ವಿದ್ಯುದ್ದೀಪಗಳ ಚಿತ್ತಾರ... ಈದ್ ಮಿಲಾದ್ ಅಂಗವಾಗಿ ಕಲಬುರಗಿಯ ಖಾಜಾ ಬಂದಾನವಾಜ್ ದರ್ಗಾ ರಸ್ತೆಯನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದ್ದು, ಗುರುವಾರ ರಾತ್ರಿ ಮಕ್ಕಳಿಬ್ಬರು ಬಲೂನು ಹೆಗಲೇರಿಸಿಕೊಂಡು ಹೊರಟ ಕ್ಷಣ...
–ಚಿತ್ರ:ತಾಜುದ್ದೀನ್ ಆಜಾದ್
ಪ್ರವಾದಿ ಮುಹಮ್ಮದ್ ಪೈಗಂಬರರ ಸಾವಿರದ ಐನೂರನೇ ಜನ್ಮದಿನಾಚರಣೆಯು ಈ ಬಾರಿ ಶಿಕ್ಷಕರ ದಿನದಂದೇ ಬಂದಿದೆ. ಪೈಗಂಬರರು ಓರ್ವ ಶಿಕ್ಷಕರಾಗಿದ್ದರು ಎಂಬುವುದನ್ನು ಕುರಾನ್ ಸ್ಪಷ್ಟಪಡಿಸಿದೆ. ‘ನಿಮ್ಮಲ್ಲೇ ಓರ್ವರನ್ನು ನಾವು ಸಂದೇಶವಾಹಕರಾಗಿ ಕಳುಹಿಸುತ್ತೇವೆ. ಅವರು ನಮ್ಮ ಸದ್ವಚನಗಳನ್ನು ನಿಮಗೆ ಓದಿ ಕೊಡುತ್ತಾರೆ. ನಿಮ್ಮನ್ನು ಶುಚಿಗೊಳಿಸುತ್ತಾರೆ. ನಿಮಗೆ ದಿವ್ಯಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ನಿಮಗೆ ಗೊತ್ತಿರದ ವಿಚಾರಗಳನ್ನು ತಿಳಿಯಪಡಿಸುತ್ತಾರೆ’. (ಸೂರಾ ಅಲ್ ಬಖರ -151)
ಕಡುಗತ್ತಲ ಯುಗವೆಂದು ಇತಿಹಾಸಕಾರರಿಂದ ಬಣ್ಣಿಸಲ್ಪಟ್ಟ ಆರನೇ ಶತಮಾನದಲ್ಲಿ ಮಾನವೀಯತೆಯ ದೀವಿಗೆ ಬೆಳಗಲು ಅವರ ಬೋಧನಾ ಶೈಲಿಯು ಕಾರಣವಾಗಿತ್ತು. ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ಬೋಧನೆಯಲ್ಲಿ ಅನಾಗರಿಕ ಸಮಾಜವೊಂದನ್ನು ಪರಿಷ್ಕರಿಸಿ, ಎಲ್ಲರಿಂದಲೂ ಅಂಗೀಕಾರ ಲಭಿಸಿದ ಅಪರೂಪದ ಶಿಕ್ಷಕ ಅವರು.
