ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನಿಗೆ ಆರತಿ

ಭಾಗ 270

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 8 ನವೆಂಬರ್ 2022, 19:30 IST
Last Updated 8 ನವೆಂಬರ್ 2022, 19:30 IST
   

ಮದುಮಗನಾದ ಶಂಕರ ತನ್ನ ಗಣಗಳು ಮತ್ತು ದೇವತೆಗಳೊಂದಿಗೆ ಹಿಮವಂತನ ಅರಮನೆಗೆ ಬರುತ್ತಾನೆ. ಆಗ ಮೇನಾದೇವಿ ಋಷಿಪತ್ನಿಯರು ಮತ್ತು ಇತರೆ ಸುಮಂಗಲೆಯರೊಡನೆ ಶಂಕರನಿಗೆ ಆರತಿಯನ್ನೆತ್ತಲು ಬರುತ್ತಾಳೆ. ವಿಶ್ವಸುಂದರನಾದ ಅಳಿಯನನ್ನು ವಿನಾ ಕಾರಣ ಕುರೂಪಿ ಎಂದು ನಿಂದಿಸಿ ಅವಮಾನಿಸಿದೆನಲ್ಲಾ ಎಂದು ತನ್ನ ಬುದ್ಧಿಯನ್ನು ಅಳಿದುಕೊಳ್ಳುತ್ತಾಳೆ. ಯಾರಿಗೂ ಸಿಗದ ಅಪರೂಪದ ಮುತ್ತಾದ ಶಿವನನ್ನು ಗಾಜೆಂದು ಹೀಯಾಳಿಸಿದ ತನ್ನ ಮಂಕುತನಕ್ಕೆ ತಾನೇ ಬೈದುಕೊಳ್ಳುತ್ತಾಳೆ. ಮಗಳು ಪಾರ್ವತಿ, ನಾರದ ಮತ್ತಿತರ ಮುನಿಗಳು, ಸಿದ್ಧಪುರುಷರು, ವಿಷ್ಣು ಬ್ರಹ್ಮ ಮೊದಲಾದ ದೇವತೆಗಳು ಎಷ್ಟು ಹೇಳಿದರೂ, ಕೇಳದೆ ಕೆಟ್ಟ ಹಠ ಹಿಡಿದು ಮದುವೆ ಮುರಿಯಲು ನೋಡಿದ ತನ್ನ ಕುಕೃತ್ಯಗಳನ್ನೆಲ್ಲಾ ನೆನೆದು ನೊಂದುಕೊಳ್ಳುತ್ತಾಳೆ.

ನಾನು ಎಷ್ಟೆಲ್ಲಾ ಅವಮಾನಿಸಿದರೂ ನಗುನಗುತ್ತಾ ಮನೆಗೆ ಬಂದ ಶಿವನ ಔದಾರ್ಯವನ್ನು ಮೇನಾದೇವಿ ಮನಸಾರೆ ಮೆಚ್ಚಿಕೊಳ್ಳುತ್ತಾಳೆ. ಸುಂದರವಾದ ಸಂಪಿಗೆಹೂವಿನ ಬಣ್ಣದ ಶರೀರಕಾಂತಿಯಿಂದ ಬೆಳಗುತ್ತಿದ್ದ ಶಿವನಿಗೆ ಒಂದೇ ಮುಖದಲ್ಲಿ ಮೂರು ಕಣ್ಣುಗಳಿದ್ದರೂ, ರೂಪವಂತನಾಗಿ ಶೋಭಿಸುತ್ತಿದ್ದ. ರತ್ನಾಭರಣಗಳಿಂದ ಅಲಂಕೃತನಾಗಿ ಮಂದಹಾಸ ಬೀರುತ್ತಿದ್ದ ಶಿವನ ಮುಖಾರವಿಂದಕ್ಕೆ ಯಾವ ಮನ್ಮಥರ ರೂಪವೂ ಸರಿಸಾಟಿಯಾಗುತ್ತಿರಲಿಲ್ಲ

ಶಿವನ ಕಂಠವನ್ನು ಕಾಳಿಂಗನ ಬದಲು ಮಾಲತೀಪುಷ್ಪದ ಹಾರ ಧರಿಸಿದ್ದರೆ, ಶಿರಸ್ಸಿನಲ್ಲಿ ಚಂದ್ರರೇಖೆಯ ಬದಲು, ರತ್ನಖಚಿತವಾದ ಕಿರೀಟ ರಾರಾಜಿಸುತ್ತಿತ್ತು. ಸುಂದರವಾದ ಕಂಠಿಹಾರ ಅವನ ವಿಶಾಲ ಎದೆ ತುಂಬಾ ಹರಡಿಕೊಂಡಿತ್ತು. ಮನೋಹರವಾದ ಕಡಗ ಮತ್ತು ಭುಜಕೀರ್ತಿಗಳು ಶಿವನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿತ್ತು. ಅಗ್ನಿಯಂತೆ ಪ್ರಜ್ವಲಿಸುವಂಥ ಅತಿಸೂಕ್ಷ್ಮವೂ ಅತಿಸುಂದರೂವೂ ಆದ ಅಮೂಲ್ಯವಾದ ಬಟ್ಟೆಗಳನ್ನು ಧರಿಸಿ ಪ್ರಕಾಶಮಾನವಾಗಿ ಬೆಳಗುತ್ತಿದ್ದ.

