
ಶಬರಿಮಲೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದಟ್ಟ ಕಾನನದ ನಡುವಿನ ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಮಾಲೆ ಧರಿಸಿ ಭೇಟಿ ನೀಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಆದರೆ, ಈ ಅಯ್ಯಪ್ಪನ ಮಾಲೆ ಧರಿಸುವುದು ಒಂದು ಕಠಿಣ ವ್ರತವಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ನೋಡೋಣ.
ಮಾಲಾಧಾರಣೆ ಹೇಗೆ?
ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಮಾಲಾಧಾರಣೆ ಮಾಡಿಕೊಳ್ಳುತ್ತಾರೆ. ಇದಾದ ಬಳಿಕ ಮಾಲಧಾರಿಯಾದವರು ಕಟ್ಟುನಿಟ್ಟಿನ ವ್ರತಾಚರಣೆ ಮಾಡಬೇಕು. ಮಾಲಾಧಾರಣೆಯ ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬಾರದು. ಹಗಲಿನಲ್ಲಿ ಮಲಗಬಾರದು. ಜೊತೆಗೆ ಅಪವಿತ್ರ ಸ್ಥಳಗಳಿಗೆ ಹೋಗಬಾರದು. ಗುರುಸ್ವಾಮಿಯಾದವರು ಪ್ರತಿಯೊಬ್ಬರಿಗೂ ಮಾಲಾಧಾರಣೆ ಮಾಡುತ್ತಾರೆ. ಒಮ್ಮೆ ಧರಿಸಿದ ಮಾಲೆಯನ್ನು ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಹೋಗುವವರೆಗೂ ತೆಗೆಯಬಾರದು.
ಮಾಲಾಧಾರಣೆಯಾದವರು ಕಪ್ಪು ಅಂಗಿ, ಶಾಲು ಹಾಗೂ ಪಂಚೆ ಧರಿಸುತ್ತಾರೆ. ಇದರ ಜೊತೆಗೆ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬಹುದು. ಮಾಲಾಧಾರಣೆಯಾದ ಮೇಲೆ ‘ಸ್ವಾಮಿ’ ಎಂದು ಇತರರನ್ನು ಸಂಭೋದಿಸುವುದು ಪದ್ದತಿ. ಈ ಅವಧಿಯಲ್ಲಿ ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದನ್ನು ಸಹ ಮಾಡುವಂತಿಲ್ಲ.
ವ್ರತಾಚರಣೆ ಹೇಗಿರುತ್ತದೆ?
ಮಾಲೆ ಹಾಕಿದ ಭಕ್ತರು ಅಯ್ಯಪ್ಪನಲ್ಲಿ ನಂಬಿಕೆ ಇಟ್ಟು ಪೂಜಿಸಬೇಕಾಗುತ್ತದೆ. ಮಾಲಾಧಾರಿಗಳು ಕೊರೆಯುವ ಚಳಿಯಲ್ಲಿ ತಣ್ಣೀರಿನ ಸ್ಥಾನ ಮಾಡಬೇಕು. ವ್ರತ ಮುಗಿಯುವವರೆಗೆ ಚಪ್ಪಲಿ, ಮಾಂಸಾಹಾರ ಹಾಗೂ ಐಷಾರಾಮಿ ಜೀವನ ಶೈಲಿ ತ್ಯಜಿಸಬೇಕು. ದುಶ್ಚಟಗಳಿಂದ ಕಟ್ಟುನಿಟ್ಟಾಗಿ ದೂರವಿರಬೇಕಾಗುತ್ತದೆ.
ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಬೇಡಿಕೆ ಇಟ್ಟು ಮಾಲೆ ಹಾಕುವ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಬಾಯಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆ ಹೇಳುತ್ತಿರುತ್ತಾರೆ.
ಒಟ್ಟಾರೆಯಾಗಿ 41 ದಿನಗಳ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಸಾಧ್ಯವಾದಷ್ಟು ದೇವರ ಭಜನೆ, ಪೂಜೆ, ದೇವರ ನಾಮ ಸ್ಮರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಗುರುಸ್ವಾಮಿ:
ಮಾಲೆ ಧರಿಸುವವರಿಗೆ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಒಬ್ಬ ವ್ಯಕ್ತಿ ಸತತ 5 ವರ್ಷಗಳ ಮಾಲೆ ಧರಿಸಿದ ನಂತರ ಅಂದರೆ ಐದು ಬಾರಿ ಮಕರ ಸಂಕ್ರಾತಿಯಂದು ಜ್ಯೋತಿಯ ದರ್ಶನ ಪಡೆಯಬೇಕು. ಗುರುಗಳ ಉಪಸ್ಥಿತಿಯಲ್ಲಿ ದೀಕ್ಷೆ ಪಡೆದ ಬಳಿಕ ಗುರುಸ್ವಾಮಿ ಸ್ಥಾನ ದೊರೆಯುತ್ತದೆ.
ಗುರುಸ್ವಾಮಿ ಪ್ರತಿ ವರ್ಷ ಒಬ್ಬ ಕನ್ನಿ ಸ್ವಾಮಿಯೊಂದಿಗೆ ಶಬರಿಮಲೆಗೆ ಹೋಗಬೇಕಾಗುತ್ತದೆ. ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡುವುದು, ಒಳಿತು ಕೆಡುಕುಗಳನ್ನು ತಿಳಿಸುವ ಜವಾಬ್ದಾರಿ ಗುರು ಸ್ವಾಮಿಯ ಮೇಲಿರುತ್ತದೆ.
ಮಾಲಾಧಾರಿಗಳು ಹಾಸಿಗೆ ಮೇಲೆ ಮಲಗಬಾರದು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ತಲೆ ಅಥವಾ ದೇಹಕ್ಕೆ ಎಣ್ಣೆ ಹಚ್ಚಬಾರದು. ಇದರ ಜೊತೆಗೆ ಆಡಂಬರದ ಬದುಕಿನಿಂದ ದೂರ ಉಳಿದು ಸಾಧ್ಯವಾದಷ್ಟು ಸರಳವಾಗಿರಬೇಕು.
ಹಣೆಯ ಮೇಲೆ ಸದಾ ಗಂಧವನ್ನು ಹಚ್ಚಿಕೊಂಡಿರಬೇಕು. ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡುವವರು ಕಪ್ಪು ಬಣ್ಣದ ಜೋಳಿಗೆ ಹಾಕಿಕೊಳ್ಳಬೇಕು. 3ನೇ ಬಾರಿ ಭೇಟಿ ನೀಡುವವರು ನೀಲಿ ಬಣ್ಣದ ಜೋಳಿಗೆ ಧರಿಸಬೇಕು ಎಂಬ ನಿಯಮವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.