ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸಂಧ್ಯೆ ಮೋಹಕ್ಕೆ ಬಿದ್ದ ಬ್ರಹ್ಮ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 19 ಮೇ 2022, 19:45 IST
Last Updated 19 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ಸತಿಖಂಡದ ಮೂರನೇ ಅಧ್ಯಾಯದಲ್ಲಿ ಮನ್ಮಥಲೀಲೆಯ ವಿವರವಿದೆ. ಬ್ರಹ್ಮ ತನ್ನ ಮಾನಸಪುತ್ರಿ ಸಂಧ್ಯೆ ಮೇಲೆ ಮೋಹಿತನಾದಾಗ ಅವನ ಮನದಲ್ಲಿ ಸುಂದರಪುರುಷ ಜನಿಸುತ್ತಾನೆ. ಆ ಪುರುಷ ತನ್ನ ಕರ್ತವ್ಯ ಮತ್ತು ಹೆಸರು ಏನೆಂದು ಸೃಷ್ಟಿಕರ್ತ ಬ್ರಹ್ಮನನ್ನು ಕೇಳುತ್ತಾನೆ. ಇದಕ್ಕೆ ಬ್ರಹ್ಮ ಜಗತ್ತಿನ ಜೀವರಾಶಿಗಳಿಗೆಲ್ಲಾ ನಿತ್ಯ ಕಾಮಸುಖ ನೀಡುವ ಕೆಲಸ ನಿನ್ನದೆಂದು ಹೇಳುತ್ತಾನೆ. ನಂತರ ಆ ಪುರುಷನಿಗೆ ಸೂಕ್ತವಾದ ಹೆಸರನ್ನು ಇಡುವಂತೆ ತನ್ನ ಮಾನಸಪುತ್ರರಾದ ಮರೀಚಿ ಮೊದಲಾದವರಿಗೆ ಸೂಚಿಸುತ್ತಾನೆ. ತಂದೆ ಬ್ರಹ್ಮನ ಆದೇಶದಂತೆ ಮಾನಸಪುತ್ರರು ಆ ಪುರುಷನಿಗೆ ಯೋಗ್ಯವಾದ ಹೆಸರನ್ನು ಕೊಟ್ಟರಲ್ಲದೆ, ಅವನಿಗೆ ಪತ್ನಿ ಮತ್ತು ಸ್ಥಾನಗಳನ್ನು ಸಹ ಕಲ್ಪಿಸುತ್ತಾರೆ.

‘ಎಲೈ ಪುರುಷನೇ, ನೀನು ಜನಿಸುವಾಗಲೇ ನಮ್ಮೆಲ್ಲರ ಮತ್ತು ಬ್ರಹ್ಮನ ಮನಸ್ಸನ್ನು ವಿಕಾರಗೊಳಿಸಿರುವೆ. ಆದುದರಿಂದ ಇನ್ನು ಮುಂದೆ ನೀನು ಮನ್ಮಥನೆಂದು ಲೋಕದಲ್ಲಿ ಪ್ರಸಿದ್ಧನಾಗು. ಜಗತ್ತಿನಲ್ಲಿ ನಿನ್ನಂತಹ ಸುಂದರಪುರುಷ ಮತ್ತೊಬ್ಬನಿಲ್ಲ. ಆದುದರಿಂದ ನೀನು ಕಾಮನೆಂದೂ ಪ್ರಸಿದ್ಧಿಯನ್ನು ಹೊಂದು. ನೀನು
ದೇವ-ಜೀವರಿಗೆಲ್ಲ ಕಾಮಮದವೇರುವಂತೆ ಮಾಡುವುದರಿಂದ ಹಾಗೂ ದರ್ಪಯುಕ್ತನಾಗಿ ಜನಿಸಿದುದರಿಂದ ಮದನ ಮತ್ತು ಕಂದರ್ಪ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗು. ಯಾವ ದೇವತೆಗಳೂ ನಿನ್ನ ವೀರ್ಯ ಸಾಮರ್ಥ್ಯವನ್ನು ಸರಿಗಟ್ಟಲಾರರು. ಜಗತ್ತಿನ ಸ್ಥಾನಗಳೆಲ್ಲವೂ ನಿನ್ನ ವಶವಾಗಿ, ಇಡೀ ಜಗತ್ತನ್ನು ವ್ಯಾಪಿಸುವೆ. ಪುರುಷಶ್ರೇಷ್ಠನಾದ ಮತ್ತು ಪ್ರಜಾಪತಿಗಳಲ್ಲಿ ಮೊದಲನೆಯವನೂ ಆದಂತಹ ದಕ್ಷಪ್ರಜಾಪತಿಯು ನಿನಗೆ ಯೋಗ್ಯಳಾದ ಪತ್ನಿಯನ್ನು ಧಾರೆ ಎರೆದು ಕೊಡುತ್ತಾನೆ’ ಎಂದು ಮರೀಚಿ ಮತ್ತಿತರ ಋಷಿಗಳು ಹೇಳುತ್ತಾರೆ.

