ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಆರ್.ವಿ.ರಸ್ತೆಯಲ್ಲಿ ಶುಕ್ರವಾರ ದುರ್ಗಾ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ
ಪ್ರಜಾವಾಣಿ ಚಿತ್ರ–ಎಂ.ಎಸ್.ಮಂಜುನಾಥ್
ಇನ್ನೇನು ನವರಾತ್ರಿ ಹೊಸ್ತಿಲಲ್ಲಿದೆ. ತಾಯಿ ಪಾರ್ವತಿ ತನ್ನ ಒಂಬತ್ತು ಅವತಾರಗಳನ್ನು ಹೊತ್ತು ಬರುತ್ತಿದ್ದಾಳೆ. ಅವಳ ಸ್ವಾಗತಕ್ಕಾಗಿ ಮನೆಯ ಹೆಣ್ಣುಮಕ್ಕಳು ಅಣಿಯಾಗುತ್ತಿದ್ದಾರೆ. ಇಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ತಾಯಿಯ ನವ ಅವತಾರಗಳ ಪುಟ್ಟ ಪರಿಚಯ ಮತ್ತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
ತಾಯಿಯ ಆರಾಧನೆ, ನಮ್ಮ ಸಂಸ್ಕೃತಿ, ನವರೂಪಗಳ ಸಾಂಕೇತಿಕ ಪರಿಚಯ ಮತ್ತು ಅವುಗಳನ್ನು ಈ ಆಧುನಿಕ ಯುಗದಲ್ಲಿ ಹೇಗೆ ಮತ್ತು ಏಕೆ ಅವಶ್ಯವಾಗಿ ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂಬುದನ್ನು ತಿಳಿಯೋಣ.
ನವದುರ್ಗೆಯರಲ್ಲಿ ಮೊದಲನೆಯವಳು ‘ಶೈಲಪುತ್ರಿ’. ಯಾವುದೇ ಜೀವ ಜನಿಸಿದಾಗ ಮೊದಲ ಸಂಬಂಧ ಏರ್ಪಡುವುದೇ ಹಡೆದವರೊಂದಿಗೆ. ಮನೆಯಲ್ಲಿ ಮಕ್ಕಳ ಮುಗ್ಧತೆಗೆ ಧಕ್ಕೆ ಬಾರದ ರೀತಿ ಅವರ ಲಾಲನೆ ಪಾಲನೆ ಮತ್ತು ಮೂಲ ಶಿಕ್ಷಣಕ್ಕೆ ಅಡಿಪಾಯ ಹಾಕುವುದು ಹೆತ್ತವರ ಕರ್ತವ್ಯ. ಶೈಲಪುತ್ರಿ ದೇವಿಯು ಪರ್ವತರಾಜನ ಮಗಳಾಗಿದ್ದು, ಗೂಳಿಯ ಮೇಲೆ ಸವಾರಿ ಮಾಡುತ್ತಾ ಕೈಯಲ್ಲಿ ತ್ರಿಶೂಲ ಹಿಡಿದಿರುತ್ತಾಳೆ. ಅಂದು ಮಗಳು ಜನಿಸಿದಾಗ ಆ ತಾಯಿಯ ರೂಪವೆಂದು ತಿಳಿದು ಅವಳನ್ನು ಸ್ವಾಗತಿಸೋಣ.
ಭಕ್ತರು ನವದುರ್ಗೆಯರ ಎರಡನೇ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ಅವಳು ತಪಸ್ಸು, ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ. ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಬುದ್ಧಿವಂತಿಕೆ, ದೃಢಸಂಕಲ್ಪ ಮತ್ತು ಶಾಂತಿ ದೊರೆಯುತ್ತದೆ. ಈ ರೂಪದಲ್ಲಿ ತಾಯಿ ಯಾವುದೇ ಅಸ್ತ್ರವನ್ನು ಹಿಡಿದಿರುವುದಿಲ್ಲ ಹಾಗೂ ಯಾವುದೇ ವಾಹನದಲ್ಲಿ ಸವಾರಿ ಮಾಡುತ್ತಿರುವುದಿಲ್ಲ. ಅವಳು ವಿದ್ಯಾರ್ಥಿನಿಯಾಗಿ ವಿದ್ಯಾಕಾಂಕ್ಷಿ ಆಗಿರುತ್ತಾಳೆ. ಕಲಿಯುವ ಮತ್ತು ಬೆಳೆಯುವ ಮನೋಭಾವ ಹೊಂದಿರುತ್ತಾಳೆ. ಮನೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಹೊಣೆ ಪೋಷಕರ ಮೇಲಿರುತ್ತದೆ.
