ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮದುವೆಗೆ ಆಮಂತ್ರಣ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 19:24 IST
Last Updated 21 ಅಕ್ಟೋಬರ್ 2022, 19:24 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಲಗ್ನಪತ್ರಿಕೆಯನ್ನು ತಂದ ಹಿಮವಂತನ ದೂತರಿಗೆ ಸೂಕ್ತವಾದ ಸಂಭಾವನೆಯನ್ನು ಕೊಟ್ಟು, ಆದರದಿಂದ ಗೌರವಿಸಿದ ಮಹಾದೇವ. ಆಮಂತ್ರಣಕ್ಕೆ ಒಪ್ಪಿರುವುದಾಗಿ ಹೇಳಿ, ದೂತರಿಗೆ ಯಥೋಚಿತವಾದ ಆತಿಥ್ಯವನ್ನು ನೀಡಿದ.

ತನ್ನ ಮತ್ತು ಪಾರ್ವತೀ ವಿವಾಹಕ್ಕೆ ಹಿಮವಂತ ದಂಪತಿಗಳು ಸಂತೋಷದಿಂದ ಒಪ್ಪಿದ್ದಲ್ಲದೆ, ಅದ್ದೂರಿಯಾಗಿ ವಿವಾಹ ನಡೆಸುತ್ತಿರುವುದು ಶಿವನಿಗೆ ತುಂಬಾ ಸಂತೋಷ ಕೊಟ್ಟಿತು. ಸಪ್ತರ್ಷಿಗಳನ್ನು ಕೈಲಾಸಕ್ಕೆ ಕರೆಸಿಕೊಂಡು ಅವರ ಕಾರ್ಯವನ್ನು ಶ್ಲಾಘಿಸಿದ. ನೀವು ಹೋದ ಕಾರ್ಯವನ್ನು ಚೆನ್ನಾಗಿ ಸಾಧಿಸಿ ಬಂದಿದ್ದೀರಿ ಎಂದು ಪ್ರಶಂಸಿಸಿದ. ‘ಹಿಮವಂತ ಕಳುಹಿಸಿದ ವಿವಾಹ ಆಮಂತ್ರಣವನ್ನು ಅಂಗೀಕರಿಸಿದ್ದೇನೆ. ಈ ಮಂಗಳಕಾರ್ಯಕ್ಕೆ ಕಾರಣರಾದ ನೀವೆಲ್ಲರೂ ಬರಬೇಕು’ ಎಂದು ಕೋರಿದ. ಶಂಕರನ ಮಾತನ್ನು ಕೇಳಿ ಸಪ್ತರ್ಷಿಗಳು ಆನಂದಾತಿರೇಕದಲ್ಲಿ ತೇಲಿದರು.

ನಂತರ ಲೀಲಾಮಯನಾದ ಶಂಕರ ಸಂದೇಶಕಾರನಾದ ನಾರದನನ್ನು ಸ್ಮರಿಸಿದ. ಕೂಡಲೇ ನಾರದ ಶಿವನ ಬಳಿಗೆ ಬಂದು ನಮಸ್ಕರಿಸುತ್ತಾ ನಿಂತ. ಶಂಕರ ಸಂತುಷ್ಟನಾಗಿ ‘ಎಲೈ ನಾರದಮುನೀಂದ್ರ! ನೀನು ನನ್ನ ಭಕ್ತೋತ್ತಮರಲ್ಲಿ ಶ್ರೇಷ್ಠನಾಗಿರುವ ಕಾರಣ ಈಗ ನಿನಗೊಂದು ಕಾರ್ಯವನ್ನು ಹೇಳುವೆ ಕೇಳು. ನಿನ್ನ ಉಪದೇಶದಂತೆ ಗಿರಿಜೆ ಮಹಾ ತಪಸ್ಸನ್ನಾಚರಿಸಿ ನನ್ನ ವಿವಾಹವಾಗುತ್ತಿದ್ದಾಳೆ. ಗಿರಿಜೆಯ ಅಖಂಡ ಭಕ್ತಿಗೆ ಮೆಚ್ಚಿ ನಾನು ಅವಳನ್ನು ಮದುವೆಯಾಗುತ್ತಿದ್ದೇನೆ. ಸಪ್ತರ್ಷಿಗಳು ನಮ್ಮ ವಿವಾಹ ಸಂಬಂಧವನ್ನು ಸಾಧಿಸಿ, ಅವರೇ ವಿವಾಹಲಗ್ನವನ್ನು ಶೋಧಿಸಿ ನಿಶ್ಚಯಿಸಿರುವರು. ಅದರಂತೆ ಹಿಮವಂತ ವಿವಾಹ ನಿಶ್ಚಯ ಮಾಡಿ ನನಗೆ ಆಮಂತ್ರಣ ಕಳುಹಿಸಿದ್ದಾನೆ. ಇಂದಿಗೆ ಏಳನೆಯ ದಿನದಲ್ಲಿ ಲೋಕಸಂಪ್ರದಾಯದಂತೆ ವಿವಾಹಮಹೋತ್ಸವವನ್ನು ಮಾಡಿಕೊಳ್ಳುವೆ’ ಎಂದ.

