ADVERTISEMENT

Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ...

ಶುಭ ಲಾಭ ಹಾರೈಸುವ ಹಬ್ಬ

ಎಸ್.ರಶ್ಮಿ
Published 18 ಅಕ್ಟೋಬರ್ 2025, 22:30 IST
Last Updated 18 ಅಕ್ಟೋಬರ್ 2025, 22:30 IST
ತುಳಸಿ ಹಬ್ಬಕ್ಕಾಗಿ ಖರೀದಿಯ ಭರಾಟೆ  
ತುಳಸಿ ಹಬ್ಬಕ್ಕಾಗಿ ಖರೀದಿಯ ಭರಾಟೆ     

‘ಧೀಳಗಿಗಿ ಲಕ್ಷಿಮ್‌ ಪೂಜಾಕ್ಕ ಬರ್‍ರಿ, ಕಡಿ ಪಂಚಮಿಗಿ ದುಕಾನ್‌ ಪೂಜಾ ಅದ, ಎಲ್ಲೋರು ಬರ್‍ರಿ’

‘ಪಾಡ್ಯಕ್ಕ ತೋಲ್(ಬಹಳ) ಪೂಜಾ ಅವ, ನಾವು ಚೌತಿಗೆ ಇಟ್ಕೊತೀವಿ’

‘ರಾತ್ರಿ ಮುಹೂರ್ತ ಬಂದದ..?’ 

ADVERTISEMENT

ಇಂಥ ಮಾತುಗಳು ಹಬ್ಬದ ಶುಭಾಶಯಗಳೊಂದಿಗೆ ವಿನಿಮಯವಾಗುತ್ತವೆ. ನಿಮ್ಮ ಊಹೆ ಸರಿಯಾಗಿದೆ. ಬೀದರಿನಿಂದ ದಾವಣಗೆರೆಯವರೆಗೂ ದೀಪಾವಳಿ ಎಂದರೆ ಲಕುಮಿಯ ಪೂಜೆ. 

ವ್ಯಾಪಾರಸ್ಥರು ಹೆಚ್ಚಿರುವ ಈ ಊರುಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ಅಂದು ಧನಲಕ್ಷ್ಮಿ ವಿರಾಜಮಾನ
ಳಾಗುತ್ತಾಳೆ. ಷೋಡಷೋಪಚಾರಗಳಿಂದ ಬರಮಾಡಿಕೊಂಡು ಅಂಗಡಿಯಲ್ಲಿ ಕೂರಿಸಿ, ಬರ ಮಾಡಿಕೊಳ್ಳುತ್ತಾರೆ.

ನರಕ ಚತುರ್ದಶಿಯಿಂದಲೇ ಲಕ್ಷ್ಮೀ ಪೂಜೆಯ ಸಡಗರ ಆರಂಭವಾಗುತ್ತದೆ. ದಸರಾ ಸಂಭ್ರಮ ಮುಗಿಯುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛ ಮಾಡುವುದು, ಬಣ್ಣ ಬಳಿಯುವುದು, ಹಳೆಯ ಲೆಕ್ಕಾಚಾರದ ಪುಸ್ತಕಗಳಲ್ಲಿ ಕೊಡುಕೊಳ್ಳುವಿಕೆಯ ವಿವರಗಳನ್ನೆಲ್ಲ ಬರೆದಿಡುವುದು ಆರಂಭವಾಗುತ್ತದೆ.

ಗೋಡೆಯ ಮೇಲಿನ ದಿನವಹಿಯನ್ನು ಬದಲಿಸುವುದೂ ಮುಖ್ಯ ಕೆಲಸ. ಇಲ್ಲೆಲ್ಲ ದೀಪಾವಳಿಯಿಂದ ದೀಪಾವಳಿಗೆಂದೇ ಲೆಕ್ಕಾಚಾರದ ಕ್ಯಾಲೆಂಡರ್‌ಗಳನ್ನು ತಯಾರಿಸಲಾಗುತ್ತದೆ. ಕಲಬುರಗಿಯಿಂದ ಮೇಲ್ಭಾಗದಲ್ಲಿ ಹಿಂದಿಯಲ್ಲಿಯೂ, ಕಲಬುರಗಿಯಿಂದೀಚೆಗೆ ಕನ್ನಡದಲ್ಲಿಯೂ ಈ ದಿನವಹಿಗಳು ಮುದ್ರಿಸಲಾಗಿರುತ್ತದೆ.

