ADVERTISEMENT

ಪಂಚಮಿಗೆ ಮುಂಚೆ ‘ಕಾಯಿ ಗುದ್ದಿ’!

ಸ್ವರೂಪಾನಂದ ಎಂ.ಕೊಟ್ಟೂರು
Published 13 ಜುಲೈ 2020, 19:30 IST
Last Updated 13 ಜುಲೈ 2020, 19:30 IST
ಕಾಯಿ ಗುದ್ದುವ ಸ್ಪರ್ಧೆಗೆ ಬಳಸುವ ತೆಂಗಿನಕಾಯಿಯೊಂದಿಗೆ ಅಗ್ರಹಾರದ ಚನ್ನವೀರಪ್ಪ
ಕಾಯಿ ಗುದ್ದುವ ಸ್ಪರ್ಧೆಗೆ ಬಳಸುವ ತೆಂಗಿನಕಾಯಿಯೊಂದಿಗೆ ಅಗ್ರಹಾರದ ಚನ್ನವೀರಪ್ಪ   

ಅಳಿಯ ನಿನಗಾಗಿ ತೆಂಗಿನಕಾಯಿಗಳ ಸುಲಿದು ಇಟ್ಕೊಂಡಿನಿ. ಬಾ ಗುದ್ದು' ಎಂದು ಕರೆಯುತ್ತಿದ್ದಂತೆ ಅತ್ತ ಆ ವ್ಯಕ್ತಿ ಕ್ಷಣವೂ ತಡಮಾಡದೇ ಬಲಗೈಗೆ ಟವಲು ಸುತ್ತಿ ಕುಕ್ಕರಗಾಲಿನಲ್ಲಿ ಕುಳಿತು ಕಲ್ಲಿನ ಮೇಲಿಟ್ಟ ಬೋಳು ಕಾಯಿಯನ್ನೊಮ್ಮೆ ದಿಟ್ಟಿಸಿ ನೋಡಿ, ಉಸಿರು ಬಿಗಿ ಹಿಡಿದು ಕೈ ಎತ್ತಿ ದಡ್ ಅಂತಾ ಹೊಡೆದೇಬಿಟ್ಟ. ಆ ಒಂದೇಟಿಗೆ ಕಾಯಿ ಪುಡಿ ಪುಡಿ!

ಹೀಗೆ ಒಡೆದಿದ್ದು ಒಂದು ಕಾಯಿಯಲ್ಲ. ಕಾಯಿಗಳ ಮೇಲೆ ಕಾಯಿಗಳನ್ನು ಗುದ್ದಿ ಒಡೆಯುತ್ತಿದ್ದರೆ, ನೋಡುಗರು ಕೇಕೆ ಹಾಕಿ ಹುರಿದುಂಬಿಸುತ್ತಿದ್ದರು. ಇದರಿಂದ ಮತ್ತಷ್ಟು ಉತ್ತೇಜಿತಗೊಂಡ ವ್ಯಕ್ತಿ ಕಣ್ಣುಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಹತ್ತಾರು ಕಾಯಿಗಳನ್ನು ಗುದ್ದಿ ರಾಶಿ ಹಾಕಿದ.

‌ಹೌದು. ಇದು ‘ಕಾಯಿ ಗುದ್ದುವ ಸ್ಪರ್ಧೆ‘. ನಾಗರ ಪಂಚಮಿ ಹಬ್ಬಕ್ಕೆ ಒಂದು ವಾರ ಬಾಕಿ ಇರುವಂತೆ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತಿತರ ಉತ್ತರ ಕರ್ನಾಟಕದ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ಗ್ರಾಮೀಣ ಕ್ರೀಡೆ. ಈ ಹಬ್ಬಕ್ಕೆ ಹದಿನೈದು ಇಪ್ಪತ್ತು ದಿನಗಳ ಬಾಕಿ ಇರುವಂತೆ ನಿಂಬೆಹಣ್ಣು ಎಸೆಯುವ, ಕಣ್ಣುಕಟ್ಟಿಕೊಂಡು ಗುರಿ ಮುಟ್ಟುವ, ದುಂಡಿ ಕಲ್ಲು ಎತ್ತುವಂತಹ ವೈವಿಧ್ಯಮಯ ಸ್ಪರ್ಧೆಗಳು ಶುರುವಾಗುತ್ತವೆ. ಈ ಕಾಯಿ ಗುದ್ದುವ ಸ್ಪರ್ಧೆಯೂ ಅದರಲ್ಲೊಂದು.

ADVERTISEMENT

ಸಂಬಂಧಿಕರ ನಡುವಿನ ಪಂದ್ಯ..

