ADVERTISEMENT

ನವರಾತ್ರಿ: ಶಕ್ತಿ‍ಪೂಜೆಯ ಉತ್ಸವ

ಸೂರ್ಯನಾರಾಯಣ ಭಟ್ಟ
Published 30 ಸೆಪ್ಟೆಂಬರ್ 2019, 15:48 IST
Last Updated 30 ಸೆಪ್ಟೆಂಬರ್ 2019, 15:48 IST
ಶಕ್ತಿಪೂಜೆ
ಶಕ್ತಿಪೂಜೆ   

ನವರಾತ್ರಿಯನ್ನು ಆಬಾಲವೃದ್ಧರೆಲ್ಲರೂ ಆಚರಿಸುತ್ತಾರೆ. ನವರಾತ್ರಿಯಲ್ಲಿ ಎಲ್ಲರೂ ಉತ್ಸವದಲ್ಲಿ ಸಂತೋಷಿಸಿದರೂ ಅದರಲ್ಲಿ ಸ್ತ್ರೀಯರ ಪಾಲು ಹೆಚ್ಚು. ಬೆಳಗಿನಿಂದ ಸಂಜೆಯ ವರೆಗೆ ಸಿದ್ಧತೆಯನ್ನು ಮಾಡುವವರೂ ಅವರೇ, ಪೂಜೆಯಲ್ಲಿ ಪಾಲ್ಗೊಂಡು ಪೂಜೆಯನ್ನು ಪಡೆಯುವವರೂ ಅವರೇ. ‘ದುರ್ಗಾಸಪ್ತಶತಿ’ಯಲ್ಲಿ ಹೇಳುವಂತೆ, ಶರತ್ಕಾಲದಲ್ಲಿಯೂ ವರ್ಷದ ಆದಿಯಲ್ಲಿಯೂ ದೇವೀ ಮಾಹಾತ್ಮ್ಯವನ್ನು ಕೇಳಿದವನಿಗೆ ಎಲ್ಲಾ ತೊಂದರೆಗಳಿಂದಲೂ ಮುಕ್ತಿ ದೊರೆಯುತ್ತದೆ, ಧನ–ಧಾನ್ಯಗಳು ಉಂಟಾಗುತ್ತವೆ. ಈ ಮಾತನ್ನು ಅನುಸರಿಸಿಯೇ ಸಪ್ತಶತಿಯ ಪಾರಾಯಣವನ್ನು ನವರಾತ್ರಿಯಲ್ಲಿ ಮಾಡಲಾಗುತ್ತದೆ.

ದೇವೀ ಮಾಹಾತ್ಮ್ಯದಲ್ಲಿ (ಸಪ್ತಶತಿಯಲ್ಲಿ) ದೇವಿಯ ರೂಪಗಳ ವರ್ಣನೆಯಿದೆ. ಅವುಗಳನ್ನೇ ನವರಾತ್ರಿಯ ದಿನಗಳಲ್ಲಿ ಪೂಜಿಸುವುದುಂಟು. ಮೊದಲನೆಯ ದಿನ ಯೋಗನಿದ್ರೆಯನ್ನೂ ಎರಡನೆಯ ದಿನ ದೇವಜಾತೆಯನ್ನೂ ಮೂರನೆಯ ದಿನ ಮಹಿಷಮರ್ದಿನಿಯನ್ನೂ ನಾಲ್ಕನೆಯ ದಿನ ಶೈಲಜೆಯನ್ನೂ ಐದನೆಯ ದಿನ ಧೂಮ್ರಘಾತಿನಿಯನ್ನೂ ಆರನೆಯ ದಿನ ಚಂಡಮುಂಡಘಾತಿನಿಯನ್ನೂ ಏಳನೆಯ ದಿನ ರಕ್ತಬೀಜಘಾತಿನಿಯನ್ನೂ ಎಂಟನೆಯ ದಿನ ನಿಶುಂಭ ಘಾತಿನಿಯನ್ನೂ ಒಂಬತ್ತನೆಯ ದಿನ ಶುಂಭಘಾತಿನಿಯನ್ನೂ ಪೂಜಿಸುತ್ತಾರೆ.

