ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಕೆಟ್ಟದರ ದಹನವೇ ಕಾಮನಹಬ್ಬ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಪುರಾವೆ ಇಲ್ಲದವು ಪುರಾಣವಾಗುತ್ತವೆ. ವಿಚಾರ ಇರುವವು ವಿಜ್ಞಾನವಾಗುತ್ತವೆ. ಅಂತೆಯೇ, ಕಲ್ಪನೆ ಇಲ್ಲದೆ ವಿಚಾರ ಹುಟ್ಟಲಾರದು, ವಿಚಾರವಿಲ್ಲದೆ ಜ್ಞಾನ ಬೆಳೆಯಲಾರದು. ಹೇಗೆ ಪಠ್ಯಬೋಧನೆಯೊಂದಿಗೆ ಪ್ರಯೋಗಶೀಲತೆಯೂ ಬೇಕೋ ಹಾಗೆಯೇ ಧರ್ಮ ಮತ್ತು ವಿಜ್ಞಾನ ಎರಡು ಮಿಳಿತವಾದಾಗಲೇ ಉತ್ತಮ ಫಲಿತಾಂಶ. ಧರ್ಮದಲ್ಲಿ ವಿಜ್ಞಾನವಿರಬೇಕು. ವಿಜ್ಞಾನದಲ್ಲಿ ಧರ್ಮವೂ ಇರಬೇಕು. ಧರ್ಮ ನೀತಿಮಾರ್ಗವಾದರೆ, ವಿಜ್ಞಾನ ವಿಕಾಸದ ಮಾರ್ಗ. ಅದು ವಿಕಾರಮಾರ್ಗವಾಗದಿರಲು ಧರ್ಮ ಕಡಿವಾಣವಾಗಬೇಕು. ಅದಕ್ಕಾಗಿ ಯಾರೂ ಭಗವಂತನಲ್ಲಿ ಭಕ್ತಿ (ಒಳ್ಳೆತನದಲ್ಲಿ ನಂಬಿಕೆ) ಇಡುವರೋ, ಅವರು ಜೀವನದಲ್ಲಿ ಮುಕ್ತಿ (ಉತ್ತಮ ಸಾಧನೆ) ಹೊಂದುತ್ತಾರೆ.

ಧರ್ಮ ಎಂದರೆ, ನಮ್ಮ ಬದುಕಿಗಿರುವ ನೈತಿಕ ಚೌಕಟ್ಟು. ವಿಜ್ಞಾನ ಎಂದರೆ ತಿಳಿವಳಿಕೆ. ಅದು ನಮ್ಮ ಸಾಧನೆಗಿರುವ ಪ್ರಯೋಗಶೀಲ ಮಾರ್ಗ. ನಾವು ಬದುಕುವ ರೀತಿಯನ್ನು ಕಲಿಯುವ ಪಠ್ಯ ಧರ್ಮವಾದರೆ, ಅದರಂತೆ ತಿಳಿವಳಿಕೆಯಿಂದ ಬದುಕುವುದು ವಿಜ್ಞಾನ. ಹೀಗಾಗಿ ಧರ್ಮ ಜ್ಞಾನಮಾರ್ಗವಾದರೆ, ವಿಜ್ಞಾನ ಕರ್ಮಮಾರ್ಗ. ಧರ್ಮ ಸರಿಯಾಗಿ ಅರ್ಥೈಸದಿದ್ದರೆ, ಕರ್ಮ ಹಾದಿ ತಪ್ಪುತ್ತದೆ. ಈಗ ಜಗತ್ತಿನಲ್ಲಿ ಆಗುತ್ತಿರುವ ಪ್ರಮಾದಕ್ಕೆ, ಮಾನವರ ತಲ್ಲಣಗಳಿಗೆ ಇದೇ ಕಾರಣವಾಗಿದೆ. ನಮ್ಮ ಧರ್ಮ ಹೇಳಿದ ಅದೆಷ್ಟೋ ಸೂಕ್ಷ್ಮವಿಚಾರಗಳನ್ನು ಮಾನವರು ಅರ್ಥೈಸದೆ, ಅರ್ಥೈಸಿದರೂ ಅನುಸರಿಸದೆ ತಪ್ಪು ಮಾಡುತ್ತಾ ಬಂದಿದ್ದಾರೆ. ನಮ್ಮ ಹಬ್ಬ-ಆಚರಣೆಗಳು ಆಮೋದ-ಪ್ರಮೋದಗಳಿಗಲ್ಲ, ಅವು ವಿಚಾರ ಮಂಡಿಸುವ, ಚಿಂತನ ನಡೆಸುವಂಥವು ಅನ್ನೋದು ನಮಗಿನ್ನೂ ಅರ್ಥವಾಗಿಲ್ಲ.

