ADVERTISEMENT

ಅಮೃತವಾಣಿ: ದಯೆ ನಿನ್ನೊಡವೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 16:53 IST
Last Updated 17 ಆಗಸ್ಟ್ 2020, 16:53 IST
ಶಿವಕುಮಾರ ಸ್ವಾಮೀಜಿಸಿದ್ಧಾರೂಢ ಮಠ, ಬೀದರ್
ಶಿವಕುಮಾರ ಸ್ವಾಮೀಜಿಸಿದ್ಧಾರೂಢ ಮಠ, ಬೀದರ್   

ಬೀದರ್‌: ಮುಕ್ತಿ ಪಡೆಯಬೇಕಾದ ಮಾನವನೂ ಗುರುಮುಖಿಯಾಗದೆ ಮನಮುಖಿಯಾಗಿ ಮರ್ಕಟನಂತೆ ಸಂಸಾರದಲ್ಲಿ ಸಂಚರಿಸುತ್ತಾನೆ. ಹುಳ ಹುಟ್ಟಿದಂತೆ ಹುಟ್ಟಿ ಸಾಯಲು ಇದೇನು ಸಾಮಾನ್ಯ ಶರೀರವೇ? ಇದು ಮುಕ್ತಿ ದ್ವಾರ, ಭಕ್ತಿಯ ಭವನ.
ಜೀವ ಜಗತ್ತಿನಲ್ಲಿ ಬಂದ ಬಳಿಕ ತನುವೆಂಬ ಗೃಹದಲ್ಲಿ ಸಂಗ್ರಹಿಸಬೇಕಾದ ಸಂಪತ್ತು ಬಾಹ್ಯ ಧನವನಿತೆಯರಲ್ಲ. ಅವು ಜಗಕಿಕ್ಕಿದ ವಿಧಿ. ಜ್ಞಾನ, ಧ್ಯಾನ, ದಯೆಗಳೇ ನಿನ್ನೊಡವೆ. ‘ಧನವಗಳಿಸಬೇಕಿಂಥಾದ್ದೊ ನರಜನರಿಗೆ ಕಾಣಿಸದಂಥಾದ್ದೊ’ ಎಂದು ಹಾಡಿದಂತೆ ದೈವಿ ಸಂಪತ್ತು ಗಳಿಸಿದರೆ ಅದು ಕದಿಯಲು ಬಾರದು.

ಧರ್ಮ ಮಾನವನ ಬೆನ್ನೆಲುಬು. ಬದುಕಲು, ಬದುಕಿ ಕುಲ ಕೀರ್ತಿ ಬದುಕಿಸಲು ಧರ್ಮವೇ ಪ್ರಾಣ. ಅಂತೆಯೇ ಬಸವಣ್ಣನವರು ‘ದಯವೇ ಧರ್ಮದ ಮೂಲ’ ಎಂದಿದ್ದಾರೆ. ಈಗ ದೇವರು, ಧರ್ಮದ ಹೆಸರಿನಲ್ಲಿ ಮತಿಹೀನ ಕೆಲಸಗಳೇ ಹೆಚ್ಚಾಗಿವೆ. ಹಿಂಸೆಯಲ್ಲಿ, ಪ್ರಾಣವಧೆಯಲ್ಲಿ ಪುಣ್ಯವುಂಟೆ?
ದಯೆಯು ಒಂದು ದೈವಿ ಸಂಪದ್ಗುಣವಾಗಿದೆ. ಅಸುರಿ ಗುಣಗಳಿಂದ ಅಸುರತ್ವ ಬರುವಂತೆ, ದೈವಿ ಗುಣಗಳಿಂದ ದೇವತ್ವ ಬರುವುದು. ಯಾರು ತನ್ನ ಮೇಲಾಗಲಿ, ಪರರ ಮೇಲಾಗಲಿ ದಯೆ ತೋರುವುದಿಲ್ಲವೋ ಅಂಥವರು ಮನುಷ್ಯ ಲೋಕದಲ್ಲಿ ಬಲಿ ತಿಂದು ಬದುಕುವ ಕಾಗೆಗಿಂತಲೂ ಹೇಯವೆಂದಿದ್ದಾರೆ. ಅಂಥವರ ಜೀವನ ನಿರರ್ಥಕ.

-ಶಿವಕುಮಾರ ಸ್ವಾಮೀಜಿ
ಸಿದ್ಧಾರೂಢ ಮಠ, ಬೀದರ್

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.