ADVERTISEMENT

Holi Festival: ಅಕಾಲ ಕಾಮನ ಸುಡುವುದೇ ಹಬ್ಬ

ಎಸ್.ಸೂರ್ಯಪ್ರಕಾಶ ಪಂಡಿತ್
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
   

ನಮ್ಮ ಶರೀರಕ್ಕೆ ಕಲ್ಮಷಗಳು ಸೇರುತ್ತಲೇ ಇರುತ್ತವೆ. ದೇಹವು ಆರೋಗ್ಯವಾಗಿರಬೇಕಾದರೆ ಈ ಕಲ್ಮಷಗಳು ಶರೀರದಿಂದ ಹೊರಹೋಗುತ್ತಲೂ ಇರಬೇಕು. ಹೀಗೆಯೇ ಮನಸ್ಸಿಗೂ ಕಲ್ಮಷಗಳು ಅಂಟುತ್ತಲೇ ಇರುತ್ತವೆ. ಅವನ್ನೂ ನಾವು ಹೊರಹಾಕುತ್ತಲೇ ಇರಬೇಕು; ಇಲ್ಲವಾದಲ್ಲಿ ನಮ್ಮ ಒಟ್ಟು ಆರೋಗ್ಯವೇ ಕೆಡುತ್ತದೆ. ಶರೀರ ಮತ್ತು ಮನಸ್ಸಿಗೆ ಬೇಕಾದವುಗಳ ಜೊತೆ ಜೊತೆಗೇ ಬೇಡುವಾದುವು ಕೂಡ ಸೇರಿಕೊಳ್ಳುವುದು ಸಹಜ ಪ್ರಕ್ರಿಯೆ. ಹೀಗಾಗಿ ಕಲ್ಮಷಗಳಿಂದ ಪೂರ್ಣ ಮುಕ್ತಿ ಎನ್ನುವುದು ನಮಗೆ ಸಾಧ್ಯವಾಗದು. ಆದರೆ ಅವುಗಳಿಂದ ಒದಗುವ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಪರಂಪರೆ ಇಂಥ ವಿವೇಕವನ್ನು ಹಲವು ವಿಧಿ–ವಿಧಾನಗಳ ಮೂಲಕ ಒದಗಿಸುತ್ತಿರುತ್ತದೆ.

‘ಕಾಮ’ದಿಂದ ಬಿಡುಗಡೆಯನ್ನು ಸಾಧಿಸುವುದು ಸುಲಭವೂ ಅಲ್ಲ; ಸಾಧುವೂ ಅಲ್ಲ. ಕಾಮ ಎಂದರೆ ದೈಹಿಕ ಕಾಮನೆಗಳೂ ಹೌದು, ಮಾನಸಿಕ ಕಾಮನೆಗಳೂ ಹೌದು. ನಮ್ಮಲ್ಲಿ ಹುಟ್ಟಿಕೊಳ್ಳುವ ಎಲ್ಲ ಬಗೆಯ ಬಯಕೆಗಳೂ ‘ಕಾಮ’ದ ವ್ಯಾಪ್ತಿಗೇ ಬರುತ್ತವೆ. ಕಾಮವೇ ಇಲ್ಲದಿದ್ದರೆ ನಮ್ಮ ಯಾರ ಹುಟ್ಟೂ ಇರುತ್ತಿರಲಿಲ್ಲ, ಜೀವನವೂ ಇರುತ್ತಿರಲಿಲ್ಲ. ಆದರೆ ನಮ್ಮ ಅಸ್ತಿತ್ವದೊಂದಿಗೇ ಬೆಸೆದುಕೊಂಡಿರುವ ಕಾಮದೊಂದಿಗಿನ ವ್ಯವಹಾರ ಸುಲಭವಲ್ಲ! ಸಹಜವೇ ಆಗಿರುವ ಕಾಮವು ಸ್ವಲ್ಪ ಹದಮೀರಿದರೂ ವಿಕೃತವಾಗಿಬಿಡುತ್ತದೆ. ಇದನ್ನೇ ಪರಂಪರೆ ಸೊಗಸಾಗಿ ನಿರೂಪಿಸಿತು. ಕಾಮದ ಸಂಚಾರಕ್ಕೆ ಎರಡು ಮುಖಗಳು: ಸಹಜವೂ ಅನಿವಾರ್ಯವೂ ಆದುದು ಒಂದು; ಇದು ಸುಂದರ; ಇದೇ ಪುರುಷಾರ್ಥ; ಇದು ಜೀವನವನ್ನು ನಡೆಸಬಲ್ಲ ಶಕ್ತಿ. ಅಸಹಜವೂ ಅಪಾಯಕಾರಿಯೂ ಆದುದು; ಇದು ವಿಕೃತ; ಇದೇ ಅರಿಷಡ್ವರ್ಗಗಳಲ್ಲಿ ಪ್ರಮುಖವಾದುದು; ಇದು ಜೀವನವನ್ನು ಅಪಾಯಕ್ಕೆ ಒಡ್ಡುವ ಶತ್ರು. 