ಮುನ್ನೂರೈವತ್ತು ಪುಟಗಳ ಲೆಕ್ಕದ ಪುಸ್ತಕವನ್ನು ತಂದಿಡುತ್ತಾರೆ. ಆನಂತರ ತಮಗನುಕೂಲವಾಗುವ ದಿನ, ಮುಹೂರ್ತವನ್ನು ನಿರ್ಧರಿಸುತ್ತಾರೆ. ಕೆಲವು ಊರುಗಳಲ್ಲಿ ಒಂದೊಂದು ಸಾಲಿನ ಮಳಿಗೆಗಳು ಒಂದೊಂದು ದಿನ ಆಯ್ಕೆ ಮಾಡಿಕೊಂಡಿರುತ್ತವೆ. ಅತಿಥಿಗಳು ಒಂದು ಸಲ ಪೇಟೆಗೆ ಬಂದರೆ ಎಲ್ಲ ಮಳಿಗೆಗಳ ಪೂಜೆಗಳನ್ನೂ ಮುಗಿಸಿಕೊಂಡು ಹೋಗುವಂತಾಗಲಿ ಎಂಬ ಅನುಕೂಲ ನೋಡಿರುತ್ತಾರೆ.

ಮನೆಯ ಬಂಧು ಬಾಂಧವರೆಲ್ಲ ಬಂದು, ಅಂಗಡಿಯ ಮುಂದೆ ಛಳಿ ಹೊಡೆದು (ಗೋಮ ಮಾಡಿ), ರಂಗೋಲಿ ಹಾಕಿ, ದೀವಳಿಗೆಯ ದೀಪದ ಸಾಲುಗಳಿಗೆ ಕುಡಿದೀಪ ಮುಡಿಸುತ್ತಾರೆ. ಷೋಡಷೋಪಚಾರದಲ್ಲಿ ಒಂದು ಹರಿವಾಣದ ತುಂಬ ಇತ್ತರ್‌, ಕಾಡಿಗೆ, ಕರವಸ್ತ್ರ, ಕುಬಸದ ಖಣ, ಬಾಚಣಿಕೆ, ಬಳೆ, ಕನ್ನಡಿ, ಅರಿಸಿನ, ಕುಂಕುಮ, ಗಂಧ, ಮುತ್ತಿನಾರುತಿ, ಹೂಮಾಲೆ, ಹೂವಿನ ದಂಡೆ ಮುಂತಾದವುಗಳನ್ನೆಲ್ಲ ಜೋಡಿಸಿಡುತ್ತಾರೆ. 

ಪ್ರಸಾದ ಮುರುಮುರಾ ಎಂದೇ ಕರೆಯಲಾಗುತ್ತದೆ. ಇದೊಂದು ಬಗೆಯ ಚುರುಮುರಿ. ಕಂದು ಬಣ್ಣದ ಗೆರೆ ಇರುವ, ಮುದುರಿದಂತಿರುವ ಚುರುಮುರಿಯಲ್ಲಿ ಕೊಬ್ಬರಿ, ಬೆಂಡು, ಬತ್ತಾಸು ಮುಂತಾದವುಗಳನ್ನೆಲ್ಲ ಬೆರೆಸಿ ಪ್ರಸಾದ ಮಾಡಲಾಗುತ್ತದೆ. 

