ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನ್ನು ಹರಸಿದ ದುರ್ಗೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 22:00 IST
Last Updated 12 ಆಗಸ್ಟ್ 2022, 22:00 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಹಿಮವಂತ ಮತ್ತು ಮೇನಾದೇವಿಯರು ತಪಸ್ಸನ್ನಾಚರಿಸಿದರು. ರಾತ್ರಿ ಹಗಲು ದುರ್ಗಾದೇವಿ ಮತ್ತು ಪರಮೇಶ್ವರನನ್ನು ಚಿಂತಿಸುತ್ತಾ ಭಕ್ತಿಯಿಂದ ಆರಾಧಿಸಿದರು. ಮೇನಾದೇವಿಯು ಗಂಗಾನದಿಯ ಓಷಧಿಪ್ರಸ್ಥದ ದಡದಲ್ಲಿ ದೊಡ್ಡದಾದ ಉಮಾದೇವಿಯ ಮೂರ್ತಿಯನ್ನು ನಿರ್ಮಿಸಿದಳು. ಚೈತ್ರಮಾಸದಲ್ಲಿ ತಪಸ್ಸು ಪ್ರಾರಂಭಿಸಿದಳು. ಅಷ್ಟಮಿಯ ದಿನ ಉಪವಾಸವಿದ್ದು, ನವಮಿಯಲ್ಲಿ ಮೋದಕ, ತಂಬಿಟ್ಟು, ಪಾಯಸ, ಗಂಧ, ಪುಷ್ಪ ಮುಂತಾದುವುಗಳಿಂದ ಉಮಾದೇವಿಯನ್ನು ಪೂಜಿಸಿದಳು.

ಒಮ್ಮೆ ಯಾವ ಆಹಾರವನ್ನೂ ಸೇವಿಸದೆ ದೇವಿಯನ್ನರ್ಚಿಸಿದರೆ, ಒಮ್ಮೆ ನೀರನ್ನು ಮಾತ್ರ ಸೇವಿಸಿ ಭಕ್ತಿಯಿಂದ ಉಮಾದೇವಿಯನ್ನು ಆರಾಧಿಸುತ್ತಾ ಇಪ್ಪತ್ತೇಳು ವರ್ಷಗಳನ್ನು ಕಳೆದಳು. ಇವಳ ಭಕ್ತಿಗೆ ಮೆಚ್ಚಿ ಜಗನ್ಮಾತೆಯು ಪ್ರತ್ಯಕ್ಷಳಾಗಿ, ‘ಮೇನಾದೇವಿ, ನೀನು ಏನನ್ನು ಪ್ರಾರ್ಥಿಸಿಕೊಂಡಿರುವೆಯೋ, ಅದೆಲ್ಲವನ್ನೂ ಅನುಗ್ರಹಿಸುವೆ’ ಎನ್ನುತ್ತಾಳೆ. ಮೇನಾದೇವಿಯು ‘ನಿನ್ನ ದಿವ್ಯರೂಪವನ್ನು ಪ್ರತ್ಯಕ್ಷಳಾಗಿ ನೋಡಿ ಧನ್ಯಳಾದೆ’ ಎನ್ನುತ್ತಾಳೆ. ಮೇನಾದೇವಿಯನ್ನು ತನ್ನ ಬಾಹುಗಳಿಂದ ಜಗನ್ಮಾತೆ ಆಲಿಂಗಿಸಿದಳು.

ಮೇನಾದೇವಿಯು ‘ಓ ದೇವಿ, ಜಗತ್ತನ್ನು ಸೃಷ್ಟಿಸುವವಳು ನೀನೇ, ರಕ್ಷಿಸುವವಳು ನೀನೇ. ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನೂ ನೀಡಿ, ನಿತ್ಯಾನಂದವನ್ನು ಉಂಟುಮಾಡುವಳು ನೀನೇ. ಓ ದೇವಿ, ನೀನು ಜಗತ್ತಿಗೆ ಕಾರಣಳು. ಜಗತ್ತು ನಿನ್ನಲ್ಲಿಯೇ ನಿಂತಿರುವುದು. ಸಾಂಖ್ಯರು ಹೇಳುವ ಪ್ರಕೃತಿಯೂ ನೀನು, ಪುರುಷನೂ ನೀನು, ಬ್ರಹ್ಮವಸ್ತುವನ್ನು ದೊರಕಿಸಿಕೊಡುವವಳು ನೀನು. ಅಗ್ನಿಯಲ್ಲಿರುವ ಜ್ವಲನಶಕ್ತಿ, ಸೂರ್ಯನಲ್ಲಿರುವ ತಾಪನಶಕ್ತಿ ಹಾಗೂ ಚಂದ್ರನಲ್ಲಿರುವ ಆಹ್ಲಾದನಶಕ್ತಿಯೂ ನೀನೇ. ಜಗತ್ತಿಗೆ ಮಾತಾಮಹಿಯಾದ ನೀನು, ಆಯಾಯ ಕಾಲದಲ್ಲಿ ಬೇಕಾದ ರೂಪಗಳನ್ನು ಧರಿಸಿ ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಮಾಡುವೆ. ಬ್ರಹ್ಮ ವಿಷ್ಣು, ರುದ್ರರ ಶರೀರಗಳಿಗೂ ನೀನೇ ಕಾರಣಳು. ನಿನ್ನ ಅನುಗ್ರಹಕ್ಕೆ ನಾನು ಯೋಗ್ಯಳಾಗಿದ್ದರೆ ವರವನ್ನು ಕೇಳುವೆನು. ಅವುಗಳನ್ನು ಈಡೇರಿಸು.

