ಕಾರವಾರ:ಕೂರ್ಮಗಡದಲ್ಲಿ ನರಸಿಂಹ ದೇವರ ಜಾತ್ರೋತ್ಸವವು ಶುಕ್ರವಾರ ಸಾಂಗವಾಗಿ ನೆರವೇರಿತು.ಫಲ, ಪುಷ್ಪಗಳಿಂದ ಸಿಂಗರಿಸಿದ್ದದೋಣಿಯಲ್ಲಿ ಬೆಳಿಗ್ಗೆ ಕೋಡಿಬಾಗದ ದೇವಸ್ಥಾನದಿಂದ ದೇವರ ವಿಗ್ರಹವನ್ನು ಕೂರ್ಮಗಡಕ್ಕೆ ತಂದು ಪೂಜೆ ಸಲ್ಲಿಸಲಾಯಿತು.
ಮಾವಿನ ಎಲೆ, ಬಲೂನುಗಳಿಂದ ಅಲಂಕರಿಸಿದ್ದ ದೋಣಿಗಳಲ್ಲಿ ನಡುಗಡ್ಡೆಗೆ ಪ್ರಯಾಣಿಸಿದ ನೂರಾರು ಭಕ್ತರು, ಹರಕೆ, ಪೂಜೆ ಸಲ್ಲಿಸಿ ಧನ್ಯತಾಭಾವ ಕಂಡರು.
ಕೂರ್ಮಗಡ ನರಸಿಂಹ ದೇವರಿಗೆ ಬಾಳೆಗೊನೆ ಹರಕೆ ಸಲ್ಲಿಸುವುದು ವಾಡಿಕೆ. ಅದರಂತೆ ನೂರಾರು ಭಕ್ತರು ತಮ್ಮೊಂದಿಗೆ ಮಿಟ್ಕಾ ಬಾಳೆ (ಏಲಕ್ಕಿ ಬಾಳೆ) ಗೊನೆಗಳನ್ನು ತಂದಿದ್ದರು. ಬಳಿಕ ದೇವರಿಗೆನೈವೇದ್ಯ ಮಾಡಿದ ಗೊನೆಗಳನ್ನು ಹರಾಜಿನಲ್ಲಿ ಕೂಗಿ ಭಕ್ತರು ಪಡೆದುಕೊಂಡರು. ಇದೇರೀತಿ, ಹಣ್ಣು ಕಾಯಿ ನೈವೇದ್ಯ, ಹೋಮ, ಮಹಾಪೂಜೆ ಮುಂತಾದ ಸಂಪ್ರದಾಯಗಳನ್ನು ನೆರವೇರಿಸಲಾಯಿತು.
ಬಿಗಿ ಭದ್ರತೆ
ಕಳೆದ ವರ್ಷಜ.21ರಂದು ಜಾತ್ರೆಯ ದಿನ ದೋಣಿಯೊಂದು ಮುಳುಗಿದ್ದರಿಂದ 16 ಜನರು ಮೃತಪಟ್ಟಿದ್ದರು. ಅದರ ಕಹಿನೆನಪು ಈ ವರ್ಷದ ಜಾತ್ರೆಯ ಮೇಲೂ ಗಾಢವಾಗಿ ಆವರಿಸಿತ್ತು. ಈ ವರ್ಷ ಜಿಲ್ಲಾಡಳಿತ, ಪೊಲೀಸ್, ಮೀನುಗಾರಿಕಾ ಇಲಾಖೆಗಳಿಂದ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಲಾಗಿತ್ತು. ಬೈತಖೋಲ್ ಮೀನುಗಾರಿಕಾ ಬಂದರು ಹಾಗೂ ನಡುಗಡ್ಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೂರ್ಮಗಡದಿಂದ ವಾಪಸ್ ಬರುವಾಗ ಎಲ್ಲರ ಹೆಸರನ್ನು ಪುಸ್ತಕವೊಂದರಲ್ಲಿ ನಮೂದಿಸಿಕೊಂಡರು.
