ADVERTISEMENT

ದಿನದ ಸೂಕ್ತಿ | ನಿಜವಾದ ನಂಟರು

ಎಸ್.ಸೂರ್ಯಪ್ರಕಾಶ ಪಂಡಿತ್
Published 10 ಜುಲೈ 2020, 19:31 IST
Last Updated 10 ಜುಲೈ 2020, 19:31 IST
   

ಆಹವೇ ವ್ಯಸನೇ ಚೈವ ದುರ್ಭಿಕ್ಷೇ ಶತ್ರುವಿಗ್ರಹೇ ।
ರಾಜದ್ವಾರೇ ಶ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ ।।

ಇದರ ತಾತ್ಪರ್ಯ ಹೀಗೆ:

‘ಯುದ್ಧಕಾಲದಲ್ಲಿ, ದುಃಖದಲ್ಲಿ, ದುರ್ಭಿಕ್ಷದಲ್ಲಿ, ಶತ್ರುವಿನೊಡನೆ ನಡೆಸುವ ಹೋರಾಟದಲ್ಲಿ, ರಾಜನ ಸಭೆಯಲ್ಲಿ ಮತ್ತು ಸ್ಮಶಾನದಲ್ಲಿ ಯಾವನು ನಮ್ಮ ಜೊತೆ ನಿಲ್ಲುತ್ತಾನೋ ಅವನೇ ದಿಟವಾದ ಬಂಧು.‘

ADVERTISEMENT

ಮನುಷ್ಯ ಸಂಘಜೀವಿ; ಅವನು ಒಂಟಿಯಾಗಿರಲು ಸಾಧ್ಯವಿಲ್ಲ. ಹುಟ್ಟಿನಿಂದ ಮೊದಲುಗೊಂಡು ಅವನ ಅಂತ್ಯದವರೆಗೂ ಅವನು ಹಲವು ರೀತಿಯ ಬಾಂಧವ್ಯಗಳಲ್ಲಿ ಬದುಕುತ್ತಿರುತ್ತಾನೆ. ಅವನ ಹುಟ್ಟಿನ ಜೊತೆಗೇ ಅವನ ಸಂಬಂಧಗಳ ಹುಟ್ಟು ಕೂಡ ಆರಂಭವಾಗುತ್ತದೆ. ತಾಯಿ–ತಂದೆ, ಅಕ್ಕ–ಅಣ್ಣ, ಅಜ್ಜ–ಅಜ್ಜಿ – ಇಂಥ ರಕ್ತಸಂಬಂಧಗಳ ಜೊತೆಗೆ ಅವನು ಬೆಳೆಯುತ್ತಿದ್ದಂತೆ, ಮಾವ, ಹೆಂಡತಿ, ಗಂಡ, ನಾದಿನಿ, ಅಳಿಯ – ಇಂಥ ಹಲವು ಬಾಂಧವ್ಯಗಳ ಮೂಲಕ ಇನ್ನೂ ಹತ್ತಾರು ವಿಧದ ಸಂಬಂಧಗಳು ವಿಸ್ತರವಾಗುತ್ತಹೋಗುತ್ತವೆ. ನಮ್ಮ ಹುಟ್ಟಿನ ಜೊತೆಗೆ ಆಗುವಂಥದ್ದು ರಕ್ತಸಂಬಂಧ; ಇದಕ್ಕಾಗಿ ನಾವೇನೂ ಪರಿಶ್ರಮ ಪಡಬೇಕಿಲ್ಲ; ಸಹಜವಾಗಿಯೇ ಒದಗುವಂಥದ್ದು. ಅನಂತರದಲ್ಲಿ ಒಂದಾನೊಂದು ನಿಮಿತ್ತ ಕಾರಣದಿಂದ ಒದಗುವಂಥ ಸಂಬಂಧಗಳು. ಉದಾಹರಣೆಗೆ: ಗಂಡ–ಹೆಂಡತಿ ಮುಂತಾದವರು. ಈ ಸಂಬಂಧಗಳ ಮೂಲಕ ಇನ್ನಷ್ಟು ಬಾಂಧವ್ಯಗಳು. ಈ ಬಾಂಧವ್ಯಗಳ ವ್ಯಾಪ್ತಿಗೆ ಬಂದವರೆಲ್ಲರೂ ನಮಗೆ ‘ಬಂಧುಗಳು’ಎನಿಸಿಕೊಳ್ಳುತ್ತಾರೆ.

