
ಶಿವಯೋಗಿ ಮೇದಾರ ಕೇತಯ್ಯ ಹಾಗೂ ಒಳಚಿತ್ರದಲ್ಲಿ ಬಸವಣ್ಣ
ಒಮ್ಮೆ ಪರಶಿವ ಈತನ ಮಹಿಮೆಯನ್ನು ಜಗತ್ತಿನಲ್ಲಿ ಹರಡಬೇಕೆಂದು ಬಂದು ಒಂದು ಪವಾಡವೆಸಗಿದ. ಅಂದು ಕೇತಯ್ಯ ಬಿದಿರನ್ನು ಕತ್ತರಿಸಿದಾಗ ಅದರಿಂದ ಹೊನ್ನು ಸುರಿಸಿದ. ಅದನ್ನು ನೋಡಿ ಅಚ್ಚರಿಯಾಯಿತು ಕೇತಯ್ಯನಿಗೆ. ಮತ್ತೊಂದನ್ನು ಕತ್ತರಿಸಿದ. ಅದರಲ್ಲೂ ಹೊನ್ನು ಸುರಿಯಿತು. ಇದೇನು ಹುಳುಗಳು! ಎಂದು ಅಲ್ಲಿಂದ ಓಡಿದ. ಮತ್ತೆ ಬೇರೊಂದು ದೊಡ್ಡ ಬಿದಿರಮೆಳೆ ಹತ್ತಿ ಕಡಿದ. ಅದರಿಂದಲೂ ಮುತ್ತುಗಳು ಸುರಿಯಲು ಕೆಳಕ್ಕುರುಳಿದ. ಬಿದಿರ ಸಿಬಿರು ದೇಹಕ್ಕೆ ನಾಟಿ ರಕ್ತ ಕಾರುತ್ತ ಹೊರಳಾಡಿದ. ಆತ ನೋವನ್ನು ಮರೆತು ದಾಸೋಹದ ಚಿಂತೆ ಮಾಡತೊಡಗಿದ. ಆಗ ಸೂರ್ಯನನ್ನುದ್ದೇಶಿಸಿ-
"ಎಲೈ ಸೂರ್ಯನೇ, ನಾನು ಹೇಳುವವರೆಗೆ ಮುಳುಗ ಬೇಡ. ಇದು ನನ್ನ ಕಾಯಕದ ಮೇಲಾಣೆ" ಎಂದು ತಾನು ತಂದಿದ್ದ ಬಿದಿರನ್ನು ತೆಗೆದುಕೊಂಡು ಹೆಂಡತಿಗೆ ಹೇಳಿದ "ಇದರಲ್ಲಿ ಮೊರ, ಬುಟ್ಟಿ, ಮಾಡಿ ಮಾರಿ ಬಾ" ಎಂದು. ಆಕೆ ಹಾಗೆಯೇ ಮಾಡಿ ಹಣ ತಂದಳು. ಅದರಿಂದ ಜಂಗಮ ದಾಸೋಹವನ್ನು ಮಾಡಿ ಮುಗಿಸು ಎಂದ. ಆಕೆ ಆ ಕಾಯಕ ಮಾಡಿದಳು. ಕೊನೆಗೆ ಹೆಂಡತಿಗೆ ಹೇಳಿದ- "ನನ್ನ ಎದೆಯನ್ನು ಚುಚ್ಚಿರುವ ಬಿದಿರು ಸಿಬಿರನ್ನು ತೆಗೆ" ಎಂದ. ಆಕೆ ಅದನ್ನು ಕೀಳಲು, ಕೇತಯ್ಯ ಇಹವನ್ನು ತ್ಯಜಿಸಿದ. ರಾತ್ರಿ ಹೆಂಡತಿಯು ರೋದಿಸಲಾರಂಭಿಸಿದಳು. ಬೆಳಗಾಯಿತು. ಹೂಗಾರ ಮಾದಣ್ಣ ಬಂದು ನೋಡಿ ಈ ವಿಷಯವನ್ನು ಬಸವಣ್ಣನಿಗೆ ತಿಳಿಸಿದ. ಬಸವಣ್ಣ ಬಂದು ನೋಡಿ ತನ್ನ ಪ್ರಾಣವನ್ನು ತೊರೆಯುವನು. ಅಷ್ಟರಲ್ಲಿ ಅಲ್ಲಿಗೆ ಮಾಚಯ್ಯ ಬರುತ್ತಾನೆ. ಆಗ ಮಡಿವಾಳ ಮಾಚಯ್ಯ ಇಬ್ಬರನ್ನು ಹೊಗಳುತ್ತಾ ಘಂಟೆಯನ್ನು ಬಾರಿಸಲು ಕೇತಯ್ಯ-ಬಸವಣ್ಣ ಇಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚರಗೊಳುತ್ತಾರೆ.
"ಎನ್ನ ಕಾಯದ ಕಳವಳ ನಿಲಿಸಿ ಗುರುಲಿಂಗವ ತೋರಿದ
ಎನ್ನ ಮನದ ವ್ಯಾಕುಳವ ನಿಲಿಸಿ ಜಂಗಮಲಿಂಗನ ತೋರಿದ
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ ಎನ್ನ ಪಾವನವ ಮಾಡಿದ
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ
ಸದ್ಯೋನ್ಮುಕ್ತಿಯ ತೋರಲೆಂದು ಮರ್ತ್ಯಕ್ಕೆ ಮರಳಿ ತಂದ .