ಬ್ರಹ್ಮನ ಮನಸ್ಸಿನಿಂದ ಈಗಷ್ಟೇ ಜನಿಸಿದ ಸುಂದರ ಯುವತಿಯು ಸಂಧ್ಯಾ ಎಂಬ ಹೆಸರಿನಿಂದ ಸರ್ವಲೋಕಗಳಲ್ಲೂ ಪ್ರಸಿದ್ಧಳಾಗುವಳು. ಈ ಕನ್ಯೆಯು ಬ್ರಹ್ಮ ದೃಢವಾಗಿ ಧ್ಯಾನಿಸುತ್ತಿರುವಾಗ ಜನಿಸಿದುದರಿಂದ ಸಂಧ್ಯೆ ಎಂಬ ಹೆಸರಿನಿಂದ ಪ್ರಖ್ಯಾತಳಾಗುತ್ತಾಳೆ ಎಂದೂ ತಿಳಿಸುತ್ತಾರೆ.
ದಕ್ಷಪ್ರಜಾಪತಿಯ ಮಾತಿನಿಂದ ತೃಪ್ತನಾದ ಮನ್ಮಥ ತನ್ನ ಐದು ಪುಷ್ಪಬಾಣಗಳೊಂದಿಗೆ ಅಂತರ್ಧಾನನಾದ. ಬಳಿಕ ಮನ್ಮಥನ ಮನದಲ್ಲಿ ಆಲೋಚನೆಗಳ ಸುರುಳಿ ಬಿಚ್ಚಿಕೊಂಡಿತು. ‘ಹರ್ಷಣ, ರೋಚನ, ಮೋಹನ, ಶೋಷಣ ಮತ್ತು ಮಾರಣ’ ಎಂಬ ಹೆಸರುಳ್ಳ ಈ ಐದು ಕುಸುಮಬಾಣಗಳು ಮುನಿಗಳಿಗೂ ಮೋಹವನ್ನುಂಟುಮಾಡುವಂಥವು ಅಂತ ಬ್ರಹ್ಮ ಹೇಳಿದ್ದಾನೆ. ಇದನ್ನು ಖಚಿತಪಡಿಸಿಕೊಳ್ಳಲು ಬ್ರಹ್ಮನ ಸಮ್ಮುಖದಲ್ಲೆ ಈ ಮುನಿಗಳ ಮೇಲೆ ಪ್ರಯೋಗ ಮಾಡಿ ನೋಡಲು ಮನ್ಮಥ ನಿರ್ಧರಿಸಿದ.

