ADVERTISEMENT

ವೇದವ್ಯಾಸರ ಶಿವಪುರಾಣಸಾರ | ನಾದ-ಬಿಂದು ರೂಪ ಶಿವಲಿಂಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 16 ಫೆಬ್ರುವರಿ 2022, 20:30 IST
Last Updated 16 ಫೆಬ್ರುವರಿ 2022, 20:30 IST
   

ಸ್ಥಿರ ಮತ್ತು ಚರರೂಪವಾಗಿರುವ ಈ ಜಗತ್ತೆಲ್ಲವೂಬಿಂದುಮತ್ತು ನಾದಸ್ವರೂಪವಾದುದು. ಬಿಂದುವೆಂದರೆ ಆದಿಶಕ್ತಿ, ನಾದವೆಂದರೆ ಶಿವ. ಆದುದರಿಂದ ಈ ಜಗತ್ತು ಶಿವ ಮತ್ತು ಶಕ್ತಿಸ್ವರೂಪವಾಗಿದೆ. ಬಿಂದುವಿಗೆ ಆಧಾರ ನಾದವಾದರೆ, ಆ ಬಿಂದುವು ಜಗತ್ತಿಗೆ ಆಧಾರವಾಗಿದೆ. ಹೀಗೆಬಿಂದು-ನಾದಗಳು ಸ್ಥಿರಚರಾತ್ಮಕವಾದ ಈ ಜಗತ್ತಿಗೆ ಆಧಾರವಾಗಿದೆ. ಜಗತ್ತುಬಿಂದು-ನಾದಗಳಿಂದ ಕೂಡಿದರೆ ಸಕಲೀಕರಣವಾಗುವುದು. ಅಂದರೆ, ಸಂಪೂರ್ಣತೆಯ ಸೃಷ್ಟಿಮುಖವಾಗುವುದು. ಸಕಲೀಕರಣದಿಂದ ಜಗತ್ತಿನಲ್ಲಿ ಜೀವೋತ್ಪತ್ತಿಯಾಗುವುದು.

ನಾದ-ಬಿಂದುಗಳು ಶಿವ-ಶಕ್ತಿಯ ಸ್ವರೂಪವಾಗಿವೆ. ಶಿವಲಿಂಗವು ಬಿಂದುವಾದ ದೇವಿ ಮತ್ತು ಶಿವನಾದನಾದಸೇರಿ ರೂಪುಗೊಂಡಿದೆ. ಆದುದರಿಂದ ಜನ್ಮನಿವೃತ್ತಿಗಾಗಿ ಶಿವಲಿಂಗವನ್ನು ಪೂಜಿಸಬೇಕು. ಬಿಂದುರೂಪಳಾದ ದೇವಿಯು ಜಗತ್ತಿಗೆ ಮಾತೆ. ನಾದರೂಪನಾದ ಶಿವನು ಜಗತ್ತಿಗೆ ಪಿತೃ. ಜಗತ್ತಿನ ತಂದೆತಾಯಿಗಳಾದ ಶಿವ-ಶಕ್ತಿಯ ಸ್ವರೂಪದಿಂದ ಇರುವ ಶಿವಲಿಂಗವನ್ನು ಪೂಜಿಸಬೇಕು. ಶಿವನು ಪುರುಷನಾದರೆ, ದೇವಿಯು ಪ್ರಕೃತಿ. ಅವ್ಯಕ್ತವಾದ ಸ್ಫುಟವಲ್ಲದ ವಸ್ತು ಬೀಜಕ್ಕೆ ಆಧಾರವಾದ ಗರ್ಭವುಳ್ಳವನು ಪುರುಷ. ವ್ಯಕ್ತವಾದುದಕ್ಕೆ ಆಧಾರವಾದ ಗರ್ಭವು ಪ್ರಕೃತಿ. ಅದರಂತೆ ಭಗವಂತನಾದ ಶಿವನು ಈ ಜಗತ್ತಿಗೆ ಅವ್ಯಕ್ತವಸ್ತುವಿಗೆ ಆಧಾರವಾದ ಗರ್ಭಸ್ವರೂಪನಾದ ಪುರುಷ. ಪುರುಷನು ಪ್ರಕೃತಿಯಲ್ಲಿ ಸೇರುವಿಕೆಯು ಮೊದಲನೆಯ ಜನ್ಮ. ಪ್ರಕೃತಿಯು ವ್ಯಕ್ತವಾಗಿ ಅಂದರೆ, ಕಾಣಿಸುವಂತೆ ಪರಿಣಮಿಸುವುದು ಜಗದ್ರೂಪವಾಗುವುದು. ಅಂದರೆ, ಜನ್ಮ ತಳೆಯುವುದು.

