ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವ ಸತೀದೇವಿ ದಾಂಪತ್ಯಜೀವನ

ಭಾಗ 160

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 29 ಜೂನ್ 2022, 18:45 IST
Last Updated 29 ಜೂನ್ 2022, 18:45 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ಶಿವ-ಸತೀದೇವಿಯ ವಿವಾಹವೃತ್ತಾಂತ ಕೇಳಿದ ನಾರದ, ‘ನನಗೆ ಇನ್ನೂ ಆ ಶಿವಪಾರ್ವತಿಯರ ಶುಭವಾದ ಚರಿತ್ರೆಯನ್ನು ಕೇಳಬೇಕೆಂಬ ಇಚ್ಚೆ ಇದೆ’ ಎಂದ.

ಆಗ ಬ್ರಹ್ಮ ‘ಸೌಮ್ಯನಾದ ನಾರದಮುನಿ, ನೀನು ಶಿವನಲ್ಲಿ ತುಂಬಾ ಭಕ್ತಿಯುಳ್ಳವನು. ಆದಕಾರಣ ನೀನು ಶಿವಲೀಲೆಗಳನ್ನು ಹೇಳುವಂತೆ ನನ್ನನ್ನು ಪ್ರೇರಿಸುತ್ತಲಿರುವೆ. ಮೂರು ಲೋಕಗಳಿಗೆ ಮಾತೆಯಾದ ಸತೀದೇವಿಯನ್ನು ಮದುವೆಯಾಗಿ ಶಂಕರ ತನ್ನ ಸ್ಥಾನಕ್ಕೆ ತೆರಳಿದ ಮೇಲೆ ಮುಂದೆ ಏನಾಯಿತೆಂಬುದನ್ನು ಹೇಳುವೆ, ಭಕ್ತಿಯಿಂದ ಕೇಳು’ ಎಂದು ಶಿವಕಥೆಯನ್ನು ಮುಂದುವರೆಸುತ್ತಾನೆ.

ಶಿವನು ಸತೀದೇವಿಯೊಂದಿಗೆ ಕೈಲಾಸಪರ್ವತಕ್ಕೆ ಬಂದ ನಂತರ ಗಣಗಳಾದ ನಂದಿಕೇಶ್ವರ ಮುಂತಾದವರನ್ನು ಬೇರೆ ಬೇರೆ ಗಿರಿಗುಹೆಗಳಿಗೆ ಕಳುಹಿಸಿದ. ನಾನು ಯಾವಾಗ ನಿಮ್ಮನ್ನು ಸ್ಮರಿಸುವೆನೋ, ಆಗ ನನ್ನ ಬಳಿಗೆ ಬನ್ನಿ ಎಂದ. ಶಿವಗಣಗಳೆಲ್ಲವೂ ಹೋದ ನಂತರ ಈಶ್ವರನು ಸತೀದೇವಿಯೊಡನೆ ಏಕಾಂತದಲ್ಲಿ ಸುಖಾಸಕ್ತನಾದ. ಪರಮೇಶ್ವರನು ಹಿಮಗಿರಿಯಲ್ಲಿರುವ ರಮ್ಯವಾದ ಲತಾಗೃಹಗಳಲ್ಲಿ ಸತೀದೇವಿಯೊಡನೆ ವಿಹರಿಸುತ್ತಲಿರುವಾಗ ತನ್ನಿಚ್ಛೆಯಂತೆ ಮನ್ಮಥನನ್ನು ಸ್ಮರಿಸಿದ.