ADVERTISEMENT

‘ಮೊದಲು ನನಗೆ ನೂರು ಪುತ್ರರು ಜನಿಸಬೇಕು. ಅವರೆಲ್ಲರೂ ದೀರ್ಘಾಯುಷ್ಯವಂತರೂ ಬಲಶಾಲಿಗಳೂ ಸರ್ವಸಮೃದ್ಧಿಯುಳ್ಳವರೂ ಆಗಿರಬೇಕು. ಆಮೇಲೆ ಓರ್ವ ಪುತ್ರಿಯು ಜನಿಸಬೇಕು. ಅವಳು ರೂಪಗುಣಗಳಿಂದ ಕೂಡಿ ಮಾತೃಕುಲ ಪಿತೃಕುಲಗಳೆರಡಕ್ಕೂ ಗೌರವ ತರುವಂಥವಳಾಗಿರಬೇಕು. ಮೂರು ಲೋಕಗಳೂ ಅವಳನ್ನು ಪೂಜಿಸಬೇಕು. ಇದಕ್ಕಾಗಿ ಓ ದೇವಿ, ನೀನೇ ನನ್ನ ಪುತ್ರಿಯಾಗಿ ಜನಿಸು. ಆಮೇಲೆ ರುದ್ರನ ಪ್ರಿಯಮಡದಿಯಾಗಿ ಬೇಕಾದಂತಹ ಲೀಲೆಯನ್ನಾಚರಿಸು’ ಎಂದು ಪ್ರಾರ್ಥಿಸಿದಳು.

‘ಎಲೈ ಮೇನಾದೇವಿ, ನೀನು ಕೇಳಿದಂತೆ ನಿನಗೆ ಬಲಿಷ್ಠರಾದ ನೂರು ಪುತ್ರರು ಜನಿಸುವರು. ಅವರಲ್ಲಿ ಮೊದಲನೆಯವನು ತುಂಬಾ ಬಲವಂತನಾಗಿರುವನು. ನಿನ್ನ ಭಕ್ತಿಗೆ ಸಂತುಷ್ಟಳಾದ ನಾನು ನಿನ್ನ ಪುತ್ರಿಯಾಗಿ ಜನಿಸುವೆ’ ಎಂದು ಹೇಳಿ ಜಗನ್ಮಾತೆ ಪರಮೇಶ್ವರಿಯೂ ಅಂತರ್ಧಾನಳಾದಳು. ಮೇನಾದೇವಿ ಪತಿ ಹಿಮವಂತನಿಗೆ ದುರ್ಗೆಯಿಂದ ವರ ಪಡೆದುದನ್ನು ಹೇಳಿದಳು. ಮುಂದೆ ಯೋಗ್ಯವಾದ ಕಾಲದಲ್ಲಿ ಮೇನಾದೇವಿಗೆ ಗರ್ಭೋತ್ಪತ್ತಿಯಾಯಿತು. ಶುಭದಿವಸದಲ್ಲಿ ಮೈನಾಕ ಎಂಬ ಪುತ್ರರತ್ನವೊಂದನ್ನು ಹಡೆದಳು. ಮೈನಾಕನು ದೊಡ್ಡವನಾದಾಗ ನಾಗಕನ್ಯೆಯರ ಭೋಗವನ್ನನುಭವಿಸುತ್ತಾ ಪಾತಾಳದಲ್ಲಿ ನೆಲಸಿದನು.

ಸಮುದ್ರನಿಗೂ ಅವನಿಗೂ ದೃಢವಾದ ಸಖ್ಯವಾಯಿತು. ಇದರಿಂದ ಕೋಪಗೊಂಡ ಇಂದ್ರ ವಜ್ರಾಯುಧವನ್ನು ಹಿಡಿದು ಪರ್ವತಗಳ ರೆಕ್ಕೆಗಳನ್ನು ಕತ್ತರಿಸತೊಡಗಿದರೂ, ಮೈನಾಕನಿಗೆ ವಜ್ರಾಯುಧದ ಪ್ರಹಾರವೇ ತಾಕಲಿಲ್ಲ. ಇಂದೂ ಮೈನಾಕನು ರೆಕ್ಕೆಗಳುಳ್ಳವನಾಗಿಯೇ ಇರುವನು. ಮೈನಾಕನೇ ಮೇನಾದೇವಿಯ ನೂರು ಮಕ್ಕಳಲ್ಲಿ ಶ್ರೇಷ್ಠನು. ಮಹಾ ಬಲಿಷ್ಠನು. ಅನೇಕ ಪರ್ವತಗಳಿಗೆ ಆಶ್ರಯನಾಗಿರುವನು ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ, ಎರಡನೆಯದಾದ ರುದ್ರಸಂಹಿತೆಯ ಮೂರನೇ ಪಾರ್ವತೀಖಂಡದ ಐದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.