ADVERTISEMENT

ಜೀವನ ಸೌಂದರ್ಯ| ಸಹನೆ ಎಂಬ ಪ್ರಾರ್ಥನೆ

ರಮ್ಯಾ ಶ್ರೀಹರಿ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ಕಾಯುವಿಕೆಯೇ
ಕಾಯುವಿಕೆಯೇ    
""

ಕಷ್ಟಗಳನ್ನು ಸಹಿಸುವ ಶಕ್ತಿ ನೀಡು - ಎಂಬ ನಮ್ಮ ಪ್ರಾರ್ಥನೆ ಬಹಳ ಅರ್ಥಪೂರ್ಣವೂ ಪ್ರಾಮಾಣಿಕವೂ ಆದಂಥದ್ದು. ಏಕೆಂದರೆ ನಿಜವಾಗಲೂ ದೊಡ್ಡ ಸಮಸ್ಯೆಯೆಂದರೆ ಇದುವೇ: ಕರಗುವವರೆಗೂ ಕಾಯುವುದು ಕಷ್ಟ. 'ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರಕೊಡುತ್ತದೆ’ ಎನ್ನುವ ನುಡಿಗಟ್ಟು ನಮ್ಮ ದಿನನಿತ್ಯದ ಬಳಕೆಯಲ್ಲಿ ಎಷ್ಟು ಉಪಯೋಗಿಸಲ್ಪಟ್ಟಿದೆಯೆಂದರೆ ಅದು ಸವೆದುಹೋಗುವಷ್ಟು.

ನಾವು ಮಾಡಿದ ಕೆಲಸಗಳ, ತೋರಿದ ರಾಗದ್ವೇಷಗಳ ಪ್ರತಿಕ್ರಿಯೆಯನ್ನು ಮನುಷ್ಯರು ತಕ್ಷಣಕ್ಕೆ ತೋರಿಸಿಬಿಡಬಹುದು; ಆದರೆ ಕಾಲ ಹಾಗಲ್ಲ. ಅದು ನಮ್ಮೆಲ್ಲ ಕ್ರಿಯೆಗಳನ್ನು ತನ್ನ ಗರ್ಭದಲ್ಲಿ ಹೊತ್ತಿರುತ್ತದೆ. ನಾವು ಮಾಡಿದ ಕ್ರಿಯೆಯ ಪ್ರತಿಕ್ರಿಯೆಯನ್ನು ಅನುಭವಿಸಲು ನಮ್ಮನ್ನು ಮೊದಲು ತಯಾರು ಮಾಡುತ್ತದೆ.

ಭೌತಿಕ ಕ್ರಿಯೆಗಳ ಹಿಂದಿರುವ ಕಾರ್ಯ ಕಾರಣ ಸಂಬಂಧ ನಮಗೆ ಸುಲಭವಾಗಿ ಅರ್ಥವಾಗುವುದರಿಂದ ಕ್ರಿಯೆ ಮತ್ತು ಅದರ ಪರಿಣಾಮದ ನಡುವಿರುವ ಕಾಲದ ಅಂತರ ನಮ್ಮನ್ನು ಅಷ್ಟು ಕಂಗಾಲಾಗಿಸುವುದಿಲ್ಲ. ಆದರೆ ಮಾನಸಿಕ ಕ್ರಿಯೆಗಳು ನಮ್ಮನ್ನು ಯಾವ ಕಾರ್ಯದ ಕಡೆಗೆ ಕರೆದುಕೊಂಡುಹೋಗುವುದು ಎನ್ನುವುದು ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ; ಹಾಗೂ ಯಾವ ಕ್ರಿಯೆಗೆ ಯಾವ ಫಲ ದೊರೆಯುತ್ತದೆ ಎನ್ನುವುದು ಮಾನಸಿಕ, ನೈತಿಕ, ಆಧ್ಯಾತ್ಮಿಕ ಸ್ತರದಲ್ಲಿ ಅಷ್ಟು ನಿರ್ದಿಷ್ಟವಾದುದಿಲ್ಲ. ಹಾಗಾಗಿ ಕ್ರಿಯೆ ಮತ್ತು ಅದರ ಪರಿಣಾಮದ ನಡುವಿನ ಕಾಲದ ಅಂತರ ನಮ್ಮನ್ನು ಕಂಗೆಡಿಸುತ್ತದೆ.

