ADVERTISEMENT

ಗುರು ಮತ್ತು ಜೀವನ: ಅವಿನಾಭಾವ ಸಂಬಂಧ; ಶ್ರೀ ಶ್ರೀ ರವಿ ಶಂಕರ್ ಲೇಖನ

ಶ್ರೀ ಶ್ರೀ ರವಿಶಂಕರ್
Published 9 ಜುಲೈ 2025, 23:30 IST
Last Updated 9 ಜುಲೈ 2025, 23:30 IST
<div class="paragraphs"><p>ಗುರು ಪೂರ್ಣಿಮ</p></div>

ಗುರು ಪೂರ್ಣಿಮ

   

ಒಬ್ಬ ಸಂತನ ಕಥೆ ಇದೆ. ಅವರು ಊರೊಂದನ್ನು ಹಾದು ಹೋಗುತ್ತಿದ್ದರು. ಅಲ್ಲಿನ ಮನೆಯೊಂದರಲ್ಲಿ ಒಬ್ಬ ತಾಯಿ ತನ್ನ ಮಗನ ಮೇಲೆ ಕೂಗುತ್ತಿದ್ದಳು – “ರಾಮಾ, ಇನ್ನೆಷ್ಟು ನಿದ್ರೆ ಮಾಡ್ತೀಯ? ಎದ್ದೇಳು!” ಎಂದು.

ಆ ಮಾತು ಕೇಳಿದ ಕ್ಷಣದಲ್ಲಿ ಸಂತನ ಮನಸ್ಸು ಜಾಗೃತವಾಯಿತು. ಭೂತ ಮತ್ತು ಭವಿಷ್ಯದ ಭ್ರಮೆಯಿಂದ ಹೊರಬಂದ ಅವರು, ಆ ಕ್ಷಣದಲ್ಲೇ ಪ್ರಬುದ್ಧರಾದರು. ಅಜ್ಞಾನದ ನಿದ್ರೆಯಿಂದ ಎದ್ದರು. ಮತ್ತೆಂದೂ ನಿದ್ರೆಗೆ ಜಾರಲಿಲ್ಲ.

ADVERTISEMENT

ಅಳುಕು ಮತ್ತು ದೂರುವ ಮನಸ್ಸಿನಿಂದ ಹೊರಬರಲು, ಪ್ರಕೃತಿಯೇ ನಮಗೆ ಸಾಕಷ್ಟು ವಿಧದಲ್ಲಿ ಎಚ್ಚರಿಸುತ್ತಾ ಇದೆ. ನಮ್ಮ ಜೀವನದಲ್ಲಿ ಜ್ಞಾನವನ್ನು ಜಾಗೃತಗೊಳಿಸುವಂತಹ ಸುದಿನಗಳಲ್ಲಿ ಗುರುಪೂರ್ಣಿಮೆಯು ಒಂದು.

ಜೀವನವನ್ನು ಧನ್ಯತೆಯಿಂದ ಗೌರವಿಸಿದಾಗ, ದೂರುಗಳು ಇರುವುದಿಲ್ಲ.

ಗುರು ತತ್ವವನ್ನು ಗೌರವಿಸುವುದು

ನಿಮ್ಮದೇ ಒಂದು ವಿಸ್ಮಯವನ್ನು ಗಮನಿಸಿ –ನಿಮ್ಮಲ್ಲಿ ಪ್ರತಿದಿನವೂ ಲಕ್ಷಾಂತರ ಜೀವ ಕೋಶಗಳು ನಿರಂತರವಾಗಿ ಹುಟ್ಟುತ್ತಾ, ತನ್ನದೇ ಲಯದಲ್ಲಿ ಲೀನವಾಗುತ್ತಿವೆ. ನಿಮ್ಮ ದೇಹದಲ್ಲಿ ಇಡೀ ಊರೇ ಕಾರ್ಯನಿರ್ವಹಿಸುತ್ತಿದೆ. ಇದು ಜೇನಿನ ಗೂಡಿನಂತೆ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ರಾಣಿ ಜೇನುಹುಳದ ಸುತ್ತಲೂ ಸಾವಿರಾರು ಇತರ ಜೇನುನೊಣಗಳು ಇರುವಂತೆ. ಆದರೆ ಆ ರಾಣಿ ಜೇನುನೊಣ ಹೋದರೆ ಗೂಡು ಸಂಪೂರ್ಣವಾಗಿ ಕುಸಿಯುತ್ತದೆ.

ಹಾಗೆಯೇ, ನಮ್ಮೊಳಗಿನ ಆತ್ಮ ಅಥವಾ ದಿವ್ಯತೆ, ಅಂದರೆ ಗುರುತತ್ತ್ವವೇ – ನಮ್ಮ ಕೇಂದ್ರಬಿಂದು. ದೈವ, ಆತ್ಮ ಮತ್ತು ಗುರು – ಇವು ಬೇರೆಯಲ್ಲ. ಇವೆಲ್ಲವೂ ಒಂದೇ. ನಮ್ಮ ಜೀವನದ ಮಧ್ಯದಲ್ಲಿರುವ 'ರಾಣಿಜೇನಿನಂತೆ, ಎಲ್ಲವನ್ನು ಏಕತೆಯಲ್ಲಿ ಹಿಡಿದಿಟ್ಟಿರುವ ಶಕ್ತಿ.