ಪೂಜೆಗಿಲ್ಲಿ ಯಾರೂ ಯಾವ ಅರ್ಚಕರನ್ನೂ ಕರೆಯುವುದಿಲ್ಲ. ತಮ್ಮ ಅಂಗಡಿಗೆ ತಾವೇ ಪೂಜೆ ಸಲ್ಲಿಸುತ್ತಾರೆ. ಲಕ್ಷ್ಮಿಯ ಫೋಟೊ ಇರಿಸಿ, ತಮ್ಮ ಉಂಗುರ ಬೆರಳಿನಿಂದ ಅಂಗಡಿಯ ಗೋಡೆಯ ಮೇಲೆ ಸ್ವಸ್ತಿಕದ ಚಿತ್ರ ಬರೆಯುತ್ತಾರೆ. ಒಂದೆಡೆ ಶುಭ ಇನ್ನೊಂದೆಡೆ ಲಾಭ ಎಂದು ಬರೆಯುತ್ತಾರೆ. ಪಂಚಫಲವೆಂದು ಕರೆಯಲಾಗುವ ಐದು ಬಗೆಯ ಫಲವನ್ನು ಪೂಜೆಗಿಡುತ್ತಾರೆ. ಅಡಕೆಬೆಟ್ಟನ್ನೇ ಗಣೇಶನನ್ನಾಗಿ ಪೂಜಿಸುತ್ತಾರೆ. ದೊಡ್ಡವೆರಡು ಸಮಯಗಳನ್ನಿರಿಸಿ, ರಾತ್ರಿಯಿಡೀ ದೀಪದ ಕುಡಿ ಶಾಂತವಾಗದಂತೆ ಕಾಯುತ್ತಾರೆ. ಪೂಜೆಯೂ ಸರಳ. ಮನೆಮಂದಿಯೆಲ್ಲ ಕೂಡಿ ಆರತಿ ಬೆಳಗಿ, ಪ್ರಸಾದ ಸ್ವೀಕರಿಸುತ್ತಾರೆ. ‍ಪೂಜೆಯ ನಂತರ, ಮರುದಿನ ಈ ಪೂಜಾ ಎತ್ತುವವರೆಗೂ ಮನೆ ಮಂದಿ ಹಣ ಖರ್ಚು ಮಾಡುವಂತಿಲ್ಲ. ಅನಿವಾರ್ಯವಿದ್ದರೆ ಬಂಧು ಬಳಗದವರು ಹಣ ಕೊಟ್ಟು, ಋಣ ಉಳಿಸಿಕೊಳ್ಳುತ್ತಾರೆ. ಪೂಜೆ ಎತ್ತಿದ ನಂತರವೇ ಎಲ್ಲರಿಗೂ ಬಾಕಿ ಚುಕ್ತಾ ಮಾಡಬೇಕು. 

ಪೋತರಾಜರು ಬಂದರು ದಾರಿಬಿಡಿ

ಪೋತರಾಜರು ಎಂದು ಕರೆಯಲಾಗುವ ಅಲೆಮಾರಿ ಜನಾಂಗದ ಪುರುಷರು ಸಕುಟುಂಬ ಇಂಥ ಪೂಜೆ ಇದ್ದಲ್ಲಿ ಬರುತ್ತಾರೆ. ಇವರ ಹೆಂಡತಿಯರು ಪುಟ್ಟ ಡೊಳ್ಳನ್ನು ಹೋಲುವ ವಾದ್ಯವನ್ನು ಕೊರಳಿಗೆ ಹಾಕಿಕೊಂಡು, ಬಗಲಿಗೆ ಮಕ್ಕಳನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಬುರಬುರಬುರಬುರ ಬಾರಿಸುತ್ತ ಬರುತ್ತಾರೆ. ಜೇನುಹುಳಗಳ ದಂಡೊಂದು ಬೆನ್ನಟ್ಟಿದ್ದಂತೆ ಜೀಂಗುಡುವ ಈ ಸದ್ದು ಮಕ್ಕಳಲ್ಲಿ ಹೆದರಿಕೆ ಮೂಡಿಸುತ್ತದೆ. ಇವರ ಜೊತೆಗೆ ಬರುವ ಪುರುಷರು ಬಾರುಕೋಲಿನಿಂದ ತಮ್ಮ ಬೆನ್ನಿಗೆ ರಕ್ತ ಬರುವಂತೆ ಛಟೀರ್‌.. ಛಟೀರ್‌ ಎಂದು ಹೊಡೆದುಕೊಳ್ಳುತ್ತಾರೆ.

