ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಪುರಾಣದಿಂದ ಸುಜ್ಞಾನ ಪ್ರಾಪ್ತಿ

ಭಾಗ – 4

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 22 ಡಿಸೆಂಬರ್ 2021, 19:30 IST
Last Updated 22 ಡಿಸೆಂಬರ್ 2021, 19:30 IST
   

ಶಿವಮಹಾಪುರಾಣವನ್ನು ಬರೆದ ವ್ಯಾಸರ ಮುತ್ತಾತ ವಸಿಷ್ಠಮಹರ್ಷಿ. ವಸಿಷ್ಠರ ಮಗ ಶಕ್ತಿಮಹರ್ಷಿ. ಶಕ್ತಿಮಹರ್ಷಿ ಮಗ ಪರಾಶರ. ಪರಾಶರ ಮತ್ತು ಬೆಸ್ತಕುಲದ ಸತ್ಯವತಿ ಮಗನೇ ವೇದವ್ಯಾಸ. ವೇದ ವ್ಯಾಸರಿಗೆ ನಾಲ್ವರು ಮಕ್ಕಳು. ಅವರೇ ಧೃತರಾಷ್ಟ್ರ, ಪಾಂಡು, ವಿಧುರ ಮತ್ತು ಶುಕ. ವ್ಯಾಸರ ಮಗ ಶುಕಮುನಿಯೇ ತಮ್ಮ ತಂದೆ ಬರೆದ ಭಾಗವತಪುರಾಣವನ್ನ ಜಗತ್ತಿಗೆ ತಿಳಿಸಿದ್ದು. ವ್ಯಾಸರ ಪರಮಶಿಷ್ಯ ಮತ್ತು ಶಿವಪುರಾಣವನ್ನ ಜಗತ್ತಿಗೆ ತಿಳಿಸಿದ ಸೂತಮುನಿ ತಂದೆ ಲೋಮಹರ್ಷನ. ಸೂತಮುನಿಯಿಂದ ಶಿವಪುರಾಣ ಕೇಳಿದ ಶೌನಕಮುನಿ ತಂದೆಯೆ ವೇದಋಷಿ ಗೃತ್ಸಮದ.

ನಮ್ಮ ಹಿಂದೂ ಪುರಾಣಗಳು ನಾಮಕಾವಸ್ತೆ ಕಥೆಗಳೂ ಅಲ್ಲ, ಚರ್ವಿತಚರ್ವಣಗಳೂ ಅಲ್ಲ. ನಮ್ಮ ಪುರಾಣ ಪುಣ್ಯಕಥೆಗಳು ಈ ದೇಶದ ಸಂಸ್ಕೃತಿಯ ಇತಿಹಾಸವನ್ನ ಹೇಳುತ್ತವೆ. ಇದನ್ನ ಆದಿಯಿಂದ ಕ್ರಮವಾಗಿ ನೋಡಿದರೆ, ಸಮಗ್ರ ಚರಿತ್ರಾ ರೂಪ ಕಾಣಿಸುತ್ತೆ. ಇಂಥ ಭವ್ಯ, ಅಷ್ಟೇ ಶ್ರೀಮಂತ ಸಂಸ್ಕೃತಿಯ ಇತಿಹಾಸ ನೋಡಲು ನಮಗೆ ಸಣ್ಣ ಮಸ್ತಿಷ್ಕ ಸಾಲುವುದಿಲ್ಲ. ಹಿಂದೂ ಸಂಸ್ಕೃತಿಯ ವಿರಾಟರೂಪ ನೋಡಬೇಕಾದರೆ, ವ್ಯಾಸರಿಗಿದ್ದಂಥ ಮಹಾಬುದ್ಧಿ ಬೇಕು. ಹಾಗೇ, ವಿಶಾಲ ಮನಸ್ಸು ಸಹ ಅಗತ್ಯ. ಹಿಂದೂ ಧರ್ಮದ ಪುರಾಣ ಪುಣ್ಯಕಥೆಗಳನ್ನ ಕೇಳುವುದರಿಂದ ಎಂಥ ಅಲ್ಪಮತಿಯೂ ಬುದ್ಧಿವಂತನಾಗುತ್ತಾನೆ. ಎಂಥ ಮಹಾಪಾಪಿಯೂ ಪುಣ್ಯವಂತನಾಗುತ್ತಾನೆ. ಅದರಲ್ಲೂ ವೇದವ್ಯಾಸರ ಶಿವಪುರಾಣ ಕೇಳಿದರಂತೂ ಏಳೇಳು ಜನ್ಮದ ಪಾಪ ಕಳೆದು, ಏಳೇಳು ಜನ್ಮದ ಪುಣ್ಯ ಪ್ರಾಪ್ತಿಯಾಗುತ್ತೆ.

