ADVERTISEMENT

PV Web Exclusive: ಮಾನವೀಯತೆ ಬದುಕಾಗಿಸಿಕೊಂಡ ಹಬ್ಬ

ರಾಮಕೃಷ್ಣ ಸಿದ್ರಪಾಲ
Published 25 ಡಿಸೆಂಬರ್ 2020, 1:30 IST
Last Updated 25 ಡಿಸೆಂಬರ್ 2020, 1:30 IST
ಹುಬ್ಬಳ್ಳಿ–ಧಾರವಾಡದ ಅತಿ ಪುರಾತನ ಚರ್ಚ್: ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಕಾರವಾರ ರಸ್ತೆಯ ಬಾಸೆಲ್‌ ಮಿಷನ್‌ ಕಾಂಪೌಂಡ್‌ನ 1839ರಲ್ಲಿ ನಿರ್ಮಾಣಗೊಂಡ ಮೈಯರ್‌ ಮೆಮೊರಿಯಲ್‌ ಚರ್ಚ್‌
ಹುಬ್ಬಳ್ಳಿ–ಧಾರವಾಡದ ಅತಿ ಪುರಾತನ ಚರ್ಚ್: ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಕಾರವಾರ ರಸ್ತೆಯ ಬಾಸೆಲ್‌ ಮಿಷನ್‌ ಕಾಂಪೌಂಡ್‌ನ 1839ರಲ್ಲಿ ನಿರ್ಮಾಣಗೊಂಡ ಮೈಯರ್‌ ಮೆಮೊರಿಯಲ್‌ ಚರ್ಚ್‌   

ಬಗೆ ಬಗೆಯ ಕೇಕ್, ಚಾಕೋಲೇಟ್‌, ತರಹೇವಾರಿ ಖಾದ್ಯಗಳು, ಚಕ್ಕುಲಿ, ಉಂಡೆ, ಕರ್ಜಿಕಾಯಿ, ಗುಲಾಬ್‌ ಜಾಮೂನ್, ಬೆಲ್ಲ–ಅಕ್ಕಿ ಹಿಟ್ಟು ಸೇರಿಸಿ ತಯಾರಿಸಿದ ಸಿಹಿ ತಿನಿಸು, ದ್ರಾಕ್ಷಾರಸ (ವೈನ್‌), ಜೊತೆಗೊಂದಿಷ್ಟು ಜೀವನ ಪ್ರೀತಿ, ಜತೆಗೂಡುವ ಆತ್ಮೀಯರೊಂದಿಗೆ, ಬಂಧುಬಾಂಧವರೊಂದಿಗೆ ಸಂಭ್ರಮಿಸುವ ಕ್ಷಣ ಕಾಣಬೇಕೆಂದಿದ್ದರೆ ಅದು ಕ್ರಿಸ್‌ಮಸ್‌ ಹಬ್ಬದಲ್ಲಿ ಮಾತ್ರವೇನೋ...

ಮಾನವೀಯತೆಯನ್ನು ಬದುಕಾಗಿಸಿಕೊಂಡ, ಕರುಣೆಯ ಮಂತ್ರವನ್ನು ಜಗತ್ತಿಗೆ ಸಾರಿದ ದೇವದೂತ ಏಸುಕ್ರಿಸ್ತನ ಹುಟ್ಟುಹಬ್ಬ ಕ್ರಿಸ್‌ಮಸ್‌. ಜಾಗತಿಕವಾಗಿ ಈ ಹಬ್ಬಕ್ಕೆ ವಿಶೇಷ ಮನ್ನಣೆ. ಜಗತ್ತಿನ ವಿವಿಧ ಭಾಗಗಳಲ್ಲಿರುವ ಕ್ರೈಸ್ತರು ಡಿಸೆಂಬರ್‌ ತಿಂಗಳಿನ ಆರಂಭದಿಂದಲೇ ಈ ಹಬ್ಬದ ತಯಾರಿ ನಡೆಸುತ್ತಾರೆ. ಕ್ರಿಸ್‌ಮಸ್‌ನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೂ ಈ ಹಬ್ಬ ಮುನ್ನುಡಿ.

