ADVERTISEMENT

ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 6:04 IST
Last Updated 23 ಜನವರಿ 2026, 6:04 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನ ಅಂದರೆ ಪಂಚಮಿ ತಿಥಿಯಂದು ‘ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದ ನಂತರ ವಸಂತನ ಆಗಮನವಾಗುತ್ತದೆ. ಶ್ರೀ ಕೃಷ್ಣನು ವಸಂತನನ್ನು ಋತುಗಳ ರಾಜ ಎಂದು ಹೊಗಳಿದ್ದಾರೆ. ವಸಂತ ಋತುವಿನಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳಕು ಚೆಲ್ಲುತ್ತಾನೆ. ಹೊಳೆವ ಬೆಳಕಿನ ಕಿರಣಗಳಿಂದ ಪ್ರಕೃತಿಯು ಕಂಗೊಳಿಸುತ್ತದೆ. ಇಂಥ ವಿಶೇಷಗಳಿಗಾಗಿ ‘ವಸಂತ ಋತು’ ವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ‌

ಈ ದಿನ ಉತ್ತರ ಭಾರತದವರಿಗೆ ವಿಶೇಷವಾದ ದಿನವಾಗಿದೆ. ವಸಂತ ಪಂಚಮಿ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ. ಈ ದಿನ ಶುಭಕಾರ್ಯ ಮಾಡಲು ಮುಹೂರ್ತವನ್ನು ನೋಡುವುದೇ ಬೇಡ. ಇಡೀ ದಿನವೂ ಸರ್ವಾರ್ಥಕ ಸಿದ್ಧಯೋಗವಿದೆ. ದೇವಿ ಭಾಗವತದ ಪ್ರಕಾರ ಸರಸ್ವತಿ ದೇವಿ ಆದಿಶಕ್ತಿಯ ಮೂರು ರೂಪಗಳಲ್ಲಿ ಒಬ್ಬಳಾಗಿದ್ದಾಳೆ. ಜ್ಞಾನ, ಸಂಗೀತ ಹಾಗೂ ಕಲೆಗಳ ಅಧಿದೇವತೆ ಸರಸ್ವತಿಯಾಗಿದ್ದಾಳೆ. ಬುದ್ಧಿ ಚುರುಕಾಗಲು, ಕಂಠ ಮಧುರವಾಗಲು, ವಿದ್ಯೆ, ಬುದ್ಧಿ ಹಾಗೂ ನೆನಪಿನ ಶಕ್ತಿ ಸಿದ್ಧಿಸಲು ಸರಸ್ವತಿಯನ್ನು ಆರಾಧಿಸಲಾಗುತ್ತದೆ.

ADVERTISEMENT

ಪುರಾಣ ಕಥೆಗಳು ಏನು ಹೇಳುತ್ತವೆ?

ವಸಂತ ಋತುವಿನ ದಿನವೇ ಸರಸ್ವತಿ ದೇವಿ ಹುಟ್ಟಿದ ದಿನ ಎಂಬ ನಂಬಕೆ ಇದೆ. ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಿದ. ಆದರೆ ಎಲ್ಲೆಲ್ಲೂ ನಿಶ್ಯಬ್ಧವೇ ಇದ್ದ ಕಾರಣ ಬ್ರಹ್ಮನಿಗೆ ಬಹಳ ಬೇಸರವಾಯಿತು. ಬ್ರಹ್ಮಾಂಡವೇ ಖಾಲಿ ಖಾಲಿ ಎನಿಸಿತು. ಬ್ರಹ್ಮ ತನ್ನ ಶಂಖದಲ್ಲಿದ್ದ ನೀರನ್ನು ತೆಗೆದು ಭೂಮಿಯ ಮೇಲೆ ಸಿಂಪಡಿಸಿದಾಗ ಭೂಮಿ ಕಂಪಿಸಿತು. ಆಗ ಭೂಮಿಯೊಳಗಿಂದ ದೇವಿ ಉದ್ಭವಿಸಿದಳು. ಆಕೆ ತನ್ನ ನಾಲ್ಕು ಕೈಗಳಲ್ಲಿ, ವೀಣೆ, ಪುಸ್ತಕ, ಜಪದಮಣಿ ಹಾಗೂ ಕಮಂಡಲ ಹಿಡಿದುಕೊಂಡು ಉದ್ಭವಿಸಿದ ದೇವಿಯೇ ಸರಸ್ವತಿ.

