ADVERTISEMENT

ಇಂದು ನರಕ ಚತುರ್ದಶಿ: ಇರುಳ ವಿರುದ್ಧ ಬೆಳಕಿನ ಯುದ್ಧ

ನವೀನ ಗಂಗೋತ್ರಿ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
   

ಬೆಳಕನ್ನು ಸಂಭ್ರಮಿಸುವುದು ಭಾರತೀಯರಿಗೆ ಬಲು ಸಹಜವಾಗಿ ಒದಗಿಬಂದ ಪ್ರವೃತ್ತಿ. ಹಬ್ಬ ಅಥವಾ ಉತ್ಸವ ಯಾವುದೇ ಇದ್ದರೂ ಅದರಲ್ಲಿ ದೀಪ ಮತ್ತು ಅಗ್ನಿಗೆ ಆದ್ಯಸ್ಥಾನ ಇದ್ದೇ ಇದೆ. ಹಾಗೆಂದೇ ಬೆಳಕಿನ ಹಬ್ಬವೊಂದನ್ನು ರೂಢಿಸಿಕೊಂಡಿದ್ದೇವೆ. ದೀಪಾವಳಿ ಹಬ್ಬದ ಆಚರಣೆ ಅತ್ಯಂತ ಪ್ರಾಚೀನ ಕಾಲದಿಂದಲೂ ಇತ್ತು ಎನ್ನುವುದಕ್ಕೆ ವಿವಿಧ ಭಾರತೀಯ ಭಾಷೆಗಳ ಸಾಹಿತ್ಯದಲ್ಲಿ ಪುರಾವೆ ಸಿಗುತ್ತದೆ. ಆಯಾ ಪ್ರಾದೇಶಿಕ ಮಹತ್ತಿನ ಸಂಗತಿಗಳು ಕಾಲಾಂತರದಲ್ಲಿ ಈ ಹಬ್ಬದೊಂದಿಗೆ ಮಿಳಿತಗೊಂಡಂತೆ ತೋರುತ್ತದೆ. ಹಾಗಾಗಿಯೇ ಭಾರತದ ಭಿನ್ನ ಭಿನ್ನ ಪ್ರದೇಶಗಳಲ್ಲಿ ದೀಪಾವಳಿಯ ಜೊತೆಗೆ ಬೆಸೆದಿರುವ ಕಥೆಗಳು ಭಿನ್ನ ಭಿನ್ನ. ಹಾಗಿದ್ದೂ ಕೆಲವು ಐತಿಹ್ಯಗಳು ಎಲ್ಲ ಕಡೆಯೂ ಸಮಾನವಾಗಿವೆ. ಅದರಲ್ಲಿ ಪ್ರಸಿದ್ಧವಾದ್ದು ನರಕಾಸುರನ ವಧೆ. ಇದು ಭಾಗವತ ಪುರಾಣದಲ್ಲಿ ಬರುವ ಒಂದು ಕಥೆ.

ವರಾಹಾವತಾರದ ಕಾಲದಲ್ಲಿ ವಿಷ್ಣುವಿನ ಮೈಬೆವರಿನಿಂದ ಭೂದೇವಿಯಲ್ಲಿ ಹುಟ್ಟಿದ ಈತನಿಗೆ ‘ಭೌಮಾಸುರ’ ಎಂದೂ ಹೆಸರು. ಭೂದೇವಿಯ ಆಗ್ರಹಕ್ಕೆ ಮಣಿದು ಅವನಿಗೆ ವೈಷ್ಣವಾಸ್ತ್ರವನ್ನು ಕೊಡಮಾಡುತ್ತಾನೆ ಮಹಾವಿಷ್ಣು. ಆದರೆ ಪ್ರವೃತ್ತಿಯಿಂದ ರಾಕ್ಷಸನಾದ ಅವನು, ಆ ಅಸ್ತ್ರದ ಮದದಿಂದ ಲೋಕಕಂಟಕನಾಗುತ್ತಾನೆ. ಮುಂದೆ ವಿಷ್ಣುವಿನ ಕೃಷ್ಣಾವತಾರದ ಕಾಲದಲ್ಲಿ ಇಂದ್ರನ ಕೋರಿಕೆಯಂತೆ ಮುರಾಸುರ, ನರಕಾಸುರ ಮತ್ತು ಅವನ ಗಣಗಳನ್ನೆಲ್ಲ ಕೃಷ್ಣನು ಸಂಹರಿಸುತ್ತಾನೆ. ಅಂದಿನಿಂದ ಇಂದಿನವರೆಗೆ ಆಶ್ವಯುಜ ಮಾಸದ ಕೃಷ್ಣ ಚತುರ್ದಶಿಯ ದಿನವನ್ನು ನರಕಾಸುರ ಸಂಹಾರದ ದಿನವನ್ನಾಗಿ ಭಾರತೀಯ ಸಂಸ್ಕೃತಿಯು ನೆನಪಿಟ್ಟುಕೊಂಡಿದೆ.

