ADVERTISEMENT

ಉಡುಪಿ: ನರಸಿಂಹ ತೀರ್ಥರು ಮೊದಲ ಯತಿ

ಅದಮಾರು ಮಠದ ಪರ್ಯಾಯ ಮಹೋತ್ಸವ ಸಂಭ್ರಮ

ಬಾಲಚಂದ್ರ ಎಚ್.
Published 17 ಜನವರಿ 2020, 10:07 IST
Last Updated 17 ಜನವರಿ 2020, 10:07 IST
ಕೃಷ್ಣನ ಪೂಜೆ ಮಾಡುತ್ತಿರುವ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ
ಕೃಷ್ಣನ ಪೂಜೆ ಮಾಡುತ್ತಿರುವ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ   

ಉಡುಪಿ: ದ್ವೈತ ಮತ ಸಂಸ್ಥಾಪಕರಾದ ಮಧ್ವಾಚಾರ್ಯರು ಶ್ರೀಕೃಷ್ಣನ ಪೂಜೆ ಹಾಗೂ ತತ್ವ ಪ್ರಸಾರಕ್ಕಾಗಿ ಅಷ್ಟ ಯತಿಗಳನ್ನು ನಿಯೋಜಿಸಿದರು. ಅಷ್ಟ ಯತಿಗಳ ಪರಂಪರೆ ಕಾಲಾನುಕ್ರಮದಲ್ಲಿ ಅಷ್ಟ ಮಠಗಳಾಗಿ ಬೆಳೆಯಿತು. ಅಷ್ಟ ಯತಿಗಳು ಸರದಿ ಸಾಲಿನಲ್ಲಿ ಕೃಷ್ಣನ ಪೂಜಾ ಕೈಂಕರ್ಯ ಮಾಡುವ ಹೊಣೆ ಹೊತ್ತುಕೊಂಡು ಪರ್ಯಾಯ ಆಚರಣೆಗೆ ನಾಂದಿ ಹಾಡಿದರು.

ಶತಮಾನಗಳ ಇತಿಹಾಸ

ಕೃಷ್ಣಮಠದ ಪರ್ಯಾಯ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಆರಂಭದಲ್ಲಿ ಮಧ್ವಾಚಾರ್ಯರು ಪರ್ಯಾಯ ಅವಧಿಯನ್ನು 2 ತಿಂಗಳಿಗೆ ನಿಗದಿಗೊಳಿಸಿದ್ದರು. ಅದರಂತೆ ಒಮ್ಮೆ ಪರ್ಯಾಯ ಮುಗಿಸಿದ ಯತಿಗಳು ಮುಂದಿನ ಪರ್ಯಾಯಕ್ಕೆ 16 ತಿಂಗಳು ಕಾಯಬೇಕಿತ್ತು.

ADVERTISEMENT

ಬಳಿಕ ವಾದಿರಾಜರು ಪರ್ಯಾಯ ಪದ್ಧತಿ ಅವಧಿಯನ್ನು 2 ವರ್ಷಗಳಿಗೆ ಏರಿಸಿದರು. ನಾಡಿನೆಲ್ಲೆಡೆ ತತ್ವಜ್ಞಾನ ಪ್ರಸಾರಕ್ಕೆ ಯತಿಗಳಿಗೆ ಕಾಲಾವಕಾಶ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಒಮ್ಮೆ ಪರ್ಯಾಯ ಚಕ್ರ ಪೂರ್ಣಗೊಳ್ಳಬೇಕಾದರೆ 16 ವರ್ಷಗಳು ಬೇಕಾಗುತ್ತದೆ.

ಮಧ್ವಾಚಾರ್ಯರಿಂದ ಸನ್ಯಾಸ ಧೀಕ್ಷೆ ಪಡೆದ ಅನುಕ್ರಮದಂತೆಯೇ ಪರ್ಯಾಯ ನಡೆಯುತ್ತಾ ಬಂದಿರುವುದು ವಿಶೇಷ. ಆಚಾರ್ಯರಿಂದ ಮೊದಲ ಸನ್ಯಾಸ ಧೀಕ್ಷೆ ಪಡೆದವರು ಪಲಿಮಾರು ಮಠದ ಹೃಷಿಕೇಶ ತೀರ್ಥರಾದರೆ, ಕೊನೆಯ ಧೀಕ್ಷೆ ಪಡೆದವರು ಪೇಜಾವರ ಮಠದ ಅಧೋಕ್ಷಜ ತೀರ್ಥರು. ಈ ಪದ್ಧತಿಯಂತೆಯೇ ಪಲಿಮಾರು ಮಠದಿಂದ ಆರಂಭವಾಗುವ ಪರ್ಯಾಯ ಪೇಜಾವರ ಮಠಕ್ಕೆ ಮುಕ್ತಾಯವಾಗುತ್ತದೆ.