ದೇವೀ ಮಾಹಾತ್ಮ್ಯದಲ್ಲಿಯೇ ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ ಚಾಮುಂಡಾ ಎಂಬ ಸಪ್ತ ಮಾತೃಕೆಯರ ಉಲ್ಲೇಖ ಇದೆ. ಕಾಲಿಕಾ ಕೌಶಿಕೀ ನಾರಸಿಂಹೀ ಎಂಬ ಶಕ್ತಿದೇವತೆಗಳೂ ಅಲ್ಲಿಯೇ ಉಕ್ತವಾಗಿವೆ.
ನವರಾತ್ರಿಯನ್ನು ನವದುರ್ಗೆಯರ ಪೂಜೆಯೆಂದೂ ಹೇಳುವುದುಂಟು. ಶೈಲಪುತ್ರೀ ಬ್ರಹ್ಮಚಾರಿಣೀ ಚಂಡಘಂಟಾ ಕೂಷ್ಮಾಂಡಾ ಸ್ಕಂದಮಾತಾ ಕಾತ್ಯಾಯನೀ ಕಾಲರಾತ್ರಿ ಮಹಾಗೌರೀ ಸಿದ್ಧಿದಾತ್ರೀ ಎಂಬ ನವದುರ್ಗೆಯರನ್ನು ಪೂಜಿಸುವ ಕ್ರಮವು ರೂಢಿಯಲ್ಲಿದೆ.

ADVERTISEMENT

ಕಲಶಸ್ಥಾಪನೆಯಾದ ಮೇಲೆ ಪ್ರತಿದಿನವೂ (ಎರಡು ವರ್ಷದಿಂದ ಆರಂಭಿಸಿ ಹತ್ತು ವರ್ಷದ ವರೆಗಿನ) ಕುಮಾರಿಯನ್ನು ವಸ್ತ್ರಾಲಂಕಾರ–ಭೋಜನಾದಿಗಳಿಂದ ಪೂಜಿಸುವ ರೂಢಿಯಿದೆ. ಬೆಳಗಿನಲ್ಲಿ ಎದ್ದು ಹೊಸ್ತಿಲು ಸಾರಿಸಿ ಸ್ತ್ರೀಯರು ಪೂಜೆಯ ಸ್ಥಳದಲ್ಲಿ ರಂಗವಲ್ಲಿಯನ್ನು ಬಿಡಿಸುತ್ತಾರೆ. ಹೂಗಳನ್ನು ಸಂಗ್ರಹಿಸಿ ಮಾಲೆಗಳನ್ನು ಕಟ್ಟುತ್ತಾರೆ. ನೀರಾಜನಕ್ಕಾಗಿ ತಟ್ಟೆಯಲ್ಲಿ ಅರಿಸಿನ ಕುಂಕುಮ ಮುಂತಾದವುಗಳಿಂದ ಚಿತ್ರಗಳನ್ನು ಬರೆಯುತ್ತಾರೆ. ನೈವೇದ್ಯಕ್ಕಾಗಿ ಬಗೆ ಬಗೆಯ ಅನ್ನ–ಭಕ್ಷ್ಯಗಳನ್ನು ತಯಾರಿಸಿ ಶಾರದೆಯ ಎಡೆಯನ್ನು ಸಜ್ಜುಗೊಳಿಸುತ್ತಾರೆ. ಮೊಸರನ್ನ ಅಥವಾ ಬುತ್ತಿಯನ್ನ ತುಪ್ಪದನ್ನ ಕೋಸಂಬರಿ ನವರಾತ್ರಿಯಲ್ಲಿ ಮಾಡುತ್ತಾರೆ. ಶಾರದೆಯ ಎಡೆಯನ್ನು ಊಟದಲ್ಲಿ ಮನೆಯ ಮಕ್ಕಳಿಗೆ ಹಾಕಿದರೆ ಅವರು ಬುದ್ಧಿವಂತರಾಗುವರೆಂಬ ನಂಬಿಕೆಯಿದೆ.

ದೇವಿಯನ್ನು ಕರೆದದ್ದು, ಪೂಜೆ ಮಾಡಿದ್ದು, ನೈವೇದ್ಯ ಮಾಡಿದ್ದು, ಬಳೆ ತೊಡಸಿದ್ದು, ಮಂಗಳಾರತಿ ಎತ್ತಿದ್ದು, ನಮಸ್ಕಾರ, ಹೂ ಬೇಡಿದ್ದು, ಪ್ರಾರ್ಥಿಸಿದ್ದು - ಇಂತಹ ಹಾಡುಗಳನ್ನು ಹಾಡುತ್ತಾ ಪೂಜೆಯಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ ಲಲಿತಾ ಸಹಸ್ರನಾಮ, ಸೌಂದರ್ಯಲಹರಿಗಳನ್ನು ಹೇಳುವುದುಂಟು.