ಅವರು ನಡೆಯುವಾಗ ಬರುವ ಗೆಜ್ಜೆ ನಾದಕ್ಕೂ, ಹೊಡೆದುಕೊಳ್ಳುವಾಗ ಬರುವ ಈ ಛಟೀರ್‌ ಸದ್ದಿಗೂ ಆತ್ಮನಡುಗಿಸುವ ಶಕ್ತಿ ಇದೆ. ಇವರ ಈ ದೇಹದಂಡನೆಯ ಹಿನ್ನೆಲೆ ಏನೆಂಬುದು ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಆದರೆ ಬಿಡಿಗಾಸಿಗಾಗಿ ಪ್ರತಿ ಮಳಿಗೆಯ ಮುಂದೆಯೂ ಈ ಸಂಪ್ರದಾಯ ಕಾಣಿಸಿಕೊಳ್ಳುತ್ತದೆ. ತುಳಸಿ ಲಗ್ನದ ನಂತರ ಇವರೆಲ್ಲ ಎಲ್ಲಿ ಹೋಗ್ತಾರೆ? ಏನು ಮಾಡ್ತಾರೆ? ಬೆನ್ನಟ್ಟಿದವರಾರು..?

ದೇಹದ ನರನಾಡಿಗಳಲ್ಲಿ ಅಲ್ಲೋಲ ಕಲ್ಲೋಲವೆನಿಸುವ ಈ ವಾದ್ಯ ಅವರಲ್ಲಿ ವೀರ ರಸವನ್ನು ಜಾಗೃತಗೊಳಿಸುತ್ತದೆ. ಇವರು ದೇಹದಂಡನೆ ಮಾಡಿಕೊಂಡಷ್ಟೂ, ವ್ಯಾಪಾರದಲ್ಲಿ ಬರುವ ಏಳುಬೀಳುಗಳು ಕಡಿಮೆಯಾಗುತ್ತವೆ ಎಂಬ ಪ್ರತೀತಿ ಇದೆ. ಸಮಾಧಾನವೆನಿಸುವಷ್ಟು ದಕ್ಷಿಣೆ ಕೊಟ್ಟು ಕಳಿಸಲಾಗುತ್ತದೆ.

ಧೂಮಲೀಲೆ

ಅಂಗಡಿಯ ತುಂಬೆಲ್ಲ ಹೊಗೆ ತುಂಬಿಕೊಳ್ಳಬೇಕು. ನುಸಿಯಂತಹ ಸಣ್ಣ ಕೀಟಾಣುಗಳೂ ಕೊನೆಯಾಗಬೇಕು ಎಂಬ ಕಾರಣಕ್ಕೆ ಸಾಕಷ್ಟು ಧೂಪ, ಸಾಂಬ್ರಾಣಿಗಳನ್ನೂ ಬಳಸಲಾಗುತ್ತದೆ. ಆದರೆ ಪಟಾಕಿಯ ಸದ್ದು ಮತ್ತು ಹೊಗೆ ಅಂಗಡಿ ತುಂಬಲಿ ಎಂಬುದೊಂದು ನಂಬಿಕೆ ಇದೆ. ಲೆಕ್ಕದ ಪುಟಗಳು, ದಾಸ್ತಾನು ಇವೆಲ್ಲ ಹಾಳಾಗದಿರಲಿ ಎಂಬ ನಂಬಿಕೆ ಇರಬಹುದು.

