ADVERTISEMENT

ದಿನದ ಸೂಕ್ತಿ| ಜೀವನದ ಸಾಫಲ್ಯ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಡಿಸೆಂಬರ್ 2020, 1:14 IST
Last Updated 30 ಡಿಸೆಂಬರ್ 2020, 1:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜನನೀಜಠರವ್ಯಾಧಿರ್ಬಂಧೂನಾಮಾಧಿರಪಗುಣಃ ಪುರುಷಃ ।

ಏತತ್ಕೃತೋ ಧರಿತ್ರ್ಯಾ ಭಾರೋ ಹರಿಣಾಪ್ಯನಪನೇಯಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಗುಣಹೀನನಾದ ಮನುಷ್ಯನು ತಾಯಿಯ ಗರ್ಭಕ್ಕೆ ಒಂದು ವ್ಯಾಧಿ; ಬಂಧುಗಳ ಪಾಲಿಗೆ ಮನೋರೋಗ; ಅವನಿಂದ ಉಂಟಾದ ಭೂಭಾರವನ್ನು ವಿಷ್ಣುವೂ ಹೋಗಲಾಡಿಸಲಾರ.’

ನಾವು ಬದುಕಿದರೆ ನಾಲ್ಕು ಜನರಿಗೆ ಪ್ರಯೋಜನವಾಗುವಂತೆ ಯೋಗ್ಯವಾದ ಬದುಕನ್ನು ಬದುಕಬೇಕು; ಹೀಗಲ್ಲದೆ ಅಯೋಗ್ಯವಾದ ಬದುಕನ್ನು ಬದುಕುವುದು ಎಂದರೆ ಅದು ಹೀನಾಯ ಬದುಕು – ಎಂಬುದನ್ನು ಸುಭಾಷಿತ ಇಲ್ಲಿ ಮಾರ್ಮಿಕವಾಗಿ ನುಡಿಯುತ್ತಿದೆ.

ತಾಯಿಯಾದವಳು ಮಕ್ಕಳು ಎಂಥವರಾದರೂ ಅವರನ್ನು ಕೆಟ್ಟ ರೀತಿಯಲ್ಲಿ ನೋಡಲಾರಳು; ಅವರಿಗೆ ಕೆಟ್ಟದ್ದನ್ನು ಬಯಸಲಾರಳು. ಎಂದೂ ಅವರು ಅವಳಿಗೆ ಹೊರೆ ಎನಿಸುವುದಿಲ್ಲ. ಮಾತೃವಾತ್ಸಲ್ಯದ ಶಕ್ತಿಯೇ ಅಂಥದ್ದು. ಆದರೆ ಇಲ್ಲಿ ಸುಭಾಷಿತ ಹೇಳುತ್ತಿದೆ, ಗುಣಹೀನನಾದ ಮನುಷ್ಯನು ತಾಯಿಯ ಗರ್ಭಕ್ಕೆ ಅಂಟಿದ ಒಂದು ವ್ಯಾಧಿ. ಗುಣಹೀನ ಎಂದರೆ ಸಂಸ್ಕಾರ ಇಲ್ಲದವನು; ಅಂಥವನನ್ನು ಸುಭಾಷಿತ ಅತ್ಯಂತ ಹೀನಾಯವಾಗಿ ಕಂಡಿದೆ.

ಗುಣಹೀನನಾದವನು ತಾಯಿಯ ಪಾಲಿಗೆ ವ್ಯಾಧಿಯಾದರೆ, ಬಂಧುಗಳ ಪಾಲಿಗೆ ಆಧಿ, ಎಂದರೆ ಮನೋರೋಗವಂತೆ! ಮಾತ್ರವಲ್ಲ, ಅವನು ಭೂಮಿಗೆ ಭಾರವಷ್ಟೆ ಎಂದೂ ಅದು ಹೇಳುತ್ತಿದೆ.

ಎಸ್‌. ಜಿ. ನರಸಿಂಹಾಚಾರ್ಯರ ಪ್ರಸಿದ್ಧ ಪದ್ಯದ ಈ ಸಾಲುಗಳು ನೆನಪಾಗುತ್ತವೆ:

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ

ಈ ಪದ್ಯದ ಈ ಸಾಲುಗಳು ತುಂಬ ಸರಳವಾಗಿವೆ; ವಿವರಿಸುವ ಅಗತ್ಯವಿಲ್ಲವೆನ್ನಿ!

ನಮ್ಮೆಲ್ಲರ ಜೀವನಕ್ಕೂ ನಿರ್ದಿಷ್ಟ ಉದ್ದೇಶ ಇರುತ್ತದೆ; ಅದನ್ನು ಕಂಡುಕೊಂಡು ಅದರಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಆಗ ಮಾತ್ರವೇ ನಮ್ಮ ಜೀವನದಿಂದ ನಮಗೂ ಸಂತೋಷ, ಸಾರ್ಥಕತೆ; ಇತರರಿಗೂ ಸಂತೋಷ, ನೆಮ್ಮದಿ. ಮನುಷ್ಯರಷ್ಟು ಬುದ್ಧಿಶಕ್ತಿಯನ್ನು ಹೊಂದಿರದ ಪ್ರಾಣಿಗಳಿಂದಲೂ ಪ್ರಕೃತಿಗೂ ಸಮಾಜಕ್ಕೂ ಪ್ರಯೋಜನ ಒದಗುತ್ತಿರುತ್ತದೆ. ನಾವು ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಒಳ್ಳೆಯ ಜೀವನವನ್ನು ನಡೆಸದಿದ್ದರೆ ಆಗ ನಾವು ಪ್ರಾಣಿಗಳಿಗಿಂತಲೂ ಕೀಳಾಗುತ್ತೇವೆ. ನಮ್ಮ ಬದುಕು ಆಗ ಹೇಯ ಎಂದೆನಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.