ADVERTISEMENT

ದಿನದ ಸೂಕ್ತಿ: ಹೆದರಬೇಡಿ, ಎದುರಿಸಿ!

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಆಗಸ್ಟ್ 2020, 5:24 IST
Last Updated 31 ಆಗಸ್ಟ್ 2020, 5:24 IST
   

ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ ।
ಅಶೋಚನ್‌ ಪ್ರತಿಕುರ್ವೀತ ಯದಿ ಪಶ್ಯೇದುಪಕ್ರಮಮ್‌ ।।

ಇದರ ತಾತ್ಪರ್ಯ ಹೀಗೆ:
‘ಸಾರ್ವತ್ರಿಕ ಆಪತ್ತುಗಳು ಪ್ರಾಪ್ತವಾದಾಗ ವ್ಯಕ್ತಿ ಅಳುತ್ತ ಕೂಡಬಾರದು. ಶೋಕವನ್ನು ಬದಿಗಿರಿಸಿ ಪರಿಸ್ಥಿತಿಯನ್ನು ನಿವಾರಿಸಲು ಮಾಡಬೇಕಾದ ಪ್ರಯತ್ನವನ್ನು ಆರಂಭಿಸತಕ್ಕದ್ದು.‘

ನಮ್ಮ ಪ್ರಸ್ತುತ ಸಂದರ್ಭಕ್ಕೆ ತುಂಬ ಹೊಂದಿಕೆಯಾಗುವಂಥ ಶ್ಲೋಕ ಇದು; ಮಹಾಭಾರತದ್ದು.

ADVERTISEMENT

ಸಾರ್ವತ್ರಿಕ ಆಪತ್ತುಗಳು ನಿರಂತರವಾಗಿ ನಮ್ಮನ್ನು ಕಾಡುತ್ತಲೇ ಇರುತ್ತವೆ. ಭೂಕಂಪ, ಪ್ರವಾಹ, ಬರ – ಇಂಥವು ಪ್ರಪಂಚದ ಎಲ್ಲ ಭಾಗಗಳ ಜನರನ್ನೂ ಬಾಧಿಸುತ್ತಲೇ ಇರುತ್ತವೆ. ಈಗ ಜಗತ್ತನ್ನು ಮತ್ತೊಂದು ದೊಡ್ಡ ಸಮಸ್ಯೆಯೊಂದು ಕಾಡುತ್ತಿದೆ. ಇಡಿಯ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಹೀಗೆಂದು ನಾವು ಹೆದರಿ ಸುಮ್ಮನೆ ಕೂರಬೇಕೆ? ಮಹಾಭಾರತ ಅದನ್ನು ಸಮರ್ಥಿಸುತ್ತಿಲ್ಲ; ಒದಗಿರುವ ಸಂಕಟದಿಂದ ಪಾರಾಗಿಸಬಲ್ಲ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಅದು ಹೇಳುತ್ತಿದೆ.

ಈಗ ಒದಗಿರುವ ಸಂಕಷ್ಟ ಎಂದರೆ ಕೊರೊನಾ ವೈರಸ್‌ನ ಹಾವಳಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ! ಈ ಸಂಕಷ್ಟದಿಂದ ಪಾರಾಗುವ ಮಾರ್ಗವಾದರೂ ಯಾವುದು?