ಗುರುತತ್ತ್ವವು, ಚತುರತೆ, ಪ್ರಬುದ್ಧತೆ ಗಾಂಭೀರ್ಯತೆಯ ಜೊತೆ-ಜೊತೆಗೆ ಅತ್ಯಂತ ವಿನಮ್ರತೆ ಹಾಗು ಮಗುವಿನ ಮುಗ್ದತೆಯಿಂದ ಕೂಡಿದೆ.

“ಗುರುವಿಗೆ ನಮಸ್ಕರಿಸುವುದು” ಎಂದರೆ ಜೀವನವನ್ನೇ ಗೌರವಿಸುವುದು ಎಂದರ್ಥ. ಇದೇ ಗುರುಪೂರ್ಣಿಮೆಯ ಸಾರ.

ಗುರುವು ನಿಮಗೆ ಕೇವಲ ಜ್ಞಾನವನ್ನು ತುಂಬುವುದಿಲ್ಲ, ಅವರು ನಿಮ್ಮೊಳಗಿನ ಜೀವಶಕ್ತಿಯನ್ನೇ ಜಾಗೃತಗೊಳಿಸುತ್ತಾರೆ. ಗುರುವು ಜ್ಞಾನವನ್ನು ಅನುಭವಕ್ಕೆ ತಂದುಕೊಡುತ್ತಾರೆ. ಜ್ಞಾನ ಮತ್ತು ಜೀವನ – ಇವೆರಡೂ ಒಂದೇ ಆಗುವಂತೆ ಮಾಡುವವರು ಗುರು.

ನಿಮ್ಮ ಜೀವನದಲ್ಲಿ ನೀವು ಪಡೆದಿರುವ ಜ್ಞಾನವೇ ನಿಮ್ಮ ಗುರು. ಎಲ್ಲಿ ತಪ್ಪಾಯಿತು, ಎಲ್ಲಿ ಸರಿ ಆಯಿತು ಎಂದು ಜೀವನವೇ ನಿಮಗೆ ತೋರಿಸುತ್ತಿದೆ.

ಈ ಜ್ಞಾನದ ಕಡೆ ಮತ್ತೆ ಮತ್ತೆ ಬೆಳಕು ಚೆಲ್ಲಬೇಕು – ಇಲ್ಲದಿದ್ದರೆ ನಾವು ಗುರುತತ್ತ್ವವನ್ನು ಮರೆತವರಾಗುತ್ತೇವೆ.

ಗುರುಪೂರ್ಣಿಮೆ – ಇದು ಸಾಧಕರಿಗೆ ಹೊಸ ವರ್ಷದಂತೆ. ಈ ದಿನ, ಹಿಂದಿನ ಒಂದು ವರ್ಷದಲ್ಲಿ ಎಷ್ಟು ಬೆಳವಣಿಗೆ ಹೊಂದಿದ್ದೇವೆ? ಎಷ್ಟು ಸ್ಥಿರತೆ ಬಂದಿದೆ? ಎಂಬುದನ್ನು ಅವಲೋಕಿಸಿಕೊಳ್ಳುವ ಕಾಲ.

ನಾವು ಜ್ಞಾನದೆಡೆಗೆ ಹಿಂದಿರುಗಬೇಕಾದ ಸಮಯ. ಬುದ್ಧಿಯನ್ನು ಜ್ಞಾನದ ಕಡೆ ಹರಿಸಬೇಕು – ಇದುವೇ ಸತ್ಸಂಗ. ಸತ್ಯ, ಜ್ಞಾನದ ಸಂಗ. ನಿಮ್ಮೊಳಗಿನ ಸತ್ಯದೊಂದಿಗೆ ಬೆರೆಯುವುದು – ಅದೇ ಸತ್ಸಂಗ.

ಪಡೆದ ಅನುಗ್ರಹಕ್ಕೆ ಕೃತಜ್ಞರಾಗಿ

ಗುರುಪೂರ್ಣಿಮೆಯಂದು ನೆನೆಯಬೇಕಾದ ಎರಡನೇ ಸಂಗತಿ ಎಂದರೆ ಅದುವೆ ನಿಮಗೆ ಅನುಗ್ರಹಿಸಿರುವ ಕುಶಲತೆಗಳನ್ನು ಸದುಪಯೋಗಗೊಳಿಸುವುದಾಗಿದೆ. ನಿಮಗೆ ಚೆನ್ನಾಗಿ ಮಾತನಾಡಲು ಬರುತ್ತದೆಂದರೆ, ಅದನ್ನು ಇತರರ ಹಿತಕ್ಕೆ ಬಳಸಬೇಕು. ನೀವು ಪಡೆದಿರುವ ಯಾವ ವರವಿದ್ದರೂ, ಅದಕ್ಕೆ ಧನ್ಯತೆ ಹೇಳಿ ಜವಾಬ್ದಾರಿಯಿಂದ ಉಪಯೋಗಿಸಿದರೆ ಇನ್ನಷ್ಟು ಅನುಗ್ರಹಗಳು ಹರಿದು ಬರುತ್ತವೆ. ಕೊಡುವವನು ಯಾವುದೇ ಪ್ರತಿಫಲವನ್ನೂ ನಿರೀಕ್ಷಿಸದೆ, ನಿರಂತರವಾಗಿ ನೀಡುತ್ತಲೇ ಇರುತ್ತಾನೆ.

