ADVERTISEMENT

ದಿನದ ಸೂಕಿ: ಬಡತನದ ಬಿಸಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಜನವರಿ 2021, 18:30 IST
Last Updated 5 ಜನವರಿ 2021, 18:30 IST
ಹಣದ ಬೆಳವಣಿಗೆ
ಹಣದ ಬೆಳವಣಿಗೆ   

ನಶ್ಯತಿ ವಿಪುಲಮತೇರಪಿ ಬುದ್ಧಿಃ ಪುರುಷಸ್ಯ ಮಂದವಿಭವಸ್ಯ ।

ಘೃತಲವಣತೈಲತಂಡುಲವಸ್ತ್ರೇಂಧನಚಿಂತಯಾ ಸತತಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಬಡವನ ಬುದ್ಧಿ ಎಷ್ಟೇ ತೀಕ್ಷ್ಣವಾಗಿದ್ದರೂ ಅದು ಯಾವಾಗಲೂ ತುಪ್ಪ, ಉಪ್ಪು, ಎಣ್ಣೆ, ಅಕ್ಕಿ, ಬಟ್ಟೆ, ಸೌದೆ – ಇವುಗಳ ಚಿಂತೆಯ ಕಾರಣದಿಂದ ಕುಗ್ಗುತ್ತದೆ.’

ಬಡತನದ ತೀವ್ರತೆ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಹೇಗೆ ಕಾಡುತ್ತದೆ – ಎಂಬುದನ್ನು ಈ ಸುಭಾಷಿತ ನಿರೂಪಿಸುತ್ತಿದೆ.

ನಮ್ಮಲ್ಲಿ ಬುದ್ಧಿ ಇರಬಹುದು, ಶಕ್ತಿ ಇರಬಹುದು, ಒಳ್ಳೆಯ ಗುಣಗಳೂ ಇರಬಹುದು; ಆದರೆ ಅವೆಲ್ಲವೂ ಒಂದೇ ಒಂದರ ಆಘಾತದಿಂದ ಅಥವಾ ದಾಳಿಯಿಂದ ನಿಷ್ಪ್ರಯೋಜಕವಾಗುತ್ತವೆ. ಹೀಗೆ ತನ್ನ ಒಂದೇ ಏಟಿನಿಂದ ಎಲ್ಲವನ್ನೂ ನಾಶಮಾಡುವಷ್ಟು ಶಕ್ತಿಶಾಲಿಯಾಗಿರುವ ಸಂಗತಿಯೇ ಬಡತನ.

ನಾವು ಸಮಾಜದಲ್ಲಿ ಇಂಥ ಘಟನೆಗಳನ್ನು ನೋಡುತ್ತಲೇ ಇರುತ್ತೇವೆ. ಎಷ್ಟೊಂದು ಪ್ರತಿಭೆ, ಪಾಂಡಿತ್ಯ, ಶ್ರದ್ಧೆ, ಆಸಕ್ತಿಗಳು ಇದ್ದರೂ ಬಡತನದ ಕಾರಣದಿಂದಾಗಿ ಅಂಥವರಿಗೆ ಅವಕಾಶಗಳು ಕೈ ತಪ್ಪಿಹೋಗುತ್ತಿರುತ್ತೇವೆ. ಮಾತ್ರವಲ್ಲ, ಅವರು ತಮ್ಮ ಆಸಕ್ತಿಯನ್ನು ಬೆಳಸಿಕೊಳ್ಳಲು, ರೂಢಿಸಿಕೊಳ್ಳಲು ಕೂಡ ಬಡತನ ಅವರಿಗೆ ಅವಕಾಶವನ್ನು ಕೊಡುವುದಿಲ್ಲ. ಇತಿಹಾಸದಲ್ಲಿಯೂ ಈ ವಿದ್ಯಮಾನಕ್ಕೆ ನೂರಾರು ಉದಾಹರಣೆಗಳನ್ನು ಕಾಣಬಹುದಾಗಿದೆ.

ಬೀಜದಲ್ಲಿ ಎಷ್ಟೇ ಸತ್ತ್ವ ಇರಬಹುದು, ಸಸಿಯಲ್ಲಿಯೂ ಸಾಕಷ್ಟು ಕಸುವೂ ಇರಬಹುದು; ಆದರೆ ಅದು ಬೆಳೆದು ದೊಡ್ಡದಾಗಬೇಕು, ಮರವಾಗಬೇಕು ಎಂದರೆ ಅದಕ್ಕೆ ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ಮುಂತಾದವು ಸಿಗಬೇಕು; ಇಲ್ಲವಾದಲ್ಲಿ ಸಸಿ ಒಣಗಿಹೋಗುತ್ತದೆ. ಅಂತೆಯೇ ನಮ್ಮಲ್ಲಿ ಎಷ್ಟೇ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಗಳು ಇದ್ದರೂ ಅದನ್ನು ಬೆಳೆಸಿಕೊಳ್ಳಲು ಆವಶ್ಯಕವಾದ ವಿವರಗಳನ್ನು ಸಂಪಾದಿಸಿಕೊಳ್ಳಲು ಹಣವೂ ಬೇಕು ಎಂಬುದು ಕಟುವಾಸ್ತವ.

ಬಡವನ ಗಮನವೆಲ್ಲವೂ ಸದಾ ತನ್ನ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವ ಅನಿವಾರ್ಯದ ಕಡೆಗೆ ಇರುವುದು ಸಹಜವೇ. ಇದನ್ನೇ ಸುಭಾಷಿತತುಪ್ಪ, ಉಪ್ಪು, ಎಣ್ಣೆ, ಅಕ್ಕಿ, ಬಟ್ಟೆ, ಸೌದೆ ಎಂದು ಸೂಚಿಸಿರುವುದು. ಮೊದಲು ಹೊಟ್ಟೆಗೆ, ಅನಂತರ ಬಟ್ಟೆಗೆ, ಬಳಿಕ ವಾಸಕ್ಕೆ – ಇವಿಷ್ಟಾದರೂ ನಮಗೆ ಇರಬೇಕು. ಈ ಮೂಲಭೂತ ಅಗತ್ಯಗಳೂ ಇಲ್ಲದಿದ್ದಾಗ ಒಂದೊಂದು ಕ್ಷಣವೂ ಇವುಗಳನ್ನು ಸಂಪಾದಿಸುವುದರ ಕಡೆಗೇ ನಮ್ಮ ಎಲ್ಲ ಬುದ್ಧಿ ಮತ್ತು ಶಕ್ತಿ ವ್ಯಯವಾಗುತ್ತಿರುತ್ತದೆ.

ಶ್ರೀನಿವಾಸ ರಾಮಾನುಜನ್‌ ಗಣಿತಲೋಕದ ಮಹಾಮೇಧಾವಿ. ಆದರೆ ಅವರ ಬಡತನದ ದೆಸೆಯಿಂದಾಗಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಂಥ ಹಲವು ಉದಾಹರಣೆಗಳನ್ನು ನಾವು ನೋಡಬಹುದೆನ್ನಿ!

ಪ್ರತಿಭಾಶಾಲಿಗಳು ಸಮಾಜದ ಆಸ್ತಿ. ಅವರನ್ನು ಬೆಳೆಸುವ, ಸಂರಕ್ಷಿಸುವ ಹೊಣೆಗಾರಿಕೆ ನಮ್ಮ–ನಿಮ್ಮೆಲ್ಲರೂ ಮೇಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.