ADVERTISEMENT

ಆಗ ಮನ್ಮಥನು ಶಂಕರನ ಮನೋಭಿಲಾಷೆಯಂತೆ ಹಿಮಪರ್ವತವನ್ನು ಶೃಂಗಾರಮಯಗೊಳಿಸಿದ. ವಸಂತನೂ ಅಲ್ಲಿಗೆ ಬಂದು ತನ್ನ ಸಮೃದ್ಧಿಯನ್ನು ಆ ಪರ್ವತ ಪ್ರದೇಶಗಳಲ್ಲೆಲ್ಲ ಹರಡಿದ. ಆಗ ಮರಗಳಲ್ಲಿ, ಲತೆಗಳಲ್ಲಿ ಹೂವರಳಿದವು. ಸರೋವರಗಳಲ್ಲಿ ತಾವರೆಗಳು ನಳನಳಿಸಿದವು. ತಾವರೆಗಳಲ್ಲಿ ದುಂಬಿಗಳು ಮುತ್ತಿ ಮಧುವನ್ನು ಹೀರತೊಡಗಿದುವು. ವಸಂತಋತುವು ಅಲ್ಲೆಲ್ಲಾ ಹರಡಿದ್ದರಿಂದ ಮಲಯಪರ್ವತದ ಸುಗಂಧವಾಯುವು ಮೆಲ್ಲನೆ ಬೀಸತೊಡಗಿತು. ಸಂಧ್ಯಾಕಾಲದ ಅರ್ಧೋದಿತ ಚಂದ್ರನಂತೆ ಕೆಂಪಾದ ಮುತ್ತುಗದ ಹೂಗಳು ಮನ್ಮಥನ ಬಾಣಗಳಂತೆ ರಾರಾಜಿಸಿದವು. ಲತೆಗಳು ಮರವನ್ನಾಶ್ರಯಿಸಿ ಪುರುಷರೊಡನೆ ಸೇರಿರುವ ಸುಂದರಿಯರಂತೆ ಶೋಭಿಸಿದವು.

ಸರಸ್ಸುಗಳಲ್ಲಿ ಸುಂದರ ತಾವರೆಗಳು ಜಲದೇವತೆಯ ಸುಂದರಮುಖದಂತೆ ಶೋಭಿಸುತ್ತಿದ್ದವು. ನಾಗಕೇಸರವೃಕ್ಷಗಳು ಚಿನ್ನದ ವರ್ಣವುಳ್ಳ ಹೂಗಳಿಂದ ಸುಂದರವಾಗಿದ್ದವು. ಲವಂಗಲತೆಯು ತನ್ನ ಸುವಾಸನೆಯಿಂದ ಮೋಹಗೊಳಿಸುತ್ತಿತ್ತು. ಬೆಂಕಿಯಂತೆ ನಸುಗೆಂಪಾದ ಮಾವಿನ ಚಿಗುರುಗಳು ಶೃಂಗಾರಪ್ರಿಯರಿಗೆ ಮನ್ಮಥನ ಪುಷ್ಪಬಾಣಗಳಂತೆ ತೋರುತ್ತಿದ್ದವು. ಅರಳಿದ ಕಮಲಗಳ ಮೇಲಿನ ನಿರ್ಮಲವಾದ ನೀರಿನ ಬಿಂದುಗಳು, ಆತ್ಮಜ್ಯೋತಿಯು ಪ್ರತಿಬಿಂಬಿಸಿದ ಮುನಿಗಳ ನಿರ್ಮಲಮನಸ್ಸುಗಳಂತೆ ರಾರಾಜಿಸುತ್ತಿದ್ದವು.

ರಾತ್ರಿಗಳು ಹಿಮದ ಮುತ್ತಿಗೆ ಇಲ್ಲದೆ ನಿರ್ಮಲವಾಗಿದ್ದವು. ಶುಭ್ರ ಆಕಾಶದಲ್ಲಿ ಚಂದ್ರಮ ಮಂದಹಾಸ ಬೀರಿದಂತೆ ಸುತ್ತಲ ವಾತಾವರಣ ತಂಪಾಗಿ ಪ್ರಕಾಶಿಸುತ್ತಿದ್ದವು. ಇಂಥ ಮನೋಹರವಾದ ವಸಂತಕಾಲದಲ್ಲಿ ಮಹಾದೇವನು ಸತೀದೇವಿಯೊಡನೆ ಬಹಳ ಕಾಲ ವಿಹರಿಸಿದ. ಶಿವನಂತೆ ಆ ಸತೀದೇವಿಯೂ ಶಿವನೊಡನೆ ಸಂತೋಷದಿಂದ ವಿಹರಿಸಿದಳು. ಸತಿಯಿಲ್ಲದೆ ಶಂಕರನಿಗೆ, ಶಂಕರನಿಲ್ಲದೆ ಸತೀದೇವಿಗೆ ಒಂದು ಕ್ಷಣಕಾಲವೂ ಬಿಟ್ಟು ಇರಲಾರದಂತೆ ಮನಸ್ಸು ಪರಸ್ಪರ ಬೆರೆತುಹೋಗಿದ್ದವು. ಶಿವ ಮತ್ತು ಸತೀದೇವಿ ಸುಖ ದಾಂಪತ್ಯಜೀವನ ನಡೆಸುತ್ತಿದ್ದರು.

