ADVERTISEMENT

ದಿನದ ಸೂಕ್ತಿ: ಏಕಾಗ್ರತೆಯನ್ನು ಉಳಿಸಿಕೊಳ್ಳಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 29 ಸೆಪ್ಟೆಂಬರ್ 2020, 19:30 IST
Last Updated 29 ಸೆಪ್ಟೆಂಬರ್ 2020, 19:30 IST
concentration
concentration   

ಪಶ್ಯನ್ನಪಿ ಪ್ರಸ್ಖಲತಿ ಶೃಣ್ವನ್ನಪಿ ನ ಬುದ್ಧ್ಯತಿ ।

ಪಶ್ಯನ್ನಪಿ ನ ಜಾನಾತಿ ದೇವಮಾಯಾವಿಮೋಹಿತಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ನೋಡುತ್ತಿದ್ದರೂ ಎಡವುತ್ತಾನೆ. ಕೇಳುತ್ತಿದ್ದರೂ ತಿಳಿಯಲಾರ. ಓದುತ್ತಿದ್ದರೂ ಅರ್ಥವಾಗುವುದಿಲ್ಲ. ಇವೆಲ್ಲ ದೇವಮಾಯೆಯ ಪ್ರಭಾವ.’

ನಮಗೆ ಅರಿವು ಹೇಗೆ ಬರುತ್ತದೆ – ಎಂಬ ವಿಷಯ ತತ್ತ್ವಶಾಸ್ತ್ರದಲ್ಲಿ ತುಂಬ ದೊಡ್ಡ ಚರ್ಚೆ. ನಮ್ಮ ಭಾರತೀಯ ತತ್ತ್ವಶಾಸ್ತ್ರ ಪರಂಪರೆಯೂ ಪಾಶ್ಚಾತ್ಯ ತತ್ತ್ವಶಾಸ್ತ್ರ ಪರಂಪರೆಯೂ ಈ ವಿಷಯವನ್ನು ಹಲವು ನೆಲೆಗಳಲ್ಲಿ ಆಲೋಚಿಸಿದೆ. ಈ ಪ್ರಶ್ನೆಗೆ ಉತ್ತರ ಸುಲಭವಲ್ಲ; ಅದರೆ ಒಂದು ವಸ್ತು ಅಥವಾ ವಿಷಯದ ಬಗ್ಗೆ ನಮಗೆ ತಿಳಿವಳಿಕೆ ಬಂದದ್ದು ಮಾತ್ರ ನಮ್ಮ ಅನುಭವಕ್ಕೆ ಬರುತ್ತದೆ. ಹೀಗೆಯೇ ಒಂದು ವಸ್ತು ಅಥವಾ ವಿಷಯದ ತಿಳಿವಳಿಕೆ ನಮ್ಮಿಂದ ತಪ್ಪಿಹೋದದ್ದೂ ಅನುಭವಕ್ಕೆ ಬರುತ್ತದೆ. ಸುಭಾಷಿತ ಹೇಳುತ್ತಿರುವುದು ಈ ಎರಡನೆಯ ಸಂಗತಿಯನ್ನು.

ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುತ್ತಿರುತ್ತೇವೆ. ಆದರೆ ಏನು ಓದುತ್ತಿದ್ದೇವೆ ಎನ್ನುವುದನ್ನು ಮನಸ್ಸಾಗಲೀ ಬುದ್ಧಿಯಾಗಲೀ ಗ್ರಹಿಸಿರುವುದಿಲ್ಲ. ಕಣ್ಣುಗಳು ಏನೋ ಅಕ್ಷರಗಳ ಮೇಲೆಯೇ ಚಲಿಸುತ್ತಿರುತ್ತವೆ; ಬಾಯಿ ಪುಸ್ತಕದಲ್ಲಿರುವ ವಾಕ್ಯಗಳನ್ನು ಉಚ್ಚರಿಸುತ್ತಿರುತ್ತದೆ. ಆದರೆ ಏನು ಓದಿದ್ದೇವೆ ಎಂಬುದೇ ನಮ್ಮ ಗ್ರಹಿಕೆಗೆ ಸಿಕ್ಕಿರುವುದಿಲ್ಲ. ಇಂಥ ಹಲವು ಪ್ರಸಂಗಗಳು ನಮ್ಮ ನಿತ್ಯಜೀವನದಲ್ಲಿ ಎದುರಾಗುತ್ತಿರುತ್ತವೆ.

ಸುಭಾಷಿತವೇ ಇಂಥ ಕೆಲವು ಪ್ರಸಂಗಗಳನ್ನು ತಿಳಿಸಿದೆ.

ರಸ್ತೆಯಲ್ಲಿ ಹೋಗುತ್ತಿದ್ದೇವೆ; ತುಂಬ ಎಚ್ಚರಿಕೆಯಿಂದಲೇ ನಡೆಯುತ್ತಿರುತ್ತೇವೆ. ಆದರೂ ಕೆಲವೊಮ್ಮೆ ಎಡವುತ್ತೇವೆ.