ಚಂದ್ರಘಂಟಾ ದೇವಿಯ ರೂಪದಲ್ಲಿ ಕಾಣಿಸಿಕೊಳ್ಳುವ ತಾಯಿ, ಬಾಲಚಂದ್ರನನ್ನು ಕೈಯಲ್ಲಿ ಹಿಡಿದು ಮುತ್ತೈದೆಯ ಲಕ್ಷಣದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸ್ವರ್ಣದ ಬಣ್ಣವನ್ನು ಹೊಂದಿದ ಮೈಬಣ್ಣದಲ್ಲಿ ಶೋಭಾಯಮಾನವಾಗಿ ಕಂಗೊಳಿಸುತ್ತಿರುತ್ತಾಳೆ. ತಾಯಿ ಈ ಅವತಾರದಲ್ಲಿ ಶಿವನೊಂದಿಗೆ ಸಂಸಾರ ಹೂಡುತ್ತಾಳೆ ಎಂಬ ನಂಬಿಕೆ ಇದೆ.
ಹೆಣ್ಣುಮಕ್ಕಳು ಪ್ರಪಂಚದಲ್ಲಿ ಯಾವುದೇ ರೀತಿಯ ಸವಾಲುಗಳಿಗೆ ಹೆದರಬೇಕಿಲ್ಲ, ಚಂದ್ರಘಂಟಾ ದೇವಿಯ ಕೃಪೆಯಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಹಾಯವಾಗುತ್ತದೆ ಎಂಬುದು ಪ್ರತೀತಿ. ಮಕ್ಕಳು ಇದನ್ನರಿತು ಹಿರಿಯರ ಸಲಹೆಗಳು ಮತ್ತು ಮಾರ್ಗದರ್ಶನವನ್ನು ಸದಾ ಪಾಲಿಸಬೇಕು.
ಕೂಷ್ಮಾಂಡ ದೇವಿಯು ನಾಲ್ಕನೇ ಅವತಾರವಾಗಿದ್ದು, ತನ್ನ ನಗುವಿನಿಂದ ಪ್ರಪಂಚವನ್ನೇ ಸೃಷ್ಟಿಸಿದಳೆಂದು ನಂಬಲಾಗಿದೆ. ಎಂಟು ತೋಳುಗಳಿಂದ ದೈತ್ಯ ರೂಪವನ್ನು ತೋರುವ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಸಂತೋಷ, ಸಂಪತ್ತು ದೊರೆಯುತ್ತವೆ ಎನ್ನುವ ನಂಬಿಕೆಯಿದೆ. ದುರ್ಗಾದೇವಿಯ ಕೂಷ್ಮಾಂಡ ರೂಪವು ವಿಶಿಷ್ಟವಾಗಿದ್ದು, ಅವಳು 8 ತೋಳುಗಳನ್ನು ಹೊಂದಿದ್ದಾಳೆ ಮತ್ತು ಆಕೆ ತನ್ನ ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ.
ಶೈಲಪುತ್ರಿ
ಸ್ಕಂದ ಮಾತೆಯ ಅವತಾರವು ದೇವಿಯ 5ನೇ ಅವತಾರ. ಪಂಚಮಿ ತಿಥಿಯಲ್ಲಿ ಬರುವುದು. ಕಾರ್ತಿಕೇಯ ಅಥವಾ ಸ್ಕಂದ ಮಾತೆ ಎಂದು ಸಹ ಪರಿಗಣಿಸಲಾಗುವುದು. ಈ ಅವತಾರದಲ್ಲಿ ದೇವಿಯು ಸಿಂಹದ ಮೇಲೆ ಕುಳಿತು, ತನ್ನ ಆರು ಮುಖದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿರುತ್ತಾಳೆ. ತಾಯಿಯ ಈ ಅವತಾರವು ಹೆಚ್ಚು ಶಕ್ತಿಯುತವಾದದ್ದು ಎನ್ನಲಾಗುತ್ತದೆ. ಕರುಣಾಮಯಿಯಾಗಿ ತಾಯಿ ಕಾಣಿಸಿಕೊಳ್ಳುತ್ತಾಳೆ. ನಂತರದ ಅವತಾರಗಳಲ್ಲಿ ತಾಯಿಯು ಸಮಾಜದ ಅಂಧಕಾರವನ್ನು ಅಡಗಿಸುತ್ತಾ, ಪ್ರತಿ ಮನುಷ್ಯನೂ ಆಂತರಿಕ ಪಯಣದಲ್ಲಿ ಉನ್ನತಿಯ ಹಾದಿಗೆ ಹೇಗೆ ಪ್ರಯತ್ನಿಸಬೇಕೆಂದು ತಿಳಿಸಿಕೊಡುತ್ತಾಳೆ.
ಇದನ್ನು ಕಾತ್ಯಾಯಿನಿ ದೇವಿ ಎಂದು ಕರೆಯಲಾಗುವ ದುರ್ಗಾದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗ, ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರ ಮರ್ದಿನಿಯನ್ನು ಷಷ್ಟಿಯಂದು, ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ.