ಶೃಂಗಾರದ ಸಮಯದಲ್ಲಿ ಶಿವಪ್ರಿಯೆಯಾದ ಸತಿಯು ಶಿವನಿಗೆ ಶೃಂಗಾರದ ರಸಪಾನ ಮಾಡಿಸುತ್ತಾ ವಿಹರಿಸುತ್ತಿದ್ದಳು. ಶಿವನು ಸಹ ಸುಂದರ ಪುಷ್ಪಾಹಾರಗಳನ್ನು ತನ್ನ ಕೈಯಿಂದಲೇ ಮಾಡಿ ಸತೀದೇವಿಯ ಮುಡಿಗೆ ಮುಡಿಸುತ್ತಿದ್ದ. ಅವಳ ಕಿವಿಗಳಿಗೆ ತಾನೇ ಕರ್ಣಕುಂಡಲಗಳನ್ನು ತೊಡಿಸಿ ಸಂಭ್ರಮಿಸುತ್ತಿದ್ದ. ವಸಂತನಿಂದ ಕೈಲಾಸದಲ್ಲಿ ಅರಳಿದ ಎಲ್ಲಾ ಪುಷ್ಪಗಳನ್ನು ತಂದು ಸತೀದೇವಿಯನ್ನು ಅಲಂಕರಿಸುತ್ತಿದ್ದ. ಹೀಗೆ ಅನೇಕ ಹೊಸ ಹೊಸ ಶೃಂಗಾರಚೇಷ್ಟೆಗಳನ್ನು ಮಾಡುತ್ತಾ, ಜ್ಞಾನಿಯು ಜ್ಞಾನಸ್ವರೂಪನಾದ ಆತ್ಮನಲ್ಲಿ ಸೇರಿಹೋಗುವಂತೆ ಅಥವಾ ಸಮಾಧಿಯಲ್ಲಿರುವ ಯೋಗಿಯು ಧ್ಯೇಯವಸ್ತುವಿನೊಡನೆ ಸೇರಿ ಹೋಗುವಂತೆ ಸತಿಯಲ್ಲಿ ಶಿವನು ಸೇರಿಹೋದ.

ಸತೀದೇವಿಯ ಮುಖಕಮಲದ ಸೌಂದರ್ಯದಿಂದ ಆಕರ್ಷಿಸಲ್ಪಟ್ಟ ಶಿವನು ಸರಪಣಿಗಳಿಂದ ಬಂಧಿಸಲ್ಪಟ್ಟ ಆನೆಯಂತೆ ಮಿಕ್ಕ ಯಾವ ಕಾರ್ಯಗಳನ್ನೂ ಮಾಡಲಾರದವನಾದ. ಈ ರೀತಿಯಾಗಿ ಹಿಮವತ್ಪರ್ವತದಲ್ಲಿ ಈಶ್ವರನು ಸತಿಯೊಡನೆ ವಿಹರಿಸುತ್ತಿರುವಾಗ ಇಪ್ಪತ್ತೈದು ವರ್ಷಗಳು ಇಪ್ಪತ್ತೈದು ಕ್ಷಣಗಳಂತೆ ಕಳೆದುಹೋದವು ಎಂಬಲ್ಲಿಗೆ ಶ್ರೀಶಿವಮಹಾಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಇಪ್ಪತ್ತೊಂದನೆ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.