ನಮ್ಮ ಎಲ್ಲ ಬಯಕೆಗಳ ವಿಗ್ರಹವಾಗಿ ‘ಕಾಮ’ ಎಂಬ ದೈವವನ್ನು ಪರಂಪರೆ ಸೃಷ್ಟಿಸಿದೆ. ಇವನ ಚೇಷ್ಟೆಗಳಿಗೆ ತಕ್ಕಂತೆ ಇವನಿಗೆ ಹಲವು ಹೆಸರುಗಳು. ಅವನು ಮನಸಿಜ; ಅವನ ಹುಟ್ಟಿನ ತಾಣ ನಮ್ಮ ಮನಸ್ಸೇ. ಅವನು ಅನಂಗನೂ ಹೌದು; ಎಂದರೆ ಶರೀರದ ಅಂಗಗಳನ್ನು ಕಳೆದುಕೊಂಡವನು. ಕಾಮನ ಈ ಎರಡು ನಿಲುವುಗಳಿಗೂ ಕಾಮನ ಹುಣ್ಣಿಮೆಗೂ ಪ್ರತ್ಯಕ್ಷ ಸಂಬಂಧವಿದೆ.

ADVERTISEMENT

ಶಿವನು ತಪಸ್ಸಿಗೆ ಕುಳಿತಿದ್ದಾನೆ. ಆದರೆ ಅವನ ಈ ತಪಸ್ಸಿಗೆ ಯಾವುದೇ ಕಾಮನೆಯ ಉದ್ದೇಶ ಇಲ್ಲ; ಎಲ್ಲರ ತಪಸ್ಸುಗಳಿಗೆ ಕಾರಣವಾಗಿರುವ ಕಾಮನೆಗಳನ್ನು ಪೂರೈಸಬಲ್ಲ, ಎಂದರೆ ಎಲ್ಲರ ಎಲ್ಲ ಫಲಗಳ ಒಡೆಯ ಅವನು. ಇಂಥ ಶಿವನನ್ನು ತನ್ನತ್ತ ಸೆಳೆದುಕೊಳ್ಳುವ ಹುನ್ನಾರ ಮಾಡುತ್ತಾನೆ, ಮನ್ಮಥ. ಶಿವನ ಮನಸ್ಸಿನಲ್ಲಿ ಹುಟ್ಟುವ ತವಕ ಕಾಮನದ್ದು! ಅದಕ್ಕೆ ಅವನಿಂದ ಅಕಾಲದ ಸಿದ್ಧತೆ ಬೇರೆ!! ಆಗ ಅಕಾಲದ ವಸಂತನನ್ನು ಸೃಷ್ಟಿಸುವ ದೇವತೆಗಳು, ಕಾಮಕ್ಕೆ ವಿಮುಖನಾದ ‘ಸಂತ’ನಲ್ಲಿ ಕಾಮವಿಕಾರದ ಬೀಜವನ್ನು ಬಿತ್ತುವ ಸಾಹಸಕ್ಕೆ ಮುಂದಾಗುತ್ತಾರೆ. ದೇಶ–ಕಾಲಗಳ ಔಚಿತ್ಯವನ್ನೇ ಅವರು ಮರೆತುಬಿಟ್ಟರು. ಅಕಾಲದಲ್ಲಿ ತೋರಿಕೊಂಡ ಕಾಮನನ್ನು ಶಿವನು ಕ್ಷಣಾರ್ಧದಲ್ಲಿ ಭಸ್ಮಮಾಡಿಬಿಟ್ಟ. ಕಾಮ ಈಗ ‘ಅನಂಗ’ನಾದ. ಆದರೆ ‘ಕಾಮ’ ಇಲ್ಲದೆ ಜಗತ್ತು ಇರುವುದಾದರೂ ಹೇಗೆ? ಶಿವನಿಗೆ ಇದು ಗೊತ್ತಿಲ್ಲವೆ? ಅವನೇ ಅಲ್ಲವೆ ಈ ಸೃಷ್ಟಿಗೆ ಪ್ರಭು! ಕಾಮನಿಗೆ ಮರುಹುಟ್ಟನ್ನು ಕರುಣಿಸಿದ. 

ಸಕಾಲದ ಕಾಮ ಪೂಜ್ಯ; ಅಕಾಲದ ಕಾಮ ತ್ಯಾಜ್ಯ. ಪ್ರಕೃತಿಯಿಂದ ಪ್ರಣಯ; ಆದರೆ ಸಂಸ್ಕೃತಿಯಿಂದ ದಾಂಪತ್ಯ. ಇಂಥ ದಾಂಪತ್ಯಕ್ಕೆ ಶಿವಶಕ್ತಿಯ ಸೊಗಸಿದೆ – ಎಂಬ ಅರಿವಿನ ಬೆಳಕನ್ನು ಕೊಡುತ್ತಿದೆ, ಹೋಳಿಹುಣ್ಣಿಮೆಯ ಕಾಮದಹನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.