ADVERTISEMENT

ವಚನಾಮೃತ: ತ್ಯಾಗದಿಂದಲೇ ಧರ್ಮದ ಉಳಿವು

ಮಹಾದೇಶ್ವರ ಸ್ವಾಮೀಜಿ
Published 1 ಮೇ 2020, 3:46 IST
Last Updated 1 ಮೇ 2020, 3:46 IST
ಮಹಾದೇಶ್ವರ ಸ್ವಾಮೀಜಿ
ಮಹಾದೇಶ್ವರ ಸ್ವಾಮೀಜಿ   

ಧರ್ಮ- ನೀತಿ- ರಾಷ್ಟ್ರೀಯ ಮನೋಭಾವ ಉಳಿಯಬೇಕಾದರೆ ತ್ಯಾಗ ಬಲಿದಾನಗಳಿಂದ ಮಾತ್ರ ಸಾಧ್ಯ. ಭಾರತ ದೇಶ ತನ್ನದೇ ಆದ ಸಾಂಸ್ಕೃತಿಕ- ಧಾರ್ಮಿಕ ಪರಂಪರೆ ಮತ್ತು ಉದಾತ್ತ ಮೌಲ್ಯಗಳನ್ನು ಹೊಂದಿರುವಂತಹದ್ದು. ಆದರೆ ಇಂದು ರಾಷ್ಟ್ರಪ್ರೇಮ ನಶಿಸುತ್ತ ಪ್ರತ್ಯೇಕತಾವಾದ ಬೆಳೆಯುತ್ತಿದೆ. ಧಾರ್ಮಿಕ ಮನೋಭಾವ ನಶಿಸಿ ಮತಾಂಧತೆ ತಲೆ ಎತ್ತುತ್ತಿದೆ. ಭ್ರಷ್ಟಾಚಾರ, ಅಸತ್ಯ, ಸ್ವೇಚ್ಛಾಚಾರ ನಗ್ನನೃತ್ಯ ಮಾಡುತ್ತಿವೆ.

ದೇಶದ ಭವಿಷ್ಯವೇನು ಎಂಬ ಬಗ್ಗೆಯೇ ಆತಂಕ ಮಾತ್ರವಲ್ಲ ಮನುಷ್ಯ ಸಮಾಜ ತಳೆಯುತ್ತಿರುವ ಪಾಶವೀ ಪ್ರವೃತ್ತಿ ನೋಡಿದರೆ ಮಾನವ ಸಮಾಜದ ಭವಿಷ್ಯವೇನು ಎಂದು ವಿಚಾರ ಮಾಡುವವರಲ್ಲಿ ಆತಂಕ ಉಂಟಾಗದೇ ಇರದು. ಇಂಥ ವಾತಾವರಣದಲ್ಲಿ ತ್ಯಾಗ- ಕಳಕಳಿ- ಬಲಿದಾನಗಳಿಂದ ಮಾತ್ರ ಉತ್ತಮ ಮೌಲ್ಯಗಳ ಪ್ರತಿಷ್ಠಾಪಿಸಲು ಸಾಧ್ಯ.

ಇಂದು ಜಗತ್ತಿಗೆ ಧರ್ಮವು ಅಗತ್ಯವಾಗಿದೆ. ಧರ್ಮವೆಂದರೆ ಜಾತೀಯತೆ, ಮತಾಂಧತೆ, ಮೂಢನಂಬಿಕೆ ಎಂಬ ತಪ್ಪುಕಲ್ಪನೆಯಿಂದಾಗಿ ಹಲವರು ಧರ್ಮವೇ ಬೇಡವೆಂಬ ತಪ್ಪು ಭಾವನೆ ತಳೆಯುತ್ತಿದ್ದಾರೆ. ಆದರೆ, ಧರ್ಮದ ಸ್ವರೂಪ ಹೀಗಿಲ್ಲ. ಅದು ತನ್ನ ಪರಿಶುದ್ಧ ರೂಪದಲ್ಲಿ ಸಂಜೀವಿನಿಯಾಗಿದೆ. ಆದ್ದರಿಂದಲೇ ಜಾತಿ, ವರ್ಣ, ವರ್ಗ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯವನ್ನು ಧರ್ಮದ ತಳಹದಿಯ ಮೇಲೆ 12ನೇ ಶತಮಾನದಲ್ಲಿ ಬಸವಣ್ಣ ಕಟ್ಟಿ ತೋರಿಸಿದರು.ಧರ್ಮದಲ್ಲಿ ನುಸುಳುವ ಮತಾಂಧತೆ, ಜಾತೀಯತೆ, ವಿಧಿವಾದ ಮುಂತಾದವನ್ನು ತೆಗೆದುಹಾಕಿ ನಿಜವಾದ ಧರ್ಮ ಇಂದು ಪ್ರಚಾರಗೊಳಿಸಬೇಕು.

ADVERTISEMENT

–ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.