ADVERTISEMENT

ದಿನದ ಸೂಕ್ತಿ: ಹಂಚಿದಷ್ಟೂ ಹೆಚ್ಚಾಗುತ್ತದೆ!

ಎಸ್.ಸೂರ್ಯಪ್ರಕಾಶ ಪಂಡಿತ್
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಪೂರ್ವಃ ಕೋsಪಿ ಕೋಶೋsಯಂ ವಿದ್ಯತೇ ತವ ಭಾರತಿ ।

ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ತಾಯಿ ಸರಸ್ವತಿಯೇ! ನಿನ್ನ ಕೋಶ ತುಂಬ ಅಪೂರ್ವವಾದುದು. ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತದೆ; ಕೂಡಿಟ್ಟಷ್ಟೂ ಕಡಿಮೆಯಾಗುತ್ತದೆ.‘

ನಾವು ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದೇವೆ. ನಮಗೆ ಬೇಕು ಎಂದಾಗಲೆಲ್ಲ ಹಣವನ್ನು ನಮ್ಮ ಖಾತೆಯಿಂದ ಡ್ರಾ ಮಾಡಿಕೊಂಡು ಬಳಸುತ್ತೇವೆ. ಹೀಗೆ ಡ್ರಾ ಮಾಡಿಕೊಂಡು ಹಣವನ್ನು ನಾವು ಬಳಸಿದಂತೆಲ್ಲ ನಮ್ಮ ಖಾತೆಯಲ್ಲಿ ಹಣ ಹೆಚ್ಚಾಗುವುದೋ? ಅಥವಾ ಕಡಿಮೆಯಾಗುವುದೋ? ಈ ಪ್ರಶ್ನೆಗೆ ‘ಕಡಿಮೆಯಾಗುತ್ತದೆಯಲ್ಲಾ! ಇದನ್ನೂ ಹೇಳಬೇಕೆ?‘ ಎಂದು ಸಂಕಟದಿಂದಲೇ ಉತ್ತರಿಸುತ್ತೇವೆ. ಹಣವನ್ನು ಬಳಸಿದಂತೆಲ್ಲ ಅದು ಹೆಚ್ಚಾಗುತ್ತಹೋಗುವ ವಿಧಾನವೂ ಉಂಟೆ – ಎಂದು ಚಿಂತಿಸುತ್ತೇವೆ. ಅಂಥದೊಂದು ಪವಾಡ ನಡೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಹಂಬಲಿಸುತ್ತೇವೆ. ಸುಭಾಷಿತ ಅಂಥದೊಂದು ಪವಾಡದ ಬಗ್ಗೆ ನಮಗೆ ತಿಳಿಸಿಕೊಡುತ್ತಿದೆ. ಆದರೆ ಇದು ಹಣದ ವಿಷಯದಲ್ಲಿ ಅಲ್ಲ, ವಿದ್ಯೆಯ ವಿಷಯದಲ್ಲಿ.

ನಮ್ಮ ಸಂಗ್ರಹದಲ್ಲಿರುವ ಎಲ್ಲ ವಸ್ತುಗಳು ಕೂಡ ಅವನ್ನು ಬೇರೆಯವರಿಗೆ ಹಂಚುತ್ತಿದ್ದಂತೆ ಕಡಿಮೆ ಆಗುತ್ತಹೋಗುತ್ತದೆ. ಆದರೆ ವಿದ್ಯೆ ಮಾತ್ರ ಅದನ್ನು ಹಂಚಿದಷ್ಟೂ ಹೆಚ್ಚಾಗುತ್ತಹೋಗುತ್ತದೆ.