ಹೀಗೆ ಸಕಲ ಜಂತುವೂ ಜನ್ಮವನ್ನೂ ಮೃತ್ಯುವನ್ನೂ ಪುರುಷನಿಂದಲೇ ಪಡೆಯುವುದು. ಪುರುಷನಿಂದ ಮಾಯೆಯಾದ ಪ್ರಕೃತಿ ಮೂಲಕ ಜನ್ಮವಾಗುವುದು. ಜನ್ಮಕಾಲದಿಂದ ಮರಣಕಾಲದವರೆಗೂ ಕ್ಷಯಿಸುವುದರಿಂದ ‘ಜೀವ’ ಎಂದು ಜಂತುವಿಗೆ ಹೆಸರು. ಈ ಜಂತುಜನ್ಮವನ್ನು ಹೊಂದಿ, ಸಂಸಾರಪಾಶದಿಂದ ಬಂಧಿಸಲ್ಪಡುವುದರಿಂದ ಜೀವನವೆಂದು ಹೆಸರು. ಆದುದರಿಂದ ಈ ಜನ್ಮ ಮತ್ತು ಸಂಸಾರಪಾಶಗಳ ಮುಕ್ತಿಗಾಗಿ ‘ಜನ್ಮಲಿಂಗ’ವನ್ನು ಪೂಜಿಸಬೇಕು. ಶಿವಲಿಂಗವನ್ನು ಜನ್ಮನೈವೇದ್ಯದಿಂದ ಅರ್ಚಿಸಬೇಕು.

ADVERTISEMENT

ಪ್ರಕೃತಿಮಯವಾದ ಇಂದ್ರಿಯಗಳಿಗೆ ಭೋಗವನ್ನುಂಟುಮಾಡುವುದರ ಮೂಲಕ ವೃದ್ದಿ ಮಾಡುವ ಪ್ರಕೃತಿಗೆ ‘ಭಗ’ ವೆಂದು ಹೆಸರು. ಪ್ರಕೃತಿರೂಪವಾದ ಭಗದಿಂದ ಜನಿಸುವಂಥದ್ದಕ್ಕೆ ಭೋಗವೆಂದು ಹೆಸರು. ಆದುದರಿಂದ ಜನ್ಮಕ್ಕೆ ಪ್ರಧಾನವಾದ ಭಗವು ಪ್ರಕೃತಿಮಾತೆ. ಅಂತಹ ಪ್ರಕೃತಿಯುಳ್ಳ ಶಿವನಿಗೆ ‘ಭಗವಂತ’ನೆಂದು ಹೆಸರು. ಭಗವಂತನೇ ಭೋಗವನ್ನು ಕೊಡುವವನು. ಭಗ(ಪ್ರಕೃತಿ)ಕ್ಕೆ ಸ್ವಾಮಿಯಾದುದರಿಂದ ಭಗವಂತನನ್ನು ‘ಭರ್ಗ’ನೆಂದು ಹೇಳುವರು. ಅಂತಹ ಭಗದಿಂದ ಶಿವಲಿಂಗವು ಕೂಡಿರುವುದು. ಭಗವೂ ಲಿಂಗದೊಡನೆ ಸೇರಿರುವುದು. ಆದುದರಿಂದ ಇಹಪರಗಳೆರಡರಲ್ಲಿ ನಿತ್ಯವೂ ಭೋಗ ಪಡೆಯಲು ಭಗವಂತನಾದ ಶಿವಲಿಂಗವನ್ನು ಪೂಜಿಸಬೇಕು.