ಸಂಗನ ಬಸವಣ್ಣನೇ ಗುರುವೆನಗೆ ಸಂಗನ ಬಸವಣ್ಣನೆ ಪರವೆನಗೆ
ಸಂಗನ ಬಸವಣ್ಣನ ಕರುಣದಿಂದ ಘನಕ್ಕೆ ಘನ ಮಹಿಮ
ಅಲ್ಲಮ ಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ ಗೌರೇಶ್ವರಾ"
ಎಂದು ಹೇಳುತ್ತಾನೆ. ಕಾಯಕ ಮುಂದುವರಿಸುವ, ಮತ್ತೆ ದಾಸೋಹ ಮಾಡುವ ಭಾಗ್ಯ ದೊರೆಯಿತಲ್ಲಾ ಎಂದು ಹಿರಿಹಿಗ್ಗುತ್ತಾನೆ. ಇದು ಜಂಗಮ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ತಮ್ಮ ಜಂಗಮರ ಪ್ರಾಣವನ್ನು ಮಿಗಿಲಾಗಿ ಪ್ರೀತಿಸುತ್ತಿದ್ದರು ಬಸವಣ್ಣನವರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಕಾಯಕ ನಿಷ್ಟೆ
ಕೇತಯ್ಯನನ್ನು ಪರೀಕ್ಷಿಸಲು ಶಿವನು ಬಸವಣ್ಣನ ವೇಷ ಧರಿಸಿಕೊಂಡು ಕೇತಯ್ಯ ಮನೆಯಲ್ಲಿಲ್ಲದಾಗ ಬಂದ. ಆತನ ಹೆಂಡತಿ ಜಂಗಮ ಸತ್ಕಾರ ಮಾಡಿದಳು. ಸತ್ಕಾರ ಪಡೆದ ಮೇಲೆ ಆ ಜಂಗಮ "ಈ ಹೊನ್ನು ತೆಗೆದುಕೊಂಡು ದಾಸೋಹ ಮಾಡಿ" ಎಂದು ಕೊಡಲು ಆಕೆ ನಿರಾಕರಿಸುತ್ತಾಳೆ. ಆದರೂ ಆತ ಮನೆಯಲ್ಲಿಟ್ಟು ಹೊರಡುವನು. ಕೇತಯ್ಯ ಮನೆಗೆ ಬಂದ. ಹೊನ್ನು ನೋಡಿ- "ಇದು ಏನು?" ಎಂದ ಹೆಂಡತಿಯನ್ನುದ್ದೇಶಿಸಿ. "ಜಂಗಮರೊಬ್ಬರು ಬಂದಿದ್ದರು. ಅತಿಥಿ ಸತ್ಕಾರ ಮಾಡಿ ತೃಪ್ತಿಗೊಳಿಸಿದೆ. ಅವರು ಈ ಹೊನ್ನು ಬೇಡ ಎಂದರೂ ಅದನ್ನು ಬಿಟ್ಟು ಹೋದರು" ಎಂದಳು ಮಾರುತ್ತರವಾಗಿ. ಅಸಮಾಧಾನ ಹೊಂದಿದ ಕೇತಯ್ಯ ಆ ಹೊನ್ನನ್ನು ತಿಪ್ಪೆಗೆ ಬಿಸಾಡಿದ. ಹೊನ್ನಿದ್ದ ಸ್ಥಳವನ್ನು ಗೋಮಯದಿಂದ ಸಾರಿಸಿದ. "ಕಾಯಕದಿಂದಲ್ಲದೆ ಬಂದುದು ಮೈಲಿಗೆಯಾಯಿತು" ಎಂದು ಹೇಳಿ ಸ್ನಾನಕ್ಕೆ ಹೋಗುವನು. ಇದರಿಂದ ವ್ಯಕ್ತವಾಗುವುದು ಕೇತಯ್ಯನಿಗೆ ಹೊನ್ನಿನ ಬಗೆಗೆ ವ್ಯಾಮೋಹವಿರಲಿಲ್ಲ. ಕಾಯಕದಿಂದ ಬಂದ ಹಣದಿಂದಲೇ ತಾನು ತಿನ್ನಬೇಕು. ಜಂಗಮ ದಾಸೋಹಕ್ಕೆ ಉಪಯೋಗಿಸಿದಾಗಲೇ ಸಾರ್ಥಕ ಎಂಬುದು. ಹೊನ್ನು ಆತನ ಭಾಗಕ್ಕೆ ತೃಣ ಸಮಾನ ಎಂಬುದನ್ನು ಪುಷ್ಟೀಕರಿಸುತ್ತದೆ ಈ ಕಥೆ. ಅನಾಯಾಸವಾಗಿ ಬಂದ ಹೊನ್ನನ್ನು ಕಸವಾಗಿ ಭಾವಿಸಬೇಕು ಎಂಬುದೇ ಕೇತಯ್ಯನ ತತ್ವ.
ಶರಣರು 'ನುಡಿದಂತೆ ನಡೆದರು' ಎಂಬುದಕ್ಕೆ ಮೇದರ ಕೇತಯ್ಯನ ಜೀವನವೇ ಸಾಕ್ಷಿ. ಈತ ಕರುಣೆ, ದಯೆ, ದಾನ, ಧರ್ಮಗಳಲ್ಲಿ ಎತ್ತಿದ ಕೈ. ಅಷ್ಟಾವರಣ, ಕಾಯಕ ತತ್ತ್ವ, ಏಕದೇವೋಪಾಸನೆ, ಭಕ್ತಿ, ದಾಸೋಹ, ಕರುಣೆ, ದಯೆ, ದಾನ ಧರ್ಮಗಳನ್ನೊಳಗೊಂಡ ಈತನ ಲೋಕಾನುಭವ, ಶಿವಾನುಭವಗಳು ವ್ಯಕ್ತವಾಗುವುವು.
ಬಸವಾಕ್ಷ ಸ್ವಾಮೀಜಿ, ಸಾಧಕರು, ಶ್ರೀ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.