ದನದ ಕೊಟ್ಟಿಗೆ (ಗೋದಲಿ) ಮತ್ತು ನಕ್ಷತ್ರ ಇವು ಕ್ರಿಸ್‌ಮಸ್‌ನ ವಿಶೇಷ ಸಂಕೇತಗಳು. ಗೋದಲಿ ಏಸುವಿನ ಜನ್ಮಸ್ಥಳದ ಸಂಕೇತವಾದರೆ, ನಕ್ಷತ್ರವು ಸಂಭ್ರಮ ಹಾಗೂ ದೇವವಾಣಿಯನ್ನು ಬಿಂಬಿಸುತ್ತದೆ. ಬಾಲ ಏಸುವನ್ನು ಸ್ವಾಗತಿ­ಸಲು ಸೇರಿದ ದನಕಾಯುವವರು, ಜ್ಞಾನಿಗಳ ಮೂರ್ತಿ­ಗಳನ್ನು ಗೋದಲಿಯಲ್ಲಿ ಮೂಡಿಸುವರು. ಕ್ರಿಸ್‌ಮಸ್‌ ವೇಳೆ ಕ್ರೈಸ್ತ ಸಮುದಾಯದ ಪ್ರತಿಯೊಬ್ಬರ ಮನೆಗಳ ಎದುರು, ಚರ್ಚ್‌, ಸಮುದಾಯದ ಸಂಸ್ಥೆಗಳ ಆವರಣದಲ್ಲಿ ಕ್ರಿಸ್ತರ ಜನನ ವೃತ್ತಾಂತವನ್ನು ಈ ಪ್ರತಿಮೆಗಳ ಮೂಲಕ ಕಾಣಬಹುದು.

ADVERTISEMENT

ಆದರೆ ಈ ವರ್ಷ ಎಂದಿನಂತಿಲ್ಲ...

ಕ್ರಿಸ್‌ಮಸ್‌ ಸ್ವಾಗತಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರದ ಜನರು ಸಿದ್ಧರಾಗಿದ್ದಾರೆ. ಆದರೆ ಪ್ರತಿ ವರ್ಷದಂತೆ ಅಲ್ಲ. ಈ ವರ್ಷದ ಹಬ್ಬಕ್ಕೆ ಪ್ರತಿ ವರ್ಷದ ಸೊಗಸಿಲ್ಲ, ಸಂಭ್ರಮವಿಲ್ಲ. ಕ್ರೈಸ್ತರ ಮನೆಯಂಗಳ, ಕ್ರೈಸ್ತ ಕಾಲೊನಿಗಳೆಲ್ಲ ಕ್ರಿಸ್‌ಮಸ್‌ ಟ್ರೀ, ಕಣ್ಮನ ಸೆಳೆವ ನಕ್ಷತ್ರ ಹಾಗೂ ಗೋದಲಿಗಳಿಂದ ಮಿನುಗುವ ದೃಶ್ಯ ಈ ಬಾರಿ ಅಷ್ಟಾಗಿ ಕಣ್ಣಿಗೆ ಬೀಳುತ್ತಿಲ್ಲ.