ಭಾರತದ ಕೆಲವು ರಾಜ್ಯಗಳಲ್ಲಿ ದೀಪಾವಳಿಯ ಹಬ್ಬದ ಜೊತೆಗೆ ಬಲಿ ಚಕ್ರವರ್ತಿಯನ್ನೂ ನೆನೆಯಲಾಗುತ್ತದೆ. ಇವನಾದರೋ ವಿಷ್ಣುಭಕ್ತ, ವೈದಿಕ ಕರ್ಮಗಳಲ್ಲಿ ಶ್ರದ್ಧೆಯಿಟ್ಟವ. ಹಾಗಿದ್ದೂ ತನ್ನ ರಜಸ್ಸು ಮತ್ತು ತಮಸ್ಸಿನ ಗುಣದಿಂದಾಗಿ ಮೂರು ಲೋಕಕ್ಕೂ ತಾನೇ ಇಂದ್ರನಾಗಿ ಮೆರೆಯುತ್ತಾನೆ, ಇಂದ್ರನನ್ನು ಪದಚ್ಯುತಗೊಳಿಸುತ್ತಾನೆ. ಇದು ದೇವತೆಗಳನ್ನು ಕಂಗೆಡಿಸಲಾಗಿ ಅವರೆಲ್ಲ ವಿಷ್ಣುವಿನ ಮೊರೆಹೊಗುತ್ತಾರೆ. ಚಿರಂಜೀವಿಯಾದ ಇವನನ್ನು ವಿಷ್ಣುವು ಪಾತಾಳಕ್ಕೆ ತಳ್ಳುತ್ತಾನೆ. ತನ್ನ ರಾಜ್ಯವನ್ನು ಕಾಣಲೆಂದು ವರ್ಷಕ್ಕೊಮ್ಮೆ ಭೂಲೋಕಕ್ಕೆ ಬರುವ ಅವಕಾಶವನ್ನು ಬಲಿ ಉಳಿಸಿಕೊಳ್ಳುತ್ತಾನೆ. ಹಾಗಾಗಿ ದೀಪಾವಳಿ ಪಾಡ್ಯದಂದು ಬಲಿ ಭೂಲೋಕಕ್ಕೆ ಬರುವನೆಂಬ ನಂಬಿಕೆ ಇದೆ.

ADVERTISEMENT

ಇನ್ನು ದಸರೆಯ ಹೊತ್ತಿಗೆ ರಾವಣಸಂಹಾರ ಮಾಡಿ ಶ್ರೀಲಂಕೆಯಿಂದ ಹೊರಟು ಶ್ರೀರಾಮಚಂದ್ರ ಮತ್ತು ಸೀತಾದೇವಿಯರು ಅಯೋಧ್ಯೆಯನ್ನು ತಲುಪಿದ್ದು ದೀಪಾವಳಿಯಂದೇ. ಹಾಗಾಗಿ ದೀಪಾವಳಿಯ ಹೊತ್ತಿಗೆ ಅಯೋಧ್ಯೆಯು ಅಕ್ಷರಶಃ ಬೆಳಕಿನ ಲೋಕವಾಗಿ ಮೈದಾಳುತ್ತದೆ. ಈ ನಡಾವಳಿಯನ್ನು ನಮ್ಮ ಕಾಲದಲ್ಲಿಯೂ ನೋಡಬಹುದಾಗಿದೆ.

ಈ ಇಲ್ಲ ಕಥೆಗಳ ಒಳ ಮರ್ಮ ಒಂದೇ, ಅದು ಒಳಿತು ಕೆಡುಕುಗಳ ಪ್ರಜ್ಞೆ ಮತ್ತು ಒಳಿತನ್ನು ಉಳಿಸಿ ಎತ್ತಿಹಿಡಿಯುವ ಯತ್ನ. ಕಾಲ ಕಾಲಕ್ಕೆ ಮನುಷ್ಯನಿಗೆ ಒಳಿತು ಕೆಡುಕುಗಳ ನಡುವೆ ಭೇದವೇ ಮರೆತುಹೋಗಿ ಸಮಾಜ ಕಂಗೆಡುತ್ತದೆ ಎಂಬುದಕ್ಕೆ ಐತಿಹಾಸಿಕ ಉದಾಹರಣೆಗಳಿವೆ. ನಾವಾದರೂ ಉಗ್ರವಾದಕ್ಕೂ ದೇಶನಿರ್ಮಾಣದ ಕ್ರಾಂತಿಗೂ, ಚಾಮುಂಡಿಗೂ ಮಹಿಷಾಸುರನಿಗೂ ವ್ಯತ್ಯಾಸ ಅರಿಯದ ಭ್ರಾಂತ ಅವಸ್ಥೆಯಲ್ಲಿದ್ದೇವೆ. ಒಳಿತಿನ ಮೇಲ್ಮೆಯನ್ನು ಮತ್ತು ಕೆಡುಕಿನ ವಿರುದ್ಧ ಅದರ ವಿಜಯವನ್ನು ಪದೇ ಪದೇ ಕೀರ್ತಿಸುವ ಮತ್ತು ಅದನ್ನು ನಿಚ್ಚುಳಗೊಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ದೀಪಾವಳಿಯಂತ ಹಬ್ಬಗಳು ಮುಖ್ಯವಾಗುತ್ತವೆ. ಬೆಳಕು ನಮ್ಮ ಬದುಕಿನ ಭರವಸೆ. ಈ ದೀಪಾವಳಿ ನಮಗಿದನ್ನು ಮತ್ತೆ ಮತ್ತೆ ಅರುಹಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.