ಬರುವ ವರ್ಷ ಹೇಗಿರಬಹುದು ಎಂದು ಅಂದಾಜಿಸಲು ಅಥವಾ ಅಂಗಡಿಯ ಅಂಗಳದಲ್ಲಿ ಹಣದ ವಹಿವಾಟು ಹೆಚ್ಚಾಗಲಿ ಎಂಬ ಅಭಿಲಾಶೆಯಿಂದ ರಾತ್ರಿ ಇಡೀ ಕಾರ್ಡು ಆಡೋದು, ಪಗಡೆ ಆಡೋದು ನಡೆಯುತ್ತದೆ. ಹಣದ ಪಂದ್ಯವಿಟ್ಟು ಆಡುವುದೇ ವಿಶೇಷ. ಗಂಡುಮಕ್ಕಳೆಲ್ಲ ಇಸ್ಪೀಟಿನೆಲೆ ಆಡಲು ಕುಳಿತರೆ, ಮಧ್ಯರಾತ್ರಿ ಕಳೆಯುವವರೆಗೂ ಮಹಿಳೆಯರೂ ಪಗಡೆಯ ಹಾಸಿನ ಮುಂದೆ ಕೂರುತ್ತಾರೆ. ಗೆದ್ದರೆ, ಗೆದ್ದಿದ್ದೆಲ್ಲವೂ ದೇಗುಲಕ್ಕೋ, ಮುಂದೆ ಹೋಗುವ ಗುಡಿಗಳ ಪ್ರವಾಸಕ್ಕೋ ಬಳಸುತ್ತಾರೆ. ಸೋತರೆ, ಆ ವರ್ಷ ಪೂರ್ತಿ ಎಚ್ಚರದಿಂದಿರಬೇಕು ಎಂಬ ನಂಬಿಕೆಯಿಂದ ಜಾಗೃತೆ ವಹಿಸುತ್ತಾರೆ. 

ಮಕ್ಕಳೆಲ್ಲ ಪಟಾಕಿ ಹಚ್ಚಿ, ಹೊಗೆಗೆ ಮೂಗೇರಿಸಿಕೊಳ್ಳುತ್ತ, ತಾವೂ ಆಡುವುದಾಗಿ, ಕಾಡುತ್ತ, ಬದಾಮಿ ಹಾಲು ಕುಡಿಯುತ್ತಲೇ ಇರುತ್ತಾರೆ.

ದೀಪಾವಳಿ ಹಬ್ಬದ ಅಂಗವಾಗಿ ದೀಪ ಬೆಳಗಿಸುತ್ತಿರುವ ಯುವತಿಯರು
ಲಕ್ಷ್ಮೀ ಪೂಜೆಯ ಸಂಭ್ರಮದಲ್ಲಿ ಮಹಿಳೆಯರು

ವೀರತಿಲಕವಿರಿಸಿಕೊಂಡ ಪುರುಷರು, ಗಾಂಧಿ ಟೋಪಿ ಧರಿಸಿ, ಹೆಗಲಿಗೆ ಒಂದು ಟವಲ್‌ ಹಾಕಿಕೊಂಡು ಓಡಾಡುತ್ತಲೇ ಕಡೀಪಂಚಮಿ ಎಂದು ಕರೆಯುವ ತುಳಸೀಲಗ್ನದವರೆಗೂ ಸಂಭ್ರಮಿಸುತ್ತಾರೆ. ಲಕ್ಷ್ಮಿ ಪೂಜೆಯೆಂಬುದು ಕೇವಲ ಶುಭ ಲಾಭವನ್ನು ಹಾರೈಸುವ ಹಬ್ಬವಾಗಿ ಉಳಿಯುವುದಿಲ್ಲ. ಬಂಧು ಬಾಂಧವರಿಂದ ಕೊಡು ಕೊಳ್ಳುವ, ಲಾಭ ನಷ್ಟದ ಜಾಗೃತೆಯ ಮೂಡಿಸುವ, ಲಾಭವಾದಾಗ ಅಹಂಕಾರ ಬರದಂತೆ ಎಚ್ಚರಿಕೆ ಮೂಡಿಸುವ ಆತ್ಮ ಜಾಗೃತಿಯ ದೀಪದ ಕುಡಿ ಮುಡಿಸುವ, ಅರಿವು ಮೂಡಿಸುವ ಹಬ್ಬವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.