ADVERTISEMENT

ಸಮಾನತೆ ಸಾರುವ ಈದುಲ್‌ ಫಿತ್ರ್

ಮಹಮ್ಮದ್ ನೂಮಾನ್
Published 20 ಮೇ 2020, 19:45 IST
Last Updated 20 ಮೇ 2020, 19:45 IST
ರಂಜಾನ್
ರಂಜಾನ್   

ಮುಸ್ಲಿಮರ ಪವಿತ್ರ ರಂಜಾನ್‌ ತಿಂಗಳ ಸಮಾಪ್ತಿಯೊಂದಿಗೆ ‘ಈದುಲ್ ಫಿತ್ರ್‌’ ಹಬ್ಬ ಬರುತ್ತದೆ. ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ‘ಈದುಲ್ ಫಿತ್ರ್‌’ ಹಬ್ಬದ ಸಂಭ್ರಮ.

ಕೊರೊನಾ ಸೋಂಕು ವಿಶ್ವದೆಲ್ಲೆಡೆ ಒಡ್ಡಿರುವ ಆತಂಕದ ನಡುವೆಯೇ ಹಬ್ಬ ಬಂದಿದೆ. ಆದ್ದರಿಂದ ಈ ಬಾರಿ ಭಾರತ ಒಳಗೊಂಡಂತೆ ಬಹುತೇಕ ರಾಷ್ಟ್ರಗಳಲ್ಲಿ ಹಬ್ಬದ ಆಚರಣೆ ಸರಳವಾಗಿ ನಡೆಯಲಿದೆ.

ಸಮಾನತೆ ಸಾರುವ ಹಬ್ಬ: ಈದುಲ್ ಫಿತ್ರ್ ಸಮಾನತೆಯನ್ನು ಸಾರುತ್ತದೆ. ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು ಎಂಬ ಸಂದೇಶವನ್ನು ನೀಡುತ್ತದೆ.

ADVERTISEMENT

ಹಬ್ಬವು ಪರಸ್ಪರ ಸಂಬಂಧ, ಬಾಂಧವ್ಯವನ್ನು ಬಲಪಡಿಸುತ್ತದೆ. ಮುಸ್ಲಿಮರು ಸಂಬಂಧಿಕರ, ಗೆಳೆಯರ ಮನೆಗೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು. ಯೋಗಕ್ಷೇಮ ವಿಚಾರಿಸುವರು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುವರು.

‘ಈದುಲ್‌ ಫಿತ್ರ್‌’ ದಿನ ಆಹಾರ ಧಾನ್ಯವನ್ನು ಬಡವರಿಗೆ ದಾನವಾಗಿ ಕೊಡಬೇಕು ಎಂದು ಇಸ್ಲಾಂ ಆದೇಶಿಸಿದೆ. ಈದ್‌ ನಮಾಜ್‌ಗೆ ಮುನ್ನ ಕಡ್ಡಾಯ ದಾನ ಮಾಡಲೇಬೇಕು. ಅದನ್ನು ‘ಫಿತ್ರ್‌ ಝಕಾತ್‌’ (ಕಡ್ಡಾಯ ದಾನ) ಎನ್ನುವರು.

ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಆಹಾರ, ಬಟ್ಟೆ ಮತ್ತು ಮೂಲ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಈ ಝಕಾತ್‌ ಕಡ್ಡಾಯ. ಬಡವರಿಗೂ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಬೇಕು ಎಂಬುದು ಇದರ ಉದ್ದೇಶ.

ಫಿತ್ರ್‌ ಝಕಾತ್‌ನ ಪ್ರಮಾಣ ಸುಮಾರು ಎರಡೂವರೆ ಕೆ.ಜಿ. ಆಗಿದೆ. ಆಯಾ ಪ್ರದೇಶದ ಜನರ ಆಹಾರವನ್ನು (ಗೋಧಿ, ಜೋಳ, ಅಕ್ಕಿ, ಬೇಳೆ) ದಾನದ ರೂಪದಲ್ಲಿ ನೀಡಬೇಕು. ಝಕಾತ್‌ ಪಡೆಯುವವರ ಆಹಾರ ಪದ್ಧತಿಯನ್ನರಿತು, ಅವರ ಊರಿನ ಆಹಾರ ಪದ್ಧತಿಯಂತೆಯೇ ಝಕಾತ್‌ ನೀಡಬೇಕು.

ಪ್ರತಿ ಮನೆಯ ಹಿರಿಯರು ಆ ಮನೆಯಲ್ಲಿರುವ ಪ್ರತಿ ಸದಸ್ಯನ ಪರವಾಗಿ ದಾನ ಮಾಡಬೇಕು. ತಲಾ ಎರಡೂವರೆ ಕೆ.ಜಿ. (ಉದಾ: ಒಂದು ಮನೆಯಲ್ಲಿ 4 ಸದಸ್ಯರಿದ್ದರೆ 10 ಕೆ.ಜಿ.) ಆಹಾರವಸ್ತುವನ್ನು ಬಡವನ ಮನೆಗೆ ತಲುಪಿಸಬೇಕು. ಆ ಬಳಿಕವೇ ಹಬ್ಬದ ಪ್ರಾರ್ಥನೆ ನಿರ್ವಹಿಸಬೇಕು. ಝಕಾತ್‌ಅನ್ನು (ದಾನ) ಹಬ್ಬದೊಂದಿಗೆ ಜೋಡಿಸಿರುವ ಕ್ರಮದಿಂದಾಗ ಇದು ಬಡವರ ಪಾಲಿನ ಹಬ್ಬ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.