ವೀಣೆಯಿಂದ ನಾದ ನುಡಿಸುತ್ತಿದ್ದಂತೆ, ಬ್ರಹ್ಮಾಂಡದಲ್ಲಿ ಶಬ್ದ ಉಗಮವಾಗಿ ಬ್ರಹ್ಮಾಂಡವೇ ಲವಲವಿಕೆಯಿಂದ ತುಂಬುತ್ತದೆ. ಹೀಗೆ ‘ದೇವಿ ಸರಸ್ವತಿ’ ಜನಿಸಿದ ದಿನ ವಸಂತ ಮಾಸದ ಆರಂಭದ ದಿನವಾಗಿದೆ.

ಶ್ರೀ ರಾಮನ ಬರುವಿಕೆಗಾಗಿ ಕಾಯುತ್ತಿದ್ದ ಶಬರಿಯನ್ನು ‘ವಸಂತ ಪಂಚಮಿ’ಯಂದೇ ರಾಮನು ಭೇಟಿಯಾಗಿ ಪ್ರೀತಿಯಿಂದ ಕೊಟ್ಟ ಹಣ್ಣುಗಳನ್ನು ತಿಂದು ಶಬರಿಯ ಅಪೇಕ್ಷೆಯಂತೆ ಮುಕ್ತಿ ಕರುಣಿಸಿದನು ಎಂದೂ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.

ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು ಕಪಿಲ ಮುನಿಗಳ ಶಾಪದಿಂದ ಸದ್ಗತಿ ದೊರೆಯದೆ ಅಲೆಯುತ್ತಿದ್ದರು. ಅವರ ಮೋಕ್ಷಕ್ಕಾಗಿ ಕಠಿಣ ತಪಸ್ಸು ಮಾಡುತ್ತಿದ್ದ ಭಗೀರಥನ ಭಕ್ತಿಗೆ ಮೆಚ್ಚಿ ತಾಯಿ ಗಂಗೆ ಧರೆಗಿಳಿದು ಬಂದು ಇಡೀ ಭೂಮಿಯನ್ನು ತಂಪಾಗಿಸಿ ಸಗರ ಚಕ್ರವರ್ತಿ ಮಕ್ಕಳಿಗೆ ಮೋಕ್ಷ ಕರುಣಿಸಿದ್ದು ಮಾಘ ಮಾಸ ‘ವಸಂತ ಪಂಚಮಿ’ ದಿನ ಆದ್ದರಿಂದ ಇಂದು ಗಂಗೆಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆಯಿದೆ.

ಸರಸ್ವತಿ ಪಂಚಮಿಯನ್ನು‘ ಶ್ರೀ ಪಂಚಮಿ’ ಎಂದು ಕರೆಯುತ್ತಾರೆ. ಈ ದಿನ ಮಕ್ಕಳು ಸರಸ್ವತಿ ದೇವಿಯನ್ನು ಆರಾಧಿಸಿ ಸ್ತೋತ್ರ ಪಠಿಸಿದರೆ ಜ್ಞಾನ ವೃದ್ಧಿಯಾಗುತ್ತದೆ. ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಶಿಲ್ಪ ಕಲೆ ಹಾಗೂ ಸಕಲ ವಿದ್ಯೆಗಳನ್ನು ಅನುಗ್ರಹಿಸುತ್ತಾಳೆ ಎನ್ನುವ ನಂಬಿಕೆಯಿದೆ.

ಸರಸ್ವತಿ ಸ್ತೋತ್ರ

ಶ್ವೇತಪದ್ಮಾಸನಾ ದೇವೀ
ಶ್ವೇತಪುಷ್ಪಪಶೋಭಿತಾ 
ಶ್ವೇತಾಂಬರಧರಾ ನಿತ್ಯಾ
ಶ್ವೇತಗಂಧಾನುಲೇಪನಾ |

ಶ್ವೇತಾಕ್ಷಸೂತ್ರಹಸ್ತಾ ಚ
ಶ್ವೇತಚಂದನಚರ್ಚಿತಾ
ಶ್ವೇತವೀಣಾಧರಾ ಶುಭ್ರಾ
ಶ್ವೇತಾಲಂಕಾರಭೂಷಿತಾ |

ವಂದಿತಾ ಸಿದ್ಧಗಂಧವೈ೯ರಂಚಿತಾ
ಸುರದಾನವೈಃ 
ಪೂಜಿತಾ ಮುನಿಭಿಃ ಸರ್ವೈಕೃಷಿಭಿಃ
ಸೂಯತೇ ಸದಾ |

ಸ್ತೋತ್ರೇಣಾನೇನ ತಾಂ
ದೇವೀಂ ಜಗದ್ಧಾತ್ರೀಂ ಸರಸ್ವತೀಂ
ಯೇ ಸ್ಮರಂತಿ ತ್ರಿಸಂಧ್ಯಾಯಾಂ ಸರ್ವಾಂ
ವಿದ್ಯಾಂ ಲಭಂತೇ ತೇ ‌||

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.