ಬಂಧುಗಳು ಎಂದರೆ ಯಾರು? ನಮ್ಮವರು, ನಮ್ಮ ಹತ್ತಿರದವರು; ನಮ್ಮ ಜೀವನದ ಎಲ್ಲ ಆಗುಹೋಗುಗಳೊಂದಿಗೂ ಸಾಧಕ–ಬಾಧಕಗಳ ನೇರ ಸಂಪರ್ಕವನ್ನು ಹೊಂದಿದವರು. ಎಂದರೆ ನಮ್ಮ ಬದುಕು, ಉತ್ಕರ್ಷ, ಸಂತೋಷ, ದುಃಖ, ಆರೋಗ್ಯ – ಹೀಗೆ ನಮ್ಮ ಜೀವನದ ಎಲ್ಲ ಕ್ಷಣಗಳೂ ಯಾರ ಬೆಂಬಲ, ಪ್ರಭಾವ, ಸಂಪರ್ಕಗಳಲ್ಲಿ ಇರುತ್ತವೆಯೋ ಅಂಥವರು ನಮ್ಮ ಬಂಧುಗಳು. ನಾವು ನಮ್ಮ ಸಂತೋಷವನ್ನೂ ದುಃಖವನ್ನೂ ಯಾರೊಂದಿಗೆ ಹಂಚಿಕೊಳ್ಳಬಲ್ಲೆವೋ, ಯಾರು ಅವರ ಸಂತೋಷ–ದುಃಖಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೋ, ಅಂಥವರು ನಮ್ಮ ಬಂಧುಗಳು.

ಆದರೆ ಸುಭಾಷಿತ ನಮ್ಮ ಬಾಂಧವ್ಯಗಳ ಲಕ್ಷಣವನ್ನು, ಸ್ವರೂಪವನ್ನು ಬೇರೆಯದೇ ರೀತಿಯಲ್ಲಿ ನಿರೂಪಿಸುತ್ತಿದೆ.

ಸಂತೋಷದಲ್ಲಿ ನಮ್ಮೊಂದಿಗೆ ಬಂಧುಗಳು ಇರಬಲ್ಲರು; ಆದರೆ ಅವರು ನಮ್ಮ ಕಷ್ಟದಲ್ಲೂ ಜೊತೆಯಲ್ಲಿ ನಿಲ್ಲಬಲ್ಲರೆ?

ಯಾರು ನಮ್ಮ ಕಷ್ಟದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಯೋ, ಅಂಥವರೇ ದಿಟವಾದ ನಮ್ಮ ಬಂಧುಗಳು – ಎನ್ನುತ್ತಿದೆ, ಸುಭಾಷಿತ. ನಮಗೆ ಕಷ್ಟ ಬರುವಂಥ ಕೆಲವು ಸಂದರ್ಭಗಳನ್ನೂ ಸುಭಾಷಿತ ಸೂಚಿಸುತ್ತಿದೆ. ಯುದ್ಧ, ದುಃಖ, ಬಡತನ, ಕಲಹ, ಸಾವು – ಇಂಥವು ನಮ್ಮನ್ನು ಕೇಳಿ ಬರುವಂಥ ಕಷ್ಟಗಳಲ್ಲ; ಇವು ಯಾವಾಗ ಬೇಕಾದರೂ ನಮ್ಮ ಮೇಲೆ ಎರುಗಬಹುದು. ಈ ಕಷ್ಟಗಳು ನಮ್ಮಲ್ಲಿಗೆ ಬಂದಾಗ ನಮ್ಮ ಜೊತೆ ನಿಲ್ಲಬಲ್ಲವರೇ ದಿಟವಾದ ಬಂಧುಗಳು – ಎನ್ನುತ್ತಿದೆ ಸುಭಾಷಿತ.

ಸದ್ಯದ ಪರಿಸ್ಥಿತಿಯಲ್ಲಿ ಈ ಸುಭಾಷಿತವನ್ನು ಮನನ ಮಾಡಿದಷ್ಟೂ ಹೆಚ್ಚೆಚ್ಚು ಅರ್ಥಗಳು ತೆರೆದುಕೊಳ್ಳುತ್ತವೆ, ಅಲ್ಲವೆ? ಸಾವನ್ನು ಕಂಡು ಓಡುತ್ತಿರುವ ರಕ್ತಸಂಬಂಧಗಳ ನಡುವೆ ದಿಟವಾದ ಬಾಂಧವ್ಯಗಳನ್ನು ಹುಡುಕಬೇಕಾದ ಕಾಲವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.