ಸೂರ್ಯನು ಲೋಕ ಪ್ರಸವಿತೃ. ಅಂದರೆ, ಲೋಕ ಸೃಷ್ಟಿಕರ್ತೃ. ಜಗತ್ತಿನ ಪ್ರಸವಕ್ಕೆ ಸೂರ್ಯನೆ ಕಾರಣವಾಗಿರುವುದರಿಂದ ಆತನನ್ನು ‘ಪ್ರಸವಕರ್ತ’ನೆಂದು ತಿಳಿಯಬಹುದು. ಲಿಂಗದಲ್ಲಿ ಪ್ರಸವಕರ್ತನಾದ ಮತ್ತು ಶಿವರೂಪವಾದ ಸೂರ್ಯನನ್ನು ಪೂಜಿಸಬೇಕು. ಕಾರಣಿಭೂತವಾದ ವಸ್ತುವನ್ನು ಜ್ಞಾಪಿಸುವುದಕ್ಕೆ ಲಿಂಗವೆಂದು ಹೆಸರು. ಕಾರಣಿಭೂತವಾದ ಶಿವನನ್ನು ಶಿವಲಿಂಗವು ಜ್ಞಾಪಿಸುವುದು. ಶಿವ ಮತ್ತು ಶಕ್ತಿಯರ ಸ್ವರೂಪವೇ ಲಿಂಗ. ತನ್ನ ಚಿಹ್ನೆಯಾದ ಲಿಂಗವನ್ನು ಪೂಜಿಸಿದರೆ, ಶಿವನು ಪ್ರೀತನಾಗಿ ಮುಕ್ತಿ ನೀಡುತ್ತಾನೆ.

ಆದಿತ್ಯವಾರದಲ್ಲಿ ಶಿವಲಿಂಗವನ್ನು ಪೂಜಿಸಿ, ಓಂಕಾರದಿಂದಲೇ ಅರ್ಚಿಸಬೇಕು. ಪಂಚಗವ್ಯಗಳಿಂದ ಅಭಿಷೇಕವನ್ನು ಮಾಡಬೇಕು. ಪಂಚಗವ್ಯಗಳು ಯಾವುದೆಂದರೆ: ಗೋಮಯ, ಗೋಮೂತ್ರ, ಹಸುವಿನ ಹಾಲು, ಮೊಸರು, ತುಪ್ಪ. ಓಂಕಾರವು ಶಿವಧ್ವನಿ ಲಿಂಗವಾದರೆ, ಉದ್ಭವಲಿಂಗವು ನಾದಲಿಂಗ ಮತ್ತು ಯಂತ್ರವು ಬಿಂದುಲಿಂಗ. ಓಂಕಾರದಲ್ಲಿ ಬರುವ ‘ಮ’ಕಾರವು ಪ್ರತಿಷ್ಠಾಪಿಸಿದ ಲಿಂಗವಾದರೆ, ‘ಉ’ಕಾರವು ಚರಲಿಂಗ. ‘ಆಕಾರ’ವು ದೊಡ್ಡದಾದ ಲಿಂಗ.

ಈ ಆರು ಲಿಂಗಗಳನ್ನು ಪೂಜಿಸಿದವನು ಜೀವಿಸಿರುವಂತೆಯೇ ಮುಕ್ತಿಯನ್ನು ಹೊಂದುವನು. ರುದ್ರಾಕ್ಷಿಯನ್ನು ಧರಿಸುವುದರಿಂದ ಕಾಲುಭಾಗ ಭಕ್ತಿಯುಂಟಾಗುವುದು. ಭಸ್ಮವನ್ನು ಧರಿಸುವುದರಿಂದ ಅರ್ಧಭಕ್ತಿ, ಪಂಚಾಕ್ಷರೀಮಂತ್ರವನ್ನು ಜಪಿಸಿದರೆ ಮುಕ್ಕಾಲು ಭಾಗ ಭಕ್ತಿ ಉಂಟಾಗುವುದು. ಶಿವನನ್ನು ಪೂಜಿಸುವುದರಿಂದ ಪೂರ್ಣವಾದ ಭಕ್ತಿ ಉಂಟಾಗುವುದು. ಆದ್ದರಿಂದ ಶಿವಲಿಂಗವನ್ನೂ ಶಿವಭಕ್ತನನ್ನೂ ಶ್ರದ್ಧೆಯಿಂದ ಪೂಜಿಸಿದರೆ ಮುಕ್ತಿಯು ಲಭಿಸುವುದು ಎಂದು ಸೂತಮುನಿ ತಿಳಿಸುವುದರೊಂದಿಗೆ ವಿದ್ಯೇಶ್ವರಸಂಹಿತೆಯ ಹದಿನಾರನೇ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.