ತರಗತಿಯಲ್ಲಿ ಪಾಠವನ್ನು ಕೇಳುತ್ತಿರುತ್ತೇವೆ; ಅಥವಾ ಮನೆಯಲ್ಲಿಯೇ ಅಪ್ಪ, ಅಮ್ಮ, ಗಂಡ, ಹೆಂಡತಿ ಏನನ್ನೋ ಹೇಳುತ್ತಿರುತ್ತಾರೆ. ನಾವು ಕಿವಿಯನ್ನೂ ಕೊಟ್ಟಿರುತ್ತೇವೆ. ಆದರೆ ನಮಗೆ ಏನೂ ಕೇಳಿರುವುದೇ ಇಲ್ಲ.

ಹೀಗೆ ಓದುತ್ತಿದ್ದರೂ ಅರ್ಥವಾಗದಿರುವುದು, ನೋಡುತ್ತಿದ್ದರೂ ಎಡವುವುದು, ಕೇಳುತ್ತಿದ್ದರೂ ತಿಳಿಯದಿರುವುದು – ಇಂಥವು ಏಕೆ ನಡೆಯುತ್ತವೆ?

ಸುಭಾಷಿತ ಹೇಳುವ ಕಾರಣ: ದೇವಮಾಯೆಯ ಪ್ರಭಾವ.

ಮಾಯೆ ಎನ್ನವುದಕ್ಕೆ ತುಂಬ ಅರ್ಥಗಳಿವೆ. ನಮ್ಮ ಬುದ್ಧಿಗೆ ಕಾರಣಗಳು ಎಟುಕದ, ಆದರೆ ನಮ್ಮ ಪ್ರತ್ಯಕ್ಷದಲ್ಲಿ ನಡೆಯವ ವಿಶಿಷ್ಟ ಘಟನೆಗಳನ್ನು ಮಾಯೆ ಎಂದು ಸರಳವಾಗಿ ಹೇಳಬಹುದು. ನಿತ್ಯಜೀವನದಲ್ಲಿ ನಮ್ಮ ಬುದ್ಧಿಶಕ್ತಿಗೆ ಎಟುಕದೆ ನಡೆಯವ, ನಮ್ಮ ಮೈ ಮರೆವಿಗೆ ಕಾರಣವಾಗುವ ಪ್ರಸಂಗಗಳಿಗೆ ಕಾರಣ ದೇವರ ಮಾಯೆ ಎನ್ನುವುದು ಸುಭಾಷಿತದ ನಿಲವು.

ನಾವು ಮಾಯೆಯನ್ನು ಒಪ್ಪುತ್ತೇವೆಯೋ ಒಪ್ಪುವುದಿಲ್ಲವೋ – ಅದು ಬೇರೆ ವಿಷಯ. ಆದರೆ ನಮ್ಮ ಅರಿವಿಗೆ ಭಂಗ ಬರುವಂಥ ಪ್ರಸಂಗಗಳಂತೂ ನಿತ್ಯವೂ ಹಲವು ನಡೆಯುತ್ತಲೇ ಇರುತ್ತವೆ. ಇದಕ್ಕೆ ಕಾರಣವನ್ನು ನಾವು ಕಂಡುಕೊಳ್ಳಬೇಕಾಗಿದೆ.

ಈ ಮೈ ಮರೆವು ಕೇವಲ ಓದು, ನೋಟಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಅದು ನಾವು ಊಟಮಾಡುತ್ತಿರುವಾಗಲೂ ನಡೆಯಬಹುದು, ಟಿವಿ ನೋಡುತ್ತಿರುವಾಗಲೂ ನಡೆಯಬಹುದು.

ಏಕಾಗ್ರತೆಯ ಭಂಗದಿಂದ ಇಂಥ ಮೈ ಮರೆವು ಉಂಟಾಗುವುದು ಸಹಜ. ಏಕಾಗ್ರತೆಯ ಭಂಗಕ್ಕೆ ಹಲವು ಕಾರಣಗಳಿರಬಹುದು. ಮನಸ್ಸಿನ ಉದ್ವೇಗ, ದುಃಖ, ಖಿನ್ನತೆ, ಆಯಾಸ. ಕಾರಣ ಹೀಗೆ ಯಾವುದೂ ಆಗಿರಬಹುದು. ನಾವು ನಮ್ಮನ್ನು ಚೆನ್ನಾಗಿ ಪರೀಕ್ಷಿಸಿಕೊಂಡು ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕು. ಮನಸ್ಸಿನ ಲವಲವಿಕೆಯನ್ನು ಸದಾ ಕಾಪಾಡಿಕೊಳ್ಳಬೇಕು. ಆಗ ಎಚ್ಚರ ತಪ್ಪುವ ಅವಕಾಶಗಳು ಕಡಿಮೆಯಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.