ಜ.18, 2018ಕ್ಕೆ ಆರಂಭವಾಗಿದ್ದ ಪಲಿಮಾರು ಪರ್ಯಾಯ ಇದೇ ಜ.17ಕ್ಕೆ ಮುಕ್ತಾಯವಾಗಲಿದೆ. ಬಳಿಕ ಅದಮಾರು ಪರ್ಯಾಯ ಆರಂಭವಾಗಲಿದ್ದು, ಜ.18, 2022ರವರೆಗೂ ನಡೆಯಲಿದೆ. ಅದಮಾರು ಮಠದ ಗುರು ಪರಂಪರೆಯಲ್ಲಿ ಈಶಪ್ರಿಯ ತೀರ್ಥರು 33ನೇ ಯತಿಗಳು.

2 ವರ್ಷಗಳ ಪರ್ಯಾಯ ಅವಧಿಯಲ್ಲಿ ಕೃಷ್ಣಮಠದ ಸಂಪೂರ್ಣ ಆಡಳಿತದ ಹೊಣೆಗಾರಿಕೆ ಪರ್ಯಾಯ ಶ್ರೀಗಳಿಗೆ ಸೇರಿರುತ್ತದೆ. ಈ ಅವಧಿಯಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳು ನಡೆಯುತ್ತವೆ. ಪ್ರತಿ ಪರ್ಯಾಯದ ಅವಧಿಯಲ್ಲಿಯೂ ಹೊಸ ಯೋಜನೆಗಳು ಜಾರಿಯಾಗುವುದು ವಿಶೇಷ.

ಅದರಂತೆ ಈ ಪರ್ಯಾಯದ ಅವಧಿಯಲ್ಲಿ ಅದಮಾರು ಶ್ರೀಗಳು ಭಕ್ತರ ದಾಸೋಹ ಹಾಗೂ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದ್ದಾರೆ. ಅದರ ಮುನ್ನುಡಿಯಂತೆ ಪರ್ಯಾಯ ಆರಂಭದಲ್ಲೇ ಪುರಪ್ರವೇಶ ವೇಳೆ ಮಂಟಪ, ಕಮಾನು, ಚಪ್ಪರಗಳಿಗೆ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೆ ಮಾದರಿಯಾಗಿದ್ದಾರೆ.

ಜತೆಗೆ, ಪರ್ಯಾಯದ ಅವಧಿಯಲ್ಲಿ ಭಕ್ತರ ಪ್ರಸಾದಕ್ಕೆ ಸಾವಯವ ಆಹಾರ ಪದಾರ್ಥಗಳ ಬಳಕೆಗೆ ಯೋಜನೆ ರೂಪಿಸಿದ್ದಾರೆ. ಸಾವಯವ ಭತ್ತದ ತಳಿ ಉಳಿಸಿ ಬೆಳೆಸುವ ಕಾರ್ಯವನ್ನೂ ಮಾಡುತ್ತಿದ್ದು, ರೈತರಿಗೆ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವೂ ನಡೆದಿದೆ.

ಪಟ್ಟದ ದೇವರು

ಕಾಳೀಯ ಮರ್ಧನ ಅದಮಾರು ಮಠದ ಪಟ್ಟದ ದೇವರು. ಹಾವಿನ ಹೆಡೆಯ ಮೇಲೆ ನೃತ್ಯ ಮಾಡುತ್ತಿರುವ ಕೃಷ್ಣನ ಒಂದು ಕೈನಲ್ಲಿ ಹಾವಿನ ಬಾಲವಿದ್ದರೆ, ಮತ್ತೊಂದು ಕೈ ನಾಟ್ಯದ ಭಂಗಿಯಲ್ಲಿದೆ. ಎರಡು ಕೈಗಳಲ್ಲಿ ಶಂಕ ಚಕ್ರ ಧಾರಿಯಾಗಿ ನಿಂತಿದ್ದು, ಆಕರ್ಷಕವಾಗಿದೆ.