ಕೆಂಪು ಅಂಗಿ, ತಲೆಗೊಂದು ಟೋಪಿ, ದೊಡ್ಡ ಹಣ್ಣು ಗಡ್ಡಮೀಸೆ, ಬೆನ್ನಿನಲ್ಲೊಂದು ಜೋಳಿಗೆ, ಕೈಲೊಂದು ಮಂತ್ರದಂಡ ಹಿಡಿದುಕೊಂಡ ಈ ಸಾಂಟಾಕ್ಲಾಸ್‌ ಅಜ್ಜನೆಂದರೆ ಮಕ್ಕಳಿಗೆ ಬಲು ಖುಷಿ. ಈ ಹಬ್ಬದಲ್ಲಿ ಸಾಂಟಾಕ್ಲಾಸ್‌ ಪ್ರಮುಖವಾದದ್ದು. ಕ್ರಿಸ್ಮಸ್‌ ಆಚರಣೆಯ ಭಾಗವಿದು. ಪುಟ್ಟ ಮಕ್ಕಳು ಈ ಅಜ್ಜನಿಂದ ಏನಾದರೂ ಸಿಹಿತಿನಿಸು, ಚಾಕೊಲೇಟ್‌ ಪಡೆಯುವುದು ಮಾಮೂಲು. ಆದರೆ ಈ ವರ್ಷ ಎಲ್ಲಿಯೂ ಸಾಮೂಹಿಕ ಆಚರಣೆ ಇಲ್ಲ, ಸಾಂಟಾಕ್ಲಾಸ್‌ ಅಜ್ಜನನ್ನು ಕಾಣುವುದು, ಮಕ್ಕಳು ಚಾಕೋಲೆಟ್‌ ಪಡೆಯುವುದೂ ಕಷ್ಟವೇ...

ಈ ವರ್ಷ ಎಂದಿನಂತಿಲ್ಲ...

‘ಕ್ರಿಸ್ಮಸ್ ಕೇವಲ ಕ್ರೈಸ್ತರ ಹಬ್ಬವಲ್ಲ, ಪ್ರತಿ ಜೀವಿಯನ್ನೂ ಪ್ರೀತಿಸುವವರ ಹಬ್ಬ. 2020 ಕೊರೊನಾ ಎಂಬ ವೈರಸ್‌ನಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿದೆ. ಕ್ರಿಸ್ತನ ಕರುಣೆ ಎಲ್ಲರಿಗೂ ದೊರಕಲಿ’ ಎನ್ನುತ್ತಾರೆ ಬಾಸೆಲ್ ಮಿಷನ್‌ನ ಉತ್ತರ ಸಭಾಪ್ರಾಂತದ ಬಿಷಪ್ ರವಿಕುಮಾರ ನಿರಂಜನ.

ಹುಬ್ಬಳ್ಳಿಯಲ್ಲೊಂದು ಪುರಾತನ ಚರ್ಚ್‌

180 ವರ್ಷಗಳ ಇತಿಹಾಸವನ್ನು ಹೊಂದಿರುವ ಚರ್ಚ್ ಹುಬ್ಬಳ್ಳಿಯಲ್ಲಿದೆ. ಪುರಾತನ ಪ್ರಾಟೆಸ್ಟೆಂಟ್‌ ಪಂಗಡದ ಚರ್ಚ್‌ಗಳಲ್ಲಿ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಕಾರವಾರ ರಸ್ತೆಯ ಬಾಸೆಲ್‌ ಮಿಷನ್‌ ಕಾಂಪೌಂಡ್‌ನ ಮೈಯರ್‌ ಮೆಮೊರಿಯಲ್‌ ಚರ್ಚ್‌ ಪ್ರಮುಖವಾದದ್ದು.

18 ಮತ್ತು 19ನೇ ಶತಮಾನದ ಅವಧಿಯಲ್ಲಿ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ ಪರವಾನಗಿ ಪಡೆದ ಮಿಷನರಿಗಳು ಭಾರತಕ್ಕೆ ಬರುತ್ತಿದ್ದರು. ಇದೇ ರೀತಿ ಬಾಸೆಲ್‌ ಎಂಬ ಪ್ರಮುಖ ಪಟ್ಟಣದಲ್ಲಿ ಸ್ಥಾಪಿತವಾಗಿದ್ದ ಬಾಸೆಲ್‌ ಇವ್ಯಾಂಜಲಿಕಲ್‌ ಮಿಶನರಿ ಸೊಸೈಟಿ ಎಂಬ ಸಂಘವು ತರಬೇತಿ ಪಡೆದ ಮೂವರು ಮಿಶನರಿಗಳಾದ ಜಾನ್‌ ಕ್ರಿಸ್ಟೊಫ್‌ ಲೇಹ್ನರ್, ಕ್ರಿಸ್ಟೊಪ್‌ ಲಿಯೋನಾರ್ಡ್‌ ಗ್ರೈನರ್‌, ಸ್ಯಾಮುವೇಲ್‌ ನೆಲ್ಸನ್‌ ಎಂಬವರು 1834 ಮಾರ್ಚ್‌ 16ರಂದು ಹಡಗು ಪ್ರಯಾಣ ಆರಂಭಿಸಿದರು.