ಶಿವಪುರಾಣ ಕೇಳಿದವರ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎಂಬ ಮೂರು ವಿಧದ ಕ್ಲೇಶಗಳನ್ನ ಪರಿಹರಿಸಿ, ಅವರ ಬದುಕಲ್ಲಿ ಸುಖವುಂಟುಮಾಡುತ್ತಂತೆ. ಶಿವನಲ್ಲದೆ, ಬ್ರಹ್ಮ-ವಿಷ್ಣು ಸಹಿತ ಎಲ್ಲಾ ಮುಕ್ಕೋಟಿ ದೇವತೆಗಳಿಗೂ ಶಿವಪುರಾಣ ಪ್ರಾಣಕ್ಕಿಂತ ಪ್ರಿಯವಾದದ್ದು. ಭೂಲೋಕವಲ್ಲದೆ, ಪರಲೋಕದಲ್ಲೂ ಸುಖವಾಗಿರಬೇಕಾದರೆ, ಶಿವಪುರಾಣವನ್ನ ಕೇಳಬೇಕೆಂದು ಸ್ಕಂದ ಪುರಾಣದಲ್ಲೆ, ಶಿವಪುರಾಣದ ಮಹಿಮೆಯನ್ನ ಬಹಳಷ್ಟು ಕೊಂಡಾಡಲಾಗಿದೆ. ಸಾವಿರ ಅಶ್ವಮೇಧಯಾಗಗಳು, ನೂರು ವಾಜಪೇಯಿಯಾಗಗಳನ್ನ ಮಾಡಿದರೆ ಸಿಗುವ ಫಲಗಳೆಲ್ಲಾ ಶಿವಪುರಾಣ ಕೇಳುವುದರಿಂದಲೇ ಬರುವುದು. ಶಿವಪುರಾಣ ಕೇಳುವುದರಿಂದ ಸಿಗುವ ಪುಣ್ಯಫಲಗಳಲ್ಲಿ, ಯಾವ ಯಜ್ಞ-ಯಾಗಗಳು ಸಾಟಿಯಾಗಲಾರವು. ಗಂಗಾದಿ ಪುಣ್ಯನದಿಗಳಲ್ಲಿ ಸ್ನಾನ ಮಾಡಿದರೂ, ಅಯೋಧ್ಯಾ-ಮಥುರಾದಂಥ ಏಳು ಪವಿತ್ರವಾದ ಸ್ಥಳಗಳಿಗೆ ಹೋದರೂ ಸಹ, ಶಿವಪುರಾಣದಿಂದ ಸಿಗುವ ಪುಣ್ಯವನ್ನು ಸರಿಗಟ್ಟಲಾರವು ಅನ್ನುತ್ತಾನೆ ಸೂತಮುನಿ.

ADVERTISEMENT

ಭೂಲೋಕದಲ್ಲೆ ಅತ್ಯುತ್ತಮವಾದ ಶೈವಪುರಾಣವು ಮನುಷ್ಯನ ಕಿವಿಗೆ ಬೀಳೋವರೆಗೆ ಜ್ಞಾನವಿಲ್ಲದವನಂತೆ ಸಂಸಾರಬಂಧನದಲ್ಲಿ ತೊಳಲಾಡುತ್ತಿರುತ್ತಾನೆ. ಶಿವಪುರಾಣವನ್ನ ಭಕ್ತಿಯಿಂದ ಎಲ್ಲಿಯವರೆಗೆ ಕೇಳುವುದಿಲ್ಲವೋ, ಅಲ್ಲಿಯವರೆಗೆ ಮನುಷ್ಯ ಪಾಪಿಷ್ಠನಾಗಿರುತ್ತಾನೆ. ಎಂಥ ಅಜ್ಞಾನಿಯೂ ಶಿವಪುರಾಣ ಕೇಳಿದ ಕೂಡಲೇ ಜ್ಞಾನೋದಯವಾಗಿ, ಜೀವನ್ಮುಕ್ತಿ ಪಡೆಯುತ್ತಾನೆ. ಇಂಥ ಸದ್ಗತಿ ಕೊಡುವ ಶಿವಪುರಾಣವನ್ನ ಸಂಪೂರ್ಣವಾಗಿ ಯಾರೂ ಭಕ್ತಿಯಿಂದ ಪಠಣಮಾಡುವರೋ, ಅವರು ಜೀವನ್ಮುಕ್ತರಾಗುತ್ತಾರೆ. ಈ ಲೋಕದಲ್ಲಿಯಲ್ಲದೆ, ಪರಲೋಕದಲ್ಲೂ ಸುಖವಾಗಿರಬೇಕೆಂದರೆ, ಶಿವತತ್ವಗಳಿಂದ ಪರಿಪೂರ್ಣವಾದ ಶಿವಪುರಾಣವನ್ನ ಕೇಳಬೇಕು.

ಏಳು ಸಂಹಿತೆಗಳಿಂದಾದ ಶಿವಪುರಾಣ ಪರಬ್ರಹ್ಮ ಸ್ವರೂಪವಾಗಿದೆ. ಇದರಲ್ಲಿ ಒಟ್ಟು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿವೆ. ಇದನ್ನ ಭಕ್ತಿ, ಜ್ಞಾನ, ವೈರಾಗ್ಯಗಳಿಂದ ಮತ್ತು ಸಾವಧಾನ ಮನಸ್ಸಿನಿಂದ ಕೇಳಬೇಕು. ಇಂತಹ ಶಿವಪುರಾಣವನ್ನ ಆಸ್ವಾದಿಸಲು ಯಾವಾಗಲೂ ಸಂತೋಷಚಿತ್ತನಾಗಿರುತ್ತೇನೆ. ಯಾವಾಗಲೂ ಶಿವಪುರಾಣವನ್ನ ಸ್ಮರಿಸಿ, ನಮಸ್ಕರಿಸುತ್ತೇನೆ. ಇದರಿಂದ ಪರಶಿವನು ಪ್ರಸನ್ನನಾಗಿ ತನಗೆ ಅವನ ಪಾದಕಮಲಗಳಲ್ಲಿರುವಂಥ ಭಕ್ತಿಯನ್ನು ಅನುಗ್ರಹಿಸುತ್ತಾನೆ ಎಂದು ಸೂತಮುನಿ ಸ್ಪಷ್ಟೋಕ್ತಿಯಲ್ಲಿ ಹೇಳುತ್ತಾನೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.