ಮಾತಿನಿಂದ ಮೌನದೆಡೆಗೆ ಚಲಿಸಿ

ತಿಳುವಳಿಕೆಯಲ್ಲಿ ಮೂರು ಹಂತಗಳಿವೆ. ಮೊದಲಿಗೆ ಪದಗಳ ಮೂಲಕ, ನಂತರ ಭಾವನೆಗಳ ಮೂಲಕ, ಅಂತಿಮವಾಗಿ ಮೌನದ ಮೂಲಕ.

ಪದಗಳ ಹಿಂದೆ ಇರುವ ಅರ್ಥವನ್ನೇ ನೋಡಬೇಕು. ಆದರೆ ಅರ್ಥವೂ ಭಾವವೂ ಬದಲಾಗುತ್ತಲೇ ಇರುತ್ತವೆ. ಆದರೆ ಮೌನವೇ ನಿಜವಾದ ಸಾರವನ್ನು ಸಾರುತ್ತದೆ.

ಸಾಧನಾ ಪಥದಲ್ಲಿ ಮುಂದುವರೆದಾಗ, ಮನಸ್ಸಿನ ಚಿಂತನೆಯಿಂದ, ಕೃತಜ್ಞತಾ ಭಾವವು ಮೂಡುತ್ತದೆ, ಕೃತಜ್ಞತಾ ಭಾವದಿಂದ ಆನಂದದ ಮೌನದತ್ತ ಕರೆದೊಯ್ಯುತ್ತದೆ.

ಗುರುವನ್ನು ಸಾಕ್ಷಿಭಾವವೆಂದು ತಿಳಿಯಿರಿ

ಗುರುವನ್ನು ಕೇವಲ ಒಂದು ರೂಪ ಅಥವಾ ವ್ಯಕ್ತಿಯನ್ನಾಗಿ ಕಾಣಬೇಡಿ. ರೂಪಕ್ಕೂ ಮೀರಿದ ಗುರುವನ್ನು ನೋಡಿ. ಅವರು ಶರಣಾಗತಿಯನ್ನೂ ತರುತ್ತಾರೆ. ಆದರೆ ಅವರು ಬುದ್ಧಿಗಳ, ಮನಸ್ಸುಗಳ, ಚಿಂತನೆಗಳ ಸಾಕ್ಷಿ. ಒಳ್ಳೆಯದು, ಕೆಟ್ಟದು, ಸರಿ, ತಪ್ಪು. ಇವುಗಳಲ್ಲಿ ಅವರು ತೊಡಗಿಸಿಕೊಂಡಿರುವುದಿಲ್ಲ.

ಜೀವನದಲ್ಲಿ ಸಕಾರಾತ್ಮಕ ಅನುಭವಗಳು ಹರ್ಷವನ್ನು ತಂದಿದ್ದರೆ, ಪ್ರತಿಕೂಲ ಅನುಭವಗಳು ಆಳತೆಯನ್ನು ತಂದಿವೆ. ಇವೆರಡೂ ಬೆಳವಣಿಗೆಯ ಭಾಗ.

ಗುರುತತ್ತ್ವ ಎಂದರೆ, ಎಲ್ಲವೂ ಕಂಡು ಕೇಳಿ ಇರುವಾಗಲೂ ಅದಕ್ಕೆ ಅಂಟಿಕೊಳ್ಳದ, ಮೌನದ ಸಾಕ್ಷಿಯಾಗಿ ಇರುವ ಶಕ್ತಿ.

ಜೀವನದಿಂದ ಪಲಾಯನವಿಲ್ಲ: ಜ್ಞಾನವೇ ನೆಲೆ

ಜ್ಞಾನವೆಂದರೆ ಜೀವನದಿಂದ ಓಡುವುದು ಅಲ್ಲ. ಸತ್ಯದಲ್ಲಿ ನೆಲೆನಿಂತು, ಶಾಂತಿಯುತವಾಗಿ ಬದುಕುವುದು.

ಸಾಧನಾ ಪಥದಲ್ಲಿ ನಂಬಿಕೆಯಿಂದ ಮುಂದಕ್ಕೆ ಹೆಜ್ಜೆ ಹಾಕಿ. ಏನೇ ಆಗಲಿ ಉತ್ತಮವಾದದ್ದೇ ನಿಮ್ಮ ಜೀವನದಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.