ಕಾಯಿ ಗುದ್ದುವ ಪಂದ್ಯ ಮುಖ್ಯವಾಗಿ ಬೀಗರ ನಡುವೆ ನಡೆಯುತ್ತದೆ. ಮಾವ– ಅಳಿಯ ಪರಸ್ಪರರು ಸವಾಲು ಸ್ವೀಕರಿಸಿ ಕಣಕ್ಕೆ ಇಳಿಯುತ್ತಾರೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕಾಯಿ ಗುದ್ದುತ್ತಾರೆ. ಸಾಕೆನ್ನುವಷ್ಟು ಕಾಯಿಗಳನ್ನು ಎದುರಾಳಿ ಇಟ್ಟು ಅವರು ಸಾಕೆಂದ ಮೇಲೆ ಅವರು ಹೊಡೆದಷ್ಟು, ಅದಕ್ಕಿಂತ ಹೆಚ್ಚು ಹೊಡೆಯಬೇಕು. ಒಟ್ಟಾರೆಯಾಗಿ ಕೂತೂಹಲಕಾರಿ ಮತ್ತು ರೋಮಾಂಚನ ಕ್ಷಣಗಳು. ಉಳಿದಂತೆ ಗೆಳೆಯರು ಸಹ ಖುಷಿಗಾಗಿ ಗುದ್ದುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮನಸಂತೋಷ ಕ್ಕಾದರೆ ಕೆಲವರು ಜೂಜು ಕಟ್ಟಿಕೊಂಡು ಈ ಸ್ಪರ್ಧೆ ನಡೆಸುತ್ತಾರೆ. ಆಗ ಒಬ್ಬೊಬ್ಬರು ತಮ್ಮ ಶಕ್ತಾನುಸಾರ ಗಂಟೆಯ ಒಳಗೆ ನೂರು ಕಾಯಿಗಳನ್ನು ಗುದ್ದಿ ಚೂರು ಮಾಡಿರುವ ಉದಾಹರಣೆಗಳು ಇವೆ.

ಎಲ್ಲಾ ಶಕ್ತಿ ಹಾಕಿ ಗುದ್ದಿದರೂ ಬಗ್ಗದ, ಚಿಪ್ಪು ದಪ್ಪ ಇರುವ ತೆಂಗಿನಕಾಯಿಗೆ ಈಗ ಬಾರಿ ಬೇಡಿಕೆ. ಹಬ್ಬಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ಒಂದು ಕಾಯಿಗೆ ಸಾವಿರ ರೂಪಾಯಿವರೆಗೂ ಕೊಟ್ಟು ಬುಕ್ಕಿಂಗ್ ಮಾಡ್ತಾರೆ. ಇನ್ನೂ ಕೆಲವರು ತೋಟದಲ್ಲಿರುವ ಇಂತಹ ತೆಂಗಿನ ಮರವನ್ನು ಪತ್ತೆ ಹಚ್ಚಿ ರಾತ್ರೋರಾತ್ರಿ ಕಳವು ಮಾಡುವಂತಹ ಸ್ವಾರಸ್ಯಕರ ಕತೆಗಳು ಈ ಜೂಜುಕಾಯಿ ಸುತ್ತ ಹೆಣೆದುಕೊಂಡಿವೆ!.

ಜೂಜುಕಾಯಿಗೆ ಡಿಮ್ಯಾಂಡ್..

ಪಂಚಮಿ ಹಬ್ಬ ಬಂದಂತೆಂದರೆ ಸಾಕು ತೆಂಗಿನ ತೋಟದ ಮಾಲಿಕನೂ ತನ್ನ ತೋಟದಲ್ಲಿರುವ ಜೂಜುಕಾಯಿ ಬಿಡುವ ತೆಂಗಿನ ಗಿಡಗಳನ್ನು ವಿಶೇಷವಾಗಿ ಕಾವಲು ಕಾಯುತ್ತಾನೆ. ‘ಬಳ್ಳಾರಿ ಕಡೆಯ ಪರಿಚಯಸ್ಥರು ಹೀಗೆ ಹತ್ತು ವರ್ಷದ ಹಿಂದೆ ಬಂದಿದ್ರು. ನಾವು ಆಗ ನಮ್ಮ ಮನೆ ಹಿತ್ತಲಿನಲ್ಲಿ ಬಿಟ್ಟ ತೆಂಗಿನಕಾಯಿಯನ್ನು ಕಂದಿಲಿನಿಂದ ತುಂಡು ಮಾಡುತ್ತಿದ್ದೆ. ಅದನ್ನು ನೋಡಿ ಅವರು ನಮಗೆ ಪಂಚಮಿಗೆ ಇಂಥವೇ ಗಟ್ಟಿ ಕಾಯಿಗಳು ಬೇಕು. ಇವುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ ಎಂದರು. ಆಗ ಇದರ ಮಹತ್ವ ಗೊತ್ತಿರಲಿಲ್ಲ. ಆ ಭಾಗದಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಯನ್ನೂ ಹೆಚ್ಚಿಸಿದ್ದೇವೆ. ತೋಟದಲ್ಲಿ ನೂರಕ್ಕೂ ಹೆಚ್ಚು ಮರಗಳಿದ್ದರೂ ಅವುಗಳಿಗಿಂತ ಮನೆಯ ಹಿತ್ತಲಿನಲ್ಲಿರುವ ಈ ಮರದಲ್ಲಿಯ ತೆಂಗಿನಕಾಯಿಗೆ ಸಿಕ್ಕಾಪಟ್ಟೆ ಬೇಡಿಕೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ರಾಜಣ್ಣ.

