ADVERTISEMENT

ಗಿಜಿಗುಟ್ಟಿದ ಬಸ್‌, ರೈಲು ನಿಲ್ದಾಣ

ಪ್ರಯಾಣಿಕರ ದಟ್ಟಣೆ; ತುಂಬಿ ಸಂಚರಿಸಿದ ಬಸ್‌ ರೈಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:42 IST
Last Updated 17 ಅಕ್ಟೋಬರ್ 2018, 19:42 IST
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ದಸರಾ ಹಬ್ಬದ ಆಚರಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೊರಡುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಿಗಾಗಿ ಕಾಯುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ದಸರಾ ಹಬ್ಬದ ಆಚರಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೊರಡುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಿಗಾಗಿ ಕಾಯುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಬೆಂಗಳೂರು: ದಸರಾ ಪ್ರಯುಕ್ತ ನಗರದ ಪ್ರಮುಖ ಬಸ್‌ ನಿಲ್ದಾಣಗಳು ಹಾಗೂ ಖಾಸಗಿ ಬಸ್‌ಗಳ ಪಿಕ್‌ ಅಪ್‌ ಕೇಂದ್ರಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ದಟ್ಟಣೆ ಹೆಚ್ಚಿದೆ.

ಮೆಜೆಸ್ಟಿಕ್‌ ನಿಲ್ದಾಣ, ಆನಂದರಾವ್‌ ವೃತ್ತ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಕೆಎಸ್‌ಆರ್‌ಟಿಸಿ ಪ್ರಯಾಣ ದರದಲ್ಲಿ ಶೇ 20ರಷ್ಟು ಹೆಚ್ಚಳ ಮಾಡಿದೆ. ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಎರಡು, ಮೂರುಪಟ್ಟು ಹೆಚ್ಚಿಸಿವೆ. ಹಾಗಿದ್ದರೂ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿವೆ.

ಸರಣಿ ರಜೆ ಬಂದಿರುವುದು ಜನರಿಗೆ ಕುಟುಂಬ ಸಮೇತ ಪ್ರಯಾಣಿಸಲು ಅವಕಾಶ ಸಿಕ್ಕಂತಾಗಿದೆ. ದರ ಹೆಚ್ಚಳವನ್ನು ಲೆಕ್ಕಿಸದೆ ಜನರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ADVERTISEMENT

ಕೆಎಸ್‌ಆರ್‌ಟಿಸಿಯೊಂದೇ ನಗರದಿಂದ ಸುಮಾರು 800 ಪ್ರೀಮಿಯಂ ಬಸ್‌ಗಳನ್ನು ಓಡಿಸುತ್ತಿದೆ. ರಾಜ್ಯದಾದ್ಯಂತ ಒಟ್ಟು 2500 ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ತಿಳಿಸಿದರು.

ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಮೈಸೂರು ಭಾಗಗಳಿಗೆ ತಲಾ 100ಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಹಬ್ಬ ಹಾಗೂ ವಾರಾಂತ್ಯದ ದಿನ ಸಮೀಪಿಸುತ್ತಿರುವುದರಿಂದ ಖಾಸಗಿಯವರೂ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದ್ದಾರೆ.ಬಸ್‌ ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಂದ ಮೆಟ್ರೊ ರೈಲುಗಳೂ ತುಂಬಿ ಸಂಚರಿಸಿದವು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು. ಬಸ್‌ಗಳಲ್ಲಿ ಸೀಟು ಸಿಗದವರು, ತಡರಾತ್ರಿ ಸಂಚರಿಸುವವರು ಪ್ರಯಾಣಕ್ಕಾಗಿ ರೈಲು ಅವಲಂಬಿಸಿದರು.

ಹುಬ್ಬಳ್ಳಿ, ಮೈಸೂರು ಕಡೆಗಳಿಗೆ ಸಂಚರಿಸುವ ರೈಲುಗಳಲ್ಲಿ ದಟ್ಟಣೆ ಹೆಚ್ಚು ಇತ್ತು. ಎರಡು ತಿಂಗಳ ಬಳಿಕ ಆ. 10ರಿಂದ ಮಂಗಳೂರು, ಉಡುಪಿ ಭಾಗಗಳಿಗೆ ರೈಲು ಸಂಚಾರ ಪುನರಾರಂಭಗೊಂಡಿದೆ. ಹೀಗಾಗಿ ಈ ಮಾರ್ಗದ ರೈಲುಗಳು ಭರ್ತಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.