ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವನ ಶಬ್ದಬ್ರಹ್ಮ ಸ್ವರೂಪ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 6 ಏಪ್ರಿಲ್ 2022, 19:30 IST
Last Updated 6 ಏಪ್ರಿಲ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಆ ಗೋಳದಿಂದ ನಾಲ್ಕು ಮುಖಗಳುಳ್ಳ ಬ್ರಹ್ಮ ಜನಿಸಿದ. ಅವನು ಸಕಲ ಜಗತ್ತುಗಳಿಗೆ ಸೃಷ್ಟಿಕರ್ತ ಮತ್ತು ಲಯಸ್ಥಿತಿಗಳನ್ನೂ ಮಾಡುವವನು ಎಂದು ಓಂಕಾರಸ್ವರೂಪದ ಬಗ್ಗೆ ಯಜುರ್ವೇದದಲ್ಲಿ ಹೇಳಿದೆ. ‘ಎಲೈ, ಬ್ರಹ್ಮ ಮತ್ತು ಹರಿಗಳೆ! ಓಂಕಾರಸ್ವರೂಪವು ಹೇಗಿರುವುದೆಂಬುದನ್ನು ಯಜುರ್ವೇದ ವಾಕ್ಯದ ಮೂಲಕ ತಿಳಿದುಕೊಂಡಿರಿ’ ಎಂದು ಲಿಂಗದಲ್ಲಿ ಕಾಣಿಸಿದ ಯೋಗಿಶಿವ ಹೇಳಿದ.

‘ಎಲೈ ನಾರದ, ಇದರ ಮಧ್ಯೆ ನನಗೂ ಜಗತ್ಪಾಲಕನಾದ ಹರಿಗೂ ಇನ್ನೊಂದು ಅದ್ಭುತವಾದ ಸ್ವರೂಪ ಕಾಣಿಸಿತು. ಅದಕ್ಕೆ ಐದು ಮುಖಗ ಳಿತ್ತು. ಹತ್ತು ಕೈಗಳಿದ್ದವು. ಶರೀರವು ಬಿಳಿಯವರ್ಣದಿಂದ ಕಾಂತಿಯುತ ವಾಗಿತ್ತು. ಬಗೆಬಗೆಯ ಆಭರಣಗಳಿಂದ ಅಲಂಕೃತವಾಗಿತ್ತು. ಮಹಾಪುರು ಷನ ಲಕ್ಷಣಗಳಿಂದ ಶೋಭಿಸುತ್ತಲಿತ್ತು. ಇಂತಹ ಸ್ವರೂಪವನ್ನು ನೋಡಿ ನಾನೂ ಮತ್ತು ಹರಿ ಇಬ್ಬರೂ ಧನ್ಯರಾದೆವು. ನಂತರ ಮಹಾದೇವನು ಪ್ರಸನ್ನನಾಗಿ ದಿವ್ಯವಾದ ತನ್ನ ಶಬ್ದಬ್ರಹ್ಮಸ್ವರೂಪವನ್ನು ಬೀರುತ್ತಾ ಅಲ್ಲಿ ನಿಂತ.