ಜನರ ಸಂಖ್ಯೆ ಇಳಿಮುಖ
ಈ ವರ್ಷ ಜಾತ್ರೆಗೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿತ್ತು. ಅನುಮತಿ ನೀಡಿದ ಮೀನುಗಾರಿಕಾ ಹಾಗೂ ಅಡ್ವೆಂಚರ್ ದೋಣಿಗಳು ನಡುಗಡ್ಡೆಗೆ ಪ್ರಯಾಣಿಸಿದರೂ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಕಳೆದ ವರ್ಷ ನಡುಗಡ್ಡೆಯ ಜೆಟ್ಟಿಯ ಬುಡದಿಂದಲೇ ದೇವಸ್ಥಾನದವರೆಗೆಭಕ್ತರ ಸಾಲು ಇತ್ತು. ಈ ವರ್ಷ ದೇವಸ್ಥಾನದ ಬಳಿಯಲ್ಲಿ ಮಾತ್ರ ಸರದಿಯಲ್ಲಿ ನಿಂತಿದ್ದರು. ಹಾಗಾಗಿ ದೇವರ ದರ್ಶನವೂ ತ್ವರಿತವಾಗಿ, ಸುಲಭವಾಗಿ ಆಯಿತು.
ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಬೈತಖೋಲ್, ಅಲಿಗದ್ದಾ ಹಾಗೂ ದೇವಭಾಗದಲ್ಲಿ ದೋಣಿಗಳ ವ್ಯವಸ್ಥೆ ಮಾಡಲಾಗಿತ್ತು. ಶಾಸಕಿ ರೂಪಾಲಿ ನಾಯ್ಕ ಹಾಗೂ ವಿವಿಧ ಮುಖಂಡರು ನಡುಗಡ್ಡೆಗೆ ಬಂದು ದೇವರಿಗೆ ಪೂಜೆ ಸಲ್ಲಿಸಿದರು.
ಜಾಕೆಟ್ ಕಡ್ಡಾಯ
ಜೀವರಕ್ಷಕ ಜಾಕೆಟ್ ಧರಿಸದವರನ್ನು ಹಾಗೂ ನಿಗದಿ ಮಾಡಿದ್ದಕ್ಕಿಂತ ಅಧಿಕ ಜನರನ್ನು ದೋಣಿಯೇರದಂತೆ ಪೊಲೀಸರು ತಡೆದರು.
ಈ ವಿಚಾರವಾಗಿ ಕೆಲವು ಭಕ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗಳುನಡೆದವು.ಎಷ್ಟೇ ಒತ್ತಡ ಹೇರಿದರೂ ಒಪ್ಪದ ಪೊಲೀಸರು, ಮುಂದಿನ ದೋಣಿ ಬಂದಾಗ ಅದರಲ್ಲಿದ್ದ ಜೀವರಕ್ಷಕ ಜಾಕೆಟ್ ಧರಿಸಿಯೇ ದೋಣಿಯೇರುವಂತೆ ನೋಡಿಕೊಂಡರು.
ದೋಣಿಗಳ ವ್ಯವಸ್ಥೆ
ನಗರದ ಮೀನುಗಾರರು ಕೂರ್ಮಗಡಕ್ಕೆ ಬರುವ ಭಕ್ತರ ಅನುಕೂಲಕ್ಕೆ ದೋಣಿಗಳ ಸಂಚಾರದ ವ್ಯವಸ್ಥೆ ಕಲ್ಪಿಸಿದ್ದರು. ತಮ್ಮ ಕುಟುಂಬದ ಸದಸ್ಯರೊಂದಿಗೆ ಭಕ್ತರನ್ನೂ ಉಚಿತವಾಗಿ ನಡುಗಡ್ಡೆಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದರು. ಪ್ರತಿ ವರ್ಷವೂ ಇದನ್ನು ಸೇವೆ ಎಂದೇ ಪರಿಗಣಿಸುವುದಾಗಿ ಮೀನುಗಾರರು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.