ADVERTISEMENT

ಸಮಾನತೆಯ ಹೊಸ ಯುಗ ಸೃಷ್ಟಿಸಿದ ಬಸವಣ್ಣ

ಮಹಾಂತ ಸ್ವಾಮೀಜಿ ಮುದಗಲ್
Published 26 ಆಗಸ್ಟ್ 2022, 16:11 IST
Last Updated 26 ಆಗಸ್ಟ್ 2022, 16:11 IST
ಮಹಾಂತ ಸ್ವಾಮೀಜಿ ಮುದಗಲ್
ಮಹಾಂತ ಸ್ವಾಮೀಜಿ ಮುದಗಲ್   

ಕಲ್ಯಾಣವೆಂದರೆ ಅದು ಬಸವನಕಲ್ಯಾಣ. ಸಮಾನತೆಯ ಹೊಸ ಯುಗ ಸೃಷ್ಟಿಸಿದ ಪ್ರಧಾನಮಂತ್ರಿ ಬಸವಣ್ಣನವರು ಕಲ್ಯಾಣದ ಎಲ್ಲ ಜನತೆಗೆ ಗೌರವದ ವ್ಯಕ್ತಿಯಾಗಿದ್ದರು. ಆದ್ದರಿಂದ ಇವರನ್ನು ಅಣ್ಣ ಬಸವಣ್ಣನವರು ಎನ್ನುತ್ತಿದ್ದರು. ಹೀಗಾಗಿ ಅಲ್ಲಿನ ಶರಣರನ್ನು ಬಸವಾದಿ ಶಿವಶರಣರು ಎಂದರು. ಅನುಭವ ಮಂಟಪದ ಶರಣರು ಬಸವಣ್ಣನವರಿಗೆ ತಮ್ಮನ್ನು ತಾವು ಎಷ್ಟು ಅರ್ಪಿಸಿಕೊಂಡಿದ್ದರೆಂಬುದಕ್ಕೆ, ಶರಣರಾದ ಸಮಗಾರ ಹರಳಯ್ಯ ದಂಪತಿ ಮಾದರಿಯಾಗಿದ್ದಾರೆ.

ಕಲ್ಯಾಣದಲ್ಲಿ ಬಸವರಸರು ರಾಜ ಬೀದಿಯಿಂದ ಬರುವಾಗ ದಿನನಿತ್ಯವೂ ಹಬ್ಬದ ವಾತಾವರಣವೇ ಏರ್ಪಡುತ್ತಿತ್ತು. ಒಮ್ಮೆ ಶ್ವೇತ ಅಶ್ವವನ್ನೇರಿ ರಾಜ ಬೀದಿಯಲ್ಲಿ ಬರುವಾಗ ಶರಣರಾದಿಯಾಗಿ ಸಮಸ್ತ ಕಲ್ಯಾಣದ ಜನತೆ ಶರಣು ಸಮರ್ಪಣೆಯನ್ನು ಸಲ್ಲಿಸುತ್ತಿತ್ತು. ಪ್ರತಿಯಾಗಿ ಬಸವಣ್ಣನವರು ತಲೆಬಾಗಿ ಪ್ರತಿ ಶರಣು ಹೇಳುತ್ತಿದ್ದರು. ಹೀಗಿರುವಾಗ ಹರಳಯ್ಯ ದಂಪತಿ ಬಸವಣ್ಣನವರು ಹೋಗುವ ಮಾರ್ಗ ಮಧ್ಯದಲ್ಲಿ ನಿಂತು ಭಾವುಕ ಭಕ್ತಿಯಿಂದ ಬಸವಯ್ಯಾ ಶರಣು ಶರಣು ಎಂದಾಗ ಅವರ ಭಾವುಕ ಭಕ್ತಿಯಲ್ಲಿ ಭಯವಿದ್ದದನ್ನು ಕಂಡ ಬಸವಣ್ಣನವರು ಅಶ್ವವನ್ನು ಇಳಿದು ಹರಳಯ್ಯನವರ ಹತ್ತಿರಕ್ಕೆ ಬಂದು ಕಲ್ಯಾಣದ ಪ್ರಧಾನಮಂತ್ರಿ ತಲೆಬಾಗಿ ಕೈಮುಗಿದು ‘ಶರಣು ಶರಣಾರ್ಥಿ ಶರಣು ಶರಣಾರ್ಥಿ’ ಎಂದು ಎರಡು ಸಲ ಹೇಳಿದರು. ಇದು ಹರಳಯ್ಯನವರಿಗೆ ಭೂಮಿಭಾರದ ಶರಣಾರ್ಥಿಯಂತೆ ಗೋಚರವಾಯಿತು.

ನಾನು ಒಂದು ಬಾರಿ ಶರಣು ಎಂದರೆ, ಬಸವಣ್ಣನವರು ಎರಡುಬಾರಿ ‘ಶರಣು ಶರಣಾರ್ಥಿ’ ಹೇಳಿದರು. ಅಂತಹ ಮಹಾನುಭಾವರಿಂದ ನಮ್ಮಂತವರು ಎರಡು ಬಾರಿ ಶರಣಾರ್ಥಿ ಹೆಳಿಸಿಕೊಂಡದ್ದು ತಪ್ಪು. ಈ ತಪ್ಪಗೆ ನಾವು ಕ್ಷಮೆ ಹೇಗೆ ಯಾಚಿಸಬೇಕೆಂದು ವಿಚಾರಿಸಿದರು. ಪತ್ನಿಯ ಒಡಗೂಡಿ ಚಿಂತಿಸಿ ಕೊನೆಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅದುವೇ ಹರಳಯ್ಯನವರ ಬಲತೊಡೆಯ ಚರ್ಮ, ಕಲ್ಯಾಣಮ್ಮನವರ ಎಡತೊಡೆಯ ಚರ್ಮದಿಂದ ಕುಸರಿ ಕಲೆಯಿಂದ ಸಿದ್ಧಪಡಿಸಿದ ‘ಚಮ್ಮಾವುಗೆ’. ಇವುಗಳನ್ನು ತಂದು ಬಸವಣ್ಣನವರ ಮುಂದಿಟ್ಟದ್ದು ಎಂಥಹ ಅರ್ಪಣಾ ಮನೋಭಾವ ಎನ್ನುವುದು ಯೋಚನೆಗೆ ಮೀರಿದ್ದಾಗಿದೆ. ಈ ಜೋಡಗಳನ್ನು ನೋಡಿದ ಬಸವಣ್ಣನವರು ಇದು ಎಂತಹ ಕಾರ್ಯ ನಿಮ್ಮದು, ನೀವು ಮಾಡಿದ ಈ ಜೋಡುಗಳು ಕೂಡಲಸಂಗಮದೇವನಿಗೆ ಅರ್ಪಿತವಾಗುವಂತಹದ್ದು, ನನಗಲ್ಲ ಎಂದು ಎರಡು ಜೋಡನ್ನು ತಲೆಯ ಮೇಲಿಟ್ಟುಕೊಂಡು ಶರಣರ ಅರ್ಪಣಾ ಮನೋಭಾವಕ್ಕೆ ಶರಣಾರ್ಥಿಗಳನ್ನು ಹೇಳಿ ಆನಂದಭಾಷ್ಪ ಸುರಿಸಿ ಹರಳಯ್ಯನವರನ್ನು ಕೊಂಡಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.