ADVERTISEMENT

ದಿನದ ಸೂಕ್ತಿ: ಭಾವಗ್ರಹಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಡಿಸೆಂಬರ್ 2020, 0:41 IST
Last Updated 26 ಡಿಸೆಂಬರ್ 2020, 0:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಕಾರೇಣೈವ ಚತುರಾಃ ತರ್ಕಯಂತಿ ಪರೇಂಗಿತಃ ।
ಗರ್ಭಸ್ಥಂ ಕೇತಕೀಪುಷ್ಪಂ ಆಮೋದೇನೇವ ಷಟ್ಪದಾಃ ।।

ಇದರ ತಾತ್ಪರ್ಯ ಹೀಗೆ:

’ಜಾಣರು ಮುಖವನ್ನು ನೋಡಿ ಇತರರ ಮನಸ್ಸಿನಲ್ಲಿರುವ ಭಾವವನ್ನು ಗ್ರಹಿಸುತ್ತಾರೆ. ದುಂಬಿಗಳು ಸುಗಂಧದಿಂದಲೇ ಒಳಗೆ ಮುಚ್ಚಿಕೊಂಡಿರುವ ತಾಳೆಹೂವನ್ನು ತಿಳಿಯುತ್ತದೆ.’

ADVERTISEMENT

ಸುಂಸ್ಕೃತನ ಲಕ್ಷಣವನ್ನು ತಿಳಿಸುತ್ತ ಡಿವಿಜಿ ಅವರು ಐದು ತತ್ತ್ವಗಳ ವಿವರಗಳನ್ನು ನೀಡಿದ್ದಾರೆ. ಅದರಲ್ಲಿ ಒಂದು ಪರೇಂಗಿತ ಪರಿಜ್ಞಾನ. ಎಂದರೆ ಬೇರೆಯವರ ಮನಸ್ಸನ್ನು, ಇಂಗಿತವನ್ನು ಗ್ರಹಿಸುವುದು. ಹೀಗೆ ಬೇರೊಬ್ಬರ ಭಾವ–ಬುದ್ಧಿಗಳನ್ನು ತಿಳಿದುಕೊಳ್ಳುವುದು ಸಂಸ್ಕೃತವ್ಯಕ್ತಿಯ ಲಕ್ಷಣ ಎಂಬುದೇ ಅವರ ನಿಲವು. ಸುಭಾಷಿತ ಕೂಡ ಇಲ್ಲಿ ಇದನ್ನೇ ಹೇಳುತ್ತಿದೆ, ಇನ್ನೊಂದು ವಿಧಾನದಲ್ಲಿ.

ಭಿನ್ನಾಭಿಪ್ರಾಯಗಳು ನಮ್ಮ ಬದುಕಿನಲ್ಲಿ ತೀರ ಸಹಜವಾದ ಸಂಗತಿ. ಇಬ್ಬರು ವ್ಯಕ್ತಿಗಳ ನಡುವೆ ಇರಲಿ, ಹಲವು ಸಲ ನಮಗೆ ನಮ್ಮೊಂದಿಗೇ ಭಿನ್ನಾಭಿಪ್ರಾಯ ಉಂಟಾಗುವುದೂ ಸುಳ್ಳಲ್ಲ! ಇಷ್ಟಕ್ಕೂ ಭಿನ್ನಾಭಿಪ್ರಾಯ ಏಕಾದರೂ ಎದುರಾಗುತ್ತದೆ? ನಮ್ಮ ಮಾತು ಅಥವಾ ಭಾವನೆ ಅಥವಾ ಮನಸ್ಸು ಇನ್ನೊಬ್ಬರಿಗೆ ಸರಿಯಾಗಿ ಅರ್ಥವಾಗದಿದ್ದಾಗಲೇ ಭಿನ್ನಾಭಿಪ್ರಾಯಗಳು ಮೂಡಲು ದೊಡ್ಡ ಕಾರಣ. ಒಬ್ಬರ ಮನಸ್ಸನ್ನು ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವವನ್ನು, ಅದೂ ಕೇವಲ ಅವರ ಮುಖವನ್ನಷ್ಟೆ ನೋಡಿ, ತಿಳಿದುಕೊಳ್ಳುವುದು ಜಾಣತನ.

