ಸುಸ್ತು ಕಡಿಮೆ ಮಾಡುವ ಪ್ರಯತ್ನ ನಡೆಯಿತು. 13 ಬಾರಿ ಅಂಬಾರಿ ಹೊತ್ತಿರುವ ಬಲರಾಮನಿಗೆ ನಿಶಾನೆ ಗೌರವ ನೀಡಲಾಯಿತು. ಧನಂಜಯ ಆನೆ ಇದೇ ಮೊದಲ ಬಾರಿ ಮೆರವಣಿಗೆಯಲ್ಲಿ ಸಾಗಿತು.

ವಿವಿಧ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಜಂಬೂಸವಾರಿ ಮೆರವಣಿಗೆಗೆ ಮೆರುಗು ತಂದವು. 56 ಕಲಾ ವೈವಿಧ್ಯತೆಯ ಪ್ರಕಾರಗಳನ್ನು ಹೊಂದಿರುವ 118 ಜಾನಪದ ಕಲಾ ತಂಡಗಳು, 42 ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿ ಎನ್‌ಸಿಸಿ ವತಿಯಿಂದ ಪಾಲ್ಗೊಂಡಿದ್ದ ‘ಪ್ರವಾಹ ಸಂತ್ರಸ್ತರಿಗೆ ನೆರವು’, ಕಾನೂನು ಸೇವಾ ಪ್ರಾಧಿಕಾರದ ‘ಕಾನೂನು ಸೇವೆಗಳು’ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ನಾಡಿನ ಸಂಸ್ಕೃತಿ, ಇತಿಹಾಸ ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಅಧಿಕ ಸಂಖ್ಯೆಯಲ್ಲಿ ಕಂಡುಬಂದವು. ವೈವಿಧ್ಯಮಯ ಜಾನಪದ ಕಲಾ ತಂಡಗಳ ಪ್ರದರ್ಶನ ಮನಮುಟ್ಟಿತು.

ಮಧ್ಯಾಹ್ನ 3 ಗಂಟೆ ವೇಳೆಗೆ ಆರಂಭವಾದ ದಸರಾ ಮೆರವಣಿಗೆ ಬನ್ನಿಮಂಟಪ ತಲುಪುವ ವೇಳೆಗೆ ಸೂರ್ಯ ಮರೆಯಾಗುವ ಹೊತ್ತಾಗಿತ್ತು. ಸಂಜೆ 6.30ರ ವೇಳೆಗೆ ಮೆರವಣಿಗೆ ಅಂತ್ಯಗೊಳ್ಳುವ ಮೂಲಕ ನವರಾತ್ರಿ ಆಚರಣೆಗಳು ಸಂಪನ್ನಗೊಂಡವು.

ಪಂಜಿನ ಕವಾಯತು: ಬನ್ನಿಮಂಟಪದಲ್ಲಿ ರಾತ್ರಿ ಕಗ್ಗತ್ತಲು ಸೀಳಿ ಬಂದ ಬೆಳಕಿನ ಚಿತ್ತಾರ ಆಕರ್ಷಕವಾಗಿತ್ತು. ನವರಾತ್ರಿ ಆಚರಣೆಯ ಕೊನೆಯದಾಗಿ ಪಂಜಿನ ಕವಾಯತು ನಡೆಯುತ್ತದೆ. ಆಕರ್ಷಕ, ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ಜನರ ಎದೆ ನಡುಗಿಸಿದವು. ಬೈಕ್‌ಗಳ ಮೇಲಿನ ಸಾಹಸ, ಅಶ್ವಾರೋಹಿ ಪಡೆಗಳ ಟೆಂಟ್ ಪೆಗ್ಗಿಂಗ್‌, ಪೊಲೀಸ್ ತಂಡ ನಡೆಸಿಕೊಟ್ಟ ಪಂಜಿನ ಕವಾಯತು ಗಮನ ಸೆಳೆದವು.

ಸೂತಕದ ಛಾಯೆ

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಾಯಿ ನಿಧನದಿಂದಾಗಿ ಅರಮನೆಯಲ್ಲಿ ವಿಜಯದಶಮಿ ಕಾರ್ಯಕ್ರಮಗಳು ನಡೆಯಲಿಲ್ಲ. ಅರಮನೆ ಆವರಣದಲ್ಲಿ ನಡೆಯಬೇಕಿದ್ದ ವಜ್ರಮುಷ್ಟಿ ಕಾಳಗ ರದ್ದುಗೊಂಡಿತ್ತು. ಸೂತಕದ ಹಿನ್ನೆಲೆಯಲ್ಲಿ ಜಂಬೂಸವಾರಿ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ರಾಜವಂಶಸ್ಥರು ಪಾಲ್ಗೊಳ್ಳಲಿಲ್ಲ.

ಸೆಲ್ಫಿ ಕಾಟ

ಅರಮನೆ ಅವರಣದಲ್ಲಿ ಅಲ್ಲಲ್ಲಿ ಮೆರವಣಿಗೆ ಮಧ್ಯಕ್ಕೆ ನುಗ್ಗಿದ ಜನರು ಸೆಲ್ಫಿ ತೆಗೆದುಕೊಂಡರು. ಅರಮನೆ ಬಿಟ್ಟು ಹೊರ ಬರುತ್ತಿದ್ದಂತೆ ಇದು ಹೆಚ್ಚಾಯಿತು.

ಚಿನ್ನದ ಅಂಬಾರಿ ಹೊತ್ತ ಆನೆಗೆ ಪೊಲೀಸರು ಸಾಕಷ್ಟು ಭದ್ರತೆ ನೀಡಿದ್ದರು. ಮೆರವಣಿಗೆ ಮಧ್ಯದಲ್ಲಿ ಅಂಬಾರಿ ಸಾಗುತ್ತಿದ್ದಂತೆ ಪೊಲೀಸರ ಭದ್ರತೆಯೂ ಅಲ್ಲಿಗೆ ಕೊನೆಗೊಂಡಿತು. ಮೆರವಣಿಗೆ ಜತೆ ಸೇರಿಕೊಂಡ ಜನರು ಸಹ ಕಲಾವಿದರ ಜತೆ ಹೆಜ್ಜೆಹಾಕಿ, ಸೆಲ್ಫಿ ತೆಗೆದುಕೊಂಡರು. ಅವರ ಪರಿಕರಗಳನ್ನು ಪಡೆದು ತಾವೂ ನರ್ತಿಸಿದರು. ಇದರಿಂದಾಗಿ ಹಿಂದೆ ಬರುತ್ತಿದ್ದ ಕಲಾ ತಂಡಗಳು ಸಾಗಲು ಅಡ್ಡಿಯಾಯಿತು.

ಕಾಂಗ್ರೆಸ್ ಶಾಸಕರು ಗೈರು

ದಸರಾ ಆರಂಭದ ದಿನಗಳಿಂದ ಮೈಸೂರು, ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಗೈರು ಹಾಜರಿ ಎದ್ದುಕಾಣುತ್ತಿದೆ. ಈಗ ಜಂಬೂಸವಾರಿಯಿಂದಲೂ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.