ಸರ್ವಜ್ಞ ಪೀಠವೇರುವ ಕಿರಿಯ ಯತಿ

ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ತಮ್ಮ ಉತ್ತರಾಧಿಕಾರಿ ಕಿರಿಯ ಯತಿ ಈಶಪ್ರಿಯ ತೀರ್ಥರಿಗೆ ಈ ಬಾರಿಯ ಪರ್ಯಾಯದ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಮಠದ ಆಡಳಿತದ ಉಸ್ತುವಾರಿ ಹಾಗೂ ಇತರೆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ 2 ಪರ್ಯಾಯಗಳನ್ನು ಮುಗಿಸಿದ್ದೇನೆ. ಹಿರಿಯ ಶ್ರೀಗಳು ಸಹ ಎರಡು ಪರ್ಯಾಯ ನಡೆಸಿ ನಮಗೆ ಅವಕಾಶ ಕೊಟ್ಟಿದ್ದರು. ಅವರ ಹಾದಿಯಲ್ಲಿಯೇ ಸಾಗುತ್ತಿದ್ದು ಕಿರಿಯರಿಗೆ ಪಟ್ಟ ಬಿಟ್ಟುಕೊಟ್ಟಿದ್ದೇನೆ ಎಂದು ವಿಶ್ವಪ್ರಿಯ ತೀರ್ಥರು ಘೋಷಿಸಿದ್ದಾರೆ.

ಅದಮಾರು ಮಠದ ಗುರುಪರಂಪರೆ

ನರಸಿಂಹ ತೀರ್ಥರು

ಕಮಲೇಕ್ಷಣ ತೀರ್ಥರು

ರಾಮಚಂದ್ರ ತೀರ್ಥರು

ವಿದ್ಯಾಧೀಶ ತೀರ್ಥರು

ವಿಶ್ವಪತಿ ತೀರ್ಥರು

ವಿಶ್ವೇಶ ತೀರ್ಥರು

ವೇದನಿಧಿತೀರ್ಥರು

ವೇದರಾಜತೀರ್ಥರು

ವಿದ್ಯಾಮೂರ್ತಿತೀರ್ಥರು

ವೈಕುಂಠರಾಜತೀರ್ಥರು

ವಿಶ್ವರಾಜತೀರ್ಥರು

ವೇದಗರ್ಭತೀರ್ಥರು

ಹಿರಣ್ಯಗರ್ಭತೀರ್ಥರು

ವಿಶ್ವಾದ್ಯಧೀಶತೀರ್ಥರು

ವಿಶ್ವವಲ್ಲಭತೀರ್ಥರು

ವಿಶ್ವೇಂದ್ರತೀರ್ಥರು

ವೇದನಿಧಿತೀರ್ಥರು

ವಾದೀಂದ್ರತೀರ್ಥರು

ವಿದ್ಯಾಪತಿತೀರ್ಥರು

ವಿಬುಧಪತಿತೀರ್ಥರು

ವೇದವಲ್ಲಭತೀರ್ಥರು

ವೇದವಂದ್ಯತೀರ್ಥರು

ವಿದ್ಯೇಶತೀರ್ಥರು

ವಿಬುಧವಲ್ಲಭತೀರ್ಥರು

ವಿಬುಧವಂದ್ಯತೀರ್ಥರು

ವಿಬುಧವರ್ಯತೀರ್ಥರು

ವಿಬುಧೇಂದ್ರತೀರ್ಥರು

ವಿಬುಧಾಧಿರಾಜತೀರ್ಥರು

ವಿಬುಧಪ್ರಿಯತೀರ್ಥರು

ವಿಬುಧಮಾನ್ಯತೀರ್ಥರು

ವಿಬುಧೇಶತೀರ್ಥರು

ವಿಶ್ವಪ್ರಿಯತೀರ್ಥರು‌ (ಪ್ರಸ್ತುತ)

ಈಶಪ್ರಿಯತೀರ್ಥರು(ಪ್ರಸ್ತುತ ಪರ್ಯಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.