ADVERTISEMENT

ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 9:35 IST
Last Updated 24 ಜನವರಿ 2026, 9:35 IST
ಶಂಕರಾಚಾರ್ಯ
ಶಂಕರಾಚಾರ್ಯ   
ವೇದಾಂತಭಾರತೀ ಸಂಸ್ಥೆಯ ವತಿಯಿಂದ ದಿನಾಂಕ ಜನವರಿ 31ರ ಶನಿವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ‘ವಿವೇಕದೀಪ್ತಿ’ ಎಂಬ ಹೆಸರಿನ ಅಡಿಯಲ್ಲಿ ಸ್ತೋತ್ರಸಮರ್ಪಣಾ ಕಾರ್ಯಕ್ರಮವು ನಡೆಯಲಿದೆ ತನ್ನಿಮಿತ್ತ ಈ ಲೇಖನ.

ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸ್ತೋತ್ರಗಳಲ್ಲೆ ದಕ್ಷಿಣಾಮೂರ್ತ್ಯಷ್ಟಕಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಅಷ್ಟಕವೆಂದು ಕರೆಯಲ್ಪಟ್ಟರೂ ಇದರಲ್ಲಿ ಹತ್ತು ಶ್ಲೋಕಗಳಿವೆ. ಮೊದಲ ಒಂಭತ್ತು ಶ್ಲೋಕಗಳ ಕೊನೆಯಲ್ಲಿ 'ದಕ್ಷಿಣಾಮೂರ್ತಯೇ ನಮಃ' ಎಂದಿರುವುದರಿಂದ ಇದನ್ನು ಸ್ತೋತ್ರಸಾಹಿತ್ಯದಲ್ಲಿ ಸೇರಿಸಬೇಕು. ಇಲ್ಲವಾದರೆ ಇದೊಂದು ವೇದಾಂತಪ್ರಕರಣಗ್ರಂಥವೆಂದು ಕರೆಯಿಸಿಕೊಳ್ಳುತ್ತಿತ್ತು. ವೇದಾಂತದ ತಿರುಳನ್ನೆಲ್ಲ ಸರಳವಾದ ವಾಕ್ಯಗಳಲ್ಲಿ ಸುಂದರವಾದ ಉಪಮೆಯೊಡನೆ ನೀಡಿರುವುದು ಇದರ ವಿಶೇಷತೆ.

