ADVERTISEMENT

ದಿನದ ಸೂಕ್ತಿ: ಕತ್ತಲೇ ನರಕ, ಬೆಳಕೇ ಸ್ವರ್ಗ

ಎಸ್.ಸೂರ್ಯಪ್ರಕಾಶ ಪಂಡಿತ್
Published 13 ನವೆಂಬರ್ 2020, 18:07 IST
Last Updated 13 ನವೆಂಬರ್ 2020, 18:07 IST
ದೀಪಾವಳಿ
ದೀಪಾವಳಿ   

ಉಪಶಮಿತಮೇಘನಾದಂ

ಪ್ರಜ್ವಲಿತದಶಾನನಂ ರಮಿತರಾಮಮ್‌ ।

ರಾಮಾಯಣಮಿವ ಸುಭಗಂ

ADVERTISEMENT

ದೀಪದಿನಂ ಹರತು ವೋ ದುರಿತಮ್‌ ।।

ಇದು ದೀಪಾವಳಿಯನ್ನು ಕುರಿತ ಪದ್ಯ; ಇಲ್ಲಿ ಶ್ಲೇಷೆಯ ಉಪಯೋಗ ಆಗಿದೆ. ಎಂದರೆ ಒಂದೇ ಶಬ್ದ ಹಲವು ಅರ್ಥಗಳನ್ನು ಹೊಂದಿದ್ದರೆ ಅದು ಶ್ಲೇಷೆ ಎಂದೆನಿಸಿಕೊಳ್ಳುತ್ತದೆ.

ಇದರ ತಾತ್ಪರ್ಯ ಹೀಗೆ:

’ಮೇಘನಾದ ಎಂದರೆ ಇಂದ್ರಜಿತ್‌, ಹೇಗೆ ರಾಮನೊಂದಿಗಿನ ಯುದ್ಧದಲ್ಲಿ ಶಾಂತನಾದನೋ, ಎಂದರೆ ಸೋಲನ್ನು ಅನುಭವಿಸಿ, ಮರಣವನ್ನು ಹೊಂದಿದನೋ ಹಾಗೆಯೇ ಮೇಘನಾದ, ಎಂದರೆ ಮೋಡದ ಸದ್ದು, ಗುಡುಗು ಕೂಡ ಈ ಕಾಲದಲ್ಲಿ, ಎಂದರೆ ದೀಪಾವಳಿಯ ಸಂದರ್ಭದಲ್ಲಿ ಶಾಂತವಾಗಿರುತ್ತದೆ. ರಾಮಾಯಣದಲ್ಲಿ ದಶಾನನ, ಎಂದರೆ ಹತ್ತು ತಲೆಗಳ ರಾವಣನು ಸುಡಲ್ಪಟ್ಟಂತೆ ಈ ಹಬ್ಬದಲ್ಲಿ ದಶೆಗಳ, ಎಂದರೆ ಬತ್ತಿಗಳ ಮುಖವು ಉರಿಸಲ್ಪಡುತ್ತದೆ. ಅಂದು ರಾಮನು ಸಂತೋಷ ಪಟ್ಟಂತೆ, ಇಂದು ರಾಮನೂ ರಮಣಿಯರೂ ಸಂಭ್ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿಯು ಎಲ್ಲರ ಪಾಪಗಳನ್ನೂ ಹೋಗಲಾಡಿಸಲಿ.’

ದೀಪಾವಳಿ ಎಂದರೆ ದೀಪಗಳ ಸಾಲು. ದೀಪಗಳೊಂದಿಗೆ ನಲಿಯುವ ಹಬ್ಬವೇ ದೀಪಾವಳಿ.