ತಮ್ಮ ಬಳಿಗೆ ಮೊದಲ ಬಾರಿಗೆ ಬರುವ ವಿದ್ಯಾರ್ಥಿಗಳಲ್ಲಿ ಇರುವ ಆತಂಕ, ತಳಮಳ ಮತ್ತು ಸಂಕೋಚ ಹೋಗಲಾಡಿಸಲು ಪೈಗಂಬರರು ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿ ಮನ ಗೆಲ್ಲುತ್ತಿದ್ದರು. ಇದೇ ರೀತಿ ಮಾಡಿ ಎಂದು ತಮ್ಮ ಅನುಚರರಿಗೂ ಆದೇಶಿಸುತ್ತಿದ್ದರು. ಶಿಷ್ಯರ ಕುತೂಹಲ ಕೆರಳಿಸಲು ಮೊದಲು ಸಂಕ್ಷಿಪ್ತವಾಗಿ ಹೇಳಿ ನಂತರ ಅದರ ವಿವರಣೆಯನ್ನು ನೀಡುತ್ತಿದ್ದರು. ಕೇಳುಗರ ಗಮನ ಸೆಳೆಯಲು, ಅವರಲ್ಲಿ ಕುತೂಹಲ ಮೂಡಿಸಲು ಪ್ರಶ್ನೆಗಳನ್ನು ಕೇಳಿ, ಅವರನ್ನು ಯೋಚಿಸುವಂತೆ ಮಾಡುತ್ತಿದ್ದರು. ನಂತರ ಅವುಗಳಿಗೆ ಉತ್ತರಿಸುತ್ತಿದ್ದರು. ಉಪಮೆಗಳ ಮೂಲಕ ಬೋಧನೆ ಮಾಡುವುದು ಅವರ ಮತ್ತೊಂದು ಶೈಲಿ. ಅವರ ಹೆಚ್ಚಿನ ಬೋಧನೆಗಳು ಉಪಮೆಗಳ ಮೂಲಕವೇ ಇವೆ. ಅವರು ಬಳಸಿದ ಉಪಮೆಗಳ ಬಗ್ಗೆಯೇ ಹಲವು ಗ್ರಂಥಗಳು ರಚನೆಯಾಗಿವೆ.
ನೆರೆದಿರುವವರ ಪ್ರಶ್ನೆಗೆ ಮೊದಲು ಉತ್ತರಿಸಿ ನಂತರ ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಒಮ್ಮೆ ಯಾರೋ ‘ವುದೂ’ (ಅಂಗಾಂಗ ಶುದ್ಧೀಕರಣ) ಮಾಡುವ ವಿಧಾನದ ಬಗ್ಗೆ ಅವರನ್ನು ಕೇಳಿದರು. ಈ ವೇಳೆ ನೀರನ್ನು ತರಿಸಿ ಅದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದರಲ್ಲದೆ, ಕ್ರಮಬದ್ಧವಾಗಿ ಹೇಳಿಕೊಟ್ಟಿದ್ದರು. ಪೈಗಂಬರರು ಕೂಡ ತಮ್ಮ ಮುಂದೆ ಇರುವ ಜನರಲ್ಲಿ ಗೊಂದಲ ಮೂಡಿಸುವ ಜಟಿಲ ಹಾಗೂ ಕ್ಲಿಷ್ಟಕರ ವಿಚಾರಗಳನ್ನು ಮಂಡಿಸುತ್ತಿರಲಿಲ್ಲ. ಅವರ ಮಾತುಗಳು ಅತ್ಯಂತ ಸ್ಪಷ್ಟ ಮತ್ತು ನಿಖರವಾಗಿರುತ್ತಿದ್ದವು. ಕೆಲವು ಮುಖ್ಯ ವಿಚಾರಗಳನ್ನು ಅವರು ಮೂರು ಬಾರಿ ಹೇಳುತ್ತಿದ್ದರು. ಅದಾಗ್ಯೂ ಅವರ ಮಾತುಗಳು ಹೇಗೆ ಸ್ಪಷ್ಟವಾಗಿರುತ್ತಿದ್ದವೆಂದರೆ ಅವರಾಡುವ ಮಾತುಗಳ ಪದಗಳನ್ನು ಎಣಿಸಿ ಹೇಳಬಹುದಿತ್ತು.