ವೇದಾಂತತತ್ವವನ್ನು ವಿವರಿಸುವುದಕ್ಕೆ ಆಚಾರ್ಯರು ಇಲ್ಲಿ ಇಟ್ಟುಕೊಂಡ ಆಲಂಬನೆ ದಕ್ಷಿಣಾಮೂರ್ತಿ. ಈ ದಕ್ಷಿಣಾಮೂರ್ತಿ ಪುರಾಣಪ್ರಸಿದ್ಧವಾದ ಮೂರ್ತಿಯೇನೂ ಅಲ್ಲ. ಇವನ ಚರಿತ್ರೆ ಎಲ್ಲೂ ಅಷ್ಟಾಗಿ ಕೇಳಿಬರುತ್ತಿಲ್ಲ. ಈ ಮೂರ್ತಿಯ ಆವಿರ್ಭಾವದ ಬಗ್ಗೆ ಒಂದು ಚಿಕ್ಕ ಕಥೆಯಿದೆ. ಹಿಂದೊಮ್ಮೆ ಸನಕಾದಿಮುನಿಗಳು ತತ್ವಜ್ಞಾನವನ್ನು ಬಯಸಿ ತ್ರಿಮೂರ್ತಿಗಳ ಬಳಿ ಹೋದರಂತೆ. ಆಗ ಆ ತ್ರಿಮೂರ್ತಿಗಳಲ್ಲಿ ಒಬ್ಬೊಬ್ಬರೂ ತಮ್ಮ ತಮ್ಮ ಪತ್ನಿಯೊಡನೆ ಸರಸಸಲ್ಲಾಪದಲ್ಲಿ ಮಗ್ನರಾಗಿದ್ದರಂತೆ. ಅವರನ್ನು ನೋಡಿದ ಸನಕಾದಿಗಳಿಗೆ ಅವರ ಬಗ್ಗೆ ತಿರಸ್ಕಾರವುಂಟಾಗಿ ಹಾಗೆಯೇ ಹಿಂದಿರುಗಿದರಂತೆ. ಇದನ್ನರಿತ ಶಿವ ದಕ್ಷಿಣಾಮೂರ್ತಿಯ ರೂಪವನ್ನು ಧರಿಸಿ ಅವರು ಹೋಗುತ್ತಿರುವ ದಾರಿಯಲ್ಲಿ ವಟವೃಕ್ಷವೊಂದರ ಕೆಳಗೆ ಕುಳಿತುಕೊಂಡನಂತೆ. ಅವನನ್ನು ಕಂಡ ಸನಕಾದಿಗಳು ಇವನನ್ನು ಕೇಳಿ ನೋಡೋಣವೆಂದು ಅವನ ಬಳಿಸಾರಿ ನಮಸ್ಕರಿಸಿ ಕುಳಿತುಕೊಂಡರಂತೆ. ದಕ್ಷಿಣಾಮೂರ್ತಿಯು ಪ್ರಸನ್ನವದನನಾಗಿ ಇವರನ್ನೊಮ್ಮೆ ನೋಡಿದ. ಕೂಡಲೇ ಸನಕಾದಿಗಳ ಸಂಶಯವೆಲ್ಲ ತೊಲಗಿತಂತೆ. ಇದನ್ನು ಕೇಳಿ ತಿಳಿದ ಜಿಜ್ಞಾಸುಗಳಾದ ಅನೇಕ ವೃದ್ಧಋಷಿಗಳು ದಕ್ಷಿಣಾಮೂರ್ತಿಯನ್ನು ಸಮೀಪಿಸಿ ತತ್ವಜ್ಞಾನಕ್ಕಾಗಿ ಪ್ರಾರ್ಥಿಸಿದರು. ದಕ್ಷಿಣಾಮೂರ್ತಿಯು ಅವರ ಸಂದೇಹವನ್ನು ಪರಿಹರಿಸಿದನಂತೆ! ಇದೊಂದು ಅಭೂತಪೂರ್ವ ಘಟನೆ. ಇದನ್ನು ಹೀಗೆ ವಿವರಿಸಲಾಗುತ್ತಿದೆ.

ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ |

ADVERTISEMENT

ಗುರೋಽಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾಃ ||

ಆಲದ ಮರದ ಬುಡದಲ್ಲಿ ತರುಣಗುರು ಕುಳಿತಿದ್ದಾನೆ. ಅವರ ಮುಂದೆ ವೃದ್ಧಶಿಷ್ಯರು. ಗುರುವು ಮೌನವಾಗಿ ಪಾಠಮಾಡುತ್ತಿದ್ದಾನೆ. ಶಿಷ್ಯರ ಸಂಶಯಗಳೆಲ್ಲ ಪರಿಹಾರವಾಗುತ್ತಿದೆ. ಎಂಥ ವಿಚಿತ್ರ!