ದೀಪ ಎಂದರೆ ಬೆಳಕು. ಬೆಳಕು ಇಲ್ಲ ಎಂದರೆ ಕತ್ತಲು. ಕತ್ತಲಿನಲ್ಲಿ ಜೀವನಯಾನ ಸುಲಭವಲ್ಲ. ಕತ್ತಲು ಎಂದರೆ ಅವಿದ್ಯೆ; ಬೆಳಕು ಎಂದರೆ ಜ್ಞಾನ. ಹೀಗಾಗಿ ನಮ್ಮ ಜೀವನಕ್ಕೆ ಬೇಕಾದ ಬೆಳಕಿನ, ಎಂದರೆ ಅರಿವಿನ ಮಹತ್ವವನ್ನು ತಿಳಿದು, ಅದನ್ನು ಸಂಭ್ರಮದಿಂದ ಆರಾಧಿಸುವ ಹಬ್ಬವೇ ದೀಪಾವಳಿ.

ಇಂದು ನರಕಚತುರ್ದಶಿ; ಮೈ–ಮನಗಳ ಕೊಳೆಯನ್ನು ತೊಳೆದುಕೊಂಡು ಬೆಳಕನ್ನು ಸ್ವಾಗತಿಸಲು ಸಿದ್ಧರಾಗುತ್ತೇವೆ. ಬಹಿರಂಗದ ಶುದ್ಧಿಯೂ ಮುಖ್ಯ, ಅಂತರಂಗದ ಶುದ್ಧಿಯೂ ಮುಖ್ಯ – ಅರಿವನ್ನು ಸಂಪಾದಿಸಲು. ಇದನ್ನೇ ಸಂಕೇತಿಸುತ್ತಿದೆ ದೀಪಾವಳಿಯ ಅಭ್ಯಂಗನಸ್ನಾನ.

ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನುನರಕಚತುರ್ದಶಿಯಂದು ಶ್ರೀಕೃಷ್ಣನು ಬಿಡುಗಡೆಗೊಳಿಸಿ, ಅವರಿಗೆ ಹೊಸದಾದ ಜೀವನವನ್ನು ಕೊಟ್ಟ. ಈ ಸಂಭ್ರಮದ ಆಚರಣೆಯೂ ಇಂದಿನ ಹಬ್ಬದಲ್ಲಿ ಸೂಚಿತವಾಗಿದೆ. ಸ್ತ್ರೀ ಎಂದರೆ ನಮ್ಮ ಚೈತನ್ಯ, ಶಕ್ತಿ, ಬುದ್ಧಿ. ನಮ್ಮ ಜೀವನಕ್ಕೆ ತಾರಕವೂ ಪೋಷಕವೂ ಆದ ಸ್ತ್ರೀ ನರಕದಲ್ಲಿ ಎಂದರೆ, ರಾಕ್ಷಸೀಪ್ರವೃತ್ತಿಗೆ ಬಲಿಯಾಗಿ ಬಂಧನದಲ್ಲಿದ್ದರೆ ನಮ್ಮ ಏಳಿಗೆ ಸಾಧ್ಯವಿಲ್ಲ. ಅವಳನ್ನು ನರಕದಿಂದ ಬಿಡುಗಡೆಗೊಳಿಸಬೇಕಾದುದು ನಮ್ಮ ಆದ್ಯಕರ್ತವ್ಯ. ಇದನ್ನೂ ಈ ಕಥೆಯ ಸಾಂಕೇತಿಕತೆ ಸೂಚಿಸುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಜೀವನ ಕತ್ತಲಿನ ಪಾಲಾಗಬಾರದು; ಅವಿದ್ಯೆ, ಅಹಂಕಾರ, ಬಂಧನ, ಭ್ರಷ್ಟಾಚಾರ, ಅನೀತಿಗಳಂಥ ಕತ್ತಲಿನ ಕಾರಣದಿಂದ ನಾವು ನರಕದ ಪಾಲಾಗಬಾರದು ಎಂಬ ಆಶಯವೇ ನರಕಚತುರ್ದಶಿಯ ಆಚರಣೆಯಲ್ಲಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.