ADVERTISEMENT

ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

ಎಸ್.ಸೂರ್ಯಪ್ರಕಾಶ ಪಂಡಿತ್
Published 2 ನವೆಂಬರ್ 2025, 0:00 IST
Last Updated 2 ನವೆಂಬರ್ 2025, 0:00 IST
   

ದೀಪಾವಳಿ ಮುಗಿದು ಇದೀಗ ‘ಕಿರು’ ದೀಪಾವಳಿ ಬಂದಿದೆ! ಅಂದು ದೀಪಾವಳಿಯನ್ನು ತಪ್ಪಿಸಿಕೊಂಡವರು ಇಂದು  ಆಚರಿಸಿಕೊಳ್ಳಲಿ ಎಂಬ ಔದಾರ್ಯವೂ ಈ ಕಲ್ಪನೆಯಲ್ಲಿ ಇದ್ದೀತು! ಯಾರೊಬ್ಬರೂ ಹಬ್ಬದ ಸಂಭ್ರಮದಿಂದ, ಬೆಳಕಿನ ದಾರಿಯಿಂದ ವಂಚಿತರಾಗಬಾರದು ಎಂಬುದು ಇಲ್ಲಿಯ ಕಾಳಜಿ.

ಈ ಪರ್ವವನ್ನು ‘ಉತ್ಥಾನ ದ್ವಾದಶೀ’ ಎಂದೂ, ‘ತುಳಸೀವಿವಾಹ’ ಎಂದೂ ಕರೆಯುವುದುಂಟು. ಮಹಾವಿಷ್ಣು ವರ್ಷದಲ್ಲಿ ನಾಲ್ಕು ತಿಂಗಳು ನಿದ್ರೆಯಲ್ಲಿರುತ್ತಾನೆ ಎಂಬ ಕಲ್ಪನೆಯಿದೆ. ಅವನದು ಯೋಗನಿದ್ರೆ; ಅವನ ನಿದ್ರೆ ಕೇವಲ ಒಂದು ನರ್ತನದ ಭಂಗಿಯಂತೆ. ಅಷ್ಟೇಕೆ, ಇಡಿಯ ಸೃಷ್ಟಿಯೇ ಅವನಿಗೆ ಒಂದು ಲೀಲೆ, ಕ್ರೀಡೆ. ದೇವರ ನಿದ್ರೆ ನಮ್ಮ ನಿದ್ರೆಯಂತೆ ಮೈ ಮರೆಯುವ ನಿದ್ರೆಯಲ್ಲ, ಅದು ಸದಾ ಎಚ್ಚರವಾಗಿರುವ ನಿದ್ರೆಯ ಮುದ್ರೆ. ಹೀಗೆ ಲೀಲಾಸ್ವರೂಪನಾದ ಮಹಾವಿಷ್ಣುವು ನಿದ್ರೆಯಿಂದ ಏಳುವ ದಿನವೇ ಉತ್ಥಾನದ್ವಾದಶೀ. ‘ಉತ್ಥಾನ’ – ಎಂದರೆ ನಿದ್ರೆಯಿಂದ ಏಳುವುದು.

‘ದೇವರು ತನ್ನಂತೆಯೇ ಮನುಷ್ಯರನ್ನು ಸೃಷ್ಟಿಸಿದ; ಹೀಗೆಯೇ ಮನುಷ್ಯನೂ ತನ್ನ ರೂಪದಂತೆಯೆ ದೇವರನ್ನು ಸೃಷ್ಟಿಸಿಕೊಂಡ’ ಎಂಬ ಸೂಕ್ತಿಯೊಂದಿದೆಯಂತೆ! ದುಡಿತದಿಂದ ಆಯಾಸಗೊಂಡು ವಿಶ್ರಾಂತಿಯನ್ನು ಬಯಸುವ ಮನುಷ್ಯ, ತನ್ನ ಈ ಸ್ವಭಾವವನ್ನು ದೇವರಿಗೂ ಆರೋಪಿಸಿ, ದೇವರಿಗೂ ವಿಶ್ರಾಂತಿಯ ಆವಶ್ಯಕತೆಯನ್ನು ಭಾವಿಸಿಕೊಂಡಿದ್ದಿರಬಹುದು. ‘ರಾಕ್ಷಸ’ರನ್ನು ನಿಗ್ರಹಿಸಿ ಮಹಾವಿಷ್ಣು ಬಳಲಿರಬಹುದು ಎಂದು ಅವನಿಗೆ ಅನಿಸಿದ್ದು ಸಹಜ. ಆದರೆ ದೇವರೇ ಮಲಗಿ ನಿದ್ರಿಸಿಬಿಟ್ಟರೆ ತನ್ನನ್ನು ಕಾಪಾಡುವವರು ಯಾರು? ಕೆಡಕುಗಳಿಂದ ತನ್ನನ್ನು ಪಾರು ಮಾಡುವವರು ಯಾರು? – ಇಂಥ ಪ್ರಶ್ನೆಗಳೂ ಅವನಲ್ಲಿ ‘ಭಯ’ವನ್ನು ಹುಟ್ಟಿಸಿರಬಹುದು. ಮಲಗಿದಂತಿರುವ ವಿಷ್ಣುವನ್ನು ‘ಉತ್ಥಾನ’ ಮಾಡಿಸಿ, ಜೀವನದಲ್ಲಿ ಅವನು ಭರವಸೆಯನ್ನು ತುಂಬಿಕೊಂಡ.

ADVERTISEMENT

ಮಿಥ್‌ಗಳನ್ನು ಮನುಷ್ಯ ‘ಸೃಷ್ಟಿಸಿ’ಕೊಂಡ ಸಂದರ್ಭವೇ ಇಂಥವು; ಅವನಲ್ಲಿ ಸುಪ್ತವಾಗಿರುವ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದು ಮಿಥ್‌ಗಳ ಉದ್ದೇಶವೇ ಹೊರತು ಐತಿಹಾಸಿಕ ತಥ್ಯಗಳನ್ನು ದಾಖಲೀಕರಣ ಮಾಡುವುದಲ್ಲ. ಹೀಗಲ್ಲದೆ, ಬೇರೇನೋ ಭಾವಿಸಿಕೊಂಡರೆ ಆಗ ಹಬ್ಬಗಳ ಹಿಂದಿರುವ ತಾತ್ತ್ವಿಕತೆಗೇ ಭಂಗ ಒದಗಿದಂತಾಗುತ್ತದೆ. ಎಲ್ಲೆಲ್ಲೂ ವ್ಯಾಪಿಸಿರುವ ಚೈತನ್ಯದ ಸ್ವರೂಪಕ್ಕೆ ಸಂಕೇತ ಮಹಾವಿಷ್ಣು; ಅವನು ನಮ್ಮಲ್ಲೂ ಇದ್ದಾನೆ. ನಮ್ಮಲ್ಲಿ ಇದ್ದೂ ಇಲ್ಲದಂತಿರುವ, ಎಂದರೆ ನಿದ್ರಾವಸ್ಥೆಯಲ್ಲಿರುವ ವಿಷ್ಣುವನ್ನು ಎಚ್ಚರದ ಸ್ಥಿತಿಗೆ ತರುವಂಥ ಹಬ್ಬವೇ ಉತ್ಥಾನ ದ್ವಾದಶೀ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.