ADVERTISEMENT

ಇಂದು ರಥಸಪ್ತಮಿ: ಆರೋಗ್ಯಕ್ಕೂ ಆನಂದಕ್ಕೂ ಸೂರ್ಯ

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಫೆಬ್ರುವರಿ 2025, 22:30 IST
Last Updated 3 ಫೆಬ್ರುವರಿ 2025, 22:30 IST
   

ನಾಡಿನ ಕೆಲವು ಭಾಗಗಳಲ್ಲಿ ಈ ಸಲ ಚಳಿ ಹೆಚ್ಚಿತ್ತು. ಕಳೆದ ಒಂದೆರಡು ದಿನಗಳಿಂದ ಬಿಸಿಲು ಕೂಡ ಪ್ರಖರವಾಗುತ್ತಿದೆ. ‘ಇನ್ನೇನು ರಥಸಪ್ತಮಿ ಬಂತು; ಬಿಸಿಲು ಚುರುಕಾಗುತ್ತದೆ’ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಸೂರ್ಯನು ರಥಸಪ್ತಮಿಯಂದು ರಥವನ್ನು ಏರುತ್ತಾನೆ. ಹೀಗಾಗಿ ಅಂದಿನಿಂದ ಅವನ ಶಕ್ತಿ ಜೋರು – ಎಂಬುದು ನಮ್ಮ ಸಾಮಾನ್ಯ ವಿವರಣೆ. ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳಿಗೆ ವೈಜ್ಞಾನಿಕವಾದ ಕಾರಣಗಳು ಬೇರೆ ಇರುತ್ತವೆ, ದಿಟ. ಆದರೆ ನಮ್ಮ ಪೂರ್ವಜರು ಈ ವೈಜ್ಞಾನಿಕ ಸತ್ಯಕ್ಕೆ ಪುರಾಣದ ಆಯಾಮವನ್ನು ಒದಗಿಸಿ, ಪ್ರಾಕೃತಿಕ ಘಟನೆಯನ್ನೇ ಧಾರ್ಮಿಕ ಕಲಾಪದ ಮೂಲಕ ಬದುಕಿನ ಭಾಗವನ್ನಾಗಿಸಿಕೊಂಡು ಅದನ್ನು ಎದುರುಗೊಂಡದ್ದು ವಿಶೇಷ. ನಮ್ಮ ಹಲವು ಹಬ್ಬಗಳು ಹೀಗೆ ವೈಜ್ಞಾನಿಕತೆ ಮತ್ತು ಪೌರಾಣಿಕತೆ – ಎರಡು ಆಯಾಮಗಳಿಂದಲೂ ಅಲಂಕಾರಗೊಂಡಿರುತ್ತವೆ. ರಥಸಪ್ತಮಿ ಅಂಥ ಹಬ್ಬಗಳಲ್ಲಿ ಒಂದು.

ಸೂರ್ಯನಿಲ್ಲದಿದ್ದರೆ ನಮ್ಮ ಜೀವನವಿಲ್ಲ. ಇದು ವೈಜ್ಞಾನಿಕ ವಾಸ್ತವವೂ ಹೌದು. ನಮ್ಮ ಪರಂಪರೆಯೂ ಸೂರ್ಯನ ಈ ಅನಿವಾರ್ಯತೆಯನ್ನು ಒಪ್ಪಿಕೊಂಡಿದೆ. ಇದನ್ನೇ ಅದು ಸೂರ್ಯನು ಜಗತ್ತಿನ ಕಣ್ಣು, ಜಗತ್ತಿನ ಆತ್ಮ– ಎಂದೆಲ್ಲ ಒಕ್ಕಣಿಸಿದೆ. ಕಣ್ಣಿಲ್ಲದಿದ್ದರೆ ನಮಗೆ ಏನೂ ಕಾಣದು; ಎಂದರೆ ಜಗತ್ತು ನಮ್ಮ ಪಾಲಿಗೆ ಹುಟ್ಟುವುದೇ ಸೂರ್ಯನ ಕೃಪೆಯಿಂದ ಎಂಬ ವಿನಯ ನಮ್ಮ ಸಂಸ್ಕೃತಿಯದು. ‘ಆತ್ಮ’ ಎಂಬುದರಲ್ಲಿಯೂ ಇಂಥದೇ ಭಾವ ದಟ್ಟವಾಗಿದೆ. ಆತ್ಮ ಎಂದರೆ ಸಾರ, ಸತ್ವ, ಮೂಲ, ದೇಹ – ಹೀಗೆಲ್ಲ ಹಲವು ಅರ್ಥಗಳಿವೆ. ಈ ಎಲ್ಲ ಅರ್ಥಗಳಲ್ಲಿಯೂ ಸೂರ್ಯನ ಹಿರಿಮೆಯ ಅಂಶಗಳು ಸೇರಿಕೊಂಡಿರುವುದು ಸ್ಪಷ್ಟ. ಹೀಗೆ ನಮ್ಮ ಇರುವಿಕೆಗೇ ಮೂಲವಾಗಿರುವ ಸೂರ್ಯನು ದೇವರಾದದ್ದು, ನಮ್ಮ ಧಾರ್ಮಿಕತೆಗೆ ಒದಗಿಬಂದದ್ದು ಆಶ್ಚರ್ಯವೇನೂ ಅಲ್ಲವಷ್ಟೆ.