ನವರಾತ್ರಿಯ ಹಿಂದಿನ ದಿನವೇ, ಗೊಂಬೆಗಳನ್ನು ಸ್ವಚ್ಛಗೊಳಿಸಲು ತೆಗೆದಿರಿಸುತ್ತಾರೆ. ಮೊದಲ ದಿನವೇ ಪೂಜಾ ಪ್ರದರ್ಶನಕ್ಕಾಗಿ ಗೊಂಬೆಗಳನ್ನು ಸ್ಥಾಪಿಸುತ್ತಾರೆ. ಅವುಗಳ ಜೊತೆಗೆ ವೀಳ್ಯದ ಎಲೆಗಳಿರುವ ಒಂದು ಚಿಕ್ಕ ಕಲಶವೂ ಇರುತ್ತದೆ. ತವರಿನಲ್ಲಿ ಕೊಟ್ಟಿರುವ ಪಟ್ಟದ ಗೊಂಬೆಯನ್ನು ಎಲ್ಲಕ್ಕಿಂತ ಮೊದಲು ಮೇಲಿರಿಸುತ್ತಾರೆ. ಅಷ್ಟಲಕ್ಷ್ಮಿಯರು, ದಶಾವತಾರ ರಾಮಾಯಣ-ಮಹಾಭಾರತ ಪಾತ್ರಗಳು, ತ್ರಿಮೂರ್ತಿಗಳು ಮುಂತಾದ ಗೊಂಬೆಗಳು ಇರುತ್ತವೆ. ಗಂಗಾವತರಣ, ಸಮುದ್ರಮಥನ ಮುಂತಾದ ಪುರಾಣಪುಣ್ಯ ಕಥೆಗಳನ್ನು ಬಿಂಬಿಸುವ ಬೊಂಬೆಗಳೂ ಇರುತ್ತವೆ. ಬೊಂಬೆಗಳಿಗೆ ಪ್ರತಿ ಸಂಜೆಯೂ ಪೂಜಿಸಿ ಆರತಿಗೈದು ಮಕ್ಕಳಿಗೆ ತಿನಿಸುಗಳನ್ನು ನೀಡುತ್ತಾರೆ. ಹೆಣ್ಣುಮಕ್ಕಳಿಗೆ ಬಾಗಿನ ಕೊಡುತ್ತಾರೆ.

ನವರಾತ್ರಿಯ ಮೊದಲಿನ ಆರು ದಿನಗಳಲ್ಲಿ ಪೂಜೆ ಮಾಡಲಾಗದಿದ್ದರೆ, ಕೊನೆಯ ಮೂರು ದಿನಗಳಲ್ಲಿ ಪೂಜಿಸಿದರೂ ಶ್ರೀದೇವಿಯು ಸಂತುಷ್ಟಳಾಗುತ್ತಾಳೆ. ಅಷ್ಟಮಿಯ ದಿನ ಪೂಜೆ ಮಾಡಿದರೂ ಸಾಕು ಎಂದು ಶಾಸ್ತ್ರದಲ್ಲಿದೆ. ಈ ದಿನಗಳಲ್ಲಿ ಪುಸ್ತಕವನ್ನು ಪೂಜೆ ಮಾಡಿ, ಪ್ರಸಾದವನ್ನು ಪಡೆದು, ಪಠನ ಮಾಡಿದರೆ ಶಾರದೆಯ ಅನುಗ್ರಹವುಂಟಾಗುತ್ತದೆ.

ನವರಾತ್ರಿ ಹಗಲಿನಲ್ಲಿ ಉಪವಾಸ, ರಾತ್ರಿಯ ಪೂಜೆಯಿಂದ ಸಂಪನ್ನವಾದರೆ, ವಿಜಯದಶಮಿಯಂದು ಮಧ್ಯಾಹ್ನವೇ ಪೂಜೆಯಿರುತ್ತದೆ. ಅಂದು ಎಲ್ಲರೂ ಆಭರಣಗಳನ್ನು ಧರಿಸುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಓದುವುದಾಗಲಿ, ಬರೆಯುವುದಾಗಲಿ ದೇವಿಗೆ ಇಷ್ಟವಾಗುವುದಿಲ್ಲ. ಆದರೆ ವಿದ್ಯಾದಶಮಿಯಂದು ಅದನ್ನು ಮಾಡದಿದ್ದರೆ ಜಗನ್ಮಾತೆಯು ಹರಸುವುದಿಲ್ಲ. ಅಂದು ಶಾರದಾಪೂಜೆಯನ್ನು ಶಾಲೆಗಳಲ್ಲಿಯೂ ಏರ್ಪಡಿಸುತ್ತಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.