ವಿಶ್ವದ ಮೂಲಕಾರಣ ಯಾವುದಿದೆಯೋ ಅದು ಮಾತು, ಮನಸ್ಸುಗಳಿಗೆ ನಿಲುಕದ್ದು. ಅನುಭವೈಕಗಮ್ಯ. ಮಾತು-ಮನಸ್ಸುಗಳಿಗೆ ನಿಲುಕುವಂಥಾದ್ದೆಲ್ಲ ಪ್ರಾಪಂಚಿಕವಾದುದು, ನಶ್ವರವಾದುದು. ಇವನ್ನೆಲ್ಲ ದೂರಸರಿಸಿದಾಗ ಉಳಿಯುವುದು ಆ ಪಾರಮಾರ್ಥಿಕ ವಸ್ತು. ಇದನ್ನೇ ಸಾಂಕೇತಿಕವಾಗಿ ವಿವರಿಸಲಾಗಿದೆ. ದಕ್ಷಿಣಾಮೂರ್ತಿಯ ಸ್ವರೂಪವನ್ನೂ ಆಚಾರ್ಯರು ತಮ್ಮ ಇನ್ನೊಂದು ಸ್ತೋತ್ರದಲ್ಲಿ ವರ್ಣಿಸುತ್ತಾರೆ. ಆತನಿಗೆ ನಾಲ್ಕು ಕರಗಳು, ಅವುಗಳಲ್ಲಿ ಪರಶು, ಮೃಗ, ಚಿನ್ಮುದ್ರೆಗಳನ್ನು ಧರಿಸಿದ್ದಾನೆ. ಒಂದು ಕೈಯನ್ನು ತನ್ನ ಮೊಣಕಾಲಮೇಲಿರಿಸಿದ್ದಾನೆ. ವ್ಯಾಘ್ರಚರ್ಮವನ್ನು ಉಟ್ಟುಕೊಂಡಿದ್ದಾನೆ. ಅಪಸ್ಮಾರರೋಗಪುರುಷನನ್ನು ಮೆಟ್ಟಿದ್ದಾನೆ. ಶಿರದಲ್ಲಿ ಚಂದ್ರನಿದ್ದಾನೆ. ಇದು ದಕ್ಷಿಣಾಮೂರ್ತಿಯ ಧ್ಯಾನಯೋಗ್ಯರೂಪ. ಕೆಲವು ಕಡೆ ಈ ವರ್ಣನೆಯಲ್ಲಿ ಸ್ವಲ್ಪ ವ್ಯತ್ಯಾಸವೂ ಇದೆ. ಈ ವರ್ಣನೆಗಳು ಹೆಚ್ಚಾಗಿ ನಟರಾಜ ಶಿವನ ವರ್ಣನೆಯನ್ನೇ ನೆನಪಿಗೆ ತರುತ್ತವೆ. ವೇದಾಂತಸಂಪ್ರದಾಯದಲ್ಲಿ ಶಿವನನ್ನು ಆದಿಗುರುವೆಂದು ಭಾವಿಸಲಾಗುತ್ತಿದೆ. (ಸದಾಶಿವಸಮಾರಂಭಾ...) ಇಂದಿಗೂ ಸಹ ಶ್ರುತಿಸ್ಮೃತಿಸೂತ್ರಗಳನ್ನು ಅಧ್ಯಯನ ಮಾಡುವವರು ದಕ್ಷಿಣಾಮೂರ್ತಿಯನ್ನು ವಂದಿಸಿ ಪಾಠವನ್ನು ಪ್ರಾರಂಭಿಸುವ ಹಾಗೂ ಮುಗಿಸುವ ಸಂಪ್ರದಾಯವನ್ನಿರಿಸಿಕೊಂಡಿದ್ದಾರೆ.

ಮುಮುಕ್ಷುಗಳಿಗೆ ಇವನು ಜ್ಞಾನವೈರಾಗ್ಯಗಳನ್ನು ನೀಡುವವನು. ಇತರರು, ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಮೇಧಾಶಕ್ತಿವರ್ಧನೆಗಾಗಿ ದಕ್ಷಿಣಾಮೂರ್ತಿಯ ಉಪಾಸನೆಯನ್ನು ಮಾಡುತ್ತಾರೆ. ಇವನನ್ನು ಮೇಧಾದಕ್ಷಿಣಾಮೂರ್ತಿ ಎಂದೇ ಕರೆಯುತ್ತಾರೆ. ಇವನ ತಾತ್ವಿಕರೂಪವನ್ನು ದಕ್ಷಿಣಾಮೂರ್ತ್ಯಷ್ಟಕವು ಸ್ಪಷ್ಟವಾಗಿ ವಿವರಿಸುತ್ತದೆ. ಈ ಸ್ತೋತ್ರಕ್ಕೆ ವ್ಯಾಖ್ಯಾನಗಳನ್ನು ರಚಿಸಿದ ಸುರೇಶ್ವರರ ಅಭಿಪ್ರಾಯದಂತೆ ಇಲ್ಲಿ ಈಶ್ವರ-ಗುರು-ಆತ್ಮ ಎಂಬೀ ಮೂರು ತತ್ವಗಳನ್ನು ಸಮೀಕರಿಸಲಾಗಿದೆ. ಇಲ್ಲಿ ದಕ್ಷಿಣಾಮೂರ್ತಿ ಈಶ್ವರನಷ್ಟೇ ಅಲ್ಲ, ನಮ್ಮ ಆತ್ಮನೂ ಆಗಿದ್ದಾನೆ. ಪರಮಾತ್ಮನ ಬಳಿಸಾರುವ ಮಾರ್ಗವನ್ನುಪದೇಶಿಸುವ ಗುರುವೂ ಆಗಿದ್ದಾನೆ.