ನಮ್ಮಲ್ಲಿರುವ ವಿದ್ಯೆ ಅದು ಹೆಚ್ಚು ಸ್ಫಷ್ಟವಾಗುವುದೂ ಹೆಚ್ಚು ಸ್ಥಿರವಾಗಿ ನಿಲ್ಲುವುದೂ ಅದನ್ನು ನಾವು ಹಂಚಿಕೊಂಡಾಗಲೇ. ಇದು ನಮಗೆ ಅನುಭವದಿಂದಲೇ ಸಿದ್ಧವಾದ ಸಂಗತಿ. ಉದಾಹರಣೆಗೆ, ಈಗ ನಮಗೊಂದು ಗಣಿತದ ಸೂತ್ರ ಗೊತ್ತಿದೆ ಎಂದಿಟ್ಟುಕೊಳ್ಳೋಣ. ಅದನ್ನು ನಮ್ಮಲ್ಲಿ ಮಾತ್ರವೇ ಇಟ್ಟುಕೊಂಡರೆ ಸ್ವಲ್ಪ ಸಮಯದ ಬಳಿಕ ಮರೆತುಹೋಗುತ್ತದೆ. ಅದನ್ನೇ ನಾವು ನಾಲ್ಕು ಜನರಿಗೆ ಹೇಳುತ್ತಹೋದರೆ ನೆನಪು ದೃಢವಾಗಿ ನಿಲ್ಲುತ್ತದೆ. ಈ ವಿದ್ಯಮಾನವನ್ನೇ ಖ್ಯಾತ ವಿಜ್ಞಾನಿ ರಿಚರ್ಡ್ ಫೈನ್‌ಮನ್‌ ಸೂತ್ರರೂಪದಲ್ಲಿ ಹೀಗೆ ಹೇಳಿದ್ದು:

’If you want to master something, teach it.'

ವಿದ್ಯೆಯನ್ನು ಹಂಚುವ ಪ್ರಮುಖ ವಿಧಾನ ಎಂದರೆ ಬೋಧನೆ. ಅದನ್ನೇ ಇಲ್ಲಿ ಫೈನ್‌ಮನ್‌ ಅವರು ಹೇಳಿರುವುದು: ’ನೀವು ಯಾವುದಾದರೊಂದು ವಿಷಯವನ್ನು ನಿಮ್ಮದನ್ನಾಗಿಸಿಕೊಳ್ಳಬೇಕೆಂದಿದ್ದರೆ, ಅದನ್ನು ಬೋಧಿಸಿ.’

ನಾವು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸುವಾಗ ಅದನ್ನು ಆ ಇನ್ನೊಬ್ಬರು ಮಾತ್ರವೇ ಕಲಿಯುವುದಿಲ್ಲ; ನಾವು ಕಲಿತಿರುವ ವಿದ್ಯೆ ನಮ್ಮಲ್ಲಿ ಪುನಃ ಪರಿಷ್ಕರಣೆಗೆ ಒಳಗಾಗುತ್ತದೆ; ಅದರ ಸೂಕ್ಷ್ಮಗಳು ನಮಗೆ ಮತ್ತೆ ಮತ್ತೆ ಪ್ರಕಟವಾಗಲು ಕಲಿಕಾಸಮಯ ನೆರವಾಗುತ್ತದೆ; ನಾವು ವಿಷಯವನ್ನು ಎಷ್ಟು ಚೆನ್ನಾಗಿ ಕಲಿತ್ತಿದ್ದೇವೆ – ಎನ್ನುವುದರ ಪರೀಕ್ಷೆಯು ಆಗ ನಡೆಯುತ್ತಿರುತ್ತದೆ.

ನಮ್ಮಲ್ಲಿರುವ ವಿದ್ಯೆಯನ್ನು ನಾವು ಸಮಾಜಕ್ಕೂ ಹಂಚೋಣ; ಸಮಾಜದಿಂದ ನಾವೂ ಕಲಿಯೋಣ. ಸಮಾಜದ ಒಟ್ಟು ಬೆಳವಣಿಗೆ ನಿಂತಿರುವುದೇ ವಿದ್ಯೆಯ ಈ ಕೊಡು–ಕೊಳ್ಳುವ ಚಕ್ರದಲ್ಲಿ ಎಂಬುದನ್ನು ಮರೆಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.