ಬಲು ಗಟ್ಟಿ ಕಾಯಿ..

‘ಈ ಕಾಯಿ ಮೇಲೆ ಲಾರಿ ಚಕ್ರ ಹತ್ತಿದ್ರೂ ಜುಮ್ ಅನ್ನಲ್ಲ. ಈ ಕಾಯಿಯ ಚಿಪ್ಪು ಅಷ್ಟೊಂದು ಗಟ್ಟಿ ಇರ್ತಾವೆ. ಈ ಹಬ್ಬದ ಟೈಮ್‌ನಲ್ಲಿ ಜನ ಇದೇ ಕಾಯಿ ಬೇಕು ಅಂತ ಕೇಳಿಕೊಂಡು ಬರ‍್ತಾರೆ. ಪಂಚಮಿಗೆ ಸರಾಸರಿ 80 ರಿಂದ 100 ಕಾಯಿಗಳನ್ನು ಮಾರುತ್ತೇನೆ‘ ಎನ್ನುತ್ತಾರೆ ಕೂಡ್ಲಿಗಿ ತಾಲ್ಲೂಕಿನ ಅಗ್ರಹಾರದ ಚನ್ನವೀರಪ್ಪ. ‘ಈ ಒಂದು ಸೀಸನ್‌ನಲ್ಲಿ ಒಂದು ಮರ, ಹತ್ತು ಮರದ ಆದಾಯ ನೀಡುತ್ತೆ‘ ಎನ್ನುತ್ತಾರೆ ಅವರು.

‘ನಿಜವಾಗಲೂ ಇಷ್ಟು ಕಾಯಿ ಇರುತ್ತಾ‘ ಅಂತ ಕ್ರಾಸ್ ಚೆಕ್ ಮಾಡಲು ಬಳ್ಳಾರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್‌ ಅವರನ್ನು ಕೇಳಿದೆ. ಅದಕ್ಕೆ ಅವರು, ‘ಇಂತಹ ತೆಂಗಿನ ಮರಗಳ ಕಾಯಿಯ ರಚನೆ ಅನುವಂಶಿಕವಾಗಿ (ಜೆನಿಟಿಕ್ ಕ್ಯಾರೆಕ್ಟರ್) ಬಂದಿರುತ್ತೆ. ಇಂತಹ ಒರಟು ಕಾಯಿಗಳನ್ನೇ ಈ ಸ್ಪರ್ಧೆಗಳಿಗೆ ಬಳಸುತ್ತಾರೆ. ಹಾಗಾಗಿ, ಇವುಗಳು ಜೂಜುಕಾಯಿ ಎಂದೇ ಹೆಸರಾಗಿವೆ. ಕೆಲವು ರೈತರು ತಮ್ಮ ಬುದ್ಧಿವಂತಿಕೆಯಿಂದ ಇಂತಹ ಕಾಯಿ ಬಿಡುವ ಮರಗಳನ್ನು ಗುರುತಿಸಿ, ಸಂರಕ್ಷಿಸುತ್ತಾರೆ.’ ಎನ್ನುತ್ತಾರೆ ಅವರು.

ಅಂತೂ ಕಾಯಿ ಗುದ್ದುವ ಸ್ಪರ್ಧೆ ನಿಜಕ್ಕೂ ವಿಶೇಷ. ಅಂದ ಹಾಗೆ,ಈ ಬಾರಿ ಸ್ಪರ್ಧೆಗೆ ಕೊರೊನಾ ಸೋಂಕು ಅಡ್ಡವಾಗಿದೆ. ‘ಆದರೆ ಸ್ಪರ್ಧೆ ನಿಲ್ಲಲ್ಲ. ಓಣಿ ಓಣಿಗಳಲ್ಲಿ ನಡೆಯುವುದರಿಂದ, ಮತ್ತೆ ಕಡಿಮೆ ಜನ ಪಾಲ್ಗೊಳ್ಳುವುದರಿಂದ ಜನ ಸಂದಣಿ ಸೇರುವುದಿಲ್ಲ. ಹಾಗಾಗಿ ಸ್ಪರ್ಧೆ ನಿಲ್ಲುವುದಿಲ್ಲ‘ ಎನ್ನುತ್ತಾರೆ ಗ್ರಾಮಸ್ಥರು.

ಚಿತ್ರಗಳು : ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.