‘ಅಕಾರವು ಶಿವನ ಶಿರಸ್ಸು. ಆಕಾರವು ಹಣೆಯು, ಇಕಾರವು ಬಲಗಣ್ಣು, ಈಕಾರವು ಎಡಗಣ್ಣು. ದೇವದೇವನೂ ಶಬ್ದಬ್ರಹ್ಮಸ್ವರೂಪನೂ ಆದ ಆ ಶಿವನ ಬಲ ಕಿವಿಯು ಉಕಾರವು. ಊಕಾರವು ಎಡಗಿವಿಯು, ಋಕಾರವು ಬಲಗೆನ್ನೆಯು, ಎಡಗೆನ್ನೆಯು ಋಕಾರ. ಏಕಾರವು ಮೆಲುದುಟಿಯು, ಐಕಾರವು ಕೆಳದುಟಿಯು, ಓ ಔಕಾರಗಳೆರಡೂ ಕ್ರಮವಾಗಿ ಮೇಲುಕೆಳಗಿನ ಎರಡು ದಂತಪಂಕ್ತಿಗಳು, ಅಂ ಅಃ ಎಂಬ ಅಕ್ಷರಗಳು ಶಿವನ ಎರಡು ದವಡೆಗಳು. ಕಕಾರಾದಿ ಐದು ಅಕ್ಷರಗಳು ಮಹಾದೇವನ ಐದು ಬಲಗೈ ಗಳು. ಚಕಾರಾದಿ ಐದು ಅಕ್ಷರಗಳು ಐದು ಎಡಗೈಗಳು. ಟಕಾರಾದಿ ಐದು ಅಕ್ಷರಗಳು ಐದು ಬಲಗಾಲುಗಳು. ತಕಾರಾದಿ ಐದು ಅಕ್ಷರಗಳು ಎಡಗಾಲುಗಳು. ಪಕಾರವು ಹೊಟ್ಟೆಯು. ಫಕಾರವು ಶರೀರದ ಬಲಭಾಗ. ಬಕಾರವು ಎಡಭಾಗವು. ಭಕಾರವು ಭುಜವು. ಮಕಾರವು ಹೃದಯವು. ಯಕಾರ ಮೊದಲುಗೊಂಡು ಸಕಾರದವರೆಗಿನ ಏಳು ಅಕ್ಷರಗಳು ಮಹಾ ಯೋಗಿಯೂ, ಮಹಾದೇವನು ಆದ ಶಿವನ ಏಳು ಧಾತುಗಳು. ಹಕಾರವು ನಾಭಿಯು. ಕ್ಷಕಾರವು ಘ್ರಾಣೇಂದ್ರಿಯವಾಗಿತ್ತು.

ADVERTISEMENT

‘ಎಲೈ ನಾರದ. ಹೀಗೆ ನಿರ್ಗುಣನಾದರೂ, ಮಾಯಾಮಯವಾದ ಗುಣಗಳುಳ್ಳ ಶಿವನು ಉಮೆಯೊಡನಿರುವ ಶಬ್ದಬ್ರಹ್ಮಸ್ವರೂಪವನ್ನು ನೋಡಿ ನಾನೂ ಹರಿಯೂ ಕೃತಾರ್ಥರಾದೆವು. ನಂತರ ಮತ್ತೆ ಮೇಲ್ಭಾಗದಲ್ಲಿ ಓಂಕಾರದಿಂದ ಜನಿಸಿದಂತಹ, ಐದು ಕಲೆಗಳುಳ್ಳ, ಮೂವತ್ತೆಂಟು ಅಕ್ಷರಗಳುಳ್ಳ, ಶುದ್ಧಸ್ಫಟಿಕದಂತೆ ಶುಭ್ರವಾದ ಮಂತ್ರಸ್ವರೂಪವನ್ನು ನೋಡಿದೆವು. ಆನಂತರ ಬುದ್ಧಿಸ್ವರೂಪವಾದ, ಸಕಲ ಧರ್ಮ ಮತ್ತು ಅರ್ಥಗಳನ್ನುಂಟು ಮಾಡುವ, ಗಾಯತ್ರಿಯಿಂದ ಜನಿಸಿದಂತಹ ಇಪ್ಪತ್ತ ನಾಲ್ಕು ಅಕ್ಷರಗಳ ಮಂತ್ರಸ್ವರೂಪವೊಂದನ್ನು ನೋಡಿದೆವು. ಅದನ್ನ ಜಪಿಸಿದರೆ ಸಕಲವೂ ವಶವಾಗುವುದು. ಅದಕ್ಕೆ ನಾಲ್ಕು ಪಾದಗಳಿದ್ದವು. ಆ ಮಂತ್ರಕ್ಕೆ ಚತುಷ್ಕಾಲಮಂತ್ರವೆಂದು ಹೆಸರು.