ಅವರ ಬೋಧನೆಯಲ್ಲಿ ಹಾಸ್ಯ, ಸೃಜನಶೀಲತೆ ಹಾಗೂ ನಾವೀನ್ಯ ಇರುತ್ತಿತ್ತು. ಮನೆ ಭಾಷೆಯಾಗಿದ್ದಿರಿಂದ ಅರೇಬಿಕ್‌ನಲ್ಲಿ ಅಗಾಧ ಪಾಂಡಿತ್ಯವೂ ಇತ್ತು. ಮುಹಮ್ಮದರ ಬಳಿ ಕೆಲವೊಮ್ಮೆ ಮಹಿಳೆಯರೂ ಸಂದೇಹಗಳನ್ನು ನಿವಾರಿಸಲು ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ವೇಳೆ ಉತ್ತರಿಸಲು ಸಂಕೋಚ ಪಡುವ ಸಂಗತಿಗಳು ಇದ್ದರೆ ನೇರವಾಗಿ ಹೇಳದೆ ಸೂಚ್ಯವಾಗಿ ಹೇಳುತ್ತಿದ್ದರು. ಶಿಷ್ಯರು ಕೇಳುವ ಪ್ರಶ್ನೆಗೆ ಶಾಂತ ಚಿತ್ತರಾಗಿ ಮುಹಮ್ಮದರು ಉತ್ತರಿಸುತ್ತಿದ್ದರು. ಎಷ್ಟೇ ಬಾರಿ ಪುನರಾವರ್ತಿಸಿ ಕೇಳಿದರೂ ಅವರ ಮುಖದಲ್ಲಿನ ಭಾವಗಳು ಬದಲಾಗುತ್ತಿರಲಿಲ್ಲ. ಸಮಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದರು ಅವರು ಕೇಳುಗರಿಗೆ ಬೇಸರವಾಗದಂತೆ ತಮ್ಮ ಭಾಷಣಗಳನ್ನು ಚಿಕ್ಕದಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಿದ್ದರು. ಶಿಷ್ಯರ ಒಳ್ಳೆಯ ಕೆಲಸಗಳನ್ನು ಮೆಚ್ಚಿ ಪ್ರಶಂಸಿಸುತ್ತಿದ್ದರು. ಮೆಚ್ಚುಗೆ ನೀಡುವುದು ಅವರ ಪ್ರೇರಕ ತಂತ್ರಗಳಲ್ಲಿ ಒಂದಾಗಿತ್ತು.
ಪ್ರವಾದಿಯವರ ಬೋಧನೆಯಲ್ಲಿ ಸೃಜನಶೀಲತೆ ಇತ್ತು. ಯುದ್ಧದಲ್ಲಿ ಸೆರೆ ಸಿಕ್ಕ ಕೈದಿಗಳಿಗೆ ತಮ್ಮ ಶಿಷ್ಯಂದಿರ ಮೂಲಕ ಅಕ್ಷರ ಕಲಿಸುತ್ತಿದ್ದರು. ಅಕ್ಷರ ಕಲಿತವರನ್ನು ಬಂಧ ಮುಕ್ತಗೊಳಿಸುತ್ತಿದ್ದರು. ಅವರ ಕಾಲದ ಸಾಂಪ್ರದಾಯಿಕ ಗಾದೆಗಳನ್ನು ತಮ್ಮ ವಿಷಯಾಧಾರಿತವಾಗಿ ಮಾರ್ಪಡಿಸಿ ಜನರ ಮುಂದಿಡುತ್ತಿದ್ದರು. ಮದೀನಾದಲ್ಲಿರುವ ಮಸೀದಿಯನ್ನು ಕೇಂದ್ರ ಶೈಕ್ಷಣಿಕ ಸಂಸ್ಥೆಯನ್ನಾಗಿ ಮಾಡಿದ್ದರು. ಮಸೀದಿಯ ಒಂದು ಭಾಗವನ್ನು ಬಡವರು ಮತ್ತು ಅಗತ್ಯವಿರುವವರು ಉಳಿಯಲು ಮತ್ತು ಕಲಿಯುವವರಿಗೆ ಮೀಸಲಿಟ್ಟಿದ್ದರು. ಜನರನ್ನು ಸಾಕ್ಷರರನ್ನಾಗಿ ಮಾಡಿ ಸಾಮಾಜಿಕ ಅನಿಷ್ಟಗಳನ್ನು ಪರಿಹರಿಸಬಹುದು ಎಂದು ಪ್ರವಾದಿ ದೃಢವಾಗಿ ನಂಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.