ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿಷ್ಣು-ದಧೀಚಿ ಮಹಾಯುದ್ಧ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 31 ಜುಲೈ 2022, 21:15 IST
Last Updated 31 ಜುಲೈ 2022, 21:15 IST
   

ಕಪಟವೇಷವನ್ನು ಧರಿಸಿ ದಧೀಚಿಯ ಬಳಿಗೆ ಬಂದ ಹರಿ ‘ಬ್ರಹ್ಮರ್ಷಿಯಾದ ಎಲೈ ದಧೀಚಿಮುನಿ, ನೀನು ಸದಾಶಿವನನ್ನು ಆರಾಧಿಸುವವನು. ನಾನು ನಿನ್ನಿಂದ ವರವೊಂದನ್ನು ಯಾಚಿಸಬೇಕೆಂದಿರುವೆ. ಅದನ್ನು ನೀನು ದಯವಿಟ್ಟು ಕೊಡಬೇಕು’ ಎಂದು ಕೋರಿದ. ಇದಕ್ಕೆ ದಧೀಚಿ ‘ನೀನು ನಿಜವಾದ ಬ್ರಾಹ್ಮಣನಲ್ಲ. ಪರಮೇಶ್ವರನ ಅನುಗ್ರಹದಿಂದ ನನಗೆ ಮೂರು ಕಾಲಗಳ ಜ್ಞಾನವೂ ಇದೆ.

ನೀನು ಹರಿಯೆಂಬುದನ್ನು ನಾನು ತಿಳಿದಿರುವೆ. ದುಷ್ಟಬುದ್ಧಿಯಾದ ಕ್ಷುವರಾಜನು ನಿನ್ನನ್ನು ಆರಾಧಿಸಿರುವನು. ಅವನ ಸಹಾಯಕ್ಕಾಗಿ ಈಗ ನೀನು ನನ್ನ ಬಳಿಗೆ ಬ್ರಾಹ್ಮಣರೂಪದಿಂದ ಬಂದಿರುವೆ. ನೀನು ಭಕ್ತಪರಾಧೀನನೆಂಬುದನ್ನು ಬಲ್ಲೆ. ಆದರೆ ನಿನ್ನ ಕಪಟರೂಪವನ್ನು ತ್ಯಜಿಸು. ಶಿವನನ್ನು ಆರಾಧಿಸುವ ನನಗೆ ಯಾರ ಭಯವೂ ಇಲ್ಲ. ಸದಾ ಶಿವನನ್ನೇ ಧ್ಯಾನಿಸುವ ನಾನು, ಯಾವಾಗಲೂ ಸುಳ್ಳನ್ನು ಹೇಳುವುದಿಲ್ಲ’ ಎಂದ.

‘ಎಲೈ ದಧೀಚಿಮುನಿ, ಶಿವನನ್ನು ಆರಾಧಿಸುವ ನಿನಗೆ ಯಾರಿಂದಲೂ ಭಯವಿಲ್ಲ. ನೀನು ಸರ್ವಜ್ಞನು. ನಿನ್ನಲ್ಲೊಂದು ಮನವಿ ಮಾಡಿಕೊಳ್ಳುವೆ. ನೀನು ಕ್ಷುವರಾಜನಿಗೆ ಹೆದರುತ್ತೇನೆ ಅಂತ ಒಮ್ಮೆ ನನಗಾಗಿ ಹೇಳು’ ಎಂದು ವಿಷ್ಣು ಕೋರುತ್ತಾನೆ. ಹರಿಯ ಕೋರಿಕೆಯನ್ನು ಕೇಳಿ ಶಿವಭಕ್ತೋತ್ತಮನಾದ ದಧೀಚಿಮುನಿಯು ನಕ್ಕು, ‘ಎಲೈ ವಿಷ್ಣುವೆ, ದೇವದೇವನಾದ ಶಂಕರನ ಪ್ರಭಾವದಿಂದ ನಾನು ಎಲ್ಲಿಯೂ ಯಾರಿಗೂ ಹೆದರುವುದಿಲ್ಲ’ ಎಂದ. ದಧೀಚಿಯ ಮಾತನ್ನು ಕೇಳಿ ವಿಷ್ಣು ಕೋಪಗೊಂಡು, ಅವನನ್ನು ಸಂಹರಿಸಲು ತನ್ನ ಚಕ್ರವನ್ನು ಮೇಲಕ್ಕೆತ್ತಿದ. ಆದರೆ ಆ ಚಕ್ರವು ಈಶ್ವರನ ಮಹಿಮೆಯಿಂದ ದಧೀಚಿಮುನಿಯನ್ನು ಸಂಹರಿಸಲು ಅಶಕ್ತವಾಯಿತು. ವಿಷ್ಣುಚಕ್ರವು ಶಕ್ತಿರಹಿತವಾದುದನ್ನು ನೋಡಿ ದಧೀಚಿಮುನಿಯು ಮಂದಹಾಸದಿಂದ ನಗುತ್ತಾ ‘ಓ ನಾರಾಯಣನೆ, ಮಹಾದಾರುಣವಾದ ಈ ಚಕ್ರವನ್ನು ನೀನು ಶಿವನ ಅನುಗ್ರಹದಿಂದಲೇ ಪಡೆದಿರುವೆ. ಆದಕಾರಣ ಈ ಚಕ್ರವು ಶಿವಭಕ್ತನಾದ ನನ್ನನ್ನು ಹಿಂಸಿಸಲಾರದು’ ಎನ್ನುತ್ತಾನೆ.