ಹೊರತೋರುತ್ತಿರುವ ಈ ವಿಶಾಲ ವಿಶ್ವ ಮೊದಲು ಆತ್ಮಸ್ವರೂಪದಲ್ಲಿಯೇ ಅಡಗಿದ್ದು ನಮ್ಮ ಅಜ್ಞಾನಾವಸ್ಥೆಯಲ್ಲಿ ಮಾತ್ರ ಹೊರತೋರುತ್ತಿದೆ. ಜ್ಞಾನಬಂದಮೇಲೆ ನಾವೊಬ್ಬರೇ ಉಳಿಯುವುದು. ಸ್ವಪ್ನವೇ ಇದಕ್ಕೆ ನಿದರ್ಶನ. ಒಂದು ಬೀಜದಲ್ಲಿ ವಿಶಾಲವಾದ ವಟವೃಕ್ಷ ಅಡಗಿದಂತೆ ಸೃಷ್ಟಿಗಿಂತ ಪೂರ್ವದಲ್ಲಿ ಆತ್ಮನಲ್ಲಿ ಈ ಪ್ರಪಂಚವಿತ್ತು. ಆಮೇಲೆ ಹೊರತೋರಿ ಮತ್ತೆ ಅಲ್ಲಿಯೇ ಲೀನವಾಗುತ್ತದೆ. ಹೀಗೆ ಪ್ರಪಂಚದ ಸೃಷ್ಟಿಸ್ಥಿತಿಲಯಗಳು ಆ ಈಶ್ವರನಲ್ಲಿಯೇ ಕಾಣಿಸಿಕೊಳ್ಳುತ್ತಿರುತ್ತವೆ. ಪಂಚಮಹಾಭೂತಗಳು, ಸೂರ್ಯ, ಚಂದ್ರ, ಆತ್ಮ ಇವೆಲ್ಲ ದಕ್ಷಿಣಾಮೂರ್ತಿಯ ಅಷ್ಟದೇಹಗಳು. ಒಂದೇ ಮಾತಿನಲ್ಲಿ ಹೇಳುವುದಾದರೆ ಆತನೇ ಇಡೀ ವಿಶ್ವವನ್ನು ವ್ಯಾಪಿಸಿದವನು. ಅವನನ್ನು ಬಿಟ್ಟರೆ ಇಲ್ಲಿ ಇನ್ನೇನೂ ಇಲ್ಲ. ಇದು ಕೇವಲ ದಕ್ಷಿಣಾಮೂರ್ತಿಯ ವರ್ಣನೆಯಲ್ಲ. ನಮ್ಮೆಲ್ಲರ ಆತ್ಮದ ವರ್ಣನೆಯೂ ಆಗಿದೆ. ಹತ್ತನೆಯ ಶ್ಲೋಕದಲ್ಲಿ ಈ ಸ್ತೋತ್ರದ ಫಲವನ್ನು ವರ್ಣಿಸುವಾಗ ಸವಾತ್ಮತೆಯನ್ನೇ ಪ್ರಧಾನವಾಗಿ ಪರಿಗಣಿಸುತ್ತಾರೆ. ಈ ಸ್ತೋತ್ರವನ್ನು ಮನನ ಮಾಡಿದಾಗ ನಮಗೆ ಸಿದ್ಧಿಸುವುದು ಸರ್ವಾತ್ಮತೆ. ಎಲ್ಲರ ಆತ್ಮದೊಡನೆ ನಮ್ಮ ಆತ್ಮ ಒಂದಾಗಿಬಿಡುವುದು; ನಾವು ವಿಶ್ವಾತ್ಮರಾಗುವುದು. ಆಗ ನಾವು ಯಾವುದನ್ನೂ ಬಯಸದ, ಯಾವುದನ್ನೂ ದ್ವೇಷಿಸಿ ದೂರತಳ್ಳದ ಪರಿಸ್ಥಿತಿಯುಂಟಾಗುತ್ತದೆ. ಇದನ್ನೇ ಲೌಕಿಕವಾಗಿ ಭಾವೈಕ್ಯ ಎಂದು ಕರೆಯಲಾಗುತ್ತದೆ. ದಕ್ಷಿಣಾಮೂರ್ತ್ಯಷ್ಟಕದ ಮನನ ಅಯಾಚಿತವಾಗಿ ಲೋಕದಲ್ಲಿ ಭಾವೈಕ್ಯವನ್ನುಂಟುಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.