ವೇದಗಳ ಕಾಲದಿಂದ ನಮ್ಮ ಸಂಸ್ಕೃತಿಯಲ್ಲಿ ಸೂರ್ಯನ ಆರಾಧನೆ ನಡೆದಿದೆ. ವೇದಗಳಲ್ಲಿ ಎಷ್ಟೋ ಮಂತ್ರಗಳು ಅವನಿಗೆ ಮೀಸಲಾಗಿವೆ. ಸೂರ್ಯನ ಪೂಜೆಗೇ ಒಂದು ವಿಶಿಷ್ಟ ದಿನವನ್ನು ಆರಿಸಿಕೊಂಡು, ಅದನ್ನು ‘ರಥಸಪ್ತಮಿ’ ಎಂದು ಕರೆದಿದ್ದಾರೆ.  ಸೂರ್ಯನು ಆರೋಗ್ಯಕ್ಕೂ ಜ್ಞಾನಕ್ಕೂ ಕ್ರಿಯಾಶೀಲತೆಗೂ ಪ್ರಧಾನ ಸಂಕೇತವಾಗಿದ್ದಾನೆ. ಹೀಗಾಗಿ ಇಂದು ಅವನ ಪೂಜೆಯನ್ನು ಹಲವು ವಿಧಗಳಲ್ಲಿ ನೆರವೇರಿಸಲಾಗುವುದು. ಎಕ್ಕದ ಗಿಡ ಸೂರ್ಯನಿಗೆ ಸಂಕೇತ. ಆದುದರಿಂದ ಇಂದು ಅದರ ಎಲೆಗಳನ್ನು ದೇಹದಲ್ಲಿ ಧರಿಸಿ ಸ್ನಾನ ಮಾಡಿದರೆ ಆರೋಗ್ಯ ಗಟ್ಟಿ ಆಗುತ್ತದೆ ಎಂಬ ನಂಬಿಕೆ ಇದೆ. ಸೂರ್ಯನಮಸ್ಕಾರವನ್ನು ಮಾಡುವುದು ಕೂಡ ಇಂದಿನ ಆಚರಣೆಯ ಭಾಗವಾಗಿದೆ. ಸೂರ್ಯನ ಹೆಸರುಗಳನ್ನು ಹೇಳಿಕೊಂಡು ಆಸನಗಳ ರೂಪದಲ್ಲಿ ಮಾಡುವ ಕ್ರಮ ಒಂದು; ಇನ್ನೊಂದು ಅರುಣ ಪಾರಾಯಣದ ಮೂಲಕವಾಗಿಯೂ ಸೂರ್ಯನಮಸ್ಕಾರವನ್ನು ಮಾಡಲಾಗುತ್ತದೆ.  ನಮ್ಮ ಆರೋಗ್ಯರಕ್ಷಣೆಯಲ್ಲಿ ಸೂರ್ಯಕಿರಣಗಳ ಪಾತ್ರ ದೊಡ್ಡದು. ಅಂತೆಯೇ ಜ್ಞಾನ–ವಿವೇಕಗಳಿಗೂ ಮೂಲವನ್ನಾಗಿ ಸೂರ್ಯನನ್ನೇ ನಮ್ಮ ಪರಂಪರೆ ಎತ್ತಿಹಿಡಿದಿದೆ. ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸುವವನೇ ಸೂರ್ಯ. ಹಿಗಾಗಿ ರಥಸಪ್ತಮಿಯ ಆಚರಣೆ ಎಂದರೆ ನಮ್ಮ ಅಂತರಂಗ–ಬಹಿರಂಗಗಳ ಆರೋಗ್ಯವನ್ನೂ ಆಹ್ಲಾದವನ್ನೂ ಕಾಪಾಡಿಕೊಳ್ಳುವ ಸಂಕಲ್ಪದಿನವೇ ಹೌದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.