ADVERTISEMENT

ಇದರಿಂದ ಮತ್ತಷ್ಟು ಕೋಪಗೊಂಡ ಹರಿಯು, ದಧೀಚಿಯ ಮೇಲೆ ಅನೇಕ ಮಹಾಸ್ತ್ರಗಳನ್ನು ಪ್ರಯೋಗಿಸಿದ. ಬ್ರಾಹ್ಮಣನೊಡನೆ ಯುದ್ಧ ಮಾಡಲು ಸಿದ್ಧನಾದ ವಿಷ್ಣುವಿಗೆ ದೇವತೆಗಳು ತಿಳಿವಳಿಕೆಯಿಲ್ಲದೆ ಸಹಾಯ ಮಾಡಲು ಬಂದರು. ಹರಿಯು ಪ್ರಳಯ ಭಯಂಕರವಾದ ಬ್ರಹ್ಮಾಸ್ತ್ರ ಮುಂತಾದ ಮಹಾಸ್ತ್ರಗಳನ್ನು ಪ್ರಯೋಗಿಸಿದರೆ, ಇಂದ್ರ ಮೊದಲಾದ ದೇವತೆಗಳು ತಮ್ಮ ತಮ್ಮ ಮಹಾಯುಧಗಳನ್ನು ದಧೀಚಿಯತ್ತ ಬೀಸಿದರು.

ಆಗ ವಜ್ರಮಯವಾದ ಅಸ್ಥಿಗಳುಳ್ಳ ದಧೀಚಿಯು ಒಂದು ಹಿಡಿ ದರ್ಭೆಯನ್ನು ತೆಗೆದುಕೊಂಡು, ಅದನ್ನ ಅಭಿಮಂತ್ರಿಸಿದ. ಶಿವನನ್ನು ಸ್ಮರಿಸುತ್ತಾ ವಿಷ್ಣು ಮತ್ತು ದೇವತೆಗಳ ಮೇಲೆ ಪ್ರಯೋಗಿಸಿದ. ದರ್ಭೆಯು ಶಂಕರನ ಮಹಿಮೆಯಿಂದ ಪ್ರಳಯಾಗ್ನಿಯಂತೆ ಭಯಂಕರವಾದ ತ್ರಿಶೂಲವಾಯಿತು. ಕಾಲಾಗ್ನಿಯಂತೆ ಭಯಂಕರವಾದ ಬೆಂಕಿಯ ಜ್ವಾಲೆಗಳನ್ನು ಉಗುಳುತ್ತಾ ದೇವತೆಗಳನ್ನೆಲ್ಲಾ ದಹಿಸಲು ಮುನ್ನುಗ್ಗಿತು. ವಿಷ್ಣು, ಇಂದ್ರ ಮೊದಲಾದವರಿಂದ ಪ್ರಯೋಗಿಸಲ್ಪಟ್ಟ ಆಯುಧಗಳೆಲ್ಲವೂ ತ್ರಿಶೂಲಕ್ಕೆ ನಮಸ್ಕರಿಸಿ, ದೂರಸರಿದವು. ಇದನ್ನು ನೋಡಿ ಭಯಭೀತರಾದ ದೇವತೆಗಳೆಲ್ಲರೂ ಓಡಿ ಹೋದರು.

ಹರಿಯೂ ಭಯಗೊಂಡನಾದರೂ, ಓಡಿ ಹೋಗದೆ ಅಲ್ಲೆ ನಿಂತು ಕಾದಾಡಲು ನಿರ್ಧರಿಸಿದ. ಮೊದಲಿಗೆ ತ್ರಿಶೂಲದಿಂದ ಪಾರಾಗಲು ಹರಿಯು ತನ್ನಂತೆ ಸ್ವರೂಪವುಳ್ಳ ಮತ್ತು ಪರಾಕ್ರಮಿಗಳಾದಂತಹ ಲಕ್ಷಗಟ್ಟಲೆ ವಿಷ್ಣುಗಳನ್ನು ತನ್ನ ದೇಹದಿಂದ ಸೃಜಿಸಿದ. ಆ ವಿಷ್ಣುಗಣಗಳು ಪರಾಕ್ರಮದಿಂದ ದಧೀಚಿಯೊಂದಿಗೆ ಭಯಂಕರವಾಗಿ ಯುದ್ಧ ಮಾಡಿದರು. ಆದರೆ ಶಿವಭಕ್ತನಾದ ದಧೀಚಿಮುನಿಯು ಆ ವಿಷ್ಣುಗಣಗಳೊಡನೆ ಯುದ್ಧಮಾಡಿ, ಅವುಗಳನ್ನು ತನ್ನ ತೇಜಸ್ಸಿನಿಂದ ಭಸ್ಮಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.