ADVERTISEMENT

ದಿನದ ಸೂಕ್ತಿ: ವಿದ್ಯೆ ಯಾವುದು?

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಜನವರಿ 2021, 4:43 IST
Last Updated 3 ಜನವರಿ 2021, 4:43 IST
shiva
shiva   

ಸೇವಧ್ವಂ ವಿಬುಧಾಸ್ತಮಂಧಕರಿಪುಂ ಮಾಕ್ಲಿಶ್ಯತಾನ್ಯಶ್ರುತೇ
ಯಸ್ಮಾದತ್ತ ಪರತ್ರ ಚ ತ್ರಿಜಗತಿ ತ್ರಾತಾ ಸ ಏಕಃ ಶಿವಃ ।
ಆಯಾತೇ ನಿಯತೇರ್ವತಶಾತ್‌ ಸ್ವವಿಷಯೇ ಕಾಲಾತ್‌ ಕರಾಲಾದ್ಭಯೇ
ಕುತ್ರ ವ್ಯಾಕರಣಂ ಕ್ವ ತರ್ಕಕಲಹಃ ಕಾವ್ಯಾಶ್ರಮಃ ಕ್ವಾಪಿ ವಾ ।।

ಇದರ ತಾತ್ಪರ್ಯ ಹೀಗೆ:‘ಎಲೈ ವಿದ್ವಾಂಸರೇ, ಅಂಧಕಾರಿಯಾದ ಆ ಮಹಾದೇವನನ್ನು ಸೇವಿಸಿ. ಬೇರೆ ಶಾಸ್ತ್ರಗಳಲ್ಲಿ ಕ್ಲೇಶ ಪಡಬೇಡಿ. ಏಕೆಂದರೆ ಶಿವನೊಬ್ಬನೇ ಈ ಲೋಕದಲ್ಲಿ, ಪರಲೋಕದಲ್ಲಿ ಮತ್ತು ಮೂರು ಲೋಕಗಳಲ್ಲಿಯೂ ರಕ್ಷಕ. ಭಯಂಕರನಾದ ಯಮನುವಿಧಿಯ ನಿಯಮದಂತೆ ಭಯಪಡಿಸಿದಾಗ ವ್ಯಾಕರಣ ಎಲ್ಲೋ? ತರ್ಕಶಾಸ್ತ್ರದ ಜಗಳ ಮತ್ತೆಲ್ಲೋ? ಕಾವ್ಯರಚನೆಯ ಪರಿಶ್ರಮ ಎಲ್ಲೋ?’

ವಿದ್ವತ್ತಿಗಿಂತಲೂ ದೇವರಲ್ಲಿ ಭಕ್ತಿ ದೊಡ್ಡದು ಎಂಬುದು ಈ ಸುಭಾಷಿತದ ಇಂಗಿತ.

ADVERTISEMENT

ಹತ್ತುಹಲವು ಶಾಸ್ತ್ರಗಳನ್ನು ಓದಿ, ದಣಿಯುವುದಕ್ಕಿಂತಲೂ ಮಹಾದೇವನನ್ನು ಸೇವಿಸಿ, ನಲಿಯಿರಿ ಎಂದು ಸುಭಾಷಿತ ಹೇಳುತ್ತಿದೆ. ಇಲ್ಲಿ ಮಹಾದೇವನನ್ನು ಅಂಧಕಾರಿ ಎಂದು ಕರೆದಿರುವುದು ಕೂಡ ಸ್ವಾರಸ್ಯಕರವಾಗಿದೆ. ಅಂಧಕ ಎಂಬ ಅಸುರನನ್ನು ಮಹಾದೇವ, ಎಂದರೆ ಶಿವನು ಕೊಂದ, ಹೌದು; ಹೀಗಾಗಿ ಅವನು ಅಂಧಕಾರಿ. ಅಂಧಕ – ಎಂದರೆ ಕಣ್ಣಿಲ್ಲದವನು ಎಂದೂ ಅರ್ಥವಿದೆ. ಕಣ್ಣಿಲ್ಲದವನ ಪಾಲಿಗೆ ಶಿವನು ಶತ್ರುವೇ ಸರಿ. ಜ್ಞಾನ ಎಂಬುದು ಕಣ್ಣಿನಂತೆ. ಯಾರಿಗೆ ಜ್ಞಾನ ಇಲ್ಲವೋ ಅವನಿಗೆ ಕಣ್ಣುಗಳು ಇಲ್ಲ ಎಂದೇ ಅರ್ಥ. ಇದರ ತಾತ್ಪರ್ಯ, ಅಜ್ಞಾನವನ್ನು ನಾಶ ಮಾಡುವವನೇ ಶಿವ ಎಂದಾಯಿತು.

ಶಿವ ಎಂದರೆ ಮಂಗಳಕರ ಎಂದು ಅರ್ಥ. ಸುಭಾಷಿತ ಇಲ್ಲಿ ಶಾಸ್ತ್ರವ್ಯಾಸಂಗವನ್ನೋ ಶಿಕ್ಷಣವನ್ನೋ ಬೇಡ ಎಂದು ಪ್ರತಿಪಾದನೆ ಮಾಡುತ್ತಿಲ್ಲ. ನಮ್ಮ ಜೀವನವನ್ನು ಮಂಗಳಮಯವನ್ನಾಗಿಸುವ ವ್ಯಾಸಂಗವನ್ನು ಅದು ಬೇಕು ಎನ್ನುತ್ತಿದೆ. ಯಮನ ದರ್ಶನ ಎಂದರೆ ನರಕದ ದರ್ಶನ. ನರಕ ಎಂದರೆ ಕಷ್ಟಗಳ ಪರಂಪರೆ. ಜೀವನದಲ್ಲಿ ನಮಗೆ ಕಷ್ಟಗಳು ಎದುರಾದಾಗ ಅದರಿಂದ ನಮ್ಮನ್ನು ಪಾರುಮಾಡಿಸಬಲ್ಲ ವಿದ್ಯೆ ಬೇಕೆ ಹೊರತು ಜೀವನಕ್ಕೆ ಪ್ರಯೋಜನಕ್ಕೆ ಬಾರದ ಪದವಿಗಳು ಬೇಡ ಎಂಬುದು ಇಲ್ಲಿರುವ ಧ್ವನಿ.

ನಮ್ಮ ಇಂದಿನ ಶಿಕ್ಷಣಪದ್ಧತಿಯ ಬಗ್ಗೆಯೂ ನಾವಿಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬಹುದು. ನಮ್ಮ ಓದು ನಮ್ಮ ಜೀವನದ ನಿಜವಾದ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒದಗುತ್ತಿದೆಯೆ – ಎಂದು ಆಲೋಚಿಸಬೇಕು. ನಮ್ಮ ಪದವಿಪತ್ರಗಳು ನಮ್ಮ ಜೀವನದ ನೆಮ್ಮದಿಗೆ ಒದಗುವ ಪ್ರಮಾಣಪತ್ರಗಳಾಗಿವೆಯೆ – ಎಂದೂ ಆಲೋಚಿಸಬೇಕು. ಜೀವನದ ಸತ್ಯ ಶಿವ ಸುಂದರಗಳನ್ನು ಒದಗಿಸಬಲ್ಲದ್ದೇ ದಿಟವಾದ ವಿದ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.