ADVERTISEMENT

ಚಂದನ ಅಗರು ಕಸ್ತೂರಿಗಳಿಂದ ಮಿಶ್ರಿತವಾದ ಕುಂಕುಮವನ್ನು ಹಣೆಗೆ ಇಟ್ಟುಕೊಂಡಿದ್ದರೆ, ಕಾಡಿಗೆಯನ್ನು ಕಣ್ಣಿಗೆ ಹಚ್ಚಿಕೊಂಡಿದ್ದ. ಕೈಯಲ್ಲಿ ರತ್ನಕನ್ನಡಿಯನ್ನು ಹಿಡಿದು, ಅತ್ಯಂತ ಪ್ರಭೆಯಿಂದ ಮನೋಹರವಾಗಿ ಕಂಗೊಳಿಸುತ್ತಿದ್ದ. ಕೋಟಿ ಮನ್ಮಥರಿಗಿಂತಲೂ ಸುಂದರವಾದ ಶರೀರಕಾಂತಿಯುಳ್ಳವನಾಗಿದ್ದ. ಸರ್ವಾಂಗಸುಂದರನಾಗಿದ್ದ ಶಿವ ಆಕರ್ಷಕನಾಗಿ ಕಾಣಿಸುತ್ತಿದ್ದ.

ಹೀಗೆ ಬಹುಸೌಂದರ್ಯದಿಂದ ಬೆಳಗುತ್ತಾ ತನ್ನೆದುರಿನಲ್ಲಿಯೇ ನಿಂತಿರುವ ಮಹಾದೇವನನ್ನು ನೋಡಿದ ಮೇನಾದೇವಿ ತನ್ನ ಹಿಂದಿನ ಶೋಕವನ್ನು ಮರೆತು ಸಂತೋಷದಿಂದ ಸಂಭ್ರಮಿಸಿದಳು. ಇಂಥ ಅಳಿಯನನ್ನು ಪಡೆದ ತಾನು ಕೃತಾರ್ಥಳಾದರೆ, ದೇವಸೇವಿತ ಶಿವನನ್ನು ಪಡೆದ ತನ್ನ ಕುಲ ಪಾವನವಾಯಿತು ಎಂದು ಹರ್ಷದಿಂದ ಹಿಗ್ಗಿದಳು.

ಮಹೇಶ್ವರನ ಸೌಂದರ್ಯವನ್ನು ವರ್ಣಿಸಲು ಸಾಧ್ಯವಿಲ್ಲ ಎಂದ ಪಾರ್ವತಿಯ ಮಾತುಗಳು ಮೇನಾದೇವಿಗೆ ನೆನಪಾಗುತ್ತದೆ. ಇಂಥ ಸುಂದರನಾದ ಶಿವನನ್ನು ಪಡೆಯಲು ಗಿರಿಜೆ ತುಂಬಾ ಪುಣ್ಯ ಮಾಡಿದ್ದಳು ಎಂಬ ಸಖಿಯರ ಮಾತು ನೂರಕ್ಕೆ ನೂರು ಸತ್ಯ ಅನ್ನಿಸುತ್ತದೆ.

ದೇವೋತ್ತಮನೂ ಸರ್ವೋತ್ತಮನೂ ಪುರುಷೋತ್ತಮನೂ ಆದ ಶಿವನನ್ನು ಗಂಡನಾಗಿ ಪಡೆದ ಮಗಳು ಪಾರ್ವತಿ ನಿಜಕ್ಕೂ ಧನ್ಯಳು. ವಿನಾ ಕಾರಣ ತಾನೇ ತಪ್ಪಾಗಿ ಭಾವಿಸಿದೆ ಎಂದು ಮತ್ತೆ ಮತ್ತೆ ಪಶ್ಚಾತ್ತಾಪಡುತ್ತಾಳೆ. ನಂತರ ಹಿಂದಿನ ತನ್ನ ನೋವನ್ನೆಲ್ಲಾ ಮರೆತು, ಮೇನಾದೇವಿ ಸಂತೋಷದಿಂದ ಶಿವನನ್ನು ಮನಸಾರೆ ಹರಸುತ್ತಾ ಆರತಿ ಬೆಳಗಿ ಸ್ವಾಗತಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.