ADVERTISEMENT

ಕಾಲವು ತನ್ನ ಪ್ರತಿಕ್ರಿಯೆಗೆ ನಮ್ಮನ್ನು ಸಜ್ಜುಗೊಳಿಸುವ ಸಮಯದಲ್ಲಿ ನಾವು ಮಾಡಬೇಕಾದ್ದೇನು? ನಮ್ಮ ಕ್ರಿಯೆಗಳಿಗೆ ಕಾಲವು ಕೊಡುವ ಪ್ರತಿಕ್ರಿಯೆಯನ್ನು ಕೆಟ್ಟದ್ದು, ಒಳ್ಳೆಯದು ಎಂದು ವಿಂಗಡಿಸುವುದು ನಮ್ಮ ಸಂಕುಚಿತ ದೃಷ್ಟಿಕೋನವಷ್ಟೇ, ಎಲ್ಲವೂ ಉಚಿತವಾದದ್ದೇ ಆಗಿತ್ತು ಎಂಬುದು ಕಾಲಾಂತರದಲ್ಲಷ್ಟೇ ನಮಗೆ ತಿಳಿದೀತು. ಕಾಲ ನಮ್ಮನ್ನು ಯಾವುದಕ್ಕೆ ಪಕ್ವಗೊಳಿಸುತ್ತಿದೆ ಎಂದು ತಿಳಿಯುವುದು ಅಷ್ಟು ಸುಲಭವಲ್ಲ – ಎಂದ ಮೇಲೆ ಮಾಡುವುದೇನು? ನಾವು ಯಾವುದಕ್ಕೆ ತಯಾರಾಗುತ್ತಿದ್ದೇವೋ ಅದಕ್ಕೆ ತಯಾರಾಗಲು ಬೇಕಾದ ಸಹನೆಯನ್ನು ಪ್ರಾರ್ಥಿಸುವುದೊಂದೆ ನಮ್ಮ ಆಯ್ಕೆ. ಇಲ್ಲದಿದ್ದರೆ ಯಾವುದು ಅಪರಿಹಾರ್ಯವೋ ಅದರ ವಿರುದ್ಧ ಹೋರಾಡಿ ದಣಿಯಬೇಕಾದೀತು.

ಕಾಯುವ ಸಮಯ ಅರ್ಥಪೂರ್ಣವಾದದ್ದು ಎಂಬುದನ್ನರಿಯದೆ ಹೋದಾಗ ವಿಚಲಿತಗೊಳ್ಳುವುದೇ ಸುಖ. ಹುಟ್ಟಿದ ಮಕ್ಕಳು ಕೂಡಲೇ ಎಲ್ಲವನ್ನೂ ಕಲಿತುಬಿಡಬೇಕೆಂಬ ಆತುರ, ನೆಟ್ಟ ಸಸಿ ಒಡನೇ ಫಲ ಕೊಡಬೇಕೆಂಬ ಹಪಹಪಿ. ಬೆಳೆಯುವುದು, ಮಾಗುವುದು ಎಂದರೆ ಅದೇ: ಕಾಲ ಗರ್ಭದ ಕತ್ತಲಲ್ಲಿ ಕಾಯುವುದು, ಆ ಕತ್ತಲಲ್ಲಿ ಸಹನೆಯೇ ಬೆಳಕು, ಅದೇ ಉಸಿರು, ಅದೇ ಶಕ್ತಿ. ಆಂತರ್ಯದ ಗಿಡದಲ್ಲೊಂದು ಮೊಗ್ಗು ಹೂವಾಗಿ ಅರಳಿ, ಕಾಯಾಗಿ, ಹಣ್ಣಾಗುವವರೆಗೂ ಅದನ್ನು ಧರಿಸುವ ಸಹನೆ ಹೃದಯಕ್ಕಿರಲಿ, ಸದಾ ತಲ್ಲಣಿಸುವ ನಮ್ಮ ಕಣ್ಣು, ಕೈಗಳಿಗೆ ಆ ಮೊಗ್ಗು ಎಟುಕದಿರಲಿ, ಸಹನೆ ದಾರಿಯಷ್ಟೇ ಅಲ್ಲ ಗುರಿಯೂ ಆಗಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.