ನಮ್ಮ ಅಭಿಪ್ರಾಯಗಳನ್ನು ಪ್ರಕಟಿಸಲು ನಮಗೆ ಸಾಕಷ್ಟು ಸಲಕರಣೆಗಳು, ಸಾಧನಗಳು ಇವೆ. ಮಾತು, ಬರಹ, ದೇಹದ ಭಂಗಿಗಳು – ಹೀಗೆ ಹಲವು ಮಾಧ್ಯಮಗಳು ಇದ್ದರೂ ನಾವು ನಮ್ಮ ಭಾವನೆಗಳನ್ನು ಇನ್ನೊಬ್ಬರಿಗೆ ತಿಳಿಸುವುದರಲ್ಲೂ ಸೋಲುತ್ತಿರುತ್ತೇವೆ, ಇನ್ನೊಬ್ಬರ ಭಾವನೆಗಳನ್ನು ತಿಳಿದುಕೊಳ್ಳುವುದರಲ್ಲೂ ಸೋಲುತ್ತಿರುತ್ತೇವೆ. ಆದರೆ ಪ್ರಾಣಿಗಳಿಗಾಗಲೀ, ಪಕ್ಷಿಗಳಿಗಾಗಲೀ, ಕ್ರಿಮಿ–ಕೀಟಗಳಿಗಾಲೀ ಇಂಥ ಸೌಲಭ್ಯಗಳು ಇಲ್ಲ. ಆದರೂ ಅವುಗಳ ಸಂವಹನ ಸಾಮರ್ಥ್ಯ ತುಂಬ ಪ್ರಭಾವಶಾಲಿಯಾಗಿದೆ. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು. ಎಂದರೆ, ಸೃಷ್ಟಿಯಲ್ಲಿಯೇ ಅತ್ಯಂತ ಬುದ್ಧಿವಂತಪ್ರಾಣಿ ಎಂದೆನಿಸಿಕೊಂಡಿರುವ ಮನುಷ್ಯನು ತನ್ನ ಸಹಜೀವಿಗಳೊಂದಿಗೂ ಪ್ರಕೃತಿಯೊಂದಿಗೂ ಸರಿಯಾಗಿ ಸಂವಹನವನ್ನು ನಡೆಸಲು ವಿಫಲನಾಗುತ್ತಿದ್ದಾನೆ ಎಂದು ಅದು ಧ್ವನಿಪೂರ್ಣವಾಗಿ ಹೇಳುವಂತಿದೆ.

ದುಂಬಿಗಳು ಹೂವಿನ ಸುಗಂಧದಿಂದಲೇ ಅದು ಎಂಥ ಹೂವು, ಅಲ್ಲಿ ತನಗೆ ಏನು ಸಿಗುತ್ತದೆ – ಎಂಬುದನ್ನು ಗ್ರಹಿಸುತ್ತವೆ. ಪಕ್ಷಿಗಳು ಇನ್ನೊಂದು ಪಕ್ಷಿಯ ಕೂಗಿನಿಂದಲೇ ಪರಿಸ್ಥಿತಿಯ ಅರ್ಥವನ್ನು ಪಡೆದುಕೊಳ್ಳುತ್ತವೆ. ಪ್ರಾಣಿಗಳು ಇತರ ಪ್ರಾಣಿಗಳ ಚಲನೆಯಿಂದಲೇ ಅವುಗಳ ಗೊತ್ತು–ಗುರಿಗಳನ್ನು ತೀರ್ಮಾನಿಸಿಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಬಾಯಿಬಿಟ್ಟು ಹೇಳಿದರೂ ಪರಿಸ್ಥಿತಿಯ ಅರಿವು ಉಂಟಾಗುವುದಿಲ್ಲ; ಅವನಿಗೆ ಒದಗಬಲ್ಲ ಸುಖವನ್ನೋ ದುಃಖವನ್ನೋ ಅವನು ಕಂಡುಕೊಳ್ಳಲಾರ. ಬಹುಶಃ ಅವನು ತನಗೆ ಇದೆ ಎಂದು ಭಾವಿಸಿಕೊಂಡಿರುವ ಬುದ್ಧಿಶಕ್ತಿಯೇ ಅವನ ಈ ಮಿತಿಗೆ ಕಾರಣವಾಗಿದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.