1834 ಅಕ್ಟೋಬರ್‌ 14ರಂದು ಕಾಲಿಕಟ್‌ ಬಂದು ತಲುಪಿದರು. ಈ ಮಿಶನರಿಗಳು ತಾವು ಮಂಗಳೂರಿಗೆ ಸೇವೆ ಸಲ್ಲಿಸಬೇಕು ಎನ್ನುವ ಉದ್ದೇಶದಿಂದ ಹೊರಟಿದ್ದೇವೆ ಎಂದು ತಿಳಿಸಿದಾಗ ಅವರಿಗೆ ಪ್ರೋತ್ಸಾಹ ನೀಡಲಾಯಿತು. ಮಂಗಳೂರನ್ನು ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಕೆಲಸ ಆರಂಭಿಸಿದರು. 1835ರಲ್ಲಿ ಬಳ್ಳಾರಿಗೆ ಬಂದರು. ಅಲ್ಲಿಂದ ವಾಪಾಸು ಹೋಗುವಾಗ ಹರಿಹರ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಾಗ ಮುಂದೆ ಈ ಪಟ್ಟಣವೇ ತಮ್ಮ ಕೇಂದ್ರಸ್ಥಾನವಾಗಲಿಕ್ಕೆ ಯೋಗ್ಯವಾದುದು ಎಂಬ ನಿರ್ಧಾರದೊಂದಿಗೆ ಧಾರವಾಡಕ್ಕೆ ಹೋಗಿ ಕೆಲ ಸಮಯವಿದ್ದು ಗೋವಾ ಮೂಲಕ ಮಂಗಳೂರು ತಲುಪಿದರು.

ಹೆಬಿಕ್‌ ಅವರು ಭಾರತದಲ್ಲಿ ಹೆಚ್ಚು ಕೆಲಸ ಮಾಡಲು ಇನ್ನಷ್ಟು ಮಿಶನರಿಗಳನ್ನು ಕಳುಹಿಸಿಕೊಡುವಂತೆ ಕೋರಿದರು. 1837 ಜನವರಿ 12ರಂದು ಮೊಗ್ಲಿಂಗ್‌ ಎಂಬ ಮಿಶನರಿ ಅವರನ್ನು ಕರೆದುಕೊಂಡು ನೇರವಾಗಿ ಧಾರವಾಡಕ್ಕೆ ಬಂದರು. ಮೊದಲು ಧಾರವಾಡ ಅವರ ಕೇಂದ್ರಸ್ಥಳವಾಗಿತ್ತು. ಬಳಿಕ ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾದ ಹುಬ್ಬಳ್ಳಿಯಲ್ಲಿಯೇ ಮಿಶನರಿ ಸೇವೆ ಮಾಡುವ ಉದ್ದೇಶದಿಂದ ಆಗಿನ ಜಿಲ್ಲಾ ಕಲೆಕ್ಟರ್‌ ಇ.ಬಿ.ಮಿಲ್ಸ್‌ ಅವರಿಂದ ಸ್ಥಳವೂ ದೊರಕಿದ್ದರಿಂದ 1839ರಲ್ಲಿ ಹುಬ್ಬಳ್ಳಿಯಲ್ಲಿ ಬಾಸೆಲ್‌ ಮಿಶನ್‌ನ ಎರಡನೇ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡರು. ಅದೇ ಮುಂದೆ ಬಾಸೆಲ್‌ ಮಿಶನ್‌ ದೇವಾಲಯ ಎಂದು ಪ್ರಸಿದ್ಧವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.