‘ಮತ್ತೆ ಎಂಟು ಪಾದಗಳುಳ್ಳ, ಮೂವತ್ತು ಅಕ್ಷರಗಳುಳ್ಳಂತಹ ಪಂಚಸಿತವೆಂಬ ಮಂತ್ರಸ್ವರೂಪವೊಂದನ್ನು ನೋಡಿದೆವು. ಅದು ಶತ್ರುಹಿಂಸೆ ಮುಂತಾದ ಅಭಿಚಾರಗಳಿಗೆ ಉಪಯೋಗವಾದುದು. ಯಜುರ್ವೇದದಲ್ಲಿ ಪ್ರಸಿದ್ಧವಾದ ಇಪ್ಪತ್ತೈದು ಅಕ್ಷರಗಳುಳ್ಳ, ಎಂಟು ಕಲೆಗಳುಳ್ಳಂತಹ, ಇನ್ನೊಂದು ಶುದ್ಧಮಂತ್ರಸ್ವರೂಪವನ್ನು ನೋಡಿದೆವು. ಅದು ಶಾಂತಿಕರ್ಮದಲ್ಲಿ ಉಪಯುಕ್ತವಾದುದು. ಮೃತ್ಯುಂಜಯಮಂತ್ರ, ಶಿವಪಂಚಾಕ್ಷರೀಮಂತ್ರ, ಚಿಂತಾಮಣಿಮಂತ್ರ, ದಕ್ಷಿಣಾಮೂರ್ತಿಮಂತ್ರ, ‘ತತ್ವಮಸಿ’ ಎಂಬ ಶಿವನ ಅದ್ವೈತ ಮಹಾವಾಕ್ಯಗಳ ಸ್ವರೂಪವೂ ನಮಗೆ ಲಭಿಸಿತು. ಆ ಬಳಿಕ, ಭಗವಾನ್ ಹರಿಯು ಆ ಐದು ಮಂತ್ರಗಳನ್ನು ಪಡೆದು ಜಪಿಸಿದ. ಆನಂತರ ನಾನು ಮತ್ತು ವಿಷ್ಣು ಋಗ್ವೇದ, ಯಜುರ್ವೇದ, ಸಾಮವೇದ ಇವುಗಳ ಸ್ವರೂಪಿಯಾದ ಶಿವನ ಶಬ್ದಬ್ರಹ್ಮಸ್ವರೂಪವನ್ನು ನೋಡಿದೆವು. ಸರ್ವೇಶ್ವರನೂ ಮಾಯಾಮಯವಾದ ಜೀವಸ್ವರೂಪವುಳ್ಳವನೂ ಉತ್ಪತ್ತಿಯಿಲ್ಲದವನೂ ಶಾಂತಸ್ವರೂಪನೂ ಮನೋಹರನೂ ಪರಮರಹಸ್ಯನೂ ಸದಾ ಮಂಗಳಸ್ವರೂಪನೂ ದೇವದೇವನೂ ದುಷ್ಟಶಿಕ್ಷಕನೂ ಸರ್ಪರಾಜನ ಅಲಂಕಾರವುಳ್ಳವನೂ ದಿಕ್ಕುದಿಕ್ಕುಗಳನ್ನು ವ್ಯಾಪಿಸಿದ, ವಿರಾಟ್ ಸ್ವರೂಪನೂ ಸೃಷ್ಟಿಕರ್ತರಾದವನಿಗೂ ಒಡೆಯನೂ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನೂ ಎಲ್ಲಾ ಇಷ್ಟಾರ್ಥಗಳನ್ನು ಭಕ್ತರಿಗೆ ಅನುಗ್ರಹಿಸುವವನೂ ಆದಂತಹ, ಪಾರ್ವತಿಯೊಡನಿರುವ ಶಿವನನ್ನು ಪ್ರಿಯವಾದ ವಾಕ್ಯಗಳಿಂದ ನಾವಿಬ್ಬರು ಸಂತೋಷವಾಗಿ ಸ್ತುತಿಸಿದೆವು ಎಂದು ಬ್ರಹ್ಮನು ನಾರದನಿಗೆ ಹೇಳುವುದರೊಂದಿಗೆ ಸೃಷ್ಟಿಖಂಡದಲ್ಲಿ ಎಂಟನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.