ADVERTISEMENT

ಇಂದು ಗುರು ಪೂರ್ಣಿಮಾ: ಅರಿವಿನ ಬೆಳಕು ವ್ಯಾಸ ಮಹರ್ಷಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 12 ಜುಲೈ 2022, 19:31 IST
Last Updated 12 ಜುಲೈ 2022, 19:31 IST
   

ಮನುಷ್ಯನನ್ನು ‘ಮನುಷ್ಯ’ನನ್ನಾಗಿಸುವಂಥ ತತ್ತ್ವವೇ ಗುರುತತ್ತ್ವ. ನಮ್ಮ ಜೀವನದ ದಾರಿ ಹೇಗಿರಬೇಕು, ಹೇಗಿದ್ದರೆ ನಮ್ಮ ಜೀವನ ಸುಂದರವೂ, ಸಾರ್ಥಕವೂ ಆಗಿರಬಲ್ಲದು ಎಂಬ ‘ಶಿಕ್ಷಣ’ವನ್ನು ಕೊಡುವವನೇ ಗುರು. ನಮ್ಮ ಸಂಸ್ಕೃತಿಯಲ್ಲಿ ಹೀಗಾಗಿಯೇ ಗುರುತತ್ತ್ವವನ್ನು ತುಂಬ ಆದರಿಸಲಾಗಿದೆ. ಗುರುತತ್ತ್ವದ ಎಲ್ಲ ಆಯಾಮಗಳನ್ನು ಇಲ್ಲಿ ‘ವ್ಯಾಸ‘ಮಹರ್ಷಿಯಲ್ಲಿ ಕಾಣಿಸಲಾಗಿದೆ.

ವ್ಯಾಸಾಯ ವಿಷ್ಣುರೂಪಾಯ
ವ್ಯಾಸರೂಪಾಯ ವಿಷ್ಣವೇ

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ

ADVERTISEMENT

ಭಗವಾನ್‌ ವೇದವ್ಯಾಸರನ್ನು ಕುರಿತು ಪರಂಪರೆ ಸಲ್ಲಿಸುತ್ತಿರುವ ನಮನ ಇದು. ವಿಷ್ಣುವನ್ನೂ ವ್ಯಾಸರನ್ನೂ ಇಲ್ಲಿ ಅಭೇದವಾಗಿ ನೋಡಲಾಗಿದೆ. ‘ವಿಷ್ಣು’ ಎಂದರೆ ಸರ್ವವ್ಯಾಪಕನಾದವನು ಎಂದು ಅರ್ಥ. ವೇದವ್ಯಾಸರೂ ಹೀಗೆ ಸರ್ವವ್ಯಾಪಕತೆಯನ್ನು ಪಡೆದವರು ಎಂಬುದು ಪರಂಪರೆಯ ಒಕ್ಕಣೆ.ಪ್ರತಿವರ್ಷ ಆಷಾಢ ಶುಕ್ಲ ಹುಣ್ಣಿಮೆಯಂದು ವ್ಯಾಸರ ಜಯಂತಿಯನ್ನು ಆಚರಿಸುತ್ತೇವೆ. ಇದೇ ‘ವ್ಯಾಸಪೂರ್ಣಿಮಾ’. ಇದನ್ನು ‘ಗುರುಪೂರ್ಣಿಮಾ’ ಎಂದೂ ಆಚರಿಸಲಾಗುತ್ತದೆ.

ನಮ್ಮ ಜೀವನದ ಸಾರ್ಥಕತೆಗೆ ಬೇಕಾದ ಎಲ್ಲ ರೀತಿಯ ವಿದ್ಯೆಗಳ ಮೂಲವನ್ನು ಒದಗಿಸಿದವರು ವ್ಯಾಸಮಹರ್ಷಿ. ಹೀಗಾಗಿ ಅವರನ್ನು ‘ಗುರು’ ಎಂದು ಪೂಜಿಸುತ್ತಿರುವುದು ಅರ್ಥವತ್ತಾಗಿದೆ. ವೇದಗಳ ಸಾರವನ್ನು ಜಿಜ್ಞಾಸುಗಳಿಗಾಗಿ ಸೂತ್ರರೂಪದಲ್ಲಿ, ‘ಬ್ರಹ್ಮಸೂತ್ರ’ಗಳನ್ನಾಗಿ, ಒದಗಿಸಿದರು ವ್ಯಾಸರು. ಶಿಕ್ಷಣವು ಅರಿವಿನ ಜೊತೆ ಆನಂದವನ್ನೂ ನೀಡಬೇಕು; ಅದು ಎಲ್ಲರಿಗೂ ಎಟುಕುವಂತಿರಬೇಕು ಎಂದು ‘ಮಹಾಭಾರತ’ವನ್ನು ರಚಿಸಿದವರು ವ್ಯಾಸರು. ಹೀಗೆ ‘ವ್ಯಾಸತತ್ತ್ವ’ ಎಂಬುದು ಗುರುತತ್ತ್ವದ ವೈಶಾಲ್ಯವನ್ನೂ ಕಾರುಣ್ಯವನ್ನೂ ಪ್ರಕಟಿಸುತ್ತದೆ.

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ

ಇದರ ತಾತ್ಪರ್ಯ ಹೀಗೆ:‘ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ; ಮಾತ್ರವಲ್ಲ, ಗುರುವೇ ಸಾಕ್ಷಾತ್‌ ಪರಬ್ರಹ್ಮವಸ್ತುವೂ ಹೌದು. ಗುರುವಿಗೆ ನಮನಗಳು.’