ADVERTISEMENT

ಶಂಕರನ ಮಾತನ್ನು ಕೇಳಿ ಹರ್ಷಿಸಿ, ‘ಓ ಶಂಕರ, ನೀನು ಭಕ್ತಪರಾಧೀನ. ನಿನ್ನ ಭಕ್ತಳಾದ ಗಿರಿಜೆಗೆ ನೀನು ಕೊಟ್ಟ ವರ ನ್ಯಾಯಸಮ್ಮತವಾದುದು. ನಿನ್ನ ವಿವಾಹದಲ್ಲಿ ನಾನು ಮಾಡಬೇಕಾದ ಕಾರ್ಯ ಏನೆಂಬುದನ್ನು ನನ್ನಲ್ಲಿ ಅನುಗ್ರಹವಿಟ್ಟು ಹೇಳು. ನಿನ್ನ ಸೇವಕನಾದ ನನಗೆ ಮಾಡಬೇಕಾದ ಕಾರ್ಯದ ಅಪ್ಪಣೆಮಾಡು’ ಎಂದ.

ಅದಕ್ಕೆ ಶಂಕರ, ‘ಎಲೈ ನಾರದ, ನನ್ನ ಮದುವೆಗೆ ಬರುವಂತೆ ಬ್ರಹ್ಮ-ವಿಷ್ಣು ಮೊದಲಾದ ದೇವತೆಗಳನ್ನೂ ಮುನಿಗಳನ್ನೂ ಸಿದ್ಧರನ್ನೂ ಆಹ್ವಾನಿಸು. ಇವರಲ್ಲದೆ ಇನ್ನೂ ಕರೆಯಬೇಕಾದವರೆಲ್ಲರಿಗೂ ಆಹ್ವಾನ ಕೊಟ್ಟು ಬರಮಾಡು. ಆಮಂತ್ರಿತರೆಲ್ಲರೂ ತಮ್ಮ ಪರಿವಾರಗಳೊಂದಿಗೆ, ಪತ್ನಿ-ಮಕ್ಕಳೊಡನೆ ಆದರದಿಂದ ಬರಲಿ. ನನ್ನ ಮದುವೆಯ ಉತ್ಸವಕ್ಕೆ ಯಾರು ಬರುವುದಿಲ್ಲವೋ, ಅವರು ದೇವತೆಗಳಾಗಲೀ, ಯಾರೇ ಆಗಲಿ, ಅವರು ನನ್ನ ಆಪ್ತರಲ್ಲ’ ಎಂದ.

ಶಂಕರನ ಆಜ್ಞೆಯಂತೆ ಶಿವಭಕ್ತನಾದ ನಾರದ, ಎಲ್ಲಾ ದೇವತೆಳು, ಮುನಿಗಳು, ಸಿದ್ಧರು ಮೊದಲಾದ ಎಲ್ಲರ ಮನೆಗಳಿಗೂ ಹೋಗಿ ವಿವಾಹ ಆಮಂತ್ರಣವನ್ನು ಕೊಟ್ಟು ಬಂದ. ನಂತರ ಕೈಲಾಸಕ್ಕೆ ಬಂದು ಮದುವೆ ಕಾರ್ಯಕ್ಕಾಗಿ ಶಿವನ ಸೇವೆಯಲ್ಲಿ ನಿರತನಾದ. ಶಿವ ತನ್ನ ವಿವಾಹಕ್ಕೆ ಬರುವ ದೇವತೆಗಳು, ಮುನಿಗಳು, ಸಿದ್ಧರು ಮೊದಲಾದವರ ನಿರೀಕ್ಷಿಸುತ್ತಾ, ಮದುವೆ ದಿಬ್ಬಣದ ತಯಾರಿಯ ಸಂಭ್ರಮದಲ್ಲಿದ್ದ. ಅವನ ಗಣಗಳು ಶಿವಪಾರ್ವತಿ ಕಲ್ಯಾಣ ಸಮಾರಂಭದಲ್ಲಿ ಭಾಗವಹಿಸುವ ಕ್ಷಣಗಳನ್ನು ನೆನೆದು, ಹರ್ಷದಿಂದ ಕೈಲಾಸದ ಸುತ್ತಾ ನರ್ತನ ಮಾಡುತ್ತಾ, ಮಹೋತ್ಸಾಹಭರಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.