ಪ್ರತಿಯೊಬ್ಬರೂ ಹೇಗೆ ತಮ್ಮ ವಿವೇಚನೆಯನ್ನು ಬಳಸಿಕೊಂಡು ಆತ್ಮವಿಶ್ವಾಸದಿಂದ ನಕಾರಾತ್ಮಕ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂಬುದು ತಾಯಿಯ ಈ ಅವತಾರದಿಂದ ತಿಳಿಯುತ್ತದೆ. ಸಮಸ್ಯೆಗಳನ್ನು ನಿವಾರಿಸಿ ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಬಹುದಾಗಿದೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿನ ದಸರಾದ ಪ್ರಯುಕ್ತ (ಬ್ರಹ್ಮಚಾರಿಣಿ ) ನವದುರ್ಗೆಯರ ಪ್ರತಿಷ್ಠಾಪನೆ
ಕಾಳರಾತ್ರಿ ದೇವಿಯ ಆರಾಧನೆ ನಡೆಯುತ್ತದೆ. ದುರ್ಗಾ ದೇವಿಯ 7ನೇ ರೂಪವಾದ ಕಾಳರಾತ್ರಿಯು ಮೂರು ಭಯಾನಕ ಕಣ್ಣುಗಳನ್ನು ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಈಕೆಯ ಮೇಲಿನ ಬಲಗೈ ವರದಾ ಮುದ್ರೆಯಲ್ಲಿದೆ ಮತ್ತು ಕೆಳಗಿನ ಬಲಗೈ ಅಭಯ ಮುದ್ರೆಯಲ್ಲಿದೆ. ಎಡಭಾಗದ ಒಂದು ಕೈಯಲ್ಲಿ ಕಬ್ಬಿಣದ ಮುಳ್ಳುಗಳಂತಿರುವ ಆಯುಧವನ್ನು ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. ಘೋರ ಕಪ್ಪು ಮೈಬಣ್ಣವನ್ನು ಹೊಂದಿರುವ ಈಕೆ, ಬಿಚ್ಚಿದ ದಟ್ಟ ತಲೆಕೂದಲು, ಕೊರಳಲ್ಲಿ ರುಂಡಮಾಲೆ, ಬಾಯಲ್ಲಿ ಉರಿಯುವ ಬೆಂಕಿಯನ್ನು ಹೊಂದಿದ್ದಾಳೆ. ಪುರಾಣಗಳ ಪ್ರಕಾರ, ಕಾಳರಾತ್ರಿ ದೇವಿಯು ಶುಂಭ, ನಿಶುಂಭರನ್ನು ಸಂಹಾರ ಮಾಡಲು ಈ ರೂಪವನ್ನು ಹೊಂದಿದಳು ಎಂದು ಹೇಳಲಾಗುತ್ತದೆ. ತಾಯಿಯ ಈ ರೂಪ ಕೊಂಚ ಭಿನ್ನವಾಗಿ ಇರುತ್ತದೆ. ಭಕ್ತರಿಗೆ ಅಭಯ ನೀಡಿ ಶುಭಂಕರಿ ಆಗಿರುತ್ತಾಳೆ.
ಮುಂದೆ ಅಷ್ಟಮಿಯಂದು ಮಹಾಗೌರಿಯಾಗಿ, ವಿಶೇಷವಾಗಿ ಆ ಸೌಮ್ಯ ರೂಪದಲ್ಲಿ ತಾಯಿಯ ಆಗಮನ. ಈ ದಿನ ಕನ್ಯಾ ಪೂಜೆಗೆ ಬಹಳ ಮಹತ್ವವಿದೆ. ಮಹಾಗೌರಿಯ ಪೂಜೆಯಿಂದ ಸಂತೋಷ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಬಿಳಿ ಎತ್ತಿನ ಮೇಲೆ ಮಹಾಗೌರಿಯ ಸವಾರಿ.
ಮಹಾಗೌರಿ
ಇದನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ನವದುರ್ಗೆಯ ಒಂಬತ್ತನೇ ಅಥವಾ ಕೊನೆಯ ರೂಪವಾದ ಸಿದ್ಧಿಧಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲವಾಗಿದ್ದಾಳೆ. ಈ ದೇವಿಯು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆಯನ್ನು ನೀಡುವಳು.
ಪುರಾಣ ಗ್ರಂಥಗಳ ಪ್ರಕಾರ, ಜಗತ್ತಿನ ಎಂಟು ಸಿದ್ಧಿಗಳೆಂದರೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ. ನವದುರ್ಗೆಯರಲ್ಲಿ ತಾಯಿ ಸಿದ್ಧಿಧಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನೂ ಹೊಂದಿದ್ದಾಳೆ ಮತ್ತು ಅವಳ ಭಕ್ತರಿಗೆ ಎಲ್ಲವನ್ನೂ ಕರುಣಿಸುತ್ತಾಳೆ ಎಂಬ ನಂಬಿಕೆಯಿಂದ ಅವಳಲ್ಲಿ ಮೊರೆಹೋಗುತ್ತಾರೆ.
ಹಬ್ಬಗಳ ಆಚರಣೆಗಳು ಬರೀ ಆಚರಣೆಗಳಾಗಿಯೇ ಉಳಿಯಬಾರದು. ಅವುಗಳ ಮೂಲ ಉದ್ದೇಶಗಳು ಮತ್ತು ಆಶಯಗಳಿಗೆ ಒತ್ತಾಸೆಯಾಗಿ ಅವುಗಳನ್ನು ಅಳವಡಿಸಿಕೊಳ್ಳೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.