ಭಾಗವತದಲ್ಲಿ ಗುರುವಿನ ಪ್ರಸ್ತಾಪ ಬರುತ್ತದೆ. ಅಲ್ಲಿ ಇಪ್ಪತ್ತನಾಲ್ಕು ಗುರುಗಳ ಒಕ್ಕಣೆ ಇದೆ: ಭೂಮಿ, ಗಾಳಿ, ಆಕಾಶ, ನೀರು, ಬೆಂಕಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ದುಂಬಿ, ಜೇನುನೊಣ, ಆನೆ, ಜೇನನ್ನು ಸಂಗ್ರಹಿಸುವವನು, ಜಿಂಕೆ, ಮೀನು, ವೇಶ್ಯೆ, ಕುರರಪಕ್ಷಿ, ಮಗು, ಕನ್ಯೆ, ಬಾಣವನ್ನು ತಯಾರಿಸುವವನು, ಹಾವು, ಜೇಡರಹುಳು, ಭೃಂಗ – ಇವರೆಲ್ಲರೂ ಗುರುಗಳೇ.

ಈ ಇಪ್ಪತ್ತನಾಲ್ಕು ‘ಗುರು’ಗಳನ್ನು ಗಮನಿಸಬೇಕು. ಇವು ಪ್ರಕೃತಿಯ ಎಲ್ಲ ವಿವರಗಳಿಗೂ ಸಂಕೇತವಾಗಿವೆ. ಎಂದರೆ ಸೃಷ್ಟಿಯ ಒಂದೊಂದು ವಿವರವೂ ನಮಗೆ ಗುರುವಾಗಬಲ್ಲದು; ಎಲ್ಲರಿಂದಲೂ ಎಲ್ಲವುಗಳಿಂದಲೂ ಕಲಿಯುವಂಥದ್ದು ಇದ್ದೇ ಇರುತ್ತದೆ.

ಸೃಷ್ಟಿ–ಸ್ಥಿತಿ–ಸಂಹಾರಗಳನ್ನು ನಡೆಸುವವರು ಬ್ರಹ್ಮ–ವಿಷ್ಣು–ಮಹೇಶ್ವರರು. ಗುರುವೇ ನಮ್ಮ ಪಾಲಿಗೆ ಸೃಷ್ಟಿಕರ್ತ, ಸ್ಥಿತಿಕಾರಕ, ಲಯಕಾರಕ; ಮಾತ್ರವಲ್ಲ, ಸಾಕ್ಷತ್‌ ಪರಬ್ರಹ್ಮವೂ ಗುರುವೇ ಎನ್ನುತ್ತಿದೆ ಶ್ಲೋಕ. ಎಂದರೆ ನಮಗೆ ಜನ್ಮ ಕೊಡುವವನೂ, ನಮ್ಮನ್ನು ಕಾಪಾಡುವವನೂ, ಕೊನೆಗೆ ನಾಶಮಾಡಬಲ್ಲವನೂ ಗುರುವೇ ಆಗಿದ್ದಾನೆ; ಅಷ್ಟೇಕೆ, ಲೋಕೋತ್ತರ ತತ್ತ್ವವೂ, ನಮ್ಮ ಆನಂದಸ್ವರೂಪವೂ ಗುರುವೇ ಆಗಿದ್ದಾನೆ ಎಂಬುದು ಇದರ ತಾತ್ಪರ್ಯ.

ಚಾತುರ್ಮಾಸ್ಯ ವ್ರತ

ಇಂದಿನಿಂದ ಚಾತುರ್ಮಾಸ್ಯವ್ರತವೂ ಆರಂಭವಾಗುತ್ತಿದೆ. ಯತಿ–ಸನ್ಯಾಸಿಗಳನ್ನು ನಾವು ಗುರುರೂಪದಲ್ಲಿಯೇ ಕಾಣುತ್ತೇವೆ. ಚಾತುರ್ಮಾಸ್ಯವ್ರತ ಕೇವಲ ಯತಿಗಳಿಗೆ ಮಾತ್ರವಲ್ಲ, ಗೃಹಸ್ಥರೂ ಆಚರಿಸಬೇಕಾದ ವ್ರತ. ನಮ್ಮ ಶರೀರಕ್ಕೂ ಮನಸ್ಸಿಗೂ ಸಂಯಮವನ್ನು ಒದಗಿಸಿಕೊಡುವ ವ್ರತವಿದು. ಇದು ಅಧ್ಯಯನಕ್ಕೆ ಒದಗುವ ಕಾಲವೂ ಹೌದು; ಸಾಧನೆಗೆ ಪ್ರಶಸ್ತವಾದ ಕಾಲವೂ ಹೌದು. ಇದೇ ದಿನ, ಎಂದರೆ ಆಷಾಢ ಪೂರ್ಣಿಮೆಯಂದು, ಬುದ್ಧ ಭಗವಂತ ತಾನು ಕಂಡುಕೊಂಡ ಕಾಣ್ಯೆಯನ್ನು ಜಗತ್ತಿಗೆ ಉಪದೇಶಿಸಿದ ದಿನವೂ ಹೌದು. ದುಃಖದ ಮೂಲವನ್ನು ಹುಡುಕಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ದಾರಿಯನ್ನೂ ಅವನು ತಿಳಿಸಿದ. ನಮಗೆ ಇಂದು ಎದುರಾಗಿರುವ ದುಃಖವನ್ನು ಪರಿಹರಿಸಿಕೊಳ್ಳಲು ಅವನ ಉಪದೇಶ ನಮಗೆ ಬೆಳಕಾಗಿ ಒದಗುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.