ದಿಟವಾಗಿ ನೋಡಿದರೆ ಈಗಿನ ಸಮಸ್ಯೆಯನ್ನು ಆತಂಕದಿಂದ ನೋಡಬೇಕಾಗಿಯೇ ಇಲ್ಲ; ವಿವೇಕದಿಂದ ಅದನ್ನು ನಿರ್ವಾಹ ಮಾಡಿದರೆ ಹೆಚ್ಚಿನ ತೊಂದರೆಗಳಿಲ್ಲದೆ ಅದರಿಂದ ಪಾರಾಗಬಹುದಿತ್ತು. ಆದರೆ ಜನರ ಸಹಜ ಸ್ವಭಾವವಾದ ನಿರ್ಲಕ್ಷ್ಯ, ಅಸಡ್ಡೆ, ಅಜ್ಞಾನ, ಅಹಂಕಾರ, ಅನಾಚಾರಗಳ ಕಾರಣಗಳಿಂದ ಸಮಸ್ಯೆ ಉಲ್ಬಣವಾಗಿದೆ; ಪರಿಸ್ಥಿತಿ ನಮ್ಮ ಕೈ ಮೀರಿದೆಯೇನೋ – ಎಂಬಂಥ ಆತಂಕ ಎದುರಾಗುತ್ತಿದೆ. ಆದರೆ ಇದರಿಂದ ಧೃತಿಗೆಡಬೇಕಿಲ್ಲ; ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಈ ಸಮಸ್ಯೆಗೆ ಪರಿಹಾರ ಎರಡು ಆಯಾಮಗಳಲ್ಲಿ ನಡೆಯಬೇಕಾಗಿದೆ; ವ್ಯಷ್ಟಿ ಮತ್ತು ಸಮಷ್ಟಿಗಳ ನೆಲೆಯಲ್ಲಿ. ಸಮಸ್ಯೆಯನ್ನು ಎದುರಿಸುವಲ್ಲಿಈ ಎರಡು ನೆಲೆಗಳಲ್ಲೂ ವಿಫಲರಾಗಿರುವುದರಿಂದ ಅನಾಹುತ ಹೆಚ್ಚಾಗಿದೆಯಷ್ಟೆ. ಹೀಗೆಂದು ನಾವು ಈಗ ಕೈಕಟ್ಟಿ ಕುಳಿತುಕೊಳ್ಳಬೇಕಾಗಿಲ್ಲ; ಧೈರ್ಯವನ್ನು ಕಳೆದುಕೊಳ್ಳಬೇಕಾಗಿಲ್ಲ. ಸರ್ಕಾರ, ಜನರು – ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕು. ಇಂಥ ವಿಷಮ ಸಂದರ್ಭದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳು, ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಂಡು ಋಜುಮಾರ್ಗದಲ್ಲಿ ನಡೆಯಬೇಕು; ಮಾತ್ರವಲ್ಲ, ಸಮಸ್ಯೆಯನ್ನು ಧೀಮಂತಿಕೆಯಿಂದ ಎದುರಿಸಬೇಕು; ಕ್ರಿಯಾಶೀಲರಾಗಬೇಕು. ಅಂತೆಯೇ ಜನರೂ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು.

ಮಹಾಭಾರತ ಈಗಿನ ನಮ್ಮ ಸಂದರ್ಭಕ್ಕಿಂತಲೂ ಹೆಚ್ಚು ದುರಂತಗಳನ್ನು ಕಂಡಿರುವ ಮಹಾಕಾವ್ಯ. ನಮಗೆ ಒದಗಿರುವ ಸಮಸ್ಯೆ ಎಷ್ಟೇ ಭೀಕರವಾಗಿದ್ದರೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ, ವಿವೇಕದಿಂದ ಅದನ್ನು ಎದುರಿಸಿ ಪಾರಾಗಬೇಕೆಂದು ಅದು ಹೇಳುತ್ತಿರುವುದನ್ನು ನಾವು ಕೇಳಿಸಿಕೊಳ್ಳಬೇಕು. ಹೌದು, ಒಟ್ಟು ಸಮಾಜ ಒಂದಾದರೆ ಎಂಥ ಸಮಸ್ಯೆಯಿಂದಲೂ ಮುಕ್ತಿಯನ್ನು ಪಡೆಯಬಹುದು. ಅಂಥ ವಿವೇಕ ಈಗ ಸಮಾಜಕ್ಕೂ ಸರ್ಕಾರಕ್ಕೂ ಒದಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.