ADVERTISEMENT

ಮರೀಚಿ ಮೊದಲಾದ ಮುನಿಗಳು ಮತ್ತು ದಕ್ಷ ಮೊದಲಾದ ಪ್ರಜಾಪತಿಗಳೂ ಸೇರಿರುವ ಈ ಸ್ಥಳದಲ್ಲಿ ಪರಮಸುಂದರಿಯಾದ ಸಂಧ್ಯೆಯೂ ಇಲ್ಲಿದ್ದಾಳೆ. ನನ್ನ ಕಾಮಬಾಣಕ್ಕೆ ತ್ರಿಮೂರ್ತಿಗಳೂ ಅಧೀನರಾಗುವರೆಂದು ಈಗ ತಾನೆ ಬ್ರಹ್ಮ ಹೇಳಿದ್ದಾನೆ. ನನ್ನ ಪರೀಕ್ಷಾರ್ಥ ಕಾರ್ಯವನ್ನು ಮೊದಲಿಗೆ ಬ್ರಹ್ಮ ಮತ್ತವನ ಮಕ್ಕಳ ಮೂಲಕವೇ ಮಾಡಿ ನೋಡುತ್ತೇನೆ ಎಂದು ತನ್ನ ಪುಷ್ಪಧನುಸ್ಸನ್ನು ಹಿಡಿದೆಳೆದ.

ಮನ್ಮಥನ ಬಾಣಗಳು ಬ್ರಹ್ಮ ಮತ್ತವನ ಮಕ್ಕಳಾದ ಮರೀಚಿ ಮೊದಲಾದ ಮುನಿಗಳು ಹಾಗೂ ದಕ್ಷ ಮೊದಲಾದ ಪ್ರಜಾಪತಿಗಳಿಗೆ ನಾಟಿದವು. ತಕ್ಷಣವೇ ಅವರೆಲ್ಲಾ ಮದನವಿಕಾರವನ್ನು ಹೊಂದಿದ ಇಂದ್ರಿಯಗಳುಳ್ಳವರಾದರು. ದಕ್ಷ ಮತ್ತು ಮರೀಚಿಯವರೊಂದಿಗೆ ಬ್ರಹ್ಮ ಮತ್ತು ಸಂಧ್ಯೆ ಸಹ ಮದನವಿಕಾರವುಳ್ಳವರಾದರು. ಇದನ್ನು ನೋಡಿದ ಮನ್ಮಥನಿಗೆ ತನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಬಂತು. ಬ್ರಹ್ಮ ತನಗೆ ಯಾವ ಕೆಲಸವನ್ನು ಮಾಡಬೇಕೆಂದು ನಿಯಮಿಸಿರುವನೋ, ಆ ಕೆಲಸವನ್ನು ನಿರ್ವಹಿಸಲು ತನಗೆ ಶಕ್ತಿ ಇದೆ ಎಂಬುದನ್ನು ದೃಢಪಡಿಸಿಕೊಂಡ.

ಈ ರೀತಿ ಮನ್ಮಥನ ಕಾಮಬಾಣಕ್ಕೆ ಸಮ್ಮೋಹಿತರಾದ ಬ್ರಹ್ಮ ಮತ್ತವನ ಮಕ್ಕಳು ಕಾಮವಿಕಾರಹೊಂದಿದರು. ಇದರಿಂದ ಸಹೋದರರು ಸಹೋದರಿಯರಲ್ಲಿ, ತಂದೆಯು (ಬ್ರಹ್ಮ) ಮಗಳ(ಸಂಧ್ಯೆ)ಲ್ಲಿ ಪಾಪದೃಷ್ಟಿಯುಳ್ಳವರಾದರು. ಇದನ್ನು ನೋಡಿದ ಧರ್ಮಪುರುಷ ಅಸಮಾಧಾನಿತನಾಗಿ, ಧರ್ಮರಕ್ಷಕ ಮತ್ತು ಜಗತ್ಪ್ರಭುವಾದ ಶಿವನ ಮೊರೆ ಹೋದ. ಧರ್ಮರಕ್ಷಕನಾದ ಶಂಕರನನ್ನು ಸ್ಮರಿಸುತ್ತಾ, ಧರ್ಮಪುರುಷ ಪರಮಾತ್ಮನನ್ನು ಸ್ತುತಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.