ಸೃಷ್ಟಿಯುಗದಲ್ಲಿ ಸತಿ ಆತ್ಮಹತ್ಯೆಯಿಂದ ವಿರಾಗಿಯಾದ ಶಿವನಿಗೆ, ಕಾಮೋತ್ತೇಜನ ಚುಚ್ಚಿದ ಮನ್ಮಥ ಸುಟ್ಟು ಭಸ್ಮವಾದ ಕಾಮನಹಬ್ಬದ ಆಚರಣೆ ಹಿಂದೆ ಒಂದು ತಿಳಿವಳಿಕೆ ಇದೆ. ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು, ಕೊಳೆಯ ವಸ್ತುಗಳನ್ನು ಸುಡುವ ಸೂಕ್ಷ್ಮ ತಿಳಿವಳಿಕೆಯೂ ಇದರಲ್ಲಿದೆ. ಇಲ್ಲಿ ಕಾಮ ಅಂದರೆ ಆಸೆ. ಸಲ್ಲದ ಆಸೆಯನ್ನು ಹುಟ್ಟಿಸುವ ಮದೋನ್ಮತ್ತರನ್ನು ನಿಗ್ರಹಿಸಿ, ಸಜ್ಜನಿಕೆ ಕಾಪಾಡುವುದೇ ಕಾಮದಹನ. ಸತ್ಯಯುಗದಲ್ಲಿ ಶ್ರೀಮನ್ನಾರಾಯಣನ ಭಕ್ತಿಯಿಂದ ಪುನೀತನಾದ ಪ್ರಹ್ಲಾದ ಬೆಂಕಿಯಂಥ ರಾಕ್ಷಸಿಯೊಂದಿಗಿದ್ದರೂ ಸುಟ್ಟು ಹೋಗಲಿಲ್ಲ. ಏಕೆಂದರೆ ಒಳ್ಳೆಯದರಲ್ಲಿ ನಂಬಿಕೆ ಇದ್ದವರಿಗೆ, ಕೆಟ್ಟವರೊಂದಿಗೆ ಇದ್ದರೂ ಕೆ(ಸು)ಟ್ಟು ಹೋಗುವುದಿಲ್ಲ. ಈ ‘ಸತ್ಯಸಾರ’ (ಬಣ್ಣ)ವನ್ನ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಲು ಆಚರಿಸುವುದೇ (ಎರಚುವುದೇ) ಓಕುಳಿ ಹಬ್ಬದ ವೈಶಿಷ್ಟ್ಯ.

ADVERTISEMENT

ಮನುಷ್ಯನ ಆಸೆಗಳಲ್ಲೇ ಕಾಮದ ಆಸೆ ಬಹಳ ದೊಡ್ಡದು. ಕಾಮದಾಸೆಗೆ ಬಹಳ ಬೇಗ ತುತ್ತಾಗುತ್ತಾರೆ. ಇಂಥ ಆಸೆಗೆ ದುರಹಂಕಾರ ಮೆತ್ತಿಕೊಂಡರೆ ಮದೋನ್ಮತ್ತರಾಗುತ್ತಾರೆ. ಕಾಮಕ್ಕೆ ಕಣ್ಣೂ ಇಲ್ಲ-ಕಿವಿಯೂ ಇಲ್ಲ, ಹೃದಯವಂತೂ ಇರುವುದೇ ಇಲ್ಲ. ಇಂಥ ದುರವಸ್ಥೆಯ ಕಾಮಕ್ಕೆ ಸೌಂದರ್ಯಮದ, ಶ್ರೀಮಂತಿಕೆಯ ಮದ ಸೇರಿಕೊಂಡರೆ ರಾಕ್ಷಸರಾಗುತ್ತಾರೆ. ವರ್ಣಭೇದ-ಹಣಭೇದದಲ್ಲಿ ತೊಡಗುವವರು ತಮಗಿಂತ ರೂಪ-ಹಣದಲ್ಲಿ ಕಡಿಮೆ ಇರುವವರನ್ನ ಅಸ್ಪೃಶ್ಯರಂತೆ ನೋಡುತ್ತಾರೆ. ಕಪ್ಪು ವರ್ಣಿಯನಾಗಿ, ಗೊಲ್ಲಕುಲದವನಾಗಿ ಇಂಥ ಅನಿಷ್ಟ ಕಂಡಿದ್ದ ಶ್ರೀಕೃಷ್ಣ, ದ್ವಾಪರಯುಗದಲ್ಲಿ ವರ್ಣಭೇದ-ಹಣಭೇದಗಳನ್ನು ತೊಡೆಯಲು ಹೋಳಿ ಹಬ್ಬವನ್ನು ಜಾರಿಗೆ ತಂದ.

ಮುಖ ನೋಡಿ ಮಣೆ ಹಾಕುವ ಮನುಷ್ಯನ ತಾರತಮ್ಯವನ್ನು ಅಳಿಸಿ, ನಾವೆಲ್ಲಾ ಒಂದೇ ಅಂತ ಮನುಷ್ಯರಲ್ಲಿ ಸಾಮರಸ್ಯ ಮೂಡಿಸುವ ಹೋಳಿ ಹಬ್ಬ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯ ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡು ಸೌಹಾರ್ದಯುತವಾಗಿ ಬದುಕಬೇಕು. ನಮ್ಮಲ್ಲಿನ ಕೆಟ್ಟತನವನ್ನು ದಹಿಸಿ, ಒಳ್ಳೆತನ ಬೆಳೆಸುವುದೇ ಹೋಳಿ ಹಬ್ಬದ ತತ್ವ. ಸರ್ವರೂ ತಮ್ಮ ಮನೆ-ಮನದೊಳಗಿರುವ ಕೆಟ್ಟದ್ದಕ್ಕೆ ಬೆಂಕಿ ಇಟ್ಟು, ಉತ್ತಮ ಭಾವ(ಬಣ್ಣ)ವನ್ನು ಮನೆ-ಮನದೊಳಗೆ ಪರಸ್ಪರ ಹಂಚಿಕೊಂಡಾಗ ಭವದಲ್ಲಿ ಮೂಡುವ ನೆಮ್ಮದಿ ಭಾವವೇ